ರಾಮಾಯಣ ಸಿನಿಮಾ ಇಂದು ತೆರೆ ಕಂಡಿದೆ. ಸಿನಿಮಾದಲ್ಲಿ ರಾವಣನಾಗಿ ಯಶ್ ಎಲ್ಲರ ಮನಸ್ಸು ಗೆದ್ದಿದ್ದಾರೆ. ಮಗನ ಅಭಿನಯ ಹಾಗೂ ಮಗನಿಗೆ ಸಿಗ್ತಿರುವ ಪ್ರೀತಿ ನೋಡಿ ಅಮ್ಮ ಭಾವುಕರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಾಲಿವುಡ್ ನಟ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದರೆ, ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಲಂಕಾಧಿಪತಿ ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಯಶ್ ಅವರನ್ನು ರಾವಣನ ಅವತಾರದಲ್ಲಿ ನೋಡಲು ಕಾಯುತ್ತಿದ್ದ ಅಭಿಮಾನಿಗಳು ಈಗ ಖುಷಿಯಾಗಿದ್ದಾರೆ.
ಮಗನ ನಟನೆಗೆ ಅಮ್ಮನ ಮೆಚ್ಚುಗೆ
ಯಶ್ ಅವರ ಲುಕ್, ಪಾತ್ರದ ಗಾಂಭೀರ್ಯ ಮತ್ತು ಅಭಿನಯದ ಬಗ್ಗೆ ಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಇದೇ ಖುಷಿಯ ನಡುವೆ ಯಶ್ ಅವರ ತಾಯಿಯ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾನೆ. ಮಗನ ಸಾಧನೆ, ಜನರ ಪ್ರೀತಿ ಮತ್ತು 'ರಾಮಾಯಣ' ಸಿನಿಮಾದಲ್ಲಿನ ಅವರ ಅಭಿನಯ ಕಂಡು ತಾಯಿಯ ಹೃದಯ ತುಂಬಿ ಬಂದಿದೆ.
ಯಶ್ ಅಮ್ಮ ಪುಷ್ಪಾ ಅರುಣ್ ಕುಮಾರ್, ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಯಶ್ ಜೊತೆಗಿರುವ ಫೋಟೋ ಹಂಚಿಕೊಂಡ ಪುಷ್ಪಾ, ಒಬ್ಬ ತಾಯಿಗೆ ಇದಕ್ಕಿಂತ ಹೆಚ್ಚಿನ ಸಂತೋಷ ಇನ್ನೇನು ಬೇಕು? ತನ್ನ ಮಗ ತಾನು ಕಂಡ ಪ್ರತಿಯೊಂದು ಕನಸನ್ನೂ ನನಸಾಗಿಸಿಕೊಂಡು, ಸಾಧನೆಯ ಶಿಖರವೇರಿ, ಜನರ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿರುವುದನ್ನು ನೋಡುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಇಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದ 'ರಾಮಾಯಣ' ಸಿನಿಮಾ ಬಿಡುಗಡೆಯಾಗಿದೆ. ಅದರಲ್ಲಿ ರಾವಣನ ಪಾತ್ರದಲ್ಲಿ ಯಶ್ ನೀಡಿರುವ ಅದ್ಭುತ ಅಭಿನಯಕ್ಕೆ ಪ್ರೇಕ್ಷಕರು ತೋರಿಸುತ್ತಿರುವ ಪ್ರೀತಿ ಮತ್ತು ಅಭಿಮಾನವನ್ನು ಕಂಡು ನನ್ನ ಸಂತೋಷಕ್ಕೆ ಪಾರವೇ ಇಲ್ಲ ಎಂದಿದ್ದಾರೆ.
ನಿನ್ನ ಈ ಸಾಧನೆ, ಪರಿಶ್ರಮ ಮತ್ತು ಅದ್ಭುತ ಅಭಿನಯಕ್ಕೆ ತಾಯಿಯಾಗಿ ಹೃತ್ಪೂರ್ವಕ ಅಭಿನಂದನೆಗಳು. ನಿನ್ನ ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ. ನಿನ್ನ ಜೊತೆ ಇಡೀ ಚಿತ್ರತಂಡದ ಪ್ರತಿಯೊಬ್ಬರಿಗೂ ಶುಭಾಶಯಗಳು. ಹೀಗೆಯೇ ಇನ್ನಷ್ಟು ಎತ್ತರಕ್ಕೆ ಬೆಳೆದು, ಸದಾ ನಮ್ಮೆಲ್ಲರ ಹೆಮ್ಮೆ ಮತ್ತು ಸಂತೋಷಕ್ಕೆ ಕಾರಣವಾಗಿರು ಮಗನೇ ಎಂದು ಪ್ರೀತಿಯಿಂದ ಆಶೀರ್ವದಿಸಿದ್ದಾರೆ.
ಅಭಿಮಾನಿಗಳ ಸಂಭ್ರಮಕ್ಕೆ ಮತ್ತಷ್ಟು ಮೆರುಗು
ನವೆಂಬರ್ 5ರಂದು ಬಿಡುಗಡೆಯಾಗಿರುವ 'ರಾಮಾಯಣ: ಪಾರ್ಟ್ 1' ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಂಡಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಪ್ರದರ್ಶನದ ಬಳಿಕ ಪ್ರೇಕ್ಷಕರು ಯಶ್ ಅಭಿನಯಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.




