ನಟಿ ಪೂಜಾ ಗಾಂಧಿ ಮತ್ತು ವಿಜಯ್ ಘೋರ್ಪಡೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಪೂಜಾ ಗಾಂಧಿ ಕನ್ನಡದಲ್ಲಿಯೇ ಶುಭಾಶಯ ತಿಳಿಸಿ ಕನ್ನಡಿಗರ ಮನ ಗೆದ್ದಿದ್ದಾರೆ. ಮುಂಗಾರು ಮಳೆ ಖ್ಯಾತಿಯ ನಟಿ ಕನ್ನಡ ಭಾಷೆ ಮತ್ತು ನಾಡಿನ ಬಗ್ಗೆ ವಿಶೇಷ ಪ್ರೇಮ ಹೊಂದಿದ್ದಾರೆ.
ಬೆಂಗಳೂರು: ಮಳೆ ಹುಡುಗಿ ಎಂದೇ ಫೇಮಸ್ ಆಗಿರೋ ನಟಿ ಪೂಜಾ ಗಾಂಧಿ (Pooja Gandhi) ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. 2023ರ ನವೆಂಬರ್ 29ರಂದು ಬೆಂಗಳೂರಿನಲ್ಲಿ ನಟಿ ಪೂಜಾ ಅವರು, ಕುವೆಂಪು ಅವರ 'ಮಂತ್ರ ಮಾಂಗಲ್ಯ' ಪರಿಕಲ್ಪನೆಯಂತೆ ಸರಳವಾಗಿ ವಿಜಯ್ ಘೋರ್ಪಡೆ (Vijay Ghorpade) ಅವರನ್ನು ಮದುವೆಯಾಗಿದ್ದಾರೆ. ಇವರ ಪತಿ ಬೆಂಗಳೂರಿನ ಲಾಜಿಸ್ಟಿಕ್ಸ್ ಕಂಪನಿ ಮಾಲೀಕ ಮತ್ತು ಉದ್ಯಮಿಯಾಗಿದ್ದಾರೆ. ಇಂದು ದಂಪತಿ 3ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಕುರಿತು ನಟಿ ಪೂಜಾ ಪತಿಯ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಅದರಲ್ಲಿ ಅವರು, ನನ್ನ ಪ್ರೀತಿಯ ವಿಜಯ್, ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಜೊತೆಗಿದ್ದು, ನನ್ನ ಕನಸುಗಳಿಗೆ ರೆಕ್ಕೆ ನೀಡಿ, ನನ್ನ ನಗು-ನೋವುಗಳಿಗೆ ಜೊತೆಯಾದ ನಿನಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನಿನ್ನ ಜೊತೆಗಿನ ಈ ಬದುಕಿನ ಪಯಣ ಹೀಗೆಯೇ ಪ್ರೀತಿ, ನಂಬಿಕೆ ಮತ್ತು ನಗುವಿನಿಂದ ತುಂಬಿರಲಿ. ಎಷ್ಟೇ ಜನ್ಮಗಳಿದ್ದರೂ ನಿನ್ನ ಕೈ ಹಿಡಿದೇ ನಡೆಯುವ ಆಸೆ ನನ್ನದು. ನಮಗೆ ನಮ್ಮ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಕನ್ನಡದಲ್ಲಿಯೇ ಬರೆದಿದ್ದಾರೆ. ಸಾಮಾನ್ಯವಾಗಿ ಬಹುತೇಕ ಎಲ್ಲರೂ ಇಂಗ್ಲಿಷ್ನಲ್ಲಿಯೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವುದು ಇದೆ. ಅದರಲ್ಲಿಯೂ ಬಹುತೇಕ ಸೆಲೆಬ್ರಿಟಿಗಳಿಗೆ ಕನ್ನಡ ದೂರವೇ ಸರಿ. ಆದರೆ ಕನ್ನಡನಾಡಿನಲ್ಲಿ ಹುಟ್ಟದಿದ್ದರೂ ಪೂಜಾ ಗಾಂಧಿ ಸದಾ ಕನ್ನಡ ಪ್ರೇಮ ಮೆರೆಯುತ್ತಲೇ ಬಂದವರು. ಆದ್ದರಿಂದ ಈಗ ಅವರು ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ.
ನಟಿಯ ಕುರಿತು...
ಇನ್ನು ನಟಿ ಕುರಿತು ಹೇಳುವುದಾದರೆ, ಪೂಜಾ ಗಾಂಧಿ (Pooja Gandhi) ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡಿಗರ ಎದೆಗೆ ಲಗ್ಗೆ ಇಟ್ಟವರು. ಉತ್ತರ ಪ್ರದೇಶದ ಹುಡುಗಿ ಪೂಜಾ ಗಾಂಧಿ. ಹುಟ್ಟಿ ಬೆಳೆದದ್ದೆಲ್ಲಾ ಉತ್ತರ ಪ್ರದೇಶದಲ್ಲಿ, ಕರಿಯರ್ ಆರಂಭಿಸಿದ್ದು ಬಾಲಿವುಡ್ ಸಿನಿಮಾ ಮೂಲಕ. ಕತ್ರೋಂಕಿ ಕಿಲಾಡಿ ಎನ್ನುವ ಹಿಂದಿ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ಪೂಜಾ ಬಳಿಕ ಒಂದಷ್ಟು ಹಿಂದಿ ಸಿನಿಮಾ, ಸೀರಿಯಲ್, ಹಾಗೂ ತಮಿಳು, ತೆಲುಗು, ಮಲಯಾಲಂ ಹಾಗೂ ಬೆಂಗಾಳಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದರೆ ಇವರಿಗೆ ಹೆಸರು ತಂದುಕೊಟ್ಟಿದ್ದು ಸ್ಯಾಂಡಲ್ ವುಡ್.
ಮುಂಗಾರು ಮಳೆ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ (Golden Star Ganesh) ನಾಯಕಿಯಾಗಿ ನಟಿಸುವ ಮೂಲಕ ರಾತ್ರೋ ರಾತ್ರಿ ಸ್ಟಾರ್ ಪಟ್ಟ ಪಡೆದರು. ನಂತರ ಮಿಲನಾ, ದಂಡುಪಾಳ್ಯದಂತಹ ಹಿಟ್ ಸಿನಿಮಾ ಸೇರಿ 45ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡತಿಯೇ ಆಗಿದ್ದಾರೆ ಈ ಬೆಡಗಿ. ಪೂಜಾ ಗಾಂಧಿ ಕೇವಲ ಕನ್ನಡ ಸಿನಿಮಾಗಳಲ್ಲಿ ನಟಿಸುವುದು ಮಾತ್ರ ಅಲ್ಲ, ಕನ್ನಡಿಗರು ತನಗೆ ಕೊಟ್ಟ ಪ್ರೀತಿ ಹಾಗೂ ಕನ್ನಡ ಸಿನಿಮಾದಲ್ಲಿ (Kananda Films)ತನಗೆ ಸಿಕ್ಕ ಮಾನ್ಯತೆಗಾಗಿ, ಕರ್ನಾಟಕದಲ್ಲೇ ಉಳಿದುಕೊಂಡಿರುವ ಪೂಜಾ, ಕನ್ನಡ ತರಗತಿಗೆ ತೆರಳಿ ಕನ್ನಡ ಬರೆಯೋದನ್ನು ಕೂಡ ಕಲಿತರು. ಕನ್ನಡ ಅಕ್ಷರಮಾಲೆಯಿಂದ ಆರಂಭಿಸಿದ ನಟಿ ಈಗ ಕನ್ನಡದ ಸಾಹಿತ್ಯ ಪುಸ್ತಕಗಳನ್ನು ನಿರರ್ಗಳವಾಗಿ ಓದುವಷ್ಟು ಚತುರರಾಗಿದ್ದಾರೆ. ಕನ್ನಡ ಪರ ಹೋರಾಟಗಳಲ್ಲೂ ಪೂಜಾ ಗಾಂಧಿ ಭಾಗವಹಿಸುತ್ತಿರುತ್ತಾರೆ. ಅಷ್ಟೇ ಅಲ್ಲ ಈ ಹಿಂದೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹೊಸ ತಲೆಮಾರಿನ ಯುವಜನರು ಉದ್ಯೋಗ ಪಡೆಯಲು ಆಧುನಿಕ ಜಗತ್ತು ನಿರೀಕ್ಷಿಸುವ ಕೌಶಲ್ಯಕ್ಕೆ ತಕ್ಕಂತೆ ಹೇಗೆ ತಯಾರು ಮಾಡಬೇಕೆಂಬುದರ ಕುರಿತು ಪೂಜಾಗಾಂಧಿ ಅಧ್ಯಯನ ನಡೆಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವರದಿ ಕೂಡ ಸಲ್ಲಿಸಿದ್ದರು.












