ನಾನು ಸುಳ್ಳು ಹೇಳೋದಿಲ್ಲ. ಒಮ್ಮೆ ಸುಳ್ಳು ಹೇಳಿದ್ರೆ ಕೂಡ ಅದು ಸುದ್ದಿಯಾಗುತ್ತೆ. ನಮ್ಮ ಮನೆಗೆ ಆಪ್ತರು ತುಂಬಾ ಜನ ಇದ್ದಾರೆ. ಅವರಿವರ ಮೂಲಕ ಅದು ಒಂದಲ್ಲ ಒಂದು ದಿನ ಹೊರಗೆ ಬಂದೇ ಬರುತ್ತೆ. ನಾನು ನೇರವಾಗಿ ಇದ್ದಿದ್ದನ್ನು ಇದ್ದಂತೆ ಹೇಳೋದು. ನನ್ನ ಸಿನಿಮಾಗೆ ಹಣವನ್ನು ಯಶ್
ಕನ್ನಡದ ನಟ, ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಯಶ್ (Yash) ಅಮ್ಮ ಪುಷ್ಪಾ (Pushpa Arunkumar) ಮೈಕ್ ಮುಂದೆ ಆಡಿರುವ ಮಾತುಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಪುಷ್ಪಾ ಅವರು ತಮ್ಮ ಮಗ ಯಶ್ ಹಾಗೂ ಸೊಸೆ ರಾಧಿಕಾ ಪಂಡಿತ್ (Radhika Pandit) ಬಗ್ಗೆ ಆಡಿರುವ ಮಾತುಗಳು ತುಸು ಹೆಚ್ಚು ಎಂಬಷ್ಟು ವೈರಲ್ ಆಗುತ್ತಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯ ಕಾಮೆಂಟ್‌ಗಳು ಹರಿದಾಡುತ್ತಿವೆ. ಆದರೆ, ಯಶ್ ಅಮ್ಮ ಪುಷ್ಪಾ ಅವರು ಆಡಿರುವ ಇನ್ನೊಂದಿಷ್ಟು ಮಾತುಗಳು ಈ ಎಲ್ಲದಕ್ಕೂ ಉತ್ತರ ನೀಡುವಂತಿವೆ. ಹಾಗಿದ್ದರೆ , ಅದೇನು ಹೇಳಿದ್ದಾರೆ ಯಶ್ ಅಮ್ಮ ಪುಷ್ಪಾ? ನೆಟ್ಟಿಗರ ಸಮಸ್ಯೆ ಏನು? ಇಲ್ಲಿದೆ ನೋಡಿ ಉತ್ತರ...
ಯಶ್ ಅಮ್ಮ ಪುಷ್ಪಾ ಅವರು ಈಗ ಸ್ಯಾಂಡಲ್‌ವುಡ್ ನಿರ್ಮಾಪಕಿ ಎಂಬ ಹಣೆಪಟ್ಟಿ ಹೊತ್ತಿರುವುದು ಗೊತ್ತೇ ಇದೆ. 'ಕೊತ್ತಲವಾಡಿ' ಸಿನಿಮಾ ನಿರ್ಮಾಣ ಮಾಡಿರುವ ಅವರು ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದು ತಮ್ಮ ಸಿನಿಮಾ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಮನಬಿಚ್ಚಿ ಮಾತನ್ನಾಡಿದ್ದಾರೆ. 'ನನ್ನ ಸಿನಿಮಾ ಬಗ್ಗೆ ಯಶ್ ಅಭಿಪ್ರಾಯ ಬೇಕಾಗಿಲ್ಲ, ಯಶ್ ನೋಡಿದ ತಕ್ಷಣ ಸಿನಿಮಾ ಓಡಲ್ಲ, ಜನರು ಸಿನಿಮಾ ನೋಡಬೇಕು' ಎಂದಿದ್ದಲ್ಲದೇ, 'ನಾವು ಮನೆ ಕಟ್ಟಿಸಿ ಅವನನ್ನು ಬಿಟ್ಟು ಕೂಡ ಗೃಹ ಪ್ರವೇಶ ಮಾಡಬಹುದು' ಎಂಬರ್ಥದಲ್ಲಿ ಮಾತನ್ನಾಡಿದ್ದರು. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಚರ್ಚೆ, ಊಹಾಪೋಹ ನಡೆದಿತ್ತು.
ಆದರೆ, ಈ ಬಗ್ಗೆ ತಮ್ಮ ಗಮನಕ್ಕೆ ತಂದವರಿಗೆ ಪುಷ್ಪಾ ಅವರು ಅವರ ಮನೆಯ ಸತ್ಯ ಸಂಗತಿಯನ್ನು ಹೇಳಿದ್ದಾರೆ. 'ನಮ್ಮ ಮನೆಯಲ್ಲಿ ಯಾರಿಗೂ ಯಾವುದೇ ಅತಿಯಾದ ಸೆಂಟಿಮೆಂಟ್ ಹಾಗೂ ಎಮೋಶನ್ ಇಲ್ಲ. ನಾವೆಲ್ಲರೂ ನಮ್ಮನಮ್ಮ ಕೆಲಸದಲ್ಲಿ ಬ್ಯುಸಿ ಆಗಿರ್ತೀವಿ, ನಮ್ಮ ಯಜಮಾನರು ಡ್ರೈವರ್ ಆಗಿರೋದ್ರಿಂದ ಬೆಳಿಗ್ಗೆ ಮನೆಯಿಂದ ಹೊರಗೆ ಹೋದರೆ ರಾತ್ರಿ ಎಷ್ಟೋ ಹೊತ್ತಿಗೆ ವಾಪಸ್ ಆಗ್ತಿದ್ರು. ಯಶ್ ಕೂಡ ಮೊದಲಿನಿಂದಲೂ ಅಷ್ಟೇ.. ಸಿನಿಮಾ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾನೆ. ಅವನ ತಂಗಿ ನಂದಿನಿ ಡೆಲಿವರಿ ಆದಾಗ ಕೂಡ, ಅವನಿಗೆ ಮೊದಲು ಏನೂ ಹೇಳಿರಲಿಲ್ಲ. ಡಬ್ಬಿಂಗ್ ಮುಗಿಸಿ ಬಂದಾಗಲಷ್ಟೇ ಅವನಿಗೆ ಹೇಳಿದ್ದು, ಆತ ಬಂದು ತಂಗಿ, ಅವಳ ಮಗನನ್ನು ನೋಡಿದ್ದು.
ಮನೆಯ ಯಾವುದೇ ಕಷ್ಟ ಅವನ ಮನಸ್ಸಿಗೆ, ಕೆಲಸಕ್ಕೆ ತೊಂದರೆ ಕೊಡುವುದು ಬೇಡ ಅನ್ನೋದು ನನ್ನ ನಿರ್ಧಾರ. ನನ್ನ ಮಗ ಏನೇ ಮಾಡಿದ್ರೂ ಯೋಚಿಸಿ ನಿರ್ಧಾರ ಮಾಡಿರ್ತಾನೆ. ಅವನ ಬಗ್ಗೆ ನಾನು ಪದೇಪದೇ ಯೋಚಿಸಿ ಟೈಮ್ ವೇಸ್ಟ್ ಮಾಡೋ ಅಗತ್ಯವೇ ಇಲ್ಲ. ಅವನೂ ಅಷ್ಟೇ, ನನ್ನ ಅಮ್ಮ ಏನೇ ಮಾಡಿದ್ರೂ ಸರಿಯಾಗಿಯೇ ಇರುತ್ತೆ ಅಂತ ಯೋಚಿಸ್ತಾನೆ. ನಾವು ಟೈಮ್ ಸಿಕ್ಕಾಗ ಸಿನಿಮಾ ಬಗ್ಗೆ, ಮನೆಯ ಸ್ಥಿತಿಗತಿಗಳ ಬಗ್ಗೆ ಮಾತನ್ನಾಡ್ತೀವಿ ಅಷ್ಟೇ. ಅದು ಬಿಟ್ರೆ, ಎಲ್ಲರೂ ನಮ್ಮನಮ್ಮ ಕೆಲಸಗಳಲ್ಲಿ ಬ್ಯುಸಿ ಅಗಿರ್ತೀವಿ. ಒಬ್ಬರು ಮತ್ತೊಬ್ಬರ ಕೆಲಸಕಾರ್ಯಗಳಲ್ಲಿ ಮೂಗು ತೂರಿಸುವಷ್ಟು ಸಮಯವೇ ಇರೋದಿಲ್ಲ.
ಇನ್ನು ನನ್ನ ಸೊಸೆ ರಾಧಿಕಾ ಹಾಗೂ ನಾನು ಅತ್ತೆ-ಸೊಸೆ ಥರ ಇರೋದಿಲ್ಲ, ಫ್ರೆಂಡ್ಸ್ ಥರ ಇರ್ತೀವಿ. ನನ್ನ ಮಗ ಈ ಬಗ್ಗೆ ಒಂದ್ ಮಾತು ಹೇಳ್ತಾ ಇರ್ತಾನೆ. 'ನನ್ನಮ್ಮ ಮುದುಕಿ ಯಾವತ್ತೂ ಸೊಸೆ ಪರ' ಅಂತ. ರಾಧಿಕಾ ಕೂಡ ಅಷ್ಟೇ, ಅವಳಿಗೆ ನನ್ನ ಬಗ್ಗೆ, ಯಶ್ ಬಗ್ಗೆ ಚೆನ್ನಾಗಿ ಗೊತ್ತು. ಅವಳು ಯಶ್ ಜೊತೆ ಮದುವೆ ಆಗೋದಕ್ಕೆ ಮುಂಚೆ 8-10 ವರ್ಷ ಲವ್ ಮಾಡಿರೋಳು, ನಮ್ಮ ಜೊತೆ ಓಡಾಡಿರೋಳು. 'ನಮ್ಮತ್ತೆ, ನಮ್ ಯಜಮಾನ್ರಿಗಿಂತಲೂ ಫಾಸ್ಟ್' ಅಂತಾಳೆ. ನಾನು ಒಮ್ಮೆ ಹೊರಗಡೆ ಹೊರಟಾಗ 3-4 ಕೆಲಸ ಮುಗಿಸಿಕೊಂಡು ಬರೋದನ್ನು ಅವಳು ನೋಡಿದ್ದಾಳೆ. ನಮ್ಮನೆಯ ಎಲ್ಲರ ಬಗ್ಗೆ, ಮನೆಯ ವಾತಾರಣದ ಬಗ್ಗೆ ಅವಳಿಗೆ ಚೆನ್ನಾಗಿ ಗೊತ್ತಿದೆ.
ಯಶ್ ಬಿಟ್ಟು ನಾವು ಗೃಹ ಪ್ರವೇಶ ಬೇಕಾದ್ರೂ ಮಾಡ್ತೀವಿ ಅಂತ ನಾನು ಹೇಳಿದ್ದು, ಅವ್ನ ಬಿಟ್ಟೇ ಮಾಡ್ತೀವಿ ಅಂತ ಅಲ್ಲ. ನಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಬೇರೆಯವರ ಕೆಲಸಗಳ ಬಗ್ಗೆ ಗೌರವ ಕೊಡ್ತೀವಿ, ಅವರ ಪಾಡಿಗೆ ಅವರು ಕೆಲಸ ಮಾಡಲು ಬಿಡ್ತೀವಿ ಎಂಬುದನ್ನು ಅರ್ಥ ಮಾಡಿಸಲು ಹೇಳಿದ್ದು. ನಮ್ಮ ನಡುವೆ ಯಾವುದೇ ಸಮಸ್ಯೆ, ಮನಸ್ತಾಪ ಇಲ್ಲ. ಆದರೆ, ನಾವು ಯಾರೂ ಕೂಡ ಇನ್ನೊಬ್ಬರ ಮೇಲೆ ಅವಲಂಬನೆ ಹೊಂದಿಲ್ಲ. ನಾನು, ನನ್ನ ಯಜಮಾನು ಈಗ ಫ್ರೀ ಟೈಮ್ ಹೊಂದಿದ್ದೇವೆ. ನಮ್ಮ ಮಕ್ಕಳಿಬ್ಬರಿಗೂ ಮದುವೆ ಆಗಿದೆ, ಅವರವರ ಸಂಸಾರ ಚೆನ್ನಾಗಿ ಮಾಡಿಕೊಂಡಿದ್ದಾರೆ. ನಾವೀಗ ನಮ್ಮ ಇಷ್ಟದ ಪ್ರಕಾರ ಇರಬಹುದು, ಹಾಗೇ ಇದ್ದೇವೆ' ಎಂದಿದ್ದಾರೆ.
'ನಿಮ್ಮ ಮನೆಯಲ್ಲಿ ಏನೋ ಸಮಸ್ಯೆ ಆಗಿದೆ, ಅತ್ತೆ-ಸೊಸೆ ಮಧ್ಯೆ ಹಾಗೂ ಅಮ್ಮ-ಮಗನ ಮಧ್ಯೆ ಎಲ್ಲವೂ ಸರಿ ಇಲ್ಲ' ಎಂಬ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಶುರುವಾಗಿದೆ' ಎಂಬ ಮಾತಿಗೆ ಕೂಡ ಯಶ್ ಅಮ್ಮ ಪುಷ್ಪಾ ಸೂಕ್ತ ಉತ್ತರ ನೀಡಿದ್ದಾರೆ. 'ನಾವು ನಮ್ಮನಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿದ್ದೇವೆ. ನಾನು ಸಿನಿಮಾ ಮಾಡಿರೋದು ಜನರಿಗಾಗಿ, ಜನರು ಅದನ್ನು ನೋಡಬೇಕು. ನಿರ್ಮಾಪಕಿಯಾಗಿ ನಾನು ಎಲ್ಲರೂ ನಮ್ಮ ಸಿನಿಮಾ ನೋಡಬೇಕುಎಂದು ಬಯಸುತ್ತೇನೆ. ಯಶ್ ಅಭಿಮಾನಿಗಳೂ ಸೇರಿದಂತೆ, ಎಲ್ಲ ನಟರುಗಳ ಫ್ಯಾನ್ಸ್ ಕೂಡ ನಮ್ಮ ಸಿನಿಮಾ ನೋಡ್ಬೇಕು. ಯಶ್ ಅವನ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾನೆ. ಅವನೂ ಆದಾಗ ನನ್ನ ಸಿನಿಮಾ ನೋಡ್ತಾನೆ, ಸೊಸೆಯೂ ನೋಡ್ತಾಳೆ. ನಮ್ಮ ಮಧ್ಯೆ ಯಾವುದೇ ಸಮಸ್ಯೆ ಇಲ್ಲ.
ನಾನು ಸುಳ್ಳು ಹೇಳೋದಿಲ್ಲ. ಒಮ್ಮೆ ಸುಳ್ಳು ಹೇಳಿದ್ರೆ ಕೂಡ ಅದು ಸುದ್ದಿಯಾಗುತ್ತೆ. ನಮ್ಮ ಮನೆಗೆ ಆಪ್ತರು ತುಂಬಾ ಜನ ಇದ್ದಾರೆ. ಅವರಿವರ ಮೂಲಕ ಅದು ಒಂದಲ್ಲ ಒಂದು ದಿನ ಹೊರಗೆ ಬಂದೇ ಬರುತ್ತೆ. ನಾನು ನೇರವಾಗಿ ಇದ್ದಿದ್ದನ್ನು ಇದ್ದಂತೆ ಹೇಳೋದು. ನನ್ನ ಸಿನಿಮಾಗೆ ಹಣವನ್ನು ಯಶ್ ಕೂಡ ಕೊಟ್ಟಿದ್ದಾನೆ. ತಾಯಿಗೆ ಮಗ ಹಣ ಕೊಟ್ಟರೆ ತಪ್ಪೇನು? ಇಷ್ಟು ವರ್ಷ ಸಾಕಿಲ್ಲವೇ? ಕೊಡದಿದ್ದರೂ ಸಮಸ್ಯೆ ಇಲ್ಲ. ಇದ್ದರೆ ಕೊಡುತ್ತಾನೆ, ಇಲ್ಲದಿದ್ದರೆ ಇಲ್ಲ. ಅದರಲ್ಲೇನು ಸಮಸ್ಯೆ?' ಎಂದು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಿದ್ದಾರೆ ಪುಷ್ಪಾ ಅರುಣ್‌ಕುಮಾರ್. ಈ ಸುದ್ದಿಯೀಗ ಭಾರೀ ವೈರಲ್ ಆಗತೊಡಗಿದೆ. ಇದಕ್ಕಿನ್ನೇನು ಕಾಮೆಂಟ್ ಬರುತ್ತೋ ದೇವರೇ ಬಲ್ಲ..!
ಅಂದಹಾಗೆ, ಪುಷ್ಪಾ ಅರುಣ್‌ಕುಮಾರ್ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರಕ್ಕೆ ನಾಯಕರಾಗಿ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿರುವ ನಟ ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ. ನಾಯಕಿಯಾಗಿ ನಟಿ ಕಾವ್ಯಾ ನಟಿಸಿದ್ದಾರೆ. ಈ ಚಿತ್ರವನ್ನು ಶ್ರೀರಾಜ್ ನಿರ್ದೇಶನ ಮಾಡಿದ್ದಾರೆ. ಚಿತ್ರವು ಮುಂದಿನ ತಿಂಗಳು, ಅಂದರೆ 01 ಆಗಸ್ಟ್ 2025 ರಂದು (01 August 2025) ತೆರೆಗೆ ಬರಲಿದೆ.
