RCB ಮಾಲೀಕತ್ವದ ಬಿರ್ಲಾ ಕುಟುಂಬದ ಅನನ್ಯಾ ಬಿರ್ಲಾ ಅವರ ಸೆಲೆಬ್ರಿಟಿ ಕ್ರಶ್ ಯಾರು ಎಂಬುದನ್ನು ಮೆಂಟಲಿಸ್ಟ್ ಸುಹಾನಿ ಶಾ ಮೈಂಡ್ ರೀಡಿಂಗ್ ಮೂಲಕ ಬಯಲಿಗೆಳೆದಿದ್ದು, ಕಾಫಿ ಕಪ್‌ನಲ್ಲಿ ಈ ಹೆಸರು ಕಾಣಿಸಿಕೊಂಡು ಅನನ್ಯಾ ಶಾಕ್ ಆಗಿದ್ದಾರೆ.
ಭಾರತದ ಖ್ಯಾತ ಮೆಂಟಲಿಸ್ಟ್, ಇಲ್ಯೂಷನಿಸ್ಟ್ ಮತ್ತು ಮ್ಯಾಜಿಷಿಯನ್ ಸುಹಾನಿ ಶಾ ತಮ್ಮ ವಿಭಿನ್ನ ಮೈಂಡ್ ರೀಡಿಂಗ್ ಹಾಗೂ ಸೈಕಲಾಜಿಕಲ್ ಇಲ್ಯೂಷನ್‌ಗಳ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತಿದ್ದಾರೆ. ಇದೀಗ ಅನನ್ಯಾ ಬಿರ್ಲಾ ಅವರೊಂದಿಗಿನ ಸಂವಾದಾತ್ಮಕ ಮೈಂಡ್ ರೀಡಿಂಗ್ ಸೆಗ್ಮೆಂಟ್‌ವೊಂದು ಭಾರೀ ಕುತೂಹಲ ಮೂಡಿಸಿದೆ.
ಈ ಸಂವಾದದ ವೇಳೆ ಸುಹಾನಿ ಶಾ ಅವರು ಅನನ್ಯಾ ಬಿರ್ಲಾ ಅವರಿಗೆ “ನಿಮ್ಮ ಸೆಲೆಬ್ರಿಟಿ ಕ್ರಶ್ ಯಾರು?” ಎಂದು ಕೇಳುತ್ತಾರೆ. ಇದಕ್ಕೆ ಅನನ್ಯಾ ಬಿರ್ಲಾ ಅವರು ತಮ್ಮ ಮನಸ್ಸಿನಲ್ಲಿ ಒಂದು ಹೆಸರನ್ನು ನೆನಪಿಸಿಕೊಂಡಿರುವುದಾಗಿ ಹೇಳುತ್ತಾರೆ.
ಇದಾದ ಬಳಿಕ ಸುಹಾನಿ ಶಾ ಅವರು ಅನನ್ಯಾಗೆ ಒಂದು ಕಲ್ಪನಾ ಸನ್ನಿವೇಶವನ್ನು ವಿವರಿಸುತ್ತಾರೆ. “ನೀವು ಕಾಫಿ ಶಾಪ್‌ನಲ್ಲಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನೀವು ಕೌಂಟರ್‌ಗೆ ಹೋಗಿ ನಿಮ್ಮ ಕ್ರಶ್‌ನ ಹೆಸರನ್ನು ಹೇಳಿ ಕಾಫಿ ಆರ್ಡರ್ ಮಾಡಿ, ನಂತರ ಅಲ್ಲಿಂದ ಹೋಗಿ ಕುಳಿತುಕೊಳ್ಳುತ್ತೀರಿ” ಎಂದು ಹೇಳುತ್ತಾರೆ.
ನಂತರ, ಕಾಫಿ ಶಾಪ್‌ನ ಕೌಂಟರ್‌ನಲ್ಲಿ ನಿಮ್ಮ ಕ್ರಶ್‌ನ ಹೆಸರನ್ನು ಕೂಗುತ್ತಾರೆ ಎಂದು ಕಲ್ಪಿಸಿಕೊಳ್ಳುವಂತೆ ಸುಹಾನಿ ಶಾ ಹೇಳುತ್ತಾರೆ. ಆ ಹೆಸರು ಕೇಳಿದ ತಕ್ಷಣ ನೀವು ಎದ್ದು ಕಾಫಿ ಪಡೆಯಲು ಕೌಂಟರ್‌ಗೆ ಹೋಗುತ್ತೀರಿ ಎಂದು ಅವರು ವಿವರಿಸುತ್ತಾರೆ.
ಈ ರೀತಿ ಇಡೀ ಸನ್ನಿವೇಶವನ್ನು ಅನನ್ಯಾ ಬಿರ್ಲಾ ಅವರಿಂದ ಕಲ್ಪಿಸಿಕೊಳ್ಳುವಂತೆ ಮಾಡಿದ ಬಳಿಕ, “ಈಗ ಕಣ್ಣು ತೆರೆಯಿರಿ. ನಿಮ್ಮ ಪಕ್ಕದಲ್ಲಿರುವ ಕಾಫಿ ಕಪ್ ಅನ್ನು ನೋಡಿ” ಎಂದು ಸುಹಾನಿ ಶಾ ಹೇಳುತ್ತಾರೆ.
ಅನನ್ಯಾ ಬಿರ್ಲಾ ಕಣ್ಣು ತೆರೆದು ತಮ್ಮ ಪಕ್ಕದಲ್ಲಿದ್ದ ಕಾಫಿ ಕಪ್ ಅನ್ನು ನೋಡಿದಾಗ, ಅದರ ಮೇಲೆ ಬರೆದಿದ್ದ ಹೆಸರನ್ನು ಕಂಡು ಅಚ್ಚರಿಗೊಳಗಾಗುತ್ತಾರೆ. ಆ ಕಾಫಿ ಕಪ್‌ನಲ್ಲಿ ‘ಆದಿತ್ಯ ರಾಯ್ ಕಪೂರ್’ ಎಂಬ ಹೆಸರು ಕಾಣಿಸಿಕೊಂಡಿತ್ತು ಎಂದು ಸೆಗ್ಮೆಂಟ್‌ನಲ್ಲಿ ತೋರಿಸಲಾಗಿದೆ.
ಇದನ್ನು ಕಂಡ ಅನನ್ಯಾ ಬಿರ್ಲಾ ಅವರ ಪ್ರತಿಕ್ರಿಯೆ ಕೂಡ ಗಮನ ಸೆಳೆಯುತ್ತದೆ. ತಮ್ಮ ಮನಸ್ಸಿನಲ್ಲಿ ನೆನಪಿಸಿಕೊಂಡಿದ್ದ ಕ್ರಶ್‌ನ ಹೆಸರೇ ಕಾಫಿ ಕಪ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಅವರು ಶಾಕ್‌ಗೆ ಒಳಗಾಗುತ್ತಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಮೂಡಿಸಿದ್ದು, ಸುಹಾನಿ ಶಾ ಅವರು ಅನನ್ಯಾ ಬಿರ್ಲಾ ಅವರ ಮನಸ್ಸಿನಲ್ಲಿದ್ದ ಹೆಸರನ್ನು ಹೇಗೆ ಊಹಿಸಿದರು? ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿದೆ.
ಆದರೆ ಸುಹಾನಿ ಶಾ ಅವರ ಮೆಂಟಲಿಸಂ ಪ್ರದರ್ಶನಗಳು ಯಾವುದೇ ಅತೀಂದ್ರಿಯ ಶಕ್ತಿಯನ್ನು ಆಧರಿಸಿಲ್ಲ. ಅವರ ಪ್ರದರ್ಶನಗಳು ಮುಖ್ಯವಾಗಿ ಮಾನವ ಮನೋವಿಜ್ಞಾನ, ಗಮನಿಸುವಿಕೆ, ಸಲಹೆ (Suggestion), ನೆನಪು, ದೇಹಭಾಷೆ ಮತ್ತು ಮಾನವ ವರ್ತನೆಯ ಸೂಕ್ಷ್ಮ ಅಂಶಗಳನ್ನು ಆಧರಿಸಿವೆ. ಮೆಂಟಲಿಸಂ ತಂತ್ರಗಳ ಮೂಲಕ ಪ್ರೇಕ್ಷಕರಿಗೆ ಅಸಾಧ್ಯವೆನಿಸುವ ಅನುಭವವನ್ನು ನೀಡುವುದು ಅವರ ಪ್ರದರ್ಶನದ ವಿಶೇಷತೆ.
ಸುಹಾನಿ ಶಾ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಮೆಂಟಲಿಸಂ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮೈಂಡ್ ರೀಡಿಂಗ್, ಸೈಕಲಾಜಿಕಲ್ ಇಲ್ಯೂಷನ್, ಇಂಪಾಸಿಬಲ್ ಪ್ರಿಡಿಕ್ಷನ್ ಮತ್ತು ಲೈವ್ ಪರ್ಫಾರ್ಮೆನ್ಸ್‌ಗಳ ಮೂಲಕ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಅನನ್ಯಾ ಬಿರ್ಲಾ ಅವರ ಮನಸ್ಸಿನಲ್ಲಿ ಇದ್ದ ಕ್ರಶ್‌ನ ಹೆಸರು ಕಾಫಿ ಕಪ್‌ನಲ್ಲಿ ಕಾಣಿಸಿಕೊಂಡಿರುವ ಈ ಸೆಗ್ಮೆಂಟ್ ಮಾತ್ರವಲ್ಲದೆ, ಸುಹಾನಿ ಶಾ ಅವರ ಮೆಂಟಲಿಸಂ ಕೌಶಲ್ಯವೂ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಇದು ನಿಜವಾದ ಮೈಂಡ್ ರೀಡಿಂಗ್‌ನಾ ಅಥವಾ ಮನೋವಿಜ್ಞಾನ ಮತ್ತು ಮೆಂಟಲಿಸಂ ತಂತ್ರಗಳ ಅದ್ಭುತ ಪ್ರದರ್ಶನನಾ? ಎಂಬ ಕುತೂಹಲ ಮಾತ್ರ ಅಭಿಮಾನಿಗಳಲ್ಲಿ ಮುಂದುವರಿದಿದೆ.
