ನಟಿ ಸಾಯಿ ಪಲ್ಲವಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಆದರೆ ಈ ಬಾರಿ ಕಾರಣ ಅವರ ಹೊಸ ಸಿನಿಮಾ ಅಲ್ಲ. ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಅವರ ಆಯ್ಕೆ ಆಗಿರುವುದು.
ನಟಿ ಸಾಯಿ ಪಲ್ಲವಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಆದರೆ ಈ ಬಾರಿ ಕಾರಣ ಅವರ ಹೊಸ ಸಿನಿಮಾ ಅಲ್ಲ. ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಸೀತೆಯ ಪಾತ್ರಕ್ಕೆ ಅವರ ಆಯ್ಕೆ ಆಗಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಅದರ ನಡುವೆಯೇ ಸಾಯಿ ಪಲ್ಲವಿ ಅವರ ಹಲವು ವರ್ಷಗಳ ಹಿಂದಿನ ಸಂದರ್ಶನವೊಂದು ಮತ್ತೆ ವೈರಲ್ ಆಗಿದೆ. ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ನಟಿಸುತ್ತಿರುವ ಈ ಬಿಗ್‌ಬಜೆಟ್ ಸಿನಿಮಾದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. ಅವರ ಆಯ್ಕೆಯನ್ನು ಹಲವರು ಸ್ವಾಗತಿಸಿ, ಸಹಜ ಸೌಂದರ್ಯ ಮತ್ತು ಅದ್ಭುತ ಅಭಿನಯವೇ ಈ ಪಾತ್ರಕ್ಕೆ ಅವರನ್ನು ಸೂಕ್ತರನ್ನಾಗಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ಪೌರಾಣಿಕ ಪಾತ್ರಕ್ಕೆ ಅವರ ಲುಕ್ ಹೊಂದಿಕೆಯಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವವರ ಸಂಖ್ಯೆಯೂ ಕಡಿಮೆಯಿಲ್ಲ. ಈ ಚರ್ಚೆ ಜೋರಾಗಿರುವಾಗಲೇ, 'ದಿ ಹಿಂದೂ'ಗೆ ನೀಡಿದ್ದ ಹಳೆಯ ಸಂದರ್ಶನದ ಕೆಲವು ಮಾತುಗಳು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆ ಸಂದರ್ಶನದಲ್ಲಿ ಸಾಯಿ ಪಲ್ಲವಿ ತಮ್ಮ ಚರ್ಮದ ಸಮಸ್ಯೆ, ಮೊಡವೆಗಳು, ರೋಸೇಶಿಯಾ ಹಾಗೂ ಆತ್ಮವಿಶ್ವಾಸದ ಬಗ್ಗೆ ಮನಮುಟ್ಟುವಂತೆ ಮಾತನಾಡಿದ್ದರು.
"ಒಂದು ಕಾಲದಲ್ಲಿ ಜನರು ನನ್ನ ಕಣ್ಣುಗಳತ್ತ ನೋಡುವುದಿಲ್ಲ, ನನ್ನ ಮೊಡವೆಗಳನ್ನೇ ಗಮನಿಸುತ್ತಾರೆ ಎಂದು ನಾನು ಭಾವಿಸುತ್ತಿದ್ದೆ. ಅದಕ್ಕಾಗಿಯೇ ಮನೆಯಿಂದ ಹೊರಗೆ ಹೋಗಲು ಕೂಡ ಹಿಂಜರಿಯುತ್ತಿದ್ದೆ," ಎಂದು ಸಾಯಿ ಪಲ್ಲವಿ ಹೇಳಿಕೊಂಡಿದ್ದರು. ಸಿನಿಮಾಗೆ ಬರುವ ಮೊದಲು ತಮ್ಮ ಚರ್ಮದ ಬಣ್ಣ ಬದಲಾಗಲಿ ಎಂಬ ಆಸೆಯಿಂದ ಹಲವು ರೀತಿಯ ಫೇರ್‌ನೆಸ್ ಕ್ರೀಮ್‌ಗಳನ್ನು ಬಳಸಿದ್ದನ್ನೂ ಅವರು ಬಹಿರಂಗಪಡಿಸಿದ್ದರು. ಆದರೆ ನಂತರ ತಮ್ಮನ್ನು ತಾವು ಸಹಜವಾಗಿಯೇ ಒಪ್ಪಿಕೊಳ್ಳಲು ಕಲಿತೆ ಎಂದು ಅವರು ಹೇಳಿದ್ದಾರೆ.
"ನನ್ನನ್ನು ಜನರು ನಾನು ಇರುವಂತೆಯೇ ಸ್ವೀಕರಿಸಿದಾಗ, ಆತ್ಮವಿಶ್ವಾಸವೇ ನಿಜವಾದ ಸೌಂದರ್ಯ ಎಂಬುದು ನನಗೆ ಅರ್ಥವಾಯಿತು. ಆಗಿನಿಂದ ನಾನು ನನ್ನ ಸಹಜ ರೂಪವನ್ನೇ ಅಳವಡಿಸಿಕೊಂಡೆ," ಎಂದು ಅವರು ಹೇಳಿದ್ದರು. ಸಾಯಿ ಪಲ್ಲವಿ ಮೇಕಪ್‌ಗೆ ಹೆಚ್ಚಿನ ಮಹತ್ವ ನೀಡದ ನಟಿಯರಲ್ಲಿ ಒಬ್ಬರು. ತೆರೆಯ ಮೇಲೂ, ವೈಯಕ್ತಿಕ ಜೀವನದಲ್ಲೂ ಸಹಜತೆಯನ್ನೇ ತಮ್ಮ ಗುರುತಾಗಿಸಿಕೊಂಡಿರುವ ಅವರು, ಇದೇ ಕಾರಣಕ್ಕೆ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅದೇ ಸಂದರ್ಶನದಲ್ಲಿ ತಮ್ಮ ಸಿನಿ ಪಯಣದ ಆರಂಭದ ಬಗ್ಗೆಯೂ ಸಾಯಿ ಪಲ್ಲವಿ ಮಾತನಾಡಿದ್ದರು. ತಮಿಳು ಚಿತ್ರರಂಗಕ್ಕಿಂತ ಮೊದಲು ಮಲಯಾಳಂನ 'ಪ್ರೇಮಂ' ಚಿತ್ರದ ಮೂಲಕವೇ ನಟಿಯಾಗಿ ಪರಿಚಯವಾಗಲು ಕಾರಣವೇನು ಎಂಬುದನ್ನೂ ಅವರು ವಿವರಿಸಿದ್ದರು.
ನಿರೀಕ್ಷೆಗೂ ಮೀರಿ ದೊಡ್ಡ ಯಶಸ್ಸು
"ನನ್ನ ಸ್ನೇಹಿತರೆಲ್ಲ ತಮಿಳಿಗರು. ನಾನು ಮಲಯಾಳಂ ಸಿನಿಮಾ ಮಾಡಿದರೆ ಅದು ಯಶಸ್ವಿಯಾಗದಿದ್ದರೂ ಅವರಿಗೆ ಗೊತ್ತಾಗುವುದಿಲ್ಲ ಎಂದುಕೊಂಡಿದ್ದೆ. ಆದರೆ 'ಪ್ರೇಮಂ' ನಿರೀಕ್ಷೆಗೂ ಮೀರಿ ದೊಡ್ಡ ಯಶಸ್ಸು ಕಂಡಿತು. ಆ ಚಿತ್ರದ ನಂತರ ಜನರು ನನ್ನನ್ನು ನಾನು ಇರುವಂತೆಯೇ ಒಪ್ಪಿಕೊಂಡರು. ಅದೇ ನನಗೆ ಹೊಸ ಆತ್ಮವಿಶ್ವಾಸ ನೀಡಿತು," ಎಂದು ಅವರು ನೆನಪಿಸಿಕೊಂಡಿದ್ದರು. ಇದೀಗ 'ರಾಮಾಯಣ' ಚಿತ್ರದ ಸೀತೆಯ ಪಾತ್ರದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿರುವ ನಡುವೆಯೇ, ಸೌಂದರ್ಯ ಎಂದರೆ ಕೇವಲ ಬಾಹ್ಯ ರೂಪವಲ್ಲ, ಆತ್ಮವಿಶ್ವಾಸ ಮತ್ತು ಸಹಜತೆಯೇ ನಿಜವಾದ ಸೌಂದರ್ಯ ಎಂಬ ಸಾಯಿ ಪಲ್ಲವಿ ಅವರ ಈ ಹಳೆಯ ಮಾತುಗಳು ಮತ್ತೆ ಅಭಿಮಾನಿಗಳ ಗಮನ ಸೆಳೆಯುತ್ತಿವೆ.


