'ಪ್ರೇಮದ ಊರಲಿ' ಸಿನಿಮಾ 100 ಕೋಟಿ ರೂ. ಗಳಿಸಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಆದರೆ, ಚಿತ್ರದ ಶೂಟಿಂಗ್ ನಡೆದ ಹಾಸನದ ಸೀಗೆಗುಡ್ಡಕ್ಕೆ ಪ್ರವಾಸಿಗರ ಲಗ್ಗೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೆ, ಜನದಟ್ಟಣೆಯಿಂದಾಗಿ ಅಲ್ಲಿನ ಮಳೆ ಮಲ್ಲೇಶ್ವರ ದೇವರ ತ್ರಿಶೂಲ ಹಿಡಿದ ಕೈ ಮುರಿದು ಬಿದ್ದಿದೆ.

ಪ್ರೇಮದ ಊರಲಿ ಹೊಸಬರ ಸಿನಿಮಾ ಭರ್ಜರಿ ಪ್ರದರ್ಶನವಾಗುತ್ತಿದೆ. ರಾಜ್ಯಾದ್ಯಂತ 30 ದಿನಗಳ ನಂತರವೂ ಹೌಸ್‌ಫುಲ್ ಪ್ರದರ್ಶನವಾಗುತ್ತಿದ್ದು, ಈಗಾಗಲೇ 100 ಕೋಟಿ ರೂ. ಆದಾಯ ಗಳಿಸುವ ಮೂಲಕ ಬಾಕ್ಸ್ ಆಫೀಸ್ ದಾಖಲೆ ಮಾಡಿದೆ. ಆದರೆ, ಸಿನಿಮಾ ಶೂಟಿಂಗ್ ವೇಳೆ ಇದ್ದ ಸೀಗೆಗುಡ್ಡದ ಮಳೆ ಮಲ್ಲೇಶ್ವರ ದೇವರ ತ್ರಿಶೂಲವನ್ನು ಹಿಡಿದಿದ್ದ ಕೈ ಮುರಿದು ಬಿದ್ದಿದೆ. ಇನ್ನು ಸೀಗೆಗುಡ್ಡಕ್ಕೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದ್ದು, ಹಳ್ಳಿಯ ವಾತಾವರಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಟ್ರಾಫಿಕ್ ಜಾಮ್

ಪ್ರೇಮದ ಊರಲಿ ಸಿನಿಮಾವನ್ನು ಹಾಸನ ಜಿಲ್ಲೆಯ ಸೀಗೆಗುಡ್ಡದ ಬಳಿ ಶೂಟಿಂಗ್ ಮಾಡಲಾಗಿದೆ. ಇದೇ ಸೀಗೆಗುಡ್ಡದಲ್ಲಿ ಒಂದು ಮಳೆ ಮಲ್ಲೇಶ್ವರ ದೇವಸ್ಥಾನವೂ ಇತ್ತು. ಈ ದೇವಸ್ಥಾನದ ಬಳಿ ನಿಂತು ನೋಡಿದತೆ ಹಚ್ಚ ಹಸಿರಿನ ತಾಣ, ನೈಸರ್ಗಿಕ ರಮಣೀಯ ನೋಟ ಕಾಣಿಸುತ್ತಿತ್ತು. ಇನ್ನು ಪ್ರೇಮದ ಊರಲಿ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಈ ಸಿನಿಮಾ ಶೂಟಿಂಗ್ ಸ್ಥಳ ಭಾರೀ ಪ್ರಸಿದ್ಧಿ ಪಡೆಯಿತು. ಈ ಹಳ್ಳಿಗಾಡಿನ ಗುಡ್ಡದ ಪ್ರದೇಶ ಹಾಗೂ ಮಳೆ ಮಲ್ಲೇಶ್ವರ ದೇವಸ್ಥಾನಕ್ಕೆ ಪ್ರವಾಸಕ್ಕೆ ಬರುವವರ ಸಂಖ್ಯೆ ದಿನೇ ದಿನೇ ತೀವ್ರ ಹೆಚ್ಚಾಯಿತು. ಇದೀಗ ಅಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಶಿವನ ಕೈ ಮುರಿದು ಬಿದ್ದಿದೆ

ಬೆಂಗಳೂರಿನಿಂದ 3-4 ಗಂಟೆ ದೂರದಲ್ಲಿರುವ ಈ ಪ್ರದೇಶಕ್ಕೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಲ್ಲಿದೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದ್ದರಿಂದ ಎಲ್ಲರೂ ತಮ್ಮ ಖಾಸಗಿ ವಾಹನಗಳಲ್ಲಿಯೇ ಅಲ್ಲಿಗೆ ಹೋಗುತ್ತಿದ್ದಾರೆ. ಇದೀಗ ಸೀಗೆ ಗುಡ್ಡದಲ್ಲಿ ಎಲ್ಲಿ ನೋಡಿದರೂ ಕಾರು, ಬೈಕ್, ಟ್ರ್ಯಾಕ್ಟರ್ ಸೇರಿದಂತೆ ವಾಹನಗಳು ಗಿಜಿಗುಡುತ್ತಿವೆ. ಎಲ್ಲಿ ನೋಡಿದರೂ ಜನರು ಕಿಕ್ಕಿರಿದು ತುಂಬಿ ಹೋಗಿದ್ದಾರೆ. ಆದರೆ, ಅತಿಯಾದ ಜನರು ಹಾಗೂ ಪ್ರವಾಸಿಗರ ಭೇಟಿಯಿಂದಾಗಿ ಅಲ್ಲಿನ ಪ್ರಸಿದ್ಧ ಮಳೆ ಮಲ್ಲೇಶ್ವರ ದೇವರ ತ್ರಿಶೂಲವನ್ನು ಹಿಡಿದ ಒಂದು ಕೈ ಮುರಿದು ಬಿದ್ದಿದೆ. ಹಲವು ಯೂಟ್ಯೂಬರ್‌ಗಳು ಈ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದಾರೆ. ಪ್ರೇಮದ ಊರಲಿ ಸಿನಿಮಾದಲ್ಲಿದ್ದ ಮಳೆ ಮಲ್ಲೇಶ್ವರ ದೇವರ ಕೈಲಿದ್ದ ತ್ರಿಶೂಲ ಮುರಿದು ಬಿದ್ದಿದ್ದು, ಅದು ದೇವರ ಹಿಂಭಾಗದಲ್ಲಿ ಬಿದ್ದಿದೆ ಎಂಬುದನ್ನು ತೋರಿಸಿದ್ದಾರೆ.

ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳಲ್ಲಿ ಬಂದು ಸಿನಿಮಾ ವೀಕ್ಷಣೆ

ಹೌದು, ಪ್ರೇಮದ ಊರಲಿ ಸಿನಿಮಾ ಇದೀದ ಕನ್ನಡ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳೇ ಮಕಾಡೆ ಮಲಗುತ್ತಿದ್ದವು. ಇದರಿಂದ ಕನ್ನಡ ಚಿತ್ರಗಳನ್ನು ಜನರು ನೋಡುತ್ತಿಲ್ಲ. ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಸಿನಿಮಾದವರು ಆರೋಪ ಮಾಡುತ್ತಿದ್ದರು. ಆದರೆ, ಸಿನಿಮಾ ಪ್ರೇಕ್ಷಕರ ಮೇಲೆ ಬಂದಿದ್ದ ಎಲ್ಲ ಆರೋಪವನ್ನು ಪ್ರೇಮದ ಊರಲಿ ಸಿನಿಮಾ ದೂರ ಮಾಡಿದೆ. ಕಾರಣ, ಈ ಸಿನಿಮಾವನ್ನು ನೋಡುವುದಕ್ಕೆ ಈಗಲೂ ಜನರು ಹೌಸ್‌ಫುಲ್ ಆಗಿ ಬರುತ್ತಿದ್ದಾರೆ. ಹಳ್ಳಿಗಳಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಬಂದು ಸಿನಿಮಾ ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ.