ಶಾಲೆಗೆಂದು ತೆರಳಿದ ಹುಡುಗ ಕ್ಲಾಸ್ ರೂಂನಲ್ಲಿ ಇರಲಿಲ್ಲ. ಬರೋಬ್ಬರಿ 900 ಕಿ.ಮಿ ಪ್ರಯಾಣ ಬೆಳೆಸಿದ್ದ. ದಾರವಾಹಿಯಲ್ಲಿ ನಟಿಸೋ ಆಸೆಯಿಂದ ಯಾರೊಬ್ಬರು ಗೊತ್ತಿಲ್ಲದ ಊರಿಗೆ ತೆರಳಿದ್ದ. ಇತ್ತ ಪೋಷಕರು ಬಾಲಕನ ನಾಪ್ತತೆ ಕೇಸ್ ದಾಖಲಿಸಿದ್ದರು. ಮುಂದೇನಾಯ್ತು?

ಮುಂಬೈ (ಆ.08) ಪೋಷಕರು ತಮ್ಮ ಆಸಕ್ತಿಯ ಸೀರಿಯಲ್ ನೋಡುತ್ತಿದ್ದ ವೇಳೆ ಶಾಲೆಗೆ ತೆರಳುತ್ತಿದ್ದ ಬಾಲಕನೂ ಅದೇ ದಾರವಾಹಿ ನೋಡುತ್ತಾ ಆಸಕ್ತಿ ಬೆಳೆಸಿಕೊಂಡ. ತಾನು ದಾರವಾಹಿಯಲ್ಲಿ ನಟಿಸಬೇಕು ಎಂದು ದೃಢ ನಿರ್ಧಾರ ಮಾಡಿದ್ದ. ತನ್ನ ಪೋಷಕರ ಟಿವಿ ಮುಂದೆ ಕುಳಿತು ನೋಡುವಾಗ ನಾನು ಕೂಡ ಅದೇ ದಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಅನ್ನೋ ಹಂಬಲ ಹೆಚ್ಚಾಯಿತು. ಎಂದಿನಂತೆ ಶಾಲೆಗೆ ತೆರಳಿದ ಈ ಹುಡುಗ ಕ್ಲಾಸ್‌ಗೆ ಹಾಜರಾಗಲಿಲ್ಲ, ಯಾರಿಗೂ ಹೇಳದೆ ರೈಲು ಹತ್ತಿದ್ದ. ಊರು ಗೊತ್ತಿಲ್ಲ, ಯಾರೂ ಪರಿಚಯವಿಲ್ಲದ ನಾಡಿಗೆ ಬಂದಿದ್ದ. ಬರೋಬ್ಬರಿ 900 ಕಿಲೋಮೀಟರ್ ದೂರದ ಮುಂಬೈ ಮಹಾನಗರಿಗೆ ಬಂದ ಬಾಲಕ ಫಿಲ್ಮ್ ಸಿಟಿ ತಲುಪಿದ್ದ. ಇತ್ತ ಮನೆಗೆ ಮಗ ಮರಳದ ಕಾರಣ ಪೋಷಕರು ಆತಂಕಗೊಂಡು ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ.

ಏನಿದು 16 ವರ್ಷದ ಬಾಲಕನ ಘಟನೆ?

ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಪರಸ್ ಅನ್ನೋ 16 ವರ್ಷದ ಬಾಲಕನಿಗೆ ತಾರಕ್ ಮೆಹ್ತಾ ಕಾ ಓಲ್ಟಾ ಚಷ್ಮಾ ದಾರವಾಹಿಯಲ್ಲಿ ನಟಿಸಬೇಕು ಅನ್ನೋ ಆಸೆ. ಆಗಸ್ಟ್ 6 ರಂದು ಪರಸ್ ಮನೆಯಿಂದ ಬೆಳಗ್ಗೆ ಶಾಲೆಗೆ ತೆರಳಿದ್ದ. ಆದರೆ ಶಾಲೆಗೆ ಹೋದು ಬದಲು ಛಿಂದ್ವಾರ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಛಿಂದ್ವಾರದಿಂದ ನೇರವಾಗಿ ನಾಗ್ಪುರಕ್ಕೆ ರೈಲಿನ ಮೂಲಕ ಪ್ರಯಾಣಿಸಿದ್ದಾನೆ. ನಾಗ್ಪುರದಿಂದ ಆಗಸ್ಟ್ 7ರ ಬೆಗ್ಗೆ ಮುಂಬೈಗೆ ಬಂದಿಳಿದಿದ್ದಾನೆ.

ಕೊನೆಗೆ ಮುಂಬೈನ ಗೋರೇಗಾಂವ್‌ನಲ್ಲಿರುವ ಫಿಲ್ಮಿ ಸಿಟಿಗೆ ತಲುಪಿದ್ದಾನೆ. ಅಲ್ಲಿ ಯಾರೂ ಗೊತ್ತಿಲ್ಲ. ಯಾರ ಪರಿಚಯವೂ ಇಲ್ಲ. ಅತ್ತ ಇತ್ತ ಅಲೆದಾಡಲು ಆರಂಭಿಸಿದ್ದಾನೆ. ಏನು ಮಾಡಬೇಕು, ಯಾರಲ್ಲಿ ಕೇಳಬೇಕು ಅನ್ನೋದು ಗೊತ್ತಿಲ್ಲ. ಭಯ ಆವರಿಸತೊಡಗಿದೆ. ಯಾರನ್ನು ಕೇಳಿದರೆ ಎತ್ತ, ಎನು ಎಂಬ ಪ್ರಶ್ನೆಗಳು ಬಂದರೆ ಸಮಸ್ಯೆ ಹೆಚ್ಚಾಗಲಿದೆ ಎಂದು ದಿಕ್ಕು ತೋಚದೆ ಫಿಲ್ಮಿ ಸಿಟಿ ಪಕ್ಕದಲ್ಲಿ ಕುಳಿತುಬಿಟ್ಟ.

ನಾಪತ್ತೆ ಪ್ರಕರಣ ದಾಖಲಿಸಿದ ಪೋಷಕರು

ಬೆಳಗ್ಗೆ ಶಾಲೆಗೆ ಹೋದ ಬಾಲಕ ಮರಳಿ ಮನೆಗೆ ಬರದ ಕಾರಣ ಪೋಷಕರು ಆತಂಕಗೊಂಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇತ್ತ ಪೊಲಿಸರು ಮಧ್ಯಪ್ರದೇಶದ ಇತರ ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿತ್ತು. ಪೋಷಕರು ಆತಂಕ ಕ್ಷಣಕ್ಷಣಕ್ಕೂ ಹೆಚ್ಚಾಗಿತ್ತು.

ಗೊರೇಗಾಂವ್ ಫಿಲ್ಮಿ ಸಿಟಿ ಮುಂದೆ ದಿಕ್ಕು ತೋಚದೆ ಅಲೆದಾಡುತ್ತಿದ್ದ ಬಾಲಕನ ಕಂಡು ಸ್ಥಳೀಯರು ಅನುಮಾನಗೊಂಡಿದ್ದಾರೆ. ಶಾಲಾ ಸಮವಸ್ತ್ರದಲ್ಲಿರುವ ಹುಡುಗನ ನಿಲ್ಲಿಸಿ ಪ್ರಶ್ನಿಸಿದ್ದಾರೆ. ಆತ ಭಯಗೊಂಡಿದ್ದಾನೆ. ಈ ವೇಳೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಬಾಲಕನ ಪ್ರಶ್ನಿಸಿದಾಗ ನಡೆದ ಘಟನೆ ಹೇಳಿದ್ದಾನೆ. ಬಾಲಕನಿಂದ ಮಾಹಿತಿ ಪಡೆದು ಛಿಂದ್ವಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಬಳಿಕ ಬಾಲಕನ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಇದೀಗ ಬಾಲಕ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾನೆ.