ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಕೇವಲ ಒಂದು ವಾರದಲ್ಲಿ ವಿಶ್ವದಾದ್ಯಂತ ₹934.55 ಕೋಟಿ ಗಳಿಸಿದೆ. ಏಳನೇ ದಿನವೂ ಉತ್ತಮ ಕಲೆಕ್ಷನ್ ಮಾಡಿರುವ ಚಿತ್ರ, 2026ರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಎರಡನೇ ಸ್ಥಾನಕ್ಕೇರಿದೆ.

Ramayana Box Office Collection Day 7: ನಿತೇಶ್ ತಿವಾರಿ ನಿರ್ದೇಶನದ, ನಮಿತ್ ಮಲ್ಹೋತ್ರಾ ನಿರ್ಮಾಣದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಕೇವಲ ಒಂದು ವಾರದಲ್ಲಿ ವಿಶ್ವದಾದ್ಯಂತ ₹934.55 ಕೋಟಿ ಗಳಿಕೆ ಮಾಡಿದೆ. ಏಳನೇ ದಿನವೂ ಉತ್ತಮ ಕಲೆಕ್ಷನ್‌ ಮಾಡಿರುವ ಚಿತ್ರ, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳತ್ತ ಮುನ್ನಡೆಯುತ್ತಿದೆ.

ಏಳನೇ ದಿನ ಭಾರತದಲ್ಲಿ ₹70.65 ಕೋಟಿ ನೆಟ್ ಕಲೆಕ್ಷನ್‌ ಮಾಡಿರುವ ‘ರಾಮಾಯಣ’, ವಿದೇಶಿ ಮಾರುಕಟ್ಟೆಯಲ್ಲಿ ₹25 ಕೋಟಿ ಗಳಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ವಿಶ್ವಾದ್ಯಂತ ಗಳಿಕೆ ₹934.55 ಕೋಟಿಗೆ ತಲುಪಿದೆ. ಇದೀಗ ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರದ ಜೀವಮಾನದ ವಿಶ್ವಾದ್ಯಂತ ಗಳಿಕೆಯ ದಾಖಲೆಯನ್ನು ಹಿಂದಿಕ್ಕಲು ‘ರಾಮಾಯಣ’ಕ್ಕೆ ಇನ್ನೂ ₹917.45 ಕೋಟಿ ಅಗತ್ಯವಿದೆ. ಅಂದಹಾಗೆ ‘ಧುರಂಧರ್ 2’ ತನ್ನ ಚಿತ್ರಮಂದಿರದ ಪ್ರದರ್ಶನದ ಅವಧಿಯಲ್ಲಿ ವಿಶ್ವದಾದ್ಯಂತ ₹1,852 ಕೋಟಿ ಗಳಿಕೆ ಮಾಡಿದೆ.

‘ರಾಮಾಯಣ’ 7ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್

ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮತ್ತು ರವಿ ದುಬೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾ ಏಳನೇ ದಿನ ₹70.65 ಕೋಟಿ ಗಳಿಸಿದೆ. ಆರನೇ ದಿನದ ಗಳಿಕೆಗೆ ಹೋಲಿಸಿದರೆ ಏಳನೇ ದಿನ ಚಿತ್ರದ ಕಲೆಕ್ಷನ್‌ನಲ್ಲಿ ಶೇ.24.9ರಷ್ಟು ಇಳಿಕೆ ಕಂಡುಬಂದಿದೆ. ಚಿತ್ರದ ಹಿಂದಿ ಆವೃತ್ತಿಯೊಂದೇ ₹58 ಕೋಟಿ ಗಳಿಸಿದೆ. ಕನ್ನಡ ಆವೃತ್ತಿ ₹4.50 ಕೋಟಿ ಕಲೆಕ್ಷನ್‌ ಮಾಡಿದೆ. ಮಲಯಾಳಂ ಮತ್ತು ತೆಲುಗು ಆವೃತ್ತಿಗಳು ತಲಾ ₹2.75 ಕೋಟಿ ಗಳಿಸಿದರೆ, ತಮಿಳು ಆವೃತ್ತಿ ₹2.65 ಕೋಟಿ ಸಂಗ್ರಹಿಸಿದೆ ಎಂದು Sacnilk ವರದಿ ಮಾಡಿದೆ. ಭಾರತದಲ್ಲಿ ಬಿಡುಗಡೆಯಾದ ನಾಲ್ಕು ಡಬ್ಬಿಂಗ್ ಆವೃತ್ತಿಗಳಿಂದ ‘ರಾಮಾಯಣ’ ಸುಮಾರು ₹115 ಕೋಟಿ ನೆಟ್ ಕಲೆಕ್ಷನ್‌ ಮಾಡಿದೆ. ಈ ಸಾಧನೆ ಮಾಡಿದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿದೆ.

‘ರಾಮಾಯಣ’ ದಿನವಾರು ಬಾಕ್ಸ್ ಆಫೀಸ್ ಗಳಿಕೆ

ಮೊದಲ ದಿನ: ₹64.85 ಕೋಟಿ

ಎರಡನೇ ದಿನ: ₹48.05 ಕೋಟಿ

ಮೂರನೇ ದಿನ: ₹69.80 ಕೋಟಿ

ನಾಲ್ಕನೇ ದಿನ: ₹56.15 ಕೋಟಿ

ಐದನೇ ದಿನ: ₹107.50 ಕೋಟಿ

ಆರನೇ ದಿನ: ₹94.10 ಕೋಟಿ

ಏಳನೇ ದಿನ: ₹70.65 ಕೋಟಿ

ಎಂಟನೇ ದಿನ: ₹2.91 ಕೋಟಿ (ಬೆಳಗ್ಗೆ 9 ಗಂಟೆಯವರೆಗೆ)

2026ರ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ‘ರಾಮಾಯಣ’ಕ್ಕೆ ಎರಡನೇ ಸ್ಥಾನ

ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳ ಅಂಕಿಅಂಶಗಳ ಪ್ರಕಾರ, 2026ರಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ‘ರಾಮಾಯಣ’ ಎರಡನೇ ಸ್ಥಾನಕ್ಕೇರಿದೆ. ಈ ಪಟ್ಟಿಯಲ್ಲಿ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ₹1,852 ಕೋಟಿ ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ ₹830 ಕೋಟಿ ಗಳಿಕೆಯ ದಾಖಲೆಯನ್ನು ‘ರಾಮಾಯಣ’ ಹಿಂದಿಕ್ಕಿದೆ. ಇದೇ ದಿನ ‘ಜೈಲರ್ 2’ ಒಟಿಟಿ ಬಿಡುಗಡೆಯಾಗಲು ಸಿದ್ಧವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದರ ಜತೆಗೆ ‘ದೃಶ್ಯಂ: ದಿ ಕನ್‌ಕ್ಲೂಷನ್’ (₹588 ಕೋಟಿ), ‘ಬಾರ್ಡರ್ 2’ (₹465 ಕೋಟಿ) ಮತ್ತು ‘ಹನುಮಾನ್ ಅಂಶ್’ (₹453 ಕೋಟಿ) ಚಿತ್ರಗಳ ಗಳಿಕೆಯನ್ನೂ ‘ರಾಮಾಯಣ’ ಮೀರಿಸಿದೆ. ಒಟ್ಟಿನಲ್ಲಿ, ಮೊದಲ ವಾರದಲ್ಲೇ ₹934 ಕೋಟಿಗೂ ಅಧಿಕ ಗಳಿಕೆ ಮಾಡಿರುವ ‘ರಾಮಾಯಣ’ದ ಮುಂದಿನ ಗುರಿ ‘ಧುರಂಧರ್ 2’ ದಾಖಲೆಯಾಗಿದೆ. ಆದರೆ, ಆ ದಾಖಲೆಯನ್ನು ಮುರಿಯಲು ಚಿತ್ರ ಇನ್ನೂ ₹917 ಕೋಟಿಗೂ ಅಧಿಕ ಗಳಿಕೆ ಮಾಡಬೇಕಿದೆ.