ಬಾಲಿವುಡ್ ನಟಿ ರಾಖಿ ಸಾವಂತ್ ಮಕ್ಕಾದಲ್ಲಿ ಉಮ್ರಾ ನೆರವೇರಿಸುವ ವೇಳೆ ನೇಪಾಳದ ಭೀಕರ ಪ್ರವಾಹ ಪೀಡಿತರ ರಕ್ಷಣೆಗಾಗಿ ಕಣ್ಣೀರಿಟ್ಟು ಪ್ರಾರ್ಥಿಸಿದ್ದಾರೆ. ಪವಿತ್ರ ಕಾಬಾ ಮುಂದೆ ಅವರು ಭಾವುಕರಾಗಿ ಪ್ರಾರ್ಥಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸದಾ ಕಾಲ ತಮ್ಮ ವಿಭಿನ್ನ ಹಾವಭಾವ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದಲೇ ಗಮನ ಸೆಳೆಯುವ ಬಾಲಿವುಡ್‌ನ 'ಡ್ರಾಮಾ ಕ್ವೀನ್' ರಾಖಿ ಸಾವಂತ್ (Rakhi Sawant) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಯಾವುದೇ ತಮಾಷೆ ಅಥವಾ ವಿವಾದದ ಕಾರಣಕ್ಕಲ್ಲ, ಬದಲಿಗೆ ಅವರ ಅತ್ಯಂತ ಭಾವುಕ ಹಾಗೂ ಮಾನವೀಯ ನಡೆಯೊಂದು ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಇತ್ತೀಚೆಗೆ ಪವಿತ್ರ ಉಮ್ರಾ ಯಾತ್ರೆಗಾಗಿ ಮಕ್ಕಾಗೆ (Makkah) ತೆರಳಿರುವ ರಾಖಿ ಸಾವಂತ್, ಅಲ್ಲಿನ ಪವಿತ್ರ ಕಾಬಾ (Kaaba) ಪ್ರದಕ್ಷಿಣೆ ಮಾಡುತ್ತಾ ಅತ್ಯಂತ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಬಿರುಗಾಳಿಗೆ ಸಿಲುಕಿ ಸಂಕಷ್ಟಕ್ಕೆ ಈಡಾಗಿರುವ ಜನರ ಸುರಕ್ಷತೆಗಾಗಿ ಅವರು ದೇವರಲ್ಲಿ ಕಣ್ಣೀರಿಟ್ಟು ಪ್ರಾರ್ಥನೆ ಮಾಡಿದ್ದಾರೆ.

ಕಾಬಾ ಮುಂದೆ ಭಾವುಕ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ರಾಖಿ ಸಾವಂತ್ ಅವರು ಕಪ್ಪು ಬಣ್ಣದ ಹಿಜಾಬ್ ಧರಿಸಿ ಪವಿತ್ರ ಕಾಬಾದ ಮುಂದೆ ನಿಂತಿರುವುದನ್ನು ಕಾಣಬಹುದು. ಕಣ್ಣಿನಲ್ಲಿ ನೀರು ತುಂಬಿಕೊಂಡು ಭಾವುಕರಾದ ರಾಖಿ, "ಓ ಅಲ್ಲಾಹ್, ನೇಪಾಳದಲ್ಲಿ ಬಂದಿರುವ ಭೀಕರ ಪ್ರವಾಹ ಮತ್ತು ಬಿರುಗಾಳಿಯನ್ನು ದಯವಿಟ್ಟು ತಡೆ. ಅಲ್ಲಿನ ಜನರ ಮೇಲೆ ಕರುಣೆ ತೋರು. ಪ್ರವಾಹದಲ್ಲಿ ಸಿಲುಕಿರುವ ಎಲ್ಲಾ ಭಾರತೀಯ ಹಾಗೂ ನೇಪಾಳಿ ಪ್ರಜೆಗಳನ್ನು ಸುರಕ್ಷಿತವಾಗಿ ಅವರವರ ಮನೆಗಳಿಗೆ ತಲುಪಿಸು ಎಂದು ಪ್ರಾರ್ಥಿಸಿದ್ದಾರೆ.

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ರಾಖಿ ಸಾವಂತ್ ಅವರ ಈ ಭಾವುಕ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಲಕ್ಷಾಂತರ ವೀಕ್ಷಣೆಗಳು ಹಾಗೂ ಲೈಕ್ಸ್ ಪಡೆದಿದೆ. ಸಾಮಾಜಿಕ ಜಾಲತಾಣ ಬಳಕೆದಾರರು ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಂದು ಕಡೆ ಹಲವು ನೆಟ್ಟಿಗರು ರಾಖಿ ಅವರ ಈ ಮಾನವೀಯ ಕಾಳಜಿಯನ್ನು ಶ್ಲಾಘಿಸುತ್ತಿದ್ದು, ಕಷ್ಟದ ಸಮಯದಲ್ಲಿ ಇತರ ದೇಶಗಳ ಜನರ ಕಲ್ಯಾಣಕ್ಕಾಗಿ ಪ್ರಾರ್ಥಿಸುವುದು ನಿಜಕ್ಕೂ ದೊಡ್ಡ ಗುಣ ಎಂದು ಕೊಂಡಾಡಿದ್ದಾರೆ. ಇನ್ನು ಕೆಲವರು ರಾಖಿ ಅವರ ಸೂಕ್ಷ್ಮ ಮನಸ್ಸನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಎಂದಿನಂತೆ ಸಾಮಾಜಿಕ ಜಾಲತಾಣಗಳ ಮತ್ತೊಂದು ವರ್ಗವು ಇದನ್ನು ರಾಖಿ ಅವರ ಹೊಸ 'ಪಬ್ಲಿಸಿಟಿ ಸ್ಟಂಟ್' ಹಾಗೂ 'ಕ್ಯಾಮೆರಾ ಡ್ರಾಮಾ' ಎಂದು ಟೀಕಿಸುತ್ತಿದ್ದು, ವಿಡಿಯೋಗಾಗಿ ರಾಖಿ ಈ ರೀತಿ ಮಾಡುತ್ತಿದ್ದಾರೆ ಎಂದು ಟ್ರೋಲ್ ಕೂಡ ಮಾಡುತ್ತಿದ್ದಾರೆ.

View post on Instagram