ಮಧುಬಾಲಾ ಪಾತ್ರಕ್ಕೆ ನನ್ನೇ ಕೇಳಿದ್ದರು: ಶ್ರುತಿ ನಾಯ್ಡು
ತಮ್ಮ ಮೊದಲ ನಿರ್ಮಾಣದ ಚಿತ್ರ ತೆರೆಗೆ ಬರುತ್ತಿರುವ ಸಂದರ್ಭದಲ್ಲಿ ಶ್ರುತಿ ನಾಯ್ಡು ಹೇಳಿಕೊಂಡ 10 ಅಂಶಗಳು ಇಲ್ಲಿವೆ. ಆ ಮೂಲಕ ರಮೇಶ್ ಇಂದಿರಾ ನಿರ್ದೇಶನದ ‘ಪ್ರೀಮಿಯರ್ ಪದ್ಮಿನಿ’ಯ ಪಯಣವನ್ನು ಮೆಲುಕು ಹಾಕಿದ್ದಾರೆ.
1. ಕಳೆದ ಹನ್ನೆರಡು ವರ್ಷಗಳಿಂದ ಕಿರುತೆರೆಯಲ್ಲಿದ್ದೇನೆ. ನನ್ನ ಧಾರಾವಾಹಿಗಳಿಗೆ ಸಾಕಷ್ಟುಪ್ರೇಕ್ಷಕರು ಇದ್ದಾರೆ. ಅವರಿಗೆ ನಾನು ಹಿರಿತೆರೆಯಲ್ಲಿ ಕನೆಕ್ಟ್ ಆಗುವ ಅವಕಾಶ ಈಗ ಬಂದಿದೆ. ನನ್ನ ಧಾರಾವಾಹಿಗಳನ್ನು ನೋಡುತ್ತಿರುವ ಫ್ಯಾಮಿಲಿ ಪ್ರೇಕ್ಷಕರು ‘ಪ್ರೀಮಿಯರ್ ಪದ್ಮಿನಿ’ ಚಿತ್ರವನ್ನು ನೋಡುತ್ತಾರೆಂಬ ನಂಬಿಕೆ ಇದೆ.
2. ನಿಜಕ್ಕೂ ನನಗೆ ಸಿನಿಮಾ ನಿರ್ಮಿಸುವ ಆಸೆ ಇರಲಿಲ್ಲ. ನನ್ನ ನಿರ್ಮಾಣ ಸಂಸ್ಥೆಯಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಆದರೆ, ರಮೇಶ್ ಇಂದಿರಾ ಅವರು ಬಂದು ಕತೆ ಹೇಳಿದಾಗ ‘ಇದು ನನ್ನ ಸಂಸ್ಥೆಯಲ್ಲಿ ನಿರ್ಮಾಣವಾಗಬೇಕಿರುವ ಕತೆ’ ಎನ್ನುವ ಭಾವನೆ ಹುಟ್ಟಿಕೊಂಡಿತು. ಹೀಗಾಗಿ ರಮೇಶ್ ಅವರ ಕತೆಯೇ ನಾನು ಸಿನಿಮಾ ನಿರ್ಮಾಪಕಿಯಾಗಲು ಕಾರಣವಾಯಿತು.
3. ನಿರ್ದೇಶಕ ರಮೇಶ್ ಇಂದಿರಾ ತುಂಬಾ ಶಿಸ್ತಿನ ವ್ಯಕ್ತಿ. ಅವರ ಓದಿನ ಜ್ಞಾನ, ಅವರು ಕತೆಗಳನ್ನು ಮಾಡಿಕೊಳ್ಳುವ ರೀತಿಯೇ ತುಂಬಾ ಚೆನ್ನಾಗಿರುತ್ತದೆ. ಜತೆಗೆ ಶೂಟಿಂಗ್‌ಗೆ ಹೋಗುವ ಮುನ್ನವೇ ಅಚ್ಚುಕಟ್ಟಾಗಿ ಪ್ಲಾನ್ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಅಂದುಕೊಂಡಂತೆ ಸಿನಿಮಾ ಮೂಡಿ ಬಂದಿದೆ.
ಸಿನಿಮಾ ಬುದ್ಧಿವಂತಿಕೆ ಪ್ರದರ್ಶಿಸುವ ವೇದಿಕೆ ಅಲ್ಲ: ರಮೇಶ್ ಇಂದಿರಾ
4. ಪ್ರೀಮಿಯರ್ ಪದ್ಮಿನಿ ಆಡಂಬರವಿಲ್ಲದ, ಸಹಜತೆಯಿಂದ ಕೂಡಿರುವ ಸಿನಿಮಾ. ಜಗ್ಗೇಶ್, ಸುಧಾರಾಣಿ, ಪ್ರಮೋದ್, ಮಧುಬಾಲಾ ಹೀಗೆ ಹತ್ತಾರು ಪಾತ್ರಗಳು ಬಂದು ಹೋಗುತ್ತವೆ. ಎಲ್ಲರ ಪಾತ್ರವೂ ತುಂಬಾ ಚೆನ್ನಾಗಿದೆ. ಸಂದೇಶ, ಮನರಂಜನೆ ಮತ್ತು ಈಗಿನ ಮೌಲ್ಯಗಳನ್ನು ಹೇಳುವಂತಹ ಸಿನಿಮಾ ಇದು.
5. ನಟ ದರ್ಶನ್ ಅವರು ನನ್ನ ಧಾರಾವಾಹಿ ಲಾಂಚ್‌ಗೂ ಬಂದಿದ್ದರು. ಅವರು ನನ್ನ ಹಿತೈಷಿ. ದರ್ಶನ್ ಅವರು ಹೇಗೆ ನನ್ನ ಬೆಂಬಲಿಸುತ್ತಾರೋ ಅವರ ಅಭಿಮಾನಿಗಳೂ ಕೂಡ ನನ್ನ ಮೊದಲ ನಿರ್ಮಾಣದ ಚಿತ್ರವನ್ನು ನೋಡುತ್ತಾರೆಂಬ ಭರವಸೆ ಇದೆ.
6. ನನಗೆ ಎಲ್ಲ ರೀತಿಯ ಸಿನಿಮಾ ಮಾಡುವ ಆಸೆ. ಆದರೆ, ನಾವು ಮಾಡುವ ಸಿನಿಮಾ ಕತೆ ನಮಗೆ ಅರ್ಥವಾಗಬೇಕು. ನಮ್ಮನ್ನ ಆವರಿಸಿಕೊಳ್ಳಬೇಕು. ನನಗೆ ಬಾಹುಬಲಿಯಂತಹ ಸಿನಿಮಾ ಮಾಡುವ ಶಕ್ತಿಯೂ ಇದೆ. ಮುಂದೆ ಸ್ಟಾರ್ ನಟರೊಂದಿಗೂ ಸಿನಿಮಾ ಮಾಡುವ ಧೈರ್ಯ ಇದೆ. ಆದರೆ, ಅದಕ್ಕೆ ತಕ್ಕಂತೆ ಕತೆ ಸಿಗಬೇಕು. ಅದು ನನಗೆ ಇಂಪ್ರೆಸ್ ಆಗಬೇಕು.
ಜಗ್ಗೇಶ್ ಜತೆ ಮಧುಬಾಲ, ಸುಧಾರಾಣಿ ಕಥೆ ಏನು?
7. ಪ್ರೀಮಿಯರ್ ಪದ್ಮಿನಿ ಕಿರುತೆರೆ ತಂಡದ ಸಿನಿಮಾ ಎನ್ನುವ ಕಾರಣಕ್ಕೆ ಧಾರಾವಾಹಿಯಂತೆ ಇರುತ್ತದೆ ಎಂದುಕೊಳ್ಳಬೇಡಿ. ಪಕ್ಕಾ ಸಿನಿಮ್ಯಾಟಿಕ್ ಆಗಿದೆ. ರೆಗ್ಯೂಲರ್ ಕಮರ್ಷಿಯಲ್‌ನಿಂದ ಕೂಡಿರುವ ಸಿನಿಮಾ. ಎಲ್ಲೂ ಬೋರ್ ಅನಿಸಲ್ಲ. 1 ಗಂಟೆ 50 ನಿಮಿಷ ನೋಡುಗನನ್ನು ಕುತೂಹಲದಿಂದ ಚಿತ್ರಮಂದಿರದಲ್ಲಿ ಕೂರಿಸುತ್ತದೆ. ಆ ಕಾರಣಕ್ಕೆ ಈ ಸಿನಿಮಾ ನೋಡಿ.
8. ಕಿರುತೆರೆ ಸ್ತ್ರೀ ಕೇಂದ್ರಿತ ಮಾಧ್ಯಮ. ಈ ಕಾರಣಕ್ಕೆ ಒಬ್ಬ ಮಹಿಳೆಯಾಗಿ ನನಗೆ ಇಲ್ಲಿ ಕತೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸುಲಭ. ಸಿಂಗಲ್ ಪೇರೆಂಟ್ ಕತೆಯನ್ನು ಹೇಳಬೇಕು ಎಂದಾಗ ‘ಪುನರ್ ವಿವಾಹ’, ದಪ್ಪ ಇರುವ ಹುಡುಗಿಯ ಬದುಕು ತೋರಿಸಬೇಕು ಎಂದುಕೊಂಡಾಗ ‘ಬ್ರಹ್ಮಗಂಟು’ ಧಾರಾವಾಹಿಗಳು ಮೂಡಲು ಸಾಧ್ಯವಾಯಿತು. ಅದೇ ರೀತಿ ಸಿನಿಮಾದಲ್ಲಿ ಎಂಥ ಕತೆ ಹೇಳಬೇಕು ಎನ್ನುವ ತಿಳುವಳಿಕೆ ಇದೆ.
9. ಕಿರುತೆರೆಯಲ್ಲಿ ಒಮ್ಮೆ ತಪ್ಪು ಮಾಡಿದರೆ ಮತ್ತೆ ತಿದ್ದುಕೊಳ್ಳುವುದಕ್ಕೆ ಅವಕಾಶ ಇದೆ. ಒಂದು ಎಪಿಸೋಡ್‌ನ ಟಿಆರ್‌ಪಿ ನೋಡಿದರೆ ನಾವು ಮಾಡಿದ ತಪ್ಪುಗಳು ಗೊತ್ತಾಗುತ್ತವೆ. ಮುಂದೆ ಅವು ಮರುಕಳಿಸದಂತೆ ನೋಡಿಕೊಳ್ಳಬಹುದು. ಆದರೆ, ಸಿನಿಮಾ ಮಾಡುವಾಗ ಒಮ್ಮೆ ತಪ್ಪಾದರೆ ಅಷ್ಟೆ. ಅದನ್ನು ಸರಿಪಡಿಸಿಕೊಳ್ಳಲಾಗದು. ಹೀಗಾಗಿ ಸಾಕಷ್ಟುಎಚ್ಚರಿಕೆಯಿಂದಲೇ ಸಿನಿಮಾ ಮಾಡಬೇಕಿದೆ.
10. ಹಾಗೆ ನೋಡಿದರೆ ಪ್ರೀಮಿಯರ್ ಪದ್ಮಿನಿಯಲ್ಲಿ ಮಧುಬಾಲಾ ಮಾಡಿರುವ ಪಾತ್ರವನ್ನು ನನ್ನನ್ನೇ ಮಾಡುವಂತೆ ಜಗ್ಗೇಶ್ ಅವರೇ ಹೇಳಿದ್ದರು. ನಟನೆಗೆ ಮಾಡುವುದಕ್ಕೆ ಬೇಕಾದ ಟೈಮ್ ನನ್ನಲ್ಲಿ ಇಲ್ಲ. ಅದಕ್ಕೆ ತುಂಬಾ ಡೆಡಿಕೇಷನ್ ಬೇಕು. ಹತ್ತಾರು ಜವಾಬ್ದಾರಿಗಳನ್ನು ಹೊತ್ತುಕೊಂಡು ಸಿನಿಮಾದಲ್ಲಿ ನಟಿಸುತ್ತೇನೆ ಅಂದರೆ ಆಗಲ್ಲ. ಅಲ್ಲದೆ ಇದು ನನ್ನ ಮೊದಲ ನಿರ್ಮಾಣದ ಚಿತ್ರ ಬೇರೆ. ಹೀಗಾಗಿ ರಿಸ್ಕ್ ಯಾಕೆ ಅಂತ ನಾನು ನಿರ್ಮಾಣಕ್ಕೆ ಸೀಮಿತಗೊಂಡೆ.