ಪ್ರೇಮದ ಊರಲಿ ಸಿನಿಮಾ ಇದೀಗ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲೇ ಬಾರಿ ಸದ್ದು ಮಾಡುತ್ತಿದೆ. ಭರ್ಜರಿ ಕಲೆಕ್ಷನ್ ಮೂಲಕ ಸಾಗುತ್ತಿದೆ. ಯಶಸ್ಸಿನ ಅಲೆಯಲ್ಲಿರುವ ಪ್ರೇಮದ ಊರಲಿ ಸಿನಿಮಾ ನಟಿ ಇಳಾ ವಿಟ್ಲಾ ಕಣ್ಣೀರಿಟ್ಟಿದ್ದೇಕೆ?

ಬೆಂಗಳೂರು (ಅ.20) ಪ್ರೇಮದ ಊರಲಿ ಸಿನಿಮಾ ಸ್ಯಾಂಡಲ್‌ವುಡ್ ಮಾತ್ರವಲ್ಲ, ಕಡಿಮೆ ಬಜೆಟ್‌ನಲ್ಲಿ ಭರ್ಜರಿ ಗಳಿಕೆ ಕಂಡ ದೇಶದ ಸಿನಿಮಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ರಾಜ್ಯದೆಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿರುವ ಪ್ರೇಮದ ಊರಲಿ ಸಿನಿಮಾಗೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಿದೆ. ಸಿನಿಮಾ ಯಶಸ್ಸಿನ ಹಿಂದೆ ಅವಿರತ ಪ್ರಯತ್ನ, ಪರಿಶ್ರಮ, ಹಲವು ತ್ಯಾಗಗಳಿವೆ. ಪ್ರೇಮದ ಊರಲಿ ಸಿನಿಮಾ ಶೂಟಿಂಗ್, ಹಿಂದಿನ ನೋವಿನ ಘಟನೆಗಳನ್ನು ನೆನೆದು ನಟಿ ಇಳಾ ವಿಟ್ಲಾ ಭಾವುಕರಾಗಿದ್ದಾರೆ. ತಾಳಿ ಅಡವಿಟ್ಟ ಪರಿಸ್ಥಿತಿ ನೆನೆದು ಇಳಾ ವಿಟ್ಟಾ ಕಣ್ಣೀರಿಟ್ಟಿದ್ದಾರೆ.

ತಾಳಿ ಅಡವಿಟ್ಟ ಘಟನೆ ನೆನದು ಭಾವುಕರಾದ ಇಳಾ ವಿಟ್ಲಾ

ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಇಳಾ ವಿಟ್ಲಾ ತೆರೆ ಹಿಂದಿನ ಘಟನೆಗಳನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕ ಮನೋಜ್ ಪ್ರೇಮದ ಊರಲಿ ಸಿನಿಮಾಗೆ ಕೈಯಲ್ಲಿರುವ ಹಣ, ಸಾಲ ಪಡೆದು, ಕೊನೆಗೆ ತಾಳಿ ಅಡವಿಟ್ಟು ಶೂಟಿಂಗ್ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು ಅನ್ನೋ ನೋವಿನ ಘಟನೆಯನ್ನು ಸಿನಿಮಾದಲ್ಲಿ ಅಜ್ಜಿ ಪಾತ್ರ ಮಾಡಿದ ಇಳಾ ವಿಟ್ಲಾ ನೆನೆದು ಭಾವುಕರಾಗಿದ್ದಾರೆ. ಶೂಟಿಂಗ್ ವೇಳೆ ಮನೋಜ್ ಅವರ ಆರ್ಥಿಕ ಪರಿಸ್ಥಿತಿ ಕುರಿತು ನನಗೆ ಗೊತ್ತಿರಲಿಲ್ಲ. ಆದರೆ ಸೆಟ್‌ನಲ್ಲಿ ಅವರು ಅತೀವವಾಗಿ ಟೆನ್ಶನ್ ಆಗಿದ್ದರು. ಹಲವು ಬಾರಿ ರೇಗಾಡುತ್ತಿದ್ದರು. ನಿಂತಲ್ಲೇ ನಿಲ್ಲುತ್ತಿರಲಿಲ್ಲ. ಆದರೆ ಇದರ ಹಿಂದೆ ತಾಳಿ ಅಡವಿಟ್ಟ ಘಟನೆ ಇತ್ತು ಅನ್ನೋದು ಅಂದು ಗೊತ್ತಿರಲಿಲ್ಲ ಎಂದು ಇಳಾ ವಿಟ್ಟ ಹೇಳಿದ್ದಾರೆ.

ಈ ಪರಿಸ್ಥಿತಿ ಯಾರಿಗೂ ಬರಬಾರದು

ಪ್ರೇಮದ ಊರಲಿ ಕೊನೆಯ ಸೀನ್ ಶೂಟಿಂಗ್ ಮಾಡಲು ನಿರ್ದೇಶಕ ಮನೋಜ್ ಕುಮಾರ್ ತನ್ನ ತಾಯಿಯ ತಾಳಿಯನ್ನೇ ಅಡವಿಟ್ಟಿದ್ದರು. ಈ ಕುರಿತು ಮನೋಕ್ ಕುಮಾರ್ ಅವರ ಸಂದರ್ಶನದಲ್ಲೇ ನೋಡಿ ತಿಳಿಯಿತು. ವಿಚಾರ ತಿಳಿದ ತೀವ್ರವಾಗಿ ಬೇಸರವಾಯಿತು ಎಂದು ಇಳಾ ವಿಟ್ಲ ಹೇಳಿದ್ದಾರೆ. ಅಂತಹ ತಂದೆ ತಾಯಿ ಸಿಗಲು ಪುಣ್ಯ ಮಾಡಿರಬೇಕು. ಕಾರಣ ದುಡ್ಡು ಖರ್ಚು ಮಾಡುವ ಯಾವುದೇ ವಿಚಾರಕ್ಕೂ ತಂದೆ ತಾಯಿ ಬೇಡ ಎನ್ನುತ್ತಾರೆ. ಅದರಲ್ಲಿ ತನ್ನ ತಾಳಿಯನ್ನೇ ಅಡವಿಟ್ಟು ಮಗನ ಸಿನಿಮಾ ಶೂಟಿಂಗ್‌ಗೆ ದುಡ್ಡು ನೀಡುತ್ತಾರೆ ಎಂದರೆ ಕೇಳಿ ನೋವಾಯಿತು. ಈ ಪರಿಸ್ಥಿತಿ ಯಾರಿಗೂ ಬರಬಾರದು. ತಾಯಿ ಮನಸ್ಸು, ಮಕ್ಕಳು..ಎಂದು ಇಳಾ ವಿಟ್ಲಾ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ತಾಯಿಗೆ ತಾಳಿ ಅತ್ಯಂತ ಮುಖ್ಯ. ಮಗ ಮುಂದಿನ ದಿನ ಏನೋ ಆಗುತ್ತಾನೆ, ಬೆಳೆಯುತ್ತಾನೆ ಎಂಬ ಆತ್ಮವಿಶ್ವಾಸದ ಮುಂದೆ ಅವರ ತಾಳಿಯೂ ದೊಡ್ಡ ವಿಚಾರವಾಗಿ ಆಕೆಗೆ ಕಾಣಲಿಲ್ಲ. ಮಗನ ಸಾಧನೆಗೆ ಅಡವಿಡಲು ಕೊಟ್ಟಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಒದ್ದಾಡುವುದನ್ನು ನಾನು ನೋಡಿದ್ದೇನೆ. ಸಿನಿಮಾ ರಿಲೀಸ್ ದಿನ ನನಗೆ ಬೇರೆ ಶೂಟಿಂಗ್ ಇತ್ತು . ಹಾಗಾಗಿ ಥಿಯೇಟರ್‌ನಲ್ಲಿ ಇರಲು ಸಾಧ್ಯವಾಗಲಿಲ್ಲ. ಮನೋಜ್ ಕುಮಾರ್ ನನಗೆ ಕರೆ ಮಾಡಿ, ನಮ್ಮ ಸಿನಿಮಾ ಮೇಡಂ ಇದು, ನೀವು ಇರಬೇಕಿತ್ತು ಎಂದಿದ್ದರು. ಮನೋಜ್ ಕುಮಾರ್‌ಗೆ ಆರೋಗ್ಯ ಸರಿ ಇಲ್ಲದಿದ್ದರೂ ಅವರು ಖುದ್ದು ತಮ್ಮ ಸಿನಿಮಾ ಯಶ್ಸಸಿಗೆ ಕಾದು ಕುಳಿತಿದ್ದರು ಎಂದು ಇಳಾ ವಿಟ್ಲಾ ಹೇಳಿದ್ದಾರೆ.

YouTube video player