Usha Nadkarni: ಹಿರಿಯ ನಟಿ ಉಷಾ ನಾಡಕರ್ಣಿ ಅವರಿಗೆ ಈಗ 80 ವರ್ಷ. 1987ರಿಂದಲೂ ಮುಂಬೈನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ. ಆರಂಭದಲ್ಲಿ ಭಯವಿದ್ದರೂ ಈಗ ಒಂಟಿತನವನ್ನೇ ಅಪ್ಪಿಕೊಂಡಿದ್ದಾರೆ.
ಹಿರಿಯ ನಟಿ ಉಷಾ ನಾಡಕರ್ಣಿ ಅವರಿಗೆ ಈಗ 80 ವರ್ಷ. 1987ರಿಂದಲೂ ಮುಂಬೈನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ. ಆರಂಭದಲ್ಲಿ ಭಯವಿದ್ದರೂ ಈಗ ಒಂಟಿತನವನ್ನೇ ಅಪ್ಪಿಕೊಂಡಿದ್ದಾರೆ. 'ಪವಿತ್ರ ರಿಶ್ತಾ' ಸೀರಿಯಲ್ ಮೂಲಕ ಮನೆಮಾತಾದ ಇವರ ಮಗ ವಿದೇಶದಲ್ಲಿದ್ದು, ಸಹೋದರ-ಸಹೋದರಿಯರೆಲ್ಲರೂ ನಿಧನರಾಗಿದ್ದಾರೆ.
ಹಿರಿಯ ನಟಿ ಉಷಾ ನಾಡಕರ್ಣಿ ಅವರಿಗೆ ಈಗ 80 ವರ್ಷ. ಹಿಂದಿ ಮತ್ತು ಮರಾಠಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿದವರು. ಇಂದಿಗೂ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿರುವ ಇವರು, ದಶಕಗಳಿಂದ ಒಂಟಿ ಜೀವನ ನಡೆಸುತ್ತಿದ್ದಾರೆ. ಮೇ 27, 1946ರಲ್ಲಿ ಜನಿಸಿದ ಉಷಾ, ಸುಮಾರು ನಾಲ್ಕು ದಶಕಗಳಿಂದ ಮುಂಬೈನಲ್ಲಿ ಸ್ವತಂತ್ರವಾಗಿ ವಾಸಿಸುತ್ತಿದ್ದಾರೆ. ಅವರ ಏಕೈಕ ಮಗ ವಿದೇಶದಲ್ಲಿ ನೆಲೆಸಿದ್ದು, ಅವರ ಎಲ್ಲ ಸಹೋದರ-ಸಹೋದರಿಯರು ನಿಧನರಾಗಿದ್ದಾರೆ. ಹೀಗಾಗಿ, ಅವರ ದೈನಂದಿನ ಜೀವನದಲ್ಲಿ ಹತ್ತಿರದ ಸಂಬಂಧಿಕರು ಯಾರೂ ಇಲ್ಲ.
ಜನಪ್ರಿಯ ಟಿವಿ ಸೀರಿಯಲ್ 'ಪವಿತ್ರ ರಿಶ್ತಾ'ದಲ್ಲಿನ ಸಾವಿತ್ರಿ ದೇಶಮುಖ್ ಪಾತ್ರವು ಉಷಾ ನಾಡಕರ್ಣಿ ಅವರನ್ನು ಮನೆಮಾತಾಗಿಸಿತು. ಆರು ದಶಕಗಳಿಗೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ, ಅವರು 20ಕ್ಕೂ ಹೆಚ್ಚು ಸಿನಿಮಾಗಳು ಮತ್ತು 15ಕ್ಕೂ ಹೆಚ್ಚು ಟಿವಿ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಹೆಚ್ಚಾಗಿ ಗಟ್ಟಿಗಿತ್ತಿ, ಕೆಲವೊಮ್ಮೆ ಕಠಿಣ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರ ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. 2018ರಲ್ಲಿ, ಅವರು 'ಬಿಗ್ ಬಾಸ್'ನ ಮರಾಠಿ ಆವೃತ್ತಿಯಲ್ಲಿ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದರು.
1987ರಿಂದ ಒಂಟಿ ಜೀವನ
ಮೊದಮೊದಲು ಇದು ವೈಯಕ್ತಿಕ ಆಯ್ಕೆಯಾಗಿದ್ದರೂ, ಈಗ ಅವರ ಜೀವನದ ವಾಸ್ತವವಾಗಿದೆ. ಯಾವುದೇ ಕುಟುಂಬ ಸದಸ್ಯರ ಸಹಾಯವಿಲ್ಲದೆ ಅವರು ತಮ್ಮ ದೈನಂದಿನ ಜೀವನವನ್ನು ತಾವೇ ನಿಭಾಯಿಸುತ್ತಾರೆ. ಆರಂಭದಲ್ಲಿ ಅವರಿಗೆ ಭಯವಿತ್ತಂತೆ. ಯಾರಾದರೂ ಹಿಂದಿನಿಂದ ಬಂದು ದಾಳಿ ಮಾಡಬಹುದೆಂಬ ಭಯಕ್ಕೆ, ಸೆಕ್ಯುರಿಟಿ ಗಾರ್ಡ್‌ನನ್ನು ಮನೆಯ ಬಾಗಿಲವರೆಗೂ ಜೊತೆಗೆ ಬರಲು ಹೇಳುತ್ತಿದ್ದರಂತೆ. ಈ ಬಗ್ಗೆ 'ರಾಜಶ್ರೀ ಮರಾಠಿ' ಜೊತೆ ಮಾತನಾಡಿದ್ದ ಅವರು, "ಈಗ ನನಗೆ ಅಭ್ಯಾಸವಾಗಿದೆ. 1987ರಿಂದಲೂ ನಾನು ಒಂಟಿಯಾಗಿಯೇ ವಾಸಿಸುತ್ತಿದ್ದೇನೆ. ಈಗ ನನಗೆ ಸ್ವಲ್ಪವೂ ಭಯವಿಲ್ಲ.
ಮೊದಲು ಈ ಬಿಲ್ಡಿಂಗ್‌ಗೆ ಬಂದಾಗ ಭಯವಾಗುತ್ತಿತ್ತು. ಯಾರಾದರೂ ಹಿಂದಿನಿಂದ ದಾಳಿ ಮಾಡಬಹುದೆಂದು ಗಾರ್ಡ್‌ನನ್ನು ಬಾಗಿಲವರೆಗೂ ಜೊತೆಗೆ ಬರಲು ಕೇಳುತ್ತಿದ್ದೆ. ಆದರೆ ಈಗ ಆ ಭಯವಿಲ್ಲ" ಎಂದು ಹೇಳಿದ್ದರು. "ಯಾರು ಹೇಗೆ ಸಾಯುತ್ತಾರೆಂದು ಹೇಳಲು ಸಾಧ್ಯವಿಲ್ಲ. ಕೆಲವರು ನಿದ್ದೆಯಲ್ಲೇ ಪ್ರಾಣ ಬಿಡುತ್ತಾರೆ, ಇನ್ನು ಕೆಲವರು ಆಸ್ಪತ್ರೆಯಲ್ಲಿ. ನನಗೆ ಸಾವಿನ ಬಗ್ಗೆ ಒಂದು ಚೂರು ಭಯವಿಲ್ಲ. ಒಂದು ವೇಳೆ ನಾನು ನಿದ್ದೆಯಲ್ಲೇ ಸತ್ತುಹೋದರೆ, ಅಕ್ಕಪಕ್ಕದವರು ಬಂದು ಬಾಗಿಲು ಬಡಿದು, 'ಈ ಮುದುಕಿ ಇನ್ನೂ ಬಾಗಿಲು ತೆಗೆದಿಲ್ಲ' ಎಂದು ಯೋಚಿಸಬಹುದು ಅಷ್ಟೇ," ಎಂದು ಹಿರಿಯ ನಟಿ ಹೇಳಿದ್ದರು.
ಗಂಡನಿಂದ ದೂರವಿದ್ದ ದಿನಗಳು
ಪಿಂಕ್‌ವಿಲ್ಲಾಗೆ ನೀಡಿದ ಸಂದರ್ಶನವೊಂದರಲ್ಲಿ ಅವರು, "ನನಗೆ ಸಮಯ ಸಿಕ್ಕಾಗಲೆಲ್ಲಾ ಅವರನ್ನು ನೋಡಲು ಹೋಗುತ್ತಿದ್ದೆ. ಅದಕ್ಕೆ ನಿರ್ದಿಷ್ಟ ಸಮಯ ಅಂತ ಇರಲಿಲ್ಲ. ಮರಾಠಿ ನಾಟಕಗಳಲ್ಲಿ ನಾನು ತುಂಬಾ ಬ್ಯುಸಿಯಾಗಿದ್ದೆ, ಒಂದೇ ದಿನದಲ್ಲಿ ಹಲವು ಪ್ರದರ್ಶನಗಳು ಇರುತ್ತಿದ್ದವು," ಎಂದು ಹೇಳಿದ್ದರು. "ನಾನು ಅವನಿಗೆ ಜನ್ಮ ಕೊಟ್ಟಿದ್ದು ಮಾತ್ರ. ನನ್ನ ತಾಯಿಯೇ ಅವನ ನಿಜವಾದ ತಾಯಿ ಅಂತ ನನ್ನ ಮಗ ಈಗಲೂ ಹೇಳುತ್ತಾನೆ," ಎಂದೂ ಅವರು ಹಂಚಿಕೊಂಡಿದ್ದರು.
ಕಟ್ಟುನಿಟ್ಟಿನ ತಂದೆಯ ಮಗಳು
ತಮ್ಮ ಬಾಲ್ಯದ ಬಗ್ಗೆ ಮಾತನಾಡಿದ್ದ ಅವರು, "ನಮ್ಮ ತಂದೆ ಪೇಪರ್ ಸ್ವಲ್ಪ ಮಡಚಿದ್ರೂ ಅಥವಾ ಓರೆಯಾಗಿದ್ದರೂ ಕೋಪಗೊಂಡು ಹರಿದು ಹಾಕುತ್ತಿದ್ದರು. ನಮ್ಮ ಶಾಲೆಯ ಪುಸ್ತಕಗಳು ಸರಿಯಾಗಿ ಸಾಲಾಗಿ ಇಟ್ಟಿಲ್ಲವೆಂದು ನೋಡಿದರೆ, ಕೋಪದಲ್ಲಿ ಅವನ್ನೂ ಹರಿದು ಹಾಕುತ್ತಿದ್ದರು. ಆಗ ನಮ್ಮಮ್ಮ, 'ನೀವೇ ಮತ್ತೆ ಹೊಸ ಪುಸ್ತಕ ತಂದುಕೊಡಬೇಕು, ಯಾಕೆ ಹರಿಯುತ್ತೀರಿ' ಅಂತ ಹೇಳುತ್ತಿದ್ದರು," ಎಂದು ನೆನಪಿಸಿಕೊಂಡಿದ್ದರು.
ನಟಿಯಾಗಬೇಕೆಂಬ ಕನಸು
"ನನಗೆ ಚಿಕ್ಕಂದಿನಿಂದಲೂ ನಟಿಯಾಗಬೇಕೆಂಬ ಆಸೆ ಇತ್ತು. ಆದರೆ ನಮ್ಮಮ್ಮನಿಗೆ ಅದು ಇಷ್ಟವಿರಲಿಲ್ಲ. ಅವರು ಒಬ್ಬ ಟೀಚರ್, ಅವರ ದೃಷ್ಟಿಯಲ್ಲಿ ಅವರು ಹೇಳಿದ್ದು ಸರಿ ಇತ್ತು. ನಾವು ಮಧ್ಯಮ ವರ್ಗದವರು. ಅಕ್ಕಪಕ್ಕದವರು ಏನೇನೋ ಮಾತಾಡಿಕೊಳ್ತಾರೆ ಅಂತಿದ್ರು. ಆದರೆ ನಾನು ಹೇಳ್ತೀನಿ, 'ಆ ಜನಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು. ನಿಮಗೆ ಏನು ಅನಿಸುತ್ತದೆಯೋ ಅದನ್ನೇ ಮಾಡಬೇಕು'. ನಾನು 4ನೇ ಕ್ಲಾಸ್‌ನಲ್ಲಿದ್ದಾಗ ಮೊದಲ ಬಾರಿಗೆ ನಟಿಸಿದ್ದೆ; ಈಗ ನನಗೆ 80 ವರ್ಷ, ಈಗಲೂ ನಟಿಸುತ್ತಿದ್ದೇನೆ," ಎಂದು ಅವರು ತಮ್ಮ ನಟನಾ ಪಯಣದ ಬಗ್ಗೆ ಹೆಮ್ಮೆಯಿಂದ ಹೇಳಿದ್ದರು.


