Rashmika Mandanna Sindoor: ವಿಜಯ್ -ರಶ್ಮಿಕಾ ವಿವಾಹದ ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ವಿಶೇಷವಾಗಿ ರಶ್ಮಿಕಾ ಅವರು ಹಣೆಗೆ ಸಿಂಧೂರ ಹಚ್ಚಿಲ್ಲ ಎಂಬ ವಿಷಯದ ಬಗ್ಗೆ ನೆಟ್ಟಿಗರ ನಡುವೆ ಪರ-ವಿರೋಧದ ಮಾತುಗಳು ಕೇಳಿಬರುತ್ತಿವೆ.

ಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ಕ್ಯೂಟ್ ಜೋಡಿ ಎನಿಸಿಕೊಂಡಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ಹಸೆಮಣೆ ಏರಿದ್ದಾರೆ. ಅಂತೂ ಕೆಲವು ವರ್ಷದಿಂದ ಮದುವೆ ಬಗ್ಗೆ ಇದ್ದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಮದುವೆಯಾದ ಹೊಸತರಲ್ಲಿ ಈ ನವಜೋಡಿ ವಿವಿಧ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಸರಳವಾದ ಸೀರೆಯಲ್ಲಿ ರಶ್ಮಿಕಾ ಮಿಂಚುತ್ತಿದ್ದರೆ, ಸಾಂಪ್ರದಾಯಿಕ ಉಡುಪಿನಲ್ಲಿ ವಿಜಯ್ ಗಮನ ಸೆಳೆಯುತ್ತಿದ್ದಾರೆ. ಇವರ ದೇವಸ್ಥಾನದ ಭೇಟಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿವೆ. ವಿಜಯ್ ಅವರು ರಶ್ಮಿಕಾ ಅವರ ಕೈಹಿಡಿದು ನಡೆಸುತ್ತಿರುವ ರೀತಿ, ಅವರ ನಡುವಿನ ಆಪ್ತತೆ ಅಭಿಮಾನಿಗಳ ಮನಗೆದ್ದಿದೆ.

ಚರ್ಚೆಯಾದ ರಶ್ಮಿಕಾ 'ಲುಕ್'

ವಿಡಿಯೋಗಳು ವೈರಲ್ ಆಗುತ್ತಿದ್ದಂತೆ, ಉತ್ತರ ಭಾರತದ ಕೆಲವು ನೆಟ್ಟಿಗರು ರಶ್ಮಿಕಾ ಅವರ 'ಲುಕ್' ಬಗ್ಗೆ ಅಪಸ್ವರ ಎತ್ತಿದ್ದಾರೆ. "ಹೊಸದಾಗಿ ಮದುವೆಯಾದ ಹೆಣ್ಣುಮಗಳು ದೇವಸ್ಥಾನಕ್ಕೆ ಹೋಗುವಾಗ ಹಣೆಯ ಮೇಲೆ ಸಿಂಧೂರವನ್ನೇಕೆ ಹಚ್ಚಿಲ್ಲ? ಕುತ್ತಿಗೆಯಲ್ಲಿ ಮಾಂಗಲ್ಯವೇಕೆ ಕಾಣುತ್ತಿಲ್ಲ?" ಎಂಬುದು ಅವರ ಪ್ರಶ್ನೆ. "ಭಾರತೀಯ ಸಂಸ್ಕೃತಿಯಲ್ಲಿ ಮದುವೆಯಾದ ಮಹಿಳೆಗೆ ಸಿಂಧೂರವೇ ಶೋಭೆ, ಅದನ್ನು ಧರಿಸಲು ಸಂಕೋಚವೇಕೆ?" ಎಂದು ಕಮೆಂಟ್ ಮಾಡುವ ಮೂಲಕ ರಶ್ಮಿಕಾ ಅವರನ್ನು ಟೀಕಿಸಿದ್ದಾರೆ.

ದಕ್ಷಿಣ Vs ಉತ್ತರ ಭಾರತದ ಸಂಪ್ರದಾಯ

ಈ ಟೀಕೆಗಳಿಗೆ ದಕ್ಷಿಣ ಭಾರತದ ಅಭಿಮಾನಿಗಳು ಮತ್ತು ಸಂಸ್ಕೃತಿ ಬಲ್ಲವರು ತಕ್ಕ ಉತ್ತರ ನೀಡಿದ್ದಾರೆ. ಅದೇನಪ್ಪಾ ಅಂದ್ರೆ ಉತ್ತರ ಭಾರತದಲ್ಲಿ ಮಹಿಳೆಯರು ಕೂದಲಿನ ಮಧ್ಯಭಾಗದ ಸೀಳಿನಲ್ಲಿ (Parting) ದಟ್ಟವಾಗಿ ಸಿಂಧೂರವನ್ನು ಹಚ್ಚುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಮಹಿಳೆಯರು ಹಣೆಯ ಮಧ್ಯಭಾಗದಲ್ಲಿ ಕುಂಕುಮದ ಬೊಟ್ಟನ್ನು ಇಡುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ದಕ್ಷಿಣ ಭಾರತದ ಅನೇಕ ಸಮುದಾಯಗಳಲ್ಲಿ ಮಾಂಗಲ್ಯ ಅಥವಾ ತಾಳಿಯನ್ನು ಸೀರೆಯ ಒಳಗಡೆ ಧರಿಸಲಾಗುತ್ತದೆ. ಅದನ್ನು ಪ್ರದರ್ಶಿಸಬೇಕು ಎನ್ನುವ ನಿಯಮವಿಲ್ಲ. ರಶ್ಮಿಕಾ ಅವರು ದಕ್ಷಿಣದ ಸೊಸೆಯಾಗಿ ಇಲ್ಲಿನ ಪದ್ಧತಿಯನ್ನೇ ಪಾಲಿಸುತ್ತಿದ್ದಾರೆ ಎಂಬುದು ಅಭಿಮಾನಿಗಳ ವಾದ.

ಸಿನಿಮಾ ತಾರೆಯರಾದರೂ ದೇವಸ್ಥಾನಕ್ಕೆ ಹೋಗುವಾಗ ಅಬ್ಬರವಿಲ್ಲದೆ ಸರಳವಾಗಿ ಹೋಗಿರುವುದು ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ಅನೇಕರು ಸಪೋರ್ಟ್ ಮಾಡಿದ್ದಾರೆ.

ಯಾವುದೇ ಒಂದು ಸಂಪ್ರದಾಯವೇ ಶ್ರೇಷ್ಠ ಎನ್ನುವ ಬದಲು, ಆಯಾ ಭಾಗದ ಸಂಸ್ಕೃತಿಯನ್ನು ಗೌರವಿಸುವುದು ಮುಖ್ಯ. ರಶ್ಮಿಕಾ ಮಂದಣ್ಣ ಅವರು ತಮ್ಮ ಸಂಪ್ರದಾಯದಂತೆಯೇ ನಡೆದುಕೊಳ್ಳುತ್ತಿದ್ದಾರೆ ಎಂದು ಅವರ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಬಾಂಧವ್ಯದ ಬಗ್ಗೆ ಮೆಚ್ಚುಗೆ
ಅದೇನೇ ಇರಲಿ ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರನ್ನು ಕಾಳಜಿಯಿಂದ ನಡೆಸಿಕೊಳ್ಳುತ್ತಿರುವ ರೀತಿ ಎಲ್ಲರ ಗಮನ ಸೆಳೆಯುತ್ತಿದೆ. ದೇವಸ್ಥಾನದ ಜನಜಂಗುಳಿಯಲ್ಲಿ ರಶ್ಮಿಕಾ ಅವರಿಗೆ ರಕ್ಷಣೆ ನೀಡುತ್ತಾ, ಅವರ ಕೈ ಹಿಡಿದು ನಡೆಸುತ್ತಿರುವ ವಿಜಯ್ ಅವರ ನಡೆಗೆ "ಪರ್ಫೆಕ್ಟ್ ಹಸ್ಬೆಂಡ್" ಎಂಬ ಬಿರುದು ಸಿಗುತ್ತಿದೆ. ಈ ಜೋಡಿಯ ಆಪ್ತತೆ ನೋಡಿ "ದೃಷ್ಟಿ ತಗುಲದಿರಲಿ" ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಒಟ್ಟಾರೆಯಾಗಿ, ಈ ಸ್ಟಾರ್ ಜೋಡಿಯ ಮದುವೆಯ ನಂತರದ ಪ್ರತಿಯೊಂದು ನಡವಳಿಕೆಯೂ ಈಗ ಚರ್ಚೆಗೆ ವೇದಿಕೆಯಾಗಿದೆ.

ರಿಯಲ್ ಲೈಫ್‌ನಲ್ಲಿ ದಂಪತಿಗಳಾದ ವಿಜಯ್-ರಶ್ಮಿಕಾ ಈಗ ರೀಲ್ ಲೈಫ್‌ನಲ್ಲೂ ದಂಪತಿಗಳಾಗಿ ಕಾಣಿಸಿಕೊಂಡಿದ್ದಾರೆ. ನಿನ್ನೆಯಷ್ಟೇ ಬಿಡುಗಡೆಯಾದ 'ರಣಬಾಲಿ' ಚಿತ್ರದ ಹೊಸ ಪೋಸ್ಟರ್‌ನಲ್ಲಿ ಇವರಿಬ್ಬರ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಮದುವೆಯ ನಂತರ ಈ ಜೋಡಿಯು 'ರಣಬಾಲಿ' ಮತ್ತು 'ಜಯಮ್ಮ' ಎಂಬ ಪಾತ್ರಗಳ ಮೂಲಕ ತೆರೆಯ ಮೇಲೆ ಬರುತ್ತಿರುವುದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಪೋಸ್ಟರ್ ಜೊತೆಗೆ ಚಿತ್ರದ ಮೊದಲ ರೋಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಲಾಗಿದೆ. ಕನ್ನಡದಲ್ಲಿ 'ಎನಯ್ಯ ಸ್ವಾಮಿ' (ತೆಲುಗಿನಲ್ಲಿ 'ಎಂದಯ್ಯ ಸಾಮಿ' ಮತ್ತು ಹಿಂದಿಯಲ್ಲಿ 'ಓ ಮೇರೆ ಸಾಜನ್') ಎಂಬ ಈ ಹಾಡು ವಿಜಯ್ ಮತ್ತು ರಶ್ಮಿಕಾ ಅವರ ಅದ್ಭುತ ಕೆಮಿಸ್ಟ್ರಿಯನ್ನು ತೋರಿಸುತ್ತದೆ.

ಈ ಚಿತ್ರವು ಸೆಪ್ಟೆಂಬರ್ 11, 2026 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

View post on Instagram