ಪುಷ್ಪಾ ಅರುಣ್‌ ಕುಮಾರ್ ತಮ್ಮ ಮಗ ಯಶ್ ಅವರು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 'ನನ್ನ ಮಗನಿಗೆ ಸಿನಿಮಾ ಬಗ್ಗೆ ತುಂಬಾ ಆಸಕ್ತಿ ಹಾಗೂ ಶ್ರದ್ಧೆ ಇದೆ. ಆತ ವಿದೇಶಗಳಲ್ಲಿ ಇರುವಾಗ ಸಹ ಒಂದು ದಿನವೂ ಬಿಡದೇ..

ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ (Pushpa Arunkumar) ನಿರ್ಮಾಣದ 'ಕೊತ್ತಲವಾಡಿ' ಸಿನಿಮಾ ಮುಂದಿನ ತಿಂಗಳು 01 ರಂದು, ಅಂದರೆ ಆಗಸ್ಟ್ 01, 2025ರಂದು ಕರ್ನಾಟಕದಾದ್ಯಂತ ಬಿಡುಗಡೆ ಕಾಣಲಿದೆ. ಮೊಟ್ಟಮೊದಲ ಬಾರಿಗೆ ಕನ್ನಡ ಚಿತ್ರವೊಂದನ್ನು ನಿರ್ಮಿಸಿರುವ ಪುಷ್ಪಾ ಅರುಣ್‌ಕುಮಾರ್ ಅವರು ಈ (Kothalavadi) ಸಿನಿಮಾ ನಿರ್ಮಾಣದ ಕೆಲಸವನ್ನು 2 ವರ್ಷಗಳ ಹಿಂದೆಯೇ ಕಾರ್ಯರಂಭ ಮಾಡಿದ್ದರು. ಆದರೆ, ಸಿನಿಮಾದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಮುಗಿಸುತ್ತಿದ್ದಂತೆ ತಮ್ಮ ಕೆಲಸದ ಮೂಲಕ ಕನ್ನಡ ಜನತೆಯ ಮುಂದೆ ಬಂದು ಸಿಹಿಸುದ್ದಿ ನೀಡಿದ್ದಾರೆ. ಪಿಎ (PA) ಪ್ರೊಡಕ್ಷನ್ ಮೂಲಕ ಪುಷ್ಪಾ ಅರುಣ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.

ಇತ್ತೀಚೆಗೆ ಸಿನಿಮಾ ಪ್ರಚಾರಕಾರ್ಯಕ್ಕೆ ಮಾಧ್ಯಮಗಳ ಮುಂದೆ ಬಂದು ತಮ್ಮ ನೇರಾನೇರ ಹಾಗೂ ಸ್ಷಷ್ಟ ಮಾತುಗಳ ಮೂಲಕ ಸಾಕಷ್ಟು ಖ್ಯಾತಿ ಪಡೆದಿದ್ದಾರೆ ಪುಷ್ಪಾ ಮೇಡಂ. ಈ ಮೊದಲು ಯಶ್ (Rocking Star Yash) ಅಮ್ಮ ಪುಷ್ಪಾ ಎಂದು ಹೇಳಿದರೆ ಮಾತ್ರ ಕನ್ನಡ ಜನತೆಗೆ ಅರ್ಥ ಆಗುತ್ತಿತ್ತು. ಆದರೆ ಈಗ ಹಾಗಿಲ್ಲ, ಪುಷ್ಪಾ ಅರುಣ್ ಕುಮಾರ್ ಅವರು ಯಶ್ ಅಮ್ಮ, ರಾಧಿಕಾ ಪಂಡಿತ್ ಅತ್ತೆ ಎಂಬುದು ಇಡೀ ಕರ್ನಾಟಕಕ್ಕೇ ಗೊತ್ತಾಗಿದೆ. ಮೊಟ್ಟಮೊದಲ ಸಿನಿಮಾ ತೆರೆಗೆ ಬರುವ ಮುನ್ನವೇ ತಮ್ಮ ಮಾತುಗಳ ಮೂಲಕವೇ ಪುಷ್ಪಾ ಅರುಣ್ ಕುಮಾರ್ ಅವರು ಭಾರೀ ಸಂಚಲನ ಮೂಡಿಸಿದ್ದಾರೆ. ಸಿನಿಮಾ ತೆರೆಗೆ ಬರುವುದನ್ನೇ ಕನ್ನಡ ಪ್ರೇಕ್ಷಕರು ಕಾಯುವಂತೆ ಮಾಡಿದ್ದಾರೆ ಎನ್ನಬಹುದು. 

ಬಿಡುಗಡೆ ಆಗಿರುವ 'ಕೊತ್ತಲವಾಡಿ' ಟೀಸರ್ ಹಾಗೂ ಟ್ರೈಲರ್ ಮೂಲಕ ಕೊತ್ತಲವಾಡಿ ಸಿನಿಮಾ ಮಾಸ್ ಸಬ್ಜೆಕ್ಟ್ ಹೊಂದಿದೆ ಎಂಬುದು ಸಿನಿಪ್ರೇಕ್ಷಕರಿಗೆ ಅರ್ಥವಾಗಿದೆ. ಮಾಸ್ ಜೊತೆ ಕ್ಲಾಸ್ ಮಿಕ್ಸ್ ಆಗಿರಬಹುದು, ಸೆಂಟಿಮೆಂಟ್, ಲವ್ ಸೇರಿದಂತೆ ಇನ್ನೂ ಸಾಕಷ್ಟು ಸಂಗತಿಗಳು ಈ ಚಿತ್ರದಲ್ಲಿ ಮೇಳೈಸಿರಬಹುದು. ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ ವಿಭಿನ್ನ ದೃಶ್ಯಗಳ ತುಣುಕುಗಳು ಲಭ್ಯವಿದ್ದು, ಈ ಚಿತ್ರವು ಹೊಸ ಬಗೆಯ ಫೀಲ್ ಕೊಡಲಿರುವ ಬಗ್ಗೆ ಊಹೆಯನ್ನು ಹುಟ್ಟುಹಾಕಿದೆ. ಸಿನಿಮಾ ಬಿಡುಗಡೆ ಬಳಿಕ ಪ್ರೇಕ್ಷಕರ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗಲಿದೆ. ಅಲ್ಲಿಯವರೆಗೆ ಸಹಜವಾಗಿಯೇ ಪುಷ್ಪಾ ಅವರೂ ಸೆರಿದಂತೆ ಇಡೀ ಚಿತ್ರತಂಡ ಸಿನಿಮಾ ಸಬ್ಜೆಕ್ಟ್ ಬಗ್ಗೆ ಸೀಕ್ರೆಟ್ ಕಾಯ್ದುಕೊಳ್ಳಲಿದೆ.

ಯಶ್ ಅಭಿಮಾನಿಗಳೂ ಸೇರಿದಂತೆ, ಇಡೀ ಕರ್ನಾಟಕದ ಜನತೆ ತಮ್ಮ 'ಕೊತ್ತಲವಾಡಿ' ಸಿನಿಮಾ ನೋಡಿ ಹರಿಸಿ ಎಂದು ನಿರ್ಮಾಪಕಿ ಪುಷ್ಪಾ ಅವರು ವಿನಮ್ರ ವಿನಂತಿ ಮಾಡಿಕೊಂಡಿದ್ದಾರೆ. ಕೊತ್ತಲವಾಡಿ ಕಥೆ ಗುಟ್ಟು ಬಿಟ್ಟುಕೊಡದೇ, 'ಅಣ್ಣಾವ್ರ' ಅಭಿಮಾನಿಗಳಿಗೂ ಇಷ್ಟವಾಗುವಂತಹ ಸಮಾಜಮುಖಿ ಮೌಲ್ಯಗಳುಳ್ಳ ಕಥೆಗಳನ್ನು ತಾವು ಆಯ್ಕೆ ಮಾಡಿಕೊಳ್ಳುವುದಾಗಿ ಪುಷ್ಪಾ ಅವರು ಹೇಳಿದ್ದಾರೆ. ಅವರ ಈ ಮಾತು ಬರಲಿರುವ ಕೊತ್ತಲವಾಡಿ ಸಿನಿಮಾ ಬಗ್ಗೆ ಇನ್ನೂ ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ತೆರೆಯ ಮೇಲೆ ಮೂಡಿ ಬರಲಿದೆ.

ಪುಷ್ಪಾ ಅವರು ತಮ್ಮ ಮಗ ಯಶ್ ಈಗ ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 'ನನ್ನ ಮಗನಿಗೆ ಸಿನಿಮಾ ಬಗ್ಗೆ ತುಂಬಾ ಆಸಕ್ತಿ ಹಾಗೂ ಶ್ರದ್ಧೆ ಇದೆ. ಆತ ವಿದೇಶಗಳಲ್ಲಿ ಇರುವಾಗ ಸಹ ಒಂದು ದಿನವೂ ಬಿಡದೇ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತ ಸಿನಿಮಾಗಾಗಿ ತನ್ನ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುತ್ತಾನೆ. ಆಹಾರ-ವಿಹಾರಗಳಲ್ಲಿ ಕೂಡ ಸಿನಿಮಾ ಸಲುವಾಗಿ ಸಂಯಮ-ಶಿಸ್ತು ಪಾಲಿಸುತ್ತಾನೆ. ನನ್ನ ಈ ಕೆಲಸಕ್ಕೆ ಆತನೇ ಮೊಟ್ಟಮೊದಲ ಪ್ರೇರಣೆ. 'ನನ್ನಮ್ಮ ಅದೇನೇ ಮಾಡಿದರೂ ಚೆನ್ನಾಗಿ ಮಾಡಲು ಹಗಲಿರುಳೂ ಶ್ರಮಿಸುತ್ತಾರೆ ಎಂಬುದು ಆತನಿಗೆ ಗೊತ್ತು. ಯಶ್‌ನ ಈ ಅಭಿಪ್ರಾಯಕ್ಕೆ ಪೂರಕವಾಗಿ ನಾನೂ ಕೆಲಸ ಮಾಡಿದ್ದೇನೆ, ಮಾಡುತ್ತಿದ್ದೇನೆ' ಎಂದಿದ್ದಾರೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್.

ನನ್ನ ‘ಕೊತ್ತಲವಾಡಿ’ ಸಿನಿಮಾ ನೋಡಿ ಕನ್ನಡದ ಎಲ್ಲಾ ವರ್ಗದ ಪ್ರೇಕ್ಷಕರು ಮೆಚ್ಚಬೇಕು. ಅವರ ಬದುಕಿಗೆ ನಮ್ಮ ಸಿನಿಮಾ ಒಳ್ಳೆಯ ರೀತಿಯಲ್ಲಿ ಪ್ರೇರಣೆ ಆಗಬೇಕು. ನಮ್ಮ ಸಿನಿಮಾ ನೋಡಿ ಅತನ ಅಭಿಮಾನಿಗಳು 'ಅಮ್ಮ ಒಳ್ಳೆಯ ಸಿನಿಮಾ ಮಾಡಿದ್ದಾರೆ, ಚೆನ್ನಾಗಿ ಓಡುತ್ತಿದೆ ಎನ್ನಬೇಕು. ನಮ್ಮ ಮಗ ಯಶ್, ಸೊಸೆ ರಾಧಿಕಾ ಪಂಡಿತ್ (Radhika Pandit) ಕೂಡ ಅವರ ಬಿಡುವಿಲ್ಲದ ಕೆಲಸಗಳ ಮಧ್ಯೆ ಬಂದು ಈ ಸಿನಿಮಾ ನೋಡಿ ಮೆಚ್ಚಬೇಕು. ಯಶ್ ಅಂತಹ ಮಗನನ್ನು, ರಾಧಿಕಾಳಂತಹ ಸೊಸೆಯನ್ನು ಪಡೆದಿದ್ದಕ್ಕೆ ನಾನು-ನನ್ನ ಯಜಮಾನರು ಹೆಮ್ಮೆ ಪಟ್ಟಂತೆ ನನ್ನ ಮಗ-ಸೊಸೆ ಕೂಡ ನಮ್ಮ ಬಗ್ಗೆ ಖುಷಿಯಾಗಬೇಕು. ಇದು ನನ್ನ ಹೆಬ್ಬಯಕೆ' ಎಂದಿದ್ದಾರೆ ಪುಷ್ಪಾ ಅರುಣ್ ಕುಮಾರ್.

ಅಂದಹಾಗೆ, 'ಕೊತ್ತಲವಾಡಿ' ಸಿನಿಮಾದಲ್ಲಿ ಈ ಮೊದಲು ಹೆಚ್ಚಾಗಿ ಲವರ್‌ ಬಾಯ್ ಪಾತ್ರಗಳಿಂದ ಗುರುತಿಸಿಕೊಂಡು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ನಟ ಪೃಥ್ವಿ ಅಂಬಾರ್ ನಾಯಕರು. ನಾಯಕಿಯಾಗಿ ಕಿರುತೆರೆ ಜನಪ್ರಿಯ ನಟಿ ಕಾವ್ಯಾ ಶೈವ ನಟಿಸಿದ್ದಾರೆ. ಅನುಭವಿ ನಟರಾದ ರಾಜೇಶ್ ನಟರಂಗ, ಗೋಪಾಲ್ ದೇಶಪಾಂಡೆ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಳೇ ಬೇರು ಹೊಸ ಚಿಗುರು ಸೇರಿದಂತೆ, ಸಾಕಷ್ಟು ಪ್ರತಿಭೆಗಳು ಈ ಕೊತ್ತಲವಾಡಿ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ.

ಈ ಸಿನಿಮಾವನ್ನು ಶ್ರೀರಾಜ್ (Shriraj) ನಿರ್ದೇಶನ ಮಾಡಿದ್ದು, ಕನ್ನಡಿಗರಿಗೆ ಒಂದೊಳ್ಳೆಯ ಸಿನಿಮಾ ಕೊಡುವ ಕನಸು ಹೊಂದಿದ್ದಾರೆ ಎನ್ನಲಾಗಿದೆ. ವಿಕಾಸ್ ವಸಿಷ್ಠ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಕಾರ್ತಿಕ್ ಎಸ್ ಕ್ಯಾಮೆರಾ ಕೆಲಸ ಮಾಡಿದ್ದಾರೆ. ರಾಮಿಸೆಟ್ಟಿ ಪವನ್ ಎಡಿಟಿಂಗ್ ಈ ಚಿತ್ರಕ್ಕಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಉಳಿದಂತೆ, ಬಹಳಷ್ಟು ತಂತ್ರಜ್ಞರು ಈ ಸಿನಿಮಾಗೆ ಕೆಲಸ ಮಾಡಿದ್ದು, ಸಿನಿಮಾ ತೆರೆಗೆ ಬಂದ ಬಳಿಕ ಎಲ್ಲಾ ಹೆಸರುಗಳೂ ಜನಮೆಚ್ಚುಗೆ ಪಡೆಯಲಿವೆ ಎನ್ನಲಾಗುತ್ತಿದೆ. ಸಿನಿಮಾ ಆಗಸ್ಟ್ 01ರಂದು (01 August 2025) ತೆರೆಯ ಮೇಲೆ ಮ್ಯಾಜಿಕ್ ಮಾಡಲು ಸಿದ್ಧವಾಗಿದೆ.