ವಿಶ್ವವೇ ಮೆಚ್ಚಿದ ತೆಲುಗು ನಿರ್ದೇಶಕ ರಾಜಮೌಳಿ. ಅವರ ಕುಟುಂಬದ ಪ್ರತಿಯೊಬ್ಬರಿಗೂ ಸಿನಿಮಾದ ನಂಟಿದೆ. ಆದರೆ ರಾಜಮೌಳಿ ಮನೆಗೆ ಸೊಸೆಯಾಗಿ ಬಂದ ಪೂಜಾ ಪ್ರಸಾದ್ ಕೂಡ ದೊಡ್ಡ ಸಿನಿಮಾ ಕುಟುಂಬದ ಹಿನ್ನೆಲೆ ಹೊಂದಿದ್ದಾರೆ ಎಂಬ ವಿಚಾರ ನಿಮಗೆ ಗೊತ್ತಾ?

ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ತಮ್ಮದೇ ಛಾಪು ಮೂಡಿಸಿದ್ದಾರೆ. ಒಂದು ಕಾಲದಲ್ಲಿ ಕಡೆಗಣಿಸಲ್ಪಟ್ಟಿದ್ದ ತೆಲುಗು ಚಿತ್ರರಂಗವನ್ನು ಬಾಲಿವುಡ್‌ ಮೀರಿ ಬೆಳೆಸಿದ ಕೀರ್ತಿ ಜಕ್ಕಣ್ಣನಿಗೆ ಸಲ್ಲುತ್ತದೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ ರಾಜಮೌಳಿ ಹೆಸರಿನಲ್ಲೇ ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ. ಒಬ್ಬ ದೊಡ್ಡ ಸ್ಟಾರ್ ಹೀರೋಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇರುವಷ್ಟೇ ಕ್ರೇಜ್ ಮತ್ತು ಮಾರುಕಟ್ಟೆ ರಾಜಮೌಳಿಗಿದೆ. ಹೀಗಾಗಿಯೇ ರಾಜಮೌಳಿ ಯಾವುದೇ ನಟನ ಜೊತೆ ಸಿನಿಮಾ ಮಾಡಿದರೂ, ಆ ನಟನ ಇಮೇಜ್ ಕೂಡ ದೊಡ್ಡದಾಗುತ್ತದೆ.

ಸದ್ಯ ರಾಜಮೌಳಿ, ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ 'ವಾರಣಾಸಿ' ಸಿನಿಮಾ ಮಾಡುತ್ತಿದ್ದಾರೆ. ಇದರ ಶೂಟಿಂಗ್ ಅತಿ ವೇಗವಾಗಿ ನಡೆಯುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಕೆಲವು ಫೋಟೋಗಳು ಲೀಕ್ ಆಗಿದ್ದವು. ಒಂದೆಡೆ ಶೂಟಿಂಗ್ ವೇಗವಾಗಿ ನಡೆಯುತ್ತಿದ್ದರೆ, ಇನ್ನೊಂದೆಡೆ ಪೋಸ್ಟ್-ಪ್ರೊಡಕ್ಷನ್ ಕೆಲಸಗಳೂ ಭರದಿಂದ ಸಾಗುತ್ತಿವೆ. ಈ ಬಿಗ್ ಬಜೆಟ್ ಪ್ರಾಜೆಕ್ಟ್ ಮುಂದಿನ ವರ್ಷ ಏಪ್ರಿಲ್ 7 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.

ರಾಜಮೌಳಿ ಕುಟುಂಬದಲ್ಲಿ ಅವರ ಸೊಸೆ ಪೂಜಾ ಪ್ರಸಾದ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಪೂಜಾ ಕೂಡ ಮಾವ ರಾಜಮೌಳಿಯಷ್ಟೇ ಪ್ರತಿಭಾವಂತೆ. ಅದ್ಭುತ ಕಂಠಸಿರಿ ಹೊಂದಿರುವ ಪೂಜಾ ಪ್ರಸಾದ್ ಒಬ್ಬ ಗಾಯಕಿ. ಆದರೆ, ತಮ್ಮ ಗಾಯನ ಪ್ರತಿಭೆಯನ್ನು ಸಿನಿಮಾಗಳಿಗೆ ಬಳಸದೆ, ಕೇವಲ ದೇವರಿಗೆ ಸಮರ್ಪಿಸಿದ್ದಾರೆ. ಅವರು ಇದುವರೆಗೆ ನೂರಾರು ಭಕ್ತಿಗೀತೆಗಳನ್ನು ಹಾಡಿದ್ದಾರೆ. ಸಿನಿಮಾದಲ್ಲಿ ಹಾಡಲು ಅನೇಕ ಆಫರ್‌ಗಳು ಬಂದರೂ, ಅವರು ನಯವಾಗಿಯೇ ನಿರಾಕರಿಸಿದ್ದಾರೆ.

ಪೂಜಾ ಪ್ರಸಾದ್‌ಗೆ ದೊಡ್ಡ ಸಿನಿಮಾ ಮತ್ತು ಉದ್ಯಮದ ಹಿನ್ನೆಲೆಯಿದೆ. ಟಾಲಿವುಡ್‌ನ ಖ್ಯಾತ ನಿರ್ಮಾಪಕ ವಿ.ಬಿ. ರಾಜೇಂದ್ರ ಪ್ರಸಾದ್ ಅವರ ಮೊಮ್ಮಗಳೇ ಈ ಪೂಜಾ ಪ್ರಸಾದ್. ವಿ.ಬಿ. ರಾಜೇಂದ್ರ ಪ್ರಸಾದ್ ಅವರ ಮಗನೇ ನಟ ಜಗಪತಿ ಬಾಬು. ಈ ಮೂಲಕ ಪೂಜಾ ಪ್ರಸಾದ್‌ಗೆ ಜಗಪತಿ ಬಾಬು ದೊಡ್ಡಪ್ಪ ಆಗಬೇಕು. ಇನ್ನು ಪೂಜಾ ತಂದೆ ರಾಮ್‌ಪ್ರಸಾದ್ ಕೂಡ ಓರ್ವ ಪ್ರಮುಖ ಉದ್ಯಮಿ. ಸಾವಿರಾರು ಕೋಟಿ ಆಸ್ತಿಯ ಜೊತೆಗೆ, ಪ್ರಮುಖ ರಾಜಕೀಯ ನಾಯಕರೊಂದಿಗೂ ಅವರಿಗೆ ಆಪ್ತ ಸಂಬಂಧವಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಎಸ್.ಎಸ್. ರಾಜಮೌಳಿ ಅವರ ಪುತ್ರ ಎಸ್.ಎಸ್. ಕಾರ್ತಿಕೇಯ ಮತ್ತು ಪೂಜಾ ಪ್ರಸಾದ್ ಅವರ ವಿವಾಹ 2018ರಲ್ಲಿ ರಾಜಸ್ಥಾನದ ಜೈಪುರ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಡೆಸ್ಟಿನೇಶನ್ ವೆಡ್ಡಿಂಗ್‌ಗೆ ಟಾಲಿವುಡ್ ದಿಗ್ಗಜರಾದ ಪ್ರಭಾಸ್, ರಾಮ್ ಚರಣ್, ಜೂನಿಯರ್ ಎನ್‌ಟಿಆರ್, ನಾಗಾರ್ಜುನರಂತಹ ದೊಡ್ಡ ತಾರೆಯರು ಹಾಜರಾಗಿ ಸಂಭ್ರಮಿಸಿದ್ದರು. ಆ ಸಮಾರಂಭದಲ್ಲಿ ಸ್ಟಾರ್ ನಟರು ಡಾನ್ಸ್ ಮಾಡಿದ ವಿಡಿಯೋಗಳು ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.