ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ನಿರ್ಮಾಣದ ಬಹುನಿರೀಕ್ಷಿತ ಚಿತ್ರ ‘ಪ್ರೀಮಿಯರ್‌ ಪದ್ಮಿನಿ’ ಏಪ್ರಿಲ್‌ 26ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಜಗ್ಗೇಶ್‌ ಅವರಿಗೆ ಜೋಡಿಯಾಗಿ ಬಹುಭಾಷೆ ನಟಿ ಮಧುಬಾಲ ಅಭಿನಯಿಸಿದ್ದಾರೆ. ನಿರ್ದೇಶಕ ರಮೇಶ್‌ ಇಂದಿರಾ ಹೇಳುವ ಪ್ರಕಾರ ಅವರಿಲ್ಲಿ ಓರ್ವ ಮಾಡರ್ನ್‌ ಮಹಿಳೆ. ಪ್ರೀಮಿಯರ್‌ ಪದ್ಮಿನಿಯ ಮಾಲೀಕ ಜಗ್ಗೇಶ್‌ ಅವರ ಪಕ್ಕದ ಮನೆಯಲ್ಲೇ ಅವರ ವಾಸ. ಗೊತ್ತೋ ಗೊತ್ತಿಲ್ಲದೆಯೋ ಅವರು ವಿವಾಹಿತ ಜಗ್ಗೇಶ್‌ ಅವರ ಬದುಕಲ್ಲಿ ತಂಗಾಳಿ ಎಬ್ಬಿಸುತ್ತಾರೆ. ಯಾಕೆ ಹಾಗಾಯಿತು, ಮುಂದೆ ಏನಾಯಿತು ಎನ್ನುವುದು ಚಿತ್ರದೊಳಗಿನ ಸಸ್ಪೆನ್ಸ್‌ ಅಂಶ.

'ನಾಲ್ಕು ವರ್ಷ ಕಾದೆ, ಒಳ್ಳೆಯದೇ ಆಯ್ತು'!

ಉಳಿದಂತೆ ಈ ಚಿತ್ರದ ಕತೆಯೇ ವಿಶೇಷವಾದದ್ದು. ಅವರ ಜತೆಗೆ ಹಿರಿಯ ನಟಿ ಸುಧಾರಾಣಿ ಕೂಡ ಇದ್ದಾರೆ. ಈ ಕಾಲದ ದುಡಿಯುವ ಕುಟುಂಬಗಳಲ್ಲಿನ ತಳಮಳ, ತಲ್ಲಣ, ಆತಂಕ, ಕೋಪ-ತಾಪ, ಭಿನ್ನಾಭಿಪ್ರಾಯಗಳು, ಕೊನೆಗೆ ಸಮಾಧಾನ ಆಗುವಂತಹ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಓರ್ವ ಆಧುನಿಕ ಮಹಿಳೆಯಾಗಿ ಅಭಿನಯಿಸಿದ್ದಾರೆ ಸುಧಾರಾಣಿ. ಅವರಿಗೆ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಖುಷಿಯಿದೆ. ಇಷ್ಟುವರ್ಷದ ಜರ್ನಿಯಲ್ಲಿ ಇಂತಹ ಪಾತ್ರ ಸಿಕ್ಕಿರಲಿಲ್ಲ. ಇದೇ ಮೊದಲು ಈ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎನ್ನುವ ಸಂತಸದಲ್ಲೇ ಪಾತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.

‘ನಾನು ಅಭಿನಯಿಸುವ ಪ್ರತಿ ಸಿನಿಮಾ ಮತ್ತು ಪ್ರತಿ ಪಾತ್ರವೂ ನನಗೆ ಮುಖ್ಯವೇ. ಆದರೆ ಇಲ್ಲಿನ ಪಾತ್ರ ತುಸು ವಿಶೇಷ ಎನಿಸಿದ್ದು ಅದರ ವೈಶಿಷ್ಟ್ಯದ ಕಾರಣಕ್ಕೆ. ಆ ವೈಶಿಷ್ಟ್ಯ ಕುರಿತಾಗಿ ನಾನು ಈಗಲೇ ಹೇಳುವುದಿಲ್ಲ. ಆ ಪಾತ್ರದ ಬಗ್ಗೆ ಜನರಲ್ಲಿ ಕುತೂಹಲ ಉಳಿಯಬೇಕಾದರೆ ಅದೇನು ಅನ್ನೋದು ತೆರೆಯಲ್ಲೇ ನೋಡಿದಾಗಲೇ ಗೊತ್ತಾಗಬೇಕು. ಹಾಗಾಗಿ ಆ ಪಾತ್ರವೇನು ಎನ್ನುವುದಕ್ಕಿಂತ ಇಲ್ಲಿ ಇಡೀ ಸಿನಿಮಾವೇ ವಿಶೇಷ ಎನ್ನುವುದು ಮುಖ್ಯ. ಪ್ರತಿಯೊಬ್ಬರು ನೋಡಬಹುದಾದ ಸಿನಿಮಾ ಇದು. ನಿರ್ದೇಶಕರು ಮತ್ತು ನಿರ್ಮಾಪಕರು ಮೊದಲ ಸಿನಿಮಾ ಎನ್ನುವ ಯಾವ ಕುರುಹು ಸಿಗದಂತೆ ಪಕ್ಕಾ ಪ್ರೊಫೆಷನಲ್‌ ಆಗಿ ಈ ಸಿನಿಮಾ ಮಾಡಿದ್ದಾರೆ’ ಎನ್ನುತ್ತಾರೆ ಸುಧಾರಾಣಿ.