ಸುಮಾರು ₹4,000 ಕೋಟಿ ಬಜೆಟ್‌ನಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗುತ್ತಿದೆ ಎನ್ನಲಾಗುತ್ತಿರುವ ರಾಮಾಯಣ ಸಿನಿಮಾ, ಭಾರತೀಯ ಚಿತ್ರರಂಗದ ಅತಿದೊಡ್ಡ ಪೌರಾಣಿಕ ಚಿತ್ರವಾಗುವ ಗುರಿಯೊಂದಿಗೆ ಸಿದ್ಧವಾಗುತ್ತಿದೆ.
ಬಾಲಿವುಡ್‌ನಲ್ಲಿ ಸದ್ಯ ಅತಿಹೆಚ್ಚು ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ‘ರಾಮಾಯಣ’ ಮೊದಲ ಸಾಲಿನಲ್ಲಿ ನಿಂತಿದೆ. ನಿರ್ದೇಶಕ ನಿತೇಶ್ ತಿವಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಮಹತ್ವಾಕಾಂಕ್ಷೆಯ ಪೌರಾಣಿಕ ಚಿತ್ರ ತನ್ನ ಅದ್ದೂರಿ ನಿರ್ಮಾಣ, ಭಾರೀ ತಾರಾಗಣ ಮತ್ತು ದಾಖಲೆ ಮಟ್ಟದ ಬಜೆಟ್‌ನಿಂದ ಈಗಾಗಲೇ ದೇಶದಾದ್ಯಂತ ಚರ್ಚೆಯ ಕೇಂದ್ರಬಿಂದುವಾಗಿದೆ.
ಸುಮಾರು ₹4,000 ಕೋಟಿ ಬಜೆಟ್‌ನಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗುತ್ತಿದೆ ಎನ್ನಲಾಗುತ್ತಿರುವ ಈ ಸಿನಿಮಾ, ಭಾರತೀಯ ಚಿತ್ರರಂಗದ ಅತಿದೊಡ್ಡ ಪೌರಾಣಿಕ ಚಿತ್ರವಾಗುವ ಗುರಿಯೊಂದಿಗೆ ಸಿದ್ಧವಾಗುತ್ತಿದೆ. ಮೊದಲ ಭಾಗವನ್ನು 2026ರ ದೀಪಾವಳಿ, ಎರಡನೇ ಭಾಗವನ್ನು 2027ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ. ಈಗ ಚಿತ್ರದ ಕಥೆಗಿಂತಲೂ ಹೆಚ್ಚು ಗಮನ ಸೆಳೆಯುತ್ತಿರುವುದು ಅದರ ತಾರಾಗಣದ ಸಂಭಾವನೆ. ಯಾರು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.
ಶ್ರೀರಾಮನಾಗಿ ನಟಿಸುತ್ತಿರುವ ರಣಬೀರ್ ಕಪೂರ್ ಈ ಚಿತ್ರದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನಲಾಗುತ್ತಿದೆ. ವಿವಿಧ ವರದಿಗಳ ಪ್ರಕಾರ, ಅವರು ಪ್ರತಿ ಭಾಗಕ್ಕೆ ಸುಮಾರು ₹75 ಕೋಟಿ, ಎರಡು ಭಾಗಗಳಿಗೆ ಒಟ್ಟು ₹150 ಕೋಟಿ ಸಂಭಾವನೆ ಪಡೆಯಲಿದ್ದಾರೆ. ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ರಾಕಿಂಗ್ ಸ್ಟಾರ್ ಯಶ್ ಕೇವಲ ನಟನಷ್ಟೇ ಅಲ್ಲ, ಚಿತ್ರದ ಸಹ-ನಿರ್ಮಾಪಕರೂ ಆಗಿದ್ದಾರೆ. ವರದಿಗಳ ಪ್ರಕಾರ, ಅವರು ಪ್ರತಿ ಭಾಗಕ್ಕೆ ₹50 ಕೋಟಿ, ಒಟ್ಟು ₹100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.
ಸೀತೆಯ ಪಾತ್ರವನ್ನು ನಿರ್ವಹಿಸುತ್ತಿರುವ ಸಾಯಿ ಪಲ್ಲವಿ ಅವರಿಗೆ ಪ್ರತಿ ಭಾಗಕ್ಕೆ ₹6 ಕೋಟಿ, ಎರಡು ಭಾಗಗಳಿಗೆ ಒಟ್ಟು ₹12 ಕೋಟಿ ಸಂಭಾವನೆ ನೀಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಲಕ್ಷ್ಮಣನ ಪಾತ್ರದಲ್ಲಿ ನಟಿಸುತ್ತಿರುವ ರವಿ ದುಬೆ ಅವರಿಗೆ ಪ್ರತಿ ಭಾಗಕ್ಕೆ ₹10 ಕೋಟಿ, ಒಟ್ಟು ₹20 ಕೋಟಿ ಸಂಭಾವನೆ ದೊರೆತಿದೆ ಎನ್ನಲಾಗುತ್ತಿದೆ. ಇನ್ನು ಹನುಮಂತನ ಪಾತ್ರದಲ್ಲಿ ಅಭಿನಯಿಸುತ್ತಿರುವ ಸನ್ನಿ ಡಿಯೋಲ್ ಅವರಿಗೆ ಪ್ರತಿ ಭಾಗಕ್ಕೆ ₹20 ಕೋಟಿ, ಎರಡೂ ಭಾಗಗಳಿಗೆ ಸೇರಿ ₹40 ಕೋಟಿ ಸಂಭಾವನೆ ನೀಡಲಾಗಿದೆ ಎಂಬ ವರದಿಗಳಿವೆ. ಆದರೆ ಅವರ ಪಾತ್ರದ ಅಧಿಕೃತ ಲುಕ್ ಇನ್ನೂ ಬಹಿರಂಗಗೊಂಡಿಲ್ಲ.
ಈ ಎಲ್ಲಾ ಸ್ಟಾರ್‌ಗಳ ನಡುವೆ ಹೆಚ್ಚು ಗಮನ ಸೆಳೆದಿರುವ ಹೆಸರು ವಿವೇಕ್ ಒಬೆರಾಯ್ ಅವರದ್ದು. ಚಿತ್ರದಲ್ಲಿ ವಿದ್ಯುತ್ಜಿಹ್ವ ಪಾತ್ರದಲ್ಲಿ ನಟಿಸುತ್ತಿರುವ ಅವರು, ಈ ಸಿನಿಮಾಕ್ಕಾಗಿ ಯಾವುದೇ ಸಂಭಾವನೆ ಪಡೆಯದೆ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗುವುದೇ ತಮ್ಮ ಪಾಲಿನ ದೊಡ್ಡ ಗೌರವ ಎಂದು ಅವರು ಭಾವಿಸಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಇನ್ನೊಂದೆಡೆ, 'ರಾಮಾಯಣ' ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರದ ಮೂಲಕ ಮನೆಮಾತಾಗಿದ್ದ ಅರುಣ್ ಗೋವಿಲ್, ಈ ಚಿತ್ರದಲ್ಲಿ ರಾಜ ದಶರಥ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಅವರ ಸಂಭಾವನೆ ಕುರಿತು ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ಭಾರೀ ಕುತೂಹಲ
ಇಷ್ಟೇ ಅಲ್ಲ, ಲಾರಾ ದತ್ತಾ, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಶೋಭನಾ, ಫೈಸಲ್ ಮಲಿಕ್ ಸೇರಿದಂತೆ ಹಲವಾರು ಪ್ರಮುಖ ಕಲಾವಿದರು ಕೂಡ ಈ ಅದ್ದೂರಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ನಟರ ಸಂಭಾವನೆ ಕುರಿತಾಗಿ ಹರಿದಾಡುತ್ತಿರುವ ಎಲ್ಲ ಅಂಕಿ-ಅಂಶಗಳು ವಿವಿಧ ಮಾಧ್ಯಮ ವರದಿಗಳನ್ನು ಆಧರಿಸಿವೆ. ಚಿತ್ರತಂಡ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. ಆದರೂ ‘ರಾಮಾಯಣ’ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಮತ್ತು ಅತಿ ಹೆಚ್ಚು ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಒಂದಾಗಿ ಈಗಾಗಲೇ ಭಾರೀ ಕುತೂಹಲ ಹುಟ್ಟುಹಾಕಿದೆ.


