27 ವರ್ಷಗಳಿಂದ ದಾಂಪತ್ಯ ಜೀವನದಲ್ಲಿರುವ ನಟ ಆರ್.ಮಾಧವನ್, ತಾವೇಕೆ ಪತ್ನಿ ಸರಿತಾಗೆ ಎಂದಿಗೂ ಮೋಸ ಮಾಡಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದಾರೆ. 'ನಾನೊಬ್ಬ ಹೆದರುಪುಕ್ಲ ಮದ್ರಾಸಿ' ಎಂದು ಹೇಳಿಕೊಂಡಿರುವ ಅವರು, ತಮ್ಮ ನಿಷ್ಠೆಗೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

ಭಾರತೀಯ ಚಿತ್ರರಂಗದ ಜನಪ್ರಿಯ ನಟರಲ್ಲಿ ಆರ್.ಮಾಧವನ್ ಕೂಡ ಒಬ್ಬರು. ತಮ್ಮ ಅದ್ಭುತ ನಟನೆಯಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. '3 ಈಡಿಯಟ್ಸ್' ಸಿನಿಮಾದ ಭಾವನಾತ್ಮಕ ಪಾತ್ರದಿಂದ ಹಿಡಿದು, 'ತನು ವೆಡ್ಸ್ ಮನು' ಚಿತ್ರದ ನಾಚಿಕೆ ಸ್ವಭಾವದ ಪತಿಯ ಪಾತ್ರದವರೆಗೆ, ಅವರ ನಟನಾ ಕೌಶಲ್ಯಕ್ಕೆ ಎಲ್ಲೆಯಿಲ್ಲ. ಆದರೆ, ತಮ್ಮ ವೈಯಕ್ತಿಕ ಜೀವನವನ್ನು ಮಾಧವನ್ ಹೆಚ್ಚಾಗಿ ಗೌಪ್ಯವಾಗಿಡಲು ಇಷ್ಟಪಡುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರು ತಮ್ಮ ಪತ್ನಿ ಸರಿತಾ ಜೊತೆ ಮದುವೆಯಾಗಿ 27 ವರ್ಷಗಳಾಗಿವೆ. ಇತ್ತೀಚೆಗಷ್ಟೇ ಈ ಜೋಡಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಆಚರಿಸಿಕೊಂಡರು. ಇತ್ತೀಚೆಗೆ 'ಇಟೈಮ್ಸ್'ಗೆ ನೀಡಿದ ಸಂದರ್ಶನವೊಂದರಲ್ಲಿ, ತಾವು ಯಾಕೆ ತಮ್ಮ ಪತ್ನಿಗೆ ಎಂದಿಗೂ ಮೋಸ ಮಾಡಿಲ್ಲ ಎಂಬುದರ ಬಗ್ಗೆ ಮಾಧವನ್ ಮನಬಿಚ್ಚಿ ಮಾತನಾಡಿದ್ದಾರೆ. ಹೌದು, ನಿಷ್ಠೆ ತನಗೆ ಸಹಜವಾಗಿ ಬರುತ್ತದೆ ಮತ್ತು ತಾನೊಬ್ಬ 'ಹೆದರುಪುಕ್ಲ ಮದ್ರಾಸಿ ಮಧ್ಯಮ ವರ್ಗದ ವ್ಯಕ್ತಿ' ಎಂದು ಅವರು ಹೇಳಿದ್ದಾರೆ.

ಪತ್ನಿಗೆ ಮೋಸ ಮಾಡದಿರಲು ಕಾರಣವೇನು?

ವರ್ಷಗಳಿಂದ ಹಲವು 'ಆಕರ್ಷಕ ನಟಿಯರ' ಜೊತೆ ಕೆಲಸ ಮಾಡಿದ್ದರೂ, ತಮ್ಮ ಸಂಬಂಧ, ಮದುವೆ ಮತ್ತು ಮೌಲ್ಯಗಳ ಬಗ್ಗೆ ತಾನು ಯಾವಾಗಲೂ ದೃಢವಾಗಿದ್ದೆ ಎಂದು ಅವರು ಹೇಳಿದ್ದಾರೆ. ಇಟೈಮ್ಸ್‌ ಜೊತೆ ಮಾತನಾಡಿದ ಅವರು, “ನಿಷ್ಠೆ ಎಂಬುದು ನಮ್ಮ ಕುಟುಂಬದಿಂದ ಬಂದ ಗುಣ ಅನ್ಸುತ್ತೆ. ನಮ್ಮ ಇಡೀ ಕುಟುಂಬದವರು ತಮ್ಮ ಕೊನೆಯುಸಿರಿರುವವರೆಗೂ ಜಮ್‌ಶೆಡ್‌ಜಿ ಟಾಟಾ ಅವರಿಗೆ ನಿಷ್ಠರಾಗಿದ್ದರು. ಎಷ್ಟರಮಟ್ಟಿಗೆ ಅಂದ್ರೆ, ನಮ್ಮ ಮನೆಯಲ್ಲಿ ದೇವರ ಫೋಟೋಗಳ ಜೊತೆ ಅವರ ಫೋಟೋ ಇಟ್ಟು ಪೂಜೆ ಮಾಡ್ತಿದ್ವಿ. ಹಾಗಾಗಿ, ನಿಷ್ಠೆಯಿಂದ ಇರದಿರಲು ನಾನು ಬೇರೆ ದಾರಿ ಹುಡುಕಬೇಕಾಗುತ್ತೆ,” ಎಂದು ಹೇಳಿದ್ದಾರೆ.

ಅವರು ಮುಂದುವರಿಸಿ, “ನಾನು ಆಕರ್ಷಕ ಹುಡುಗಿಯರ ಕಡೆಗೆ ಹೆಚ್ಚು ಆಕರ್ಷಿತನಾಗುತ್ತೇನೆ. ಆದರೆ ದಿನದ ಕೊನೆಗೆ, ನಾನು ಯಾಕೆ ಮನೆಗೆ ಬಂದಿಲ್ಲ ಎಂದು ಸಬೂಬು ಹೇಳುವುದಕ್ಕಿಂತ, ಮನೆಗೆ ವಾಪಸ್ ಹೋಗಿ ನನ್ನ ಹೆಂಡತಿಯನ್ನು ಅಪ್ಪಿಕೊಳ್ಳುವುದನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ,” ಎಂದಿದ್ದಾರೆ. ತಮ್ಮ ಹಣಕಾಸಿನ ವ್ಯವಹಾರವನ್ನು ಪತ್ನಿಯೇ ನೋಡಿಕೊಳ್ಳುವುದರಿಂದ, ಅವರಿಗೆ ತನ್ನ ಫೋನ್ ಮತ್ತು ಖಾತೆಗಳ ಸಂಪೂರ್ಣ ಆಕ್ಸೆಸ್ ಇದೆ ಎಂದೂ ಅವರು ಸೇರಿಸಿದ್ದಾರೆ.

ತಮ್ಮ ಜನಪ್ರಿಯತೆಯ ಕಾರಣ, ಮದುವೆಯಾದ ವಿಚಾರವನ್ನು ಬಹಿರಂಗಪಡಿಸಬೇಡಿ ಎಂದು ಕೆಲವರು ಅವರಿಗೆ ಸಲಹೆ ನೀಡಿದ್ದರು ಎಂಬುದನ್ನೂ ಮಾಧವನ್ ಹಂಚಿಕೊಂಡಿದ್ದಾರೆ. “ನಾನು ಸರಿತಾ ಜೊತೆ ಕೂತು ಹುಡುಗಿಯರ ಫ್ಯಾನ್ ಮೇಲ್‌ಗಳನ್ನು ಓದುತ್ತಿದ್ದೆ. ಯಾವುದೇ ವಿದೇಶಿ ಶೂಟಿಂಗ್‌ಗೆ ಅವಳನ್ನು ಕರೆದುಕೊಂಡು ಹೋಗಲು ನಾನು ಒತ್ತಾಯಿಸುತ್ತಿದ್ದೆ. ನಾನು ನಿಷ್ಠಾವಂತ ಎಂದು ಅವಳಿಗೆ ತೋರಿಸಲಿಕ್ಕಲ್ಲ, ಬದಲಿಗೆ ನನ್ನನ್ನು ನಾನು ಪರೀಕ್ಷೆಗೆ ಒಡ್ಡಿಕೊಳ್ಳಲು ಇಷ್ಟಪಡದ ಕಾರಣ,” ಎಂದು ಮಾಧವನ್ ಹೇಳಿದ್ದಾರೆ.

ಮದುವೆ ಬಗ್ಗೆ

ಮಾಧವನ್ ಮತ್ತು ಸರಿತಾ ಅವರು ಜೂನ್ 6, 1999 ರಂದು ವಿವಾಹವಾದರು. ಈ ದಂಪತಿಗೆ ವೇದಾಂತ್ ಮಾಧವನ್ ಎಂಬ ಓರ್ವ ಪುತ್ರನಿದ್ದಾನೆ.