'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನ ಪಾತ್ರಕ್ಕಾಗಿ ನಟ ರಣಬೀರ್ ಕಪೂರ್ ಮದ್ಯಪಾನ, ಧೂಮಪಾನ ಮತ್ತು ಮಾಂಸಾಹಾರವನ್ನು ತ್ಯಜಿಸಿದ್ದಾರೆ. ಅವರು ಬಹುಪಾಲು ಮನೆಯೂಟವನ್ನೇ ಇಷ್ಟಪಡುತ್ತಿದ್ದು, ಫಿಟ್ನೆಸ್ಗಾಗಿ ಐಸ್ ಬಾತ್ ಮತ್ತು ಸೌನಾದಂತಹ ಕಠಿಣ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.
ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಭಗವಾನ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಅವರು ಮಾಡುತ್ತಿರುವ ಸಿದ್ಧತೆಗಳು ಈಗಾಗಲೇ ಸಾಕಷ್ಟು ಗಮನ ಸೆಳೆದಿವೆ. ವರದಿಗಳ ಪ್ರಕಾರ, ಶ್ರೀರಾಮನ ಪಾತ್ರಕ್ಕೆ ತಯಾರಾಗಲು ರಣಬೀರ್ ಮದ್ಯಪಾನ ಮತ್ತು ಧೂಮಪಾನ ತ್ಯಜಿಸಿದ್ದು, ಮಾಂಸಾಹಾರವನ್ನೂ ಬಿಟ್ಟಿದ್ದರು. ಸಾತ್ವಿಕ ಆಹಾರ ಪದ್ಧತಿ, ಮುಂಜಾನೆಯ ವ್ಯಾಯಾಮ ಹಾಗೂ ಧ್ಯಾನಕ್ಕೆ ಆದ್ಯತೆ ನೀಡಿದ್ದರು ಎಂದು ವರದಿಯಾಗಿದೆ
ಇತ್ತೀಚೆಗೆ ಪಿಂಕ್ವಿಲ್ಲಾ ಜೊತೆಗಿನ ಸಂಭಾಷಣೆಯಲ್ಲಿ ತಮ್ಮ ಆಹಾರ ಅಭ್ಯಾಸ, ಇಷ್ಟದ ತಿನಿಸುಗಳು ಮತ್ತು ಫಿಟ್ನೆಸ್ ಬಗ್ಗೆ ಅವರು ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಮನ ಪಾತ್ರಕ್ಕಾಗಿ ರಣಬೀರ್ ಕಪೂರ್ ಸಾಕಷ್ಟು ಸಿದ್ದತೆ ನಡೆಸಿದ್ದರು. ಇದಕ್ಕಾಗಿಯೇ ಅವರು ಮಾಂಸಾಹಾರ, ಧೂಮಪಾನಕ್ಕೆ ಗುಡ್ಬೈ ಹೇಳಿದ್ದರು ಎನ್ನುವ ವಿಚಾರ ಇದೀಗ ಬಯಲಾಗಿದೆ.
99ರಷ್ಟು ಸಮಯ ಮನೆಯೂಟವೇ ಇಷ್ಟ!
ತಮ್ಮ ಆಹಾರ ಪದ್ಧತಿ ಪಾತ್ರಕ್ಕೆ ಅನುಗುಣವಾಗಿ ಬದಲಾಗುತ್ತದೆ ಎಂದು ರಣಬೀರ್ ಹೇಳಿದ್ದಾರೆ. ಆದರೆ ಬಹುತೇಕ ಸಮಯ ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಲು ಇಷ್ಟಪಡುತ್ತಾರಂತೆ. “ಶೇ.99ರಷ್ಟು ಸಮಯ ಮನೆಯ ಆಹಾರವನ್ನೇ ತಿನ್ನಲು ಪ್ರಯತ್ನಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ. ತಾವು ಬೆಳಗಿನ ಉಪಾಹಾರ ಇಷ್ಟಪಡುವ ವ್ಯಕ್ತಿ ಎಂದಿರುವ ರಣಬೀರ್, ಪ್ರತಿದಿನ ಒಂದೇ ರೀತಿಯ ತಿಂಡಿ ಸೇವಿಸುವುದಿಲ್ಲ. ಕೆಲವೊಮ್ಮೆ ಅವಲಕ್ಕಿ (ಪೋಹಾ), ಮತ್ತೊಮ್ಮೆ ಪ್ರೋಟೀನ್ ಶೇಕ್ ಸೇವಿಸುತ್ತಾರೆ. ಕೆಲವು ದಿನ ಬೆಳಗಿನ ಉಪಾಹಾರವನ್ನೇ ಬಿಟ್ಟುಬಿಡುತ್ತಾರಂತೆ.
ಪ್ರತಿದಿನ ರಾತ್ರಿ ಚಾಕೊಲೇಟ್ ತಿನ್ನಲೇಬೇಕು!
ಸಿನಿಮಾ ಪಾತ್ರಕ್ಕಾಗಿ ಆಹಾರದಲ್ಲಿ ಹಲವು ಬದಲಾವಣೆ ಮಾಡಿಕೊಂಡಿದ್ದರೂ, ಸಿಹಿ ತಿನಿಸುಗಳ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಪ್ರತಿದಿನ ರಾತ್ರಿ ಒಂದು ತುಂಡು ಚಾಕೊಲೇಟ್ ತಿನ್ನುವ ಅಭ್ಯಾಸವಿದೆ ಎಂದು ರಣಬೀರ್ ಹೇಳಿದ್ದಾರೆ. ಅವರಿಗೆ ಡಾರ್ಕ್ ಚಾಕೊಲೇಟ್ಗಿಂತ ಮಿಲ್ಕ್ ಚಾಕೊಲೇಟ್ ಹೆಚ್ಚು ಇಷ್ಟವಂತೆ. ಚೀಸ್ಕೇಕ್ ಕೂಡ ಅವರ ನೆಚ್ಚಿನ ಸಿಹಿ ತಿನಿಸುಗಳಲ್ಲೊಂದು. ಇದಕ್ಕಾಗಿ ತಮ್ಮ ಡಯಟ್ನಿಂದಲೂ ವಿನಾಯಿತಿ ಪಡೆಯಲು ಸಿದ್ಧರಿದ್ದಾರೆ.
ಫಿಟ್ನೆಸ್ಗಾಗಿ ಐಸ್ ಬಾತ್, ಸೌನಾ ಮೊರೆ
ಆಹಾರದ ಜೊತೆಗೆ ದೇಹದ ಚೇತರಿಕೆ ಮತ್ತು ಆರೋಗ್ಯಕ್ಕೂ ರಣಬೀರ್ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಅವರ ವೆಲ್ನೆಸ್ ದಿನಚರಿಯಲ್ಲಿ ಐಸ್ ಬಾತ್, ಸೌನಾ, ಹೈಪರ್ಬ್ಯಾರಿಕ್ ಆಕ್ಸಿಜನ್ ಥೆರಪಿ (HBOT) ಹಾಗೂ ರೆಡ್ ಲೈಟ್ ಥೆರಪಿಯೂ ಸೇರಿವೆ. ಇನ್ನು 2022ರಲ್ಲಿ ಆಜ್ ತಕ್ ಜೊತೆಗಿನ ಸಂದರ್ಶನದಲ್ಲಿ ರಣಬೀರ್ ಅವರ ಫಿಟ್ನೆಸ್ ತರಬೇತುದಾರ ಶಿವೋಹಮ್, ನಟ ಒಂದೂವರೆ ವರ್ಷಗಳ ಕಾಲ ರೊಟ್ಟಿ ತಿನ್ನುವುದನ್ನು ಬಿಟ್ಟಿದ್ದರು ಎಂದು ಹೇಳಿದ್ದರು. ಪಾತ್ರಕ್ಕಾಗಿ ರಣಬೀರ್ ಆಹಾರದಲ್ಲಿ ಮಾಡಿಕೊಳ್ಳುವ ಬದಲಾವಣೆಗಳಿಗೆ ಇದು ಮತ್ತೊಂದು ಉದಾಹರಣೆಯಾಗಿದೆ.






