ಆರ್‌ ಕೇಶವಮೂರ್ತಿ

ಕಿರುತೆರೆಯ ಅನುಭವ ಸಿನಿಮಾ ನಿರ್ದೇಶನಕ್ಕೆ ಹೇಗೆ ಸಹಕಾರಿಯಾಗಲಿದೆ?

ಕಿರುತೆರೆಯಲ್ಲಿ ಒಂದು ಖಚಿತತೆ ಬರುತ್ತದೆ. ಇಷ್ಟೇ ತೆಗೆಯಬೇಕು ಅನ್ನೋದು ಕಲಿಸುತ್ತದೆ. ಉದಾ: ವಿದ್ಯಾರ್ಥಿ ಭವನದಲ್ಲಿ ಎಷ್ಟುದೋಸೆ ಹೋಗುತ್ತವೆಯೋ ಅಷ್ಟಕ್ಕೆ ಅಡುಗೆ ಭಟ್ಟಉದ್ದಿನ ಬೇಳೆ ಇಡುತ್ತಾನೆ. ಜಾಸ್ತಿಯಾದರೆ ಉಳಿದು ಕೆಡುತ್ತದೆ ಎನ್ನುವ ತಿಳುವಳಿಕೆ ಕೊಟ್ಟಂತೆ ಕಿರುತೆರೆಯಲ್ಲಿ ಎಲ್ಲಿಗೆ ಸೀನ್‌ ಮುಗಿಯುತ್ತದೆ ಅನ್ನೋದು ಕಲಿತೆ. ಆ ಸ್ಪಷ್ಟತೆ ಇಲ್ಲಿ ನೆರವಾಗಿದೆ. ನನ್ನ ಸಿನಿಮಾ 1.50 ಗಂಟೆ ಇದೆ. ಶೂಟ್‌ ಮಾಡಿದ್ದು 1.53 ಗಂಟೆ. ಇಷ್ಟುಖಚಿತವಾಗಿ ಸಿನಿಮಾ ಶೂಟ್‌ ಮಾಡಿಕೊಳ್ಳುವ ತಿಳುವಳಿಕೆ ಕೊಟ್ಟಿದ್ದು ಕಿರುತೆರೆ.

ಕಿರುತೆರೆ ಕತೆಗೂ ಸಿನಿಮಾ ಕತೆಗೂ ಇರುವ ವ್ಯತ್ಯಾಸಗಳೇನು?

ಕಿರುತೆರೆ ಸ್ತ್ರೀ ಕೇಂದ್ರಿತ ಕತೆಗಳನ್ನು ಒಳಗೊಂಡಿರುತ್ತದೆ. ಸಿನಿಮಾ ಪುರುಷ ಪ್ರಧಾನವಾಗಿರುತ್ತದೆ. ಇಲ್ಲಿ ನಾಯಕ ನಟನನ್ನು ವಿಜೃಂಭಿಸುವುದಕ್ಕೆ ಹೆಚ್ಚು ಅವಕಾಶ ಇದೆ. ಕಿರುತೆರೆಯ ಕತೆ ಹಾಗಲ್ಲ. ಮಹಿಳೆಯೇ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌. ಜತೆಗೆ ಅನಗತ್ಯ ವೈಭವೀಕರಣ ಮಾಡಲಾಗದು. ಜತೆಗೆ ಒಂದು ಮನೆಯ ಹಾಲ್‌ನಲ್ಲಿ ಕೂತು ಅಷ್ಟಕ್ಕೇ ನೋಡುವ ಕತೆ ಕಿರುತೆರೆಯದ್ದು. ಆದರೆ, ಸಿನಿಮಾದ ಕತೆಯ ವಿಶಾಲತೆಯನ್ನು ಎಷ್ಟುಬೇಕಾದರೂ ವಿಸ್ತರಿಸಬಹುದು. ವೈಭವಗಳನ್ನು ತೋರಿಸಬಹುದು. ಕಿರುತೆರೆ ಕತೆ, ಮನೆ ಇದ್ದಂತೆ. ಸಿನಿಮಾ ಕತೆ ವಿಶಾಲ ಜಗತ್ತಿನ ಕೂಸು.

ಒಂದು ಕತೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಿ?

ಓದುವ ಸಂಸ್ಕೃತಿಯೇ ನನ್ನಲ್ಲಿ ಹತ್ತಾರು ಹೊಸ ಹೊಸ ಆಲೋಚನೆ, ಕತೆಗಳನ್ನು ಹುಟ್ಟಿಸುತ್ತದೆ. ಜತೆಗೆ ನಾನು ನಿತ್ಯ ಜನರನ್ನು ಗಮನಿಸುತ್ತಿರುತ್ತೇನೆ. ಅವರ ದೈನಂದಿನ ಬದುಕಿನ ತಿರುವುಗಳನ್ನು ನೋಡುತ್ತಿರುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಬದುಕಿನಲ್ಲೇ ಸಾಕಷ್ಟುಘಟನೆಗಳು ಸಂಭವಿಸಿವೆ. ನನ್ನ ಓದು, ನನ್ನ ಬದುಕು, ನನ್ನ ಸುತ್ತಲಿನ ಜನರೇ ನನ್ನ ಕಥಾ ಜಗತ್ತು.

ಪ್ರೀಮಿಯರ್‌ ಪದ್ಮಿನಿ ಕೇವಲ ಮನರಂಜನೆಗೆ ಸೀಮಿತವೇ?

ಮನರಂಜನೆಯ ಆಚೆಗೂ ಕತೆ ಇದೆ. ಬದುಕಿನಲ್ಲಿ ಹೆಂಗೆ, ಏನನ್ನು ಕಳೆದುಕೊಳ್ಳುತ್ತ ಹೋಗುತ್ತೇವೆ. ಅನಗತ್ಯವಾದ ವೇಗ ಇದೆ. ಹೀಗಾಗಿ ಸಾಕಷ್ಟುವಿಷಯಗಳು ಕಳೆದುಕೊಂಡು ಹತಾಶರಾಗಿ ಇನ್ನಷ್ಟುಕಳೆದುಕೊಳ್ಳುತ್ತಿದ್ದೇವೆ. ಆದರೆ, ಬದುಕನ್ನು ಬದುಕಬೇಕು. ಎಲ್ಲಕ್ಕಿಂತ ಬದುಕು ದೊಡ್ಡದು. ನಮಗೆ ಎಲ್ಲವನ್ನೂ ನಿಭಾಯಿಸುವ ಶಕ್ತಿ ಇದೆ. ಸಂಬಂಧಗಳನ್ನು ಮಾತ್ರ ಹ್ಯಾಂಡಲ್‌ ಮಾಡಕ್ಕೆ ಆಗಲ್ಲ. ಯಾಕೆ ಎನ್ನುವುದರ ಸುತ್ತ ಈ ಸಿನಿಮಾ ಮಾತನಾಡುತ್ತದೆ.

ಜಗ್ಗೇಶ್‌ ಜತೆ ಮಧುಬಾಲ, ಸುಧಾರಾಣಿ ಕಥೆ ಏನು?

ಜಗ್ಗೇಶ್‌ ಸೇರಿದಂತೆ ಇಲ್ಲಿನ ಪಾತ್ರಗಳು ನಿಮ್ಮ ಕತೆಗೆ ಹೇಗೆ ಸೂಕ್ತ?

ಕತೆ ಬರೆಯುವಾಗ ಯಾರನ್ನೂ ತಲೆಯಲ್ಲಿ ಇಟ್ಟುಕೊಂಡಿರಲಿಲ್ಲ. ಆದರೆ, ಇದು ನಮಗೆ ಮೊದಲ ನಿರ್ದೇಶನ, ನಿರ್ಮಾಣ. ಹೀಗಾಗಿ ಯಾರೋ ಒಬ್ಬರನ್ನು ಹಾಕಿಕೊಳ್ಳುವುದಕ್ಕಿಂತ ಕ್ರೌಡ್‌ ಪುಲ್ಲಿಂಗ್‌ ಕೆಪಾಸಿಟಿ ಇರೋ ನಟ ಬೇಕಿತ್ತು. ಆ ಕಾರಣಕ್ಕೆ ಜಗ್ಗೇಶ್‌ ಈ ಕತೆಗೆ ಸೂಕ್ತವಾದರು. ಅವರ ವಯಸ್ಸಿಗೆ ತಕ್ಕಂತಹ ಪಾತ್ರ ಅದು. ಎಲ್ಲರು ತುಂಬಾ ಚೆನ್ನಾಗಿ ಮಾಡಿದ್ದಾರೆ. ಇಲ್ಲಿ ಪಾತ್ರಗಳು ನಟಿಸಲ್ಲ ಸಂದರ್ಭಕ್ಕೆ ತಕ್ಕಂತೆ ವರ್ತಿಸುತ್ತ ಹೋಗುತ್ತವೆ.

ಆದರೆ, ಬೇರೆ ಭಾಷೆಯಿಂದ ಮಧುಬಾಲ ಬರುವ ಅಗತ್ಯವೇನಿತ್ತು?

ಆ ಪಾತ್ರಕ್ಕೆ ಕನ್ನಡದ ನಟಿಯರನ್ನೇ ಕೇಳಿದ್ವಿ. ಮಕ್ಕಳ ತಾಯಿ ಪಾತ್ರ ಆಗಿದ್ದರೆ ಮಾಡಲಾರೆ ಎಂದಾಗ ಬೇರೆ ಭಾಷೆಯತ್ತ ನೋಡಿದ್ದು. ಜತೆಗೆ ಮಕ್ಕಳ ತಾಯಿ ಆದರೂ ನೋಡಕ್ಕೆ ಚೆನ್ನಾಗಿರಬೇಕು ಎನ್ನುವ ಮಾನದಂಡದಲ್ಲೇ ಮಧುಬಾಲಾ ಅವರನ್ನು ಕರೆತರಲಾಯಿತು.

ಪ್ರೀಮಿಯರ್‌ ಪದ್ಮಿನಿಗೆ ರೀಮೇಕ್‌ ಅರೋಪ ಅಂಟಿಕೊಂಡಿದ್ದು ಯಾಕೆ?

ತಮಿಳು ಚಿತ್ರದಲ್ಲಿ ಕಾರು ಇತ್ತಂತೆ. ನಮ್ಮಲ್ಲೂ ಕಾರು ಇತ್ತು. ಬಹುಶಃ ಆ ಕಾರಣಕ್ಕೆ ಹೋಲಿಸಬೇಕು. ರೀಮೇಕ್‌ ಮಾಡುವ ಯಾವ ಅನಿವಾರ್ಯತೆಯೂ ನನಗೆ ಇಲ್ಲ. ಆರ್ಥಿಕವಾಗಿ ನಾನು ಗಟ್ಟಿಯಾಗಿರುವೆ. 16 ವರ್ಷ ಪಯಣದಲ್ಲಿ 3 ಧಾರಾವಾಹಿ ಮಾಡಿದ್ದೇನೆ. ರೀಮೇಕ್‌ ಧಾರಾವಾಹಿ ಮಾಡುವ ಅವಕಾಶ ಬಂದಾಗಲೂ ನಾನು ರಿಜೆಕ್ಟ್ ಮಾಡಿದ್ದೇನೆ. ಹೀಗಾಗಿ ಮೊದಲ ಸಿನಿಮಾ ರೀಮೇಕ್‌ ಮಾಡುತ್ತೇನೆಯೇ?

ಥಿಯೇಟರ್‌ಗಳಿಗೆ ಬಂದು ಸಿನಿಮಾ ನೋಡುವ ಸಂಸ್ಕೃತಿ ಕಡಿಮೆ ಆಗುತ್ತಿದೆ ಅನ್ನುತ್ತಾರಲ್ಲ?

ತುಂಬಾ ಹಿಂದಕ್ಕೆ ಹೋಗೋದು ಬೇಡ. ಕೆಜಿಎಫ್‌, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಲ್‌ ಬಾಟಂ ಚಿತ್ರಗಳು ಗೆದ್ದಿದ್ದು ಹೇಗೆ? ಥಿಯೇಟರ್‌ಗೆ ಬಂದು ನೋಡಿದ್ದಕ್ಕೆ ಅಲ್ಲವೇ? ಜನರು ಥಿಯೇಟರ್‌ಗೆ ಬರಕ್ಕೆ ರೆಡಿ ಇದ್ದಾರೆ. ಆದರೆ, ಬಂದ ಮೇಲೆ ಅವರು ನೋಡುವ ಸಿನಿಮಾದ ಒಳಗೆ ಏನಿರಬೇಕು ಎನ್ನುವುದು ಮುಖ್ಯ. ಒಳ್ಳೆಯ ಸಿನಿಮಾಗಳು ಸೋಲಲ್ಲ. ಕೆಟ್ಟಸಿನಿಮಾಗಳು, ಒಂದು ವರ್ಗದ ಪ್ರೇಕ್ಷಕರಿಗೆ ಸೀಮಿತಗೊಂಡ ಚಿತ್ರಗಳು ಸೋಲುತ್ತವೆ. ಇನ್ನು ಸಿನಿಮಾ ನಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ವೇದಿಕೆ ಆಗಬಾರದು. ಅದು ಜನರ ಸರಳ ಮಾಧ್ಯಮ ಆಗಿರಬೇಕು.

ಮುಂದೆಯೂ ಸಿನಿಮಾ ನಿರ್ದೇಶನ ಮಾಡುತ್ತೀರಾ ಅಥವಾ ಕಿರುತೆರೆಗೆ ಸೀಮಿತವಾಗುತ್ತೀರಾ?

ಕಿರುತೆರೆ ನನ್ನ ಮೊದಲ ಅದ್ಯತೆ. ಸಿನಿಮಾ ನನ್ನ ಪ್ರವೃತ್ತಿ. ನನ್ನ ಹಾಬಿ. ಒಳ್ಳೆಯ ಕತೆ ಹೇಳಬೇಕು ಅಂದಾಗ ಅಥವಾ ಅಂಥ ಒಳ್ಳೆಯ ಕತೆ ಸಿಕ್ಕಾಗ ಅದನ್ನು ಎಲ್ಲಿ ಹೇಳಿದರೆ ಚೆನ್ನಾಗಿರುತ್ತದೆ ಎನ್ನುವುದರ ಮೇಲೆ ನಿಮ್ಮ ಪ್ರಶ್ನೆಗೆ ಉತ್ತರವಿದೆ.