ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟ ಸುಂದರ್ ರಾಜ್ ಅವರ ಸಿನಿಮಾ ಪಯಣವೇ ಒಂದು ರೋಚಕ ಕಥೆ. ಕೈತುಂಬಾ ಆದಾಯ ತರುತ್ತಿದ್ದ ಕುಟುಂಬದ ವ್ಯಾಪಾರ, ಲಕ್ಷಾಂತರ ರೂಪಾಯಿ ಮೌಲ್ಯದ ವ್ಯವಹಾರ, ಬಳಿಕ ಎಲ್ಲವನ್ನೂ ಬಿಟ್ಟು ನಾಟಕ ಮತ್ತು ಸಿನಿಮಾದತ್ತ ಮುಖ ಮಾಡಿದ ನಿರ್ಧಾರ.
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟ ಸುಂದರ್ ರಾಜ್ ಅವರ ಸಿನಿಮಾ ಪಯಣವೇ ಒಂದು ರೋಚಕ ಕಥೆ. ಕೈತುಂಬಾ ಆದಾಯ ತರುತ್ತಿದ್ದ ಕುಟುಂಬದ ಟೈರ್ ವ್ಯಾಪಾರ, ಲಕ್ಷಾಂತರ ರೂಪಾಯಿ ಮೌಲ್ಯದ ವ್ಯವಹಾರ, ಬಳಿಕ ಎಲ್ಲವನ್ನೂ ಬಿಟ್ಟು ನಾಟಕ ಮತ್ತು ಸಿನಿಮಾದತ್ತ ಮುಖ ಮಾಡಿದ ನಿರ್ಧಾರ... ಹೀಗೆ ಅವರ ಬದುಕಿನಲ್ಲಿ ಹಲವು ತಿರುವುಗಳಿವೆ. ಅದರಲ್ಲೂ ಶಂಕರ್ ನಾಗ್ ಅವರಿಗೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆಯಾದಾಗ ವೇದಿಕೆ ಮೇಲೆ ನಡೆದ ಘಟನೆಯನ್ನು ಅವರು ಕಲಾಮಾಧ್ಯಮ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.
30 ಕೋಟಿ ಮೌಲ್ಯದ ಆಸ್ತಿ ಕೈತಪ್ಪಿ ನಾಟಕದತ್ತ ಪಯಣ
ಸುಂದರ್ ರಾಜ್ ಅವರ ಕುಟುಂಬಕ್ಕೆ ಬೆಂಗಳೂರಿನಲ್ಲಿ ಟೈರ್ ಅಂಗಡಿ ಇತ್ತು. ತಂದೆಯ ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ದಿನಕ್ಕೆ ಸಾವಿರಾರು ರೂಪಾಯಿ ವಹಿವಾಟು ನಡೆಯುತ್ತಿದ್ದ ಕಾಲವದು. ಟೈರ್ ವ್ಯಾಪಾರದ ಜೊತೆಗೆ ಕುಟುಂಬದವರು ಟ್ರಾವೆಲ್ಸ್ ಉದ್ಯಮವನ್ನೂ ನಡೆಸಿದ್ದರು. ಆದರೆ ವ್ಯಾಪಾರ ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲೇ ಸುಂದರ್ ರಾಜ್ ಅವರಿಗೆ ನಾಟಕದ ಮೇಲಿನ ಆಸಕ್ತಿ ಹೆಚ್ಚಾಯಿತು. ನಾಟಕದತ್ತ ಹೆಚ್ಚು ಗಮನ ಹರಿಸಿದ ಪರಿಣಾಮ ಕುಟುಂಬದ ವ್ಯಾಪಾರಕ್ಕೆ ಹಿನ್ನಡೆಯಾಯಿತು. ಕೊನೆಗೆ ಅಂಗಡಿಯನ್ನು ಮುಚ್ಚುವ ಪರಿಸ್ಥಿತಿ ಎದುರಾಯಿತು.
ಸಂದರ್ಶನದಲ್ಲಿ ಈ ಘಟನೆಯನ್ನು ನೆನಪಿಸಿಕೊಂಡ ಅವರು, 1973-74ರ ಸಮಯದಲ್ಲಿ ಅಂಗಡಿಯಲ್ಲಿ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಸರಕುಗಳಿದ್ದವು. ಇಂದಿನ ಮೌಲ್ಯದಲ್ಲಿ ಅದನ್ನು ಸುಮಾರು 30 ಕೋಟಿ ರೂಪಾಯಿಗೆ ಹೋಲಿಸಬಹುದು ಎಂದು ಹೇಳಿದ್ದಾರೆ. ಅಷ್ಟೊಂದು ದೊಡ್ಡ ವ್ಯಾಪಾರವನ್ನು ಬಿಟ್ಟು ನಾಟಕದ ಜಗತ್ತಿಗೆ ಬಂದಿದ್ದಾಗಿ ತಮ್ಮ ಬದುಕಿನ ತಿರುವನ್ನು ವಿವರಿಸಿದ್ದಾರೆ.
ಗಿರೀಶ್ ಕಾರ್ನಾಡ್ ಅವರಿಂದ ಕಲಿತ ಪಾಠ
ಸುಂದರ್ ರಾಜ್ ಅವರ ಸಿನಿಮಾ ಪಯಣದಲ್ಲಿ ಗಿರೀಶ್ ಕಾರ್ನಾಡ್ ಅವರ ಪ್ರಭಾವವೂ ಮಹತ್ವದ್ದಾಗಿದೆ. ಕಾರ್ನಾಡ್ ಅವರನ್ನು ಕೇವಲ ಹಿರಿಯ ಕಲಾವಿದರಾಗಿ ನೋಡದೆ, ತಮ್ಮ ಗುರುಗಳೆಂದೇ ಗೌರವಿಸುವುದಾಗಿ ಅವರು ಹೇಳಿದ್ದಾರೆ. ಒಬ್ಬ ವ್ಯಕ್ತಿ ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ, ಅವರಿಂದ ಏನಾದರೂ ಕಲಿಯಲು ಸಾಧ್ಯವಾದರೆ ಅವರನ್ನು ಗುರುವಾಗಿ ಸ್ವೀಕರಿಸಬೇಕು ಎಂಬುದು ಅವರ ಅಭಿಪ್ರಾಯ.
ಕನ್ನಡದ ಹೊಸ ಅಲೆಯ ಸಿನಿಮಾಗಳ ಬಗ್ಗೆ ಮಾತನಾಡಿದ ಅವರು, ಸತ್ಯಜಿತ್ ರೇ ಅವರ 'ಪಥೇರ್ ಪಾಂಚಾಲಿ' ಭಾರತೀಯ ಚಿತ್ರರಂಗದ ಆಲೋಚನಾ ಕ್ರಮವನ್ನೇ ಬದಲಿಸಿದ ಸಿನಿಮಾ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಥೆಗೆ ಅಗತ್ಯವಿಲ್ಲದಿದ್ದರೆ ಹಾಡು, ಫೈಟಿಂಗ್ ಸೇರಿಸಬೇಕೆಂಬ ನಿಯಮವಿಲ್ಲ. ಬದುಕನ್ನು ಇದ್ದಂತೆಯೇ ತೋರಿಸುವುದೂ ಸಿನಿಮಾದ ಒಂದು ಶಕ್ತಿ ಎಂದು ವಿವರಿಸಿದ್ದಾರೆ.
'ಸಂಸ್ಕಾರ', 'ವಂಶವೃಕ್ಷ', 'ಕಾಡು', 'ಚೋಮನ ದುಡಿ' ಸೇರಿದಂತೆ ಕನ್ನಡದ ಹೊಸ ಅಲೆಯ ಚಿತ್ರಗಳ ಬೆಳವಣಿಗೆಯ ಬಗ್ಗೆಯೂ ಅವರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಶಂಕರ್ ನಾಗ್ ಹೆಸರಿನಲ್ಲಿ ಘೋಷಣೆಯಾದ ಪ್ರಶಸ್ತಿ; ವೇದಿಕೆ ಮೇಲೆ ನಡೆದಿದ್ದೇನು?
ಸುಂದರ್ ರಾಜ್ ಅವರ ಸಂದರ್ಶನದಲ್ಲಿನ ಅತ್ಯಂತ ಕುತೂಹಲಕಾರಿ ಘಟನೆ ಶಂಕರ್ ನಾಗ್ ಅವರಿಗೆ ಸಂಬಂಧಿಸಿದ್ದು. 'ಒಂದಾನೊಂದು ಕಾಲದಲ್ಲಿ' ಸಿನಿಮಾದಲ್ಲಿ ಶಂಕರ್ ನಾಗ್, ಸುಂದರ್ ರಾಜ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು. ಈ ಚಿತ್ರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಘೋಷಣೆಯಾದ ಸಂದರ್ಭವನ್ನು ಅವರು ವಿವರಿಸಿದ್ದಾರೆ. ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಶಂಕರ್ ನಾಗ್ ಅವರಿಗೆ ಘೋಷಿಸಲಾಯಿತು. ಆದರೆ ಶಂಕರ್ ನಾಗ್ ಅವರು ಪ್ರಶಸ್ತಿ ಸ್ವೀಕರಿಸಲು ಅಲ್ಲಿ ಹಾಜರಿರಲಿಲ್ಲ. ಅವರ ಪರವಾಗಿ ಅದೇ ಸಿನಿಮಾದಲ್ಲಿ ನಟಿಸಿದ್ದ ಸುಂದರ್ ರಾಜ್ ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದರು.
ಆ ಕ್ಷಣದ ನೆನಪನ್ನು ಹಂಚಿಕೊಂಡ ಅವರು, ಶಂಕರ್ ನಾಗ್ ಅವರ ಹೆಸರನ್ನು ಘೋಷಿಸಿದ ತಕ್ಷಣ ಸಭಾಂಗಣದಲ್ಲಿ ಚಪ್ಪಾಳೆ ಮೊಳಗಿತ್ತು. ಸುಮಾರು 3,000 ಜನರು ಸೇರಿದ್ದ ದೊಡ್ಡ ಸಭಾಂಗಣದಲ್ಲಿ ತಾವು ವೇದಿಕೆ ಏರಿದಾಗ, ಕೆಲವರು ತಮ್ಮನ್ನೇ ಶಂಕರ್ ನಾಗ್ ಎಂದು ಭಾವಿಸಿದಂತಿತ್ತು ಎಂದು ನೆನಪಿಸಿಕೊಂಡಿದ್ದಾರೆ. ನಂತರ ನಿರೂಪಕರು ಶಂಕರ್ ನಾಗ್ ಪ್ರಶಸ್ತಿ ಸ್ವೀಕರಿಸಲು ಬರಲು ಸಾಧ್ಯವಾಗದ ಕಾರಣ, ಅವರ ಪರವಾಗಿ ಅದೇ ಸಿನಿಮಾದ ಮತ್ತೊಬ್ಬ ನಟ ಸುಂದರ್ ರಾಜ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಘೋಷಿಸಿದರು. ಆಗ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದರು. ಆ ಕ್ಷಣ ಇಂದಿಗೂ ತಮ್ಮಲ್ಲಿ ರೋಮಾಂಚನ ಮೂಡಿಸುತ್ತದೆ ಎಂದು ಸುಂದರ್ ರಾಜ್ ಹೇಳಿದ್ದಾರೆ.
ಸಿನಿಮಾಗಾಗಿ ಕಠಿಣ ತರಬೇತಿ, ವಿಭಿನ್ನ ಅನುಭವ
'ಒಂದಾನೊಂದು ಕಾಲದಲ್ಲಿ' ಸಿನಿಮಾದಲ್ಲಿ ನಟಿಸಲು ತಾವು ಕಠಿಣ ತರಬೇತಿ ಪಡೆದಿದ್ದನ್ನೂ ಅವರು ನೆನಪಿಸಿಕೊಂಡಿದ್ದಾರೆ. ಮಾರ್ಷಲ್ ಆರ್ಟ್ಸ್ ಮತ್ತು ಫೈಟಿಂಗ್ ದೃಶ್ಯಗಳಿಗಾಗಿ ಸುಮಾರು ಎರಡು ತಿಂಗಳ ಕಾಲ ಅಭ್ಯಾಸ ಮಾಡಿದ್ದರಂತೆ. ಪ್ರತಿದಿನ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಬಿಸಿಲಿನಲ್ಲಿ ತರಬೇತಿ ನೀಡಲಾಗುತ್ತಿತ್ತು. ಓಡುವುದು, ದೈಹಿಕ ಕಸರತ್ತು ಮತ್ತು ಫೈಟಿಂಗ್ ಅಭ್ಯಾಸ ಹೀಗೆ ಸಾಕಷ್ಟು ಕಷ್ಟಪಟ್ಟಿದ್ದಾಗಿ ಅವರು ವಿವರಿಸಿದ್ದಾರೆ.
ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಕೆಲಸ ಮಾಡಿದ ಅನುಭವದಿಂದ ನಾಸಿರುದ್ದೀನ್ ಶಾ, ಓಂ ಪುರಿ, ಕುಲಭೂಷಣ್ ಖರ್ಬಂದಾ ಸೇರಿದಂತೆ ಹಲವು ಕಲಾವಿದರ ಸಂಪರ್ಕವೂ ತಮಗೆ ದೊರೆಯಿತು ಎಂದು ಹೇಳಿದ್ದಾರೆ.












