Bollywood: ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ಪುತ್ರಿ ದಿಶಾನಿ ಚಕ್ರವರ್ತಿ ಅವರ ನಿಶ್ಚಿತಾರ್ಥ ನಡೆದಿದೆ. ತಮ್ಮ ಬಹುಕಾಲದ ಗೆಳೆಯನ ಜೊತೆ ಅವರು ಎಂಗೇಜ್ ಆಗಿದ್ದು, ಮದುವೆ ದಿನಾಂಕವನ್ನೂ ಘೋಷಿಸಿದ್ದಾರೆ. ಯಾರು ಈ ಹುಡುಗ? ಇಲ್ಲಿದೆ ವಿವರ.

ಬಾಲಿವುಡ್‌ನಲ್ಲಿ ಮತ್ತೊಂದು ಮದುವೆ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಹಿರಿಯ ನಟ ಮಿಥುನ್ ಚಕ್ರವರ್ತಿ ಮನೆಯಲ್ಲಿ ಸದ್ಯದಲ್ಲೇ ಶಹನಾಯಿ ಸದ್ದು ಕೇಳಿಬರಲಿದೆ. ಅವರ ಮಗಳು ದಿಶಾನಿ ಚಕ್ರವರ್ತಿ, ತಮ್ಮ ಬಹುಕಾಲದ ಬಾಯ್‌ಫ್ರೆಂಡ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದಿಶಾನಿ ತಮ್ಮ ಎಂಗೇಜ್‌ಮೆಂಟ್ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಇವು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ರೊಮ್ಯಾಂಟಿಕ್ ಫೋಟೋಗಳನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಜೋಡಿಗೆ ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ನಿಶ್ಚಿತಾರ್ಥದ ಜೊತೆಗೆ ದಿಶಾನಿ ತಮ್ಮ ಮದುವೆ ದಿನಾಂಕವನ್ನೂ ಬಹಿರಂಗಪಡಿಸಿದ್ದಾರೆ. ಹಾಗಿದ್ರೆ, ಮಿಥುನ್ ಮಗಳ ಮದುವೆ ಯಾವಾಗ? ಇಲ್ಲಿದೆ ಪೂರ್ತಿ ಡೀಟೇಲ್ಸ್...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮದುವೆ ಸಂಭ್ರಮದಲ್ಲಿ ಮಿಥುನ್ ಚಕ್ರವರ್ತಿ ಕುಟುಂಬ

ಬಾಲಿವುಡ್‌ನ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ಪುತ್ರಿ ದಿಶಾನಿ ಚಕ್ರವರ್ತಿ ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಲು ಸಿದ್ಧರಾಗಿದ್ದಾರೆ. ಈ ಸ್ಟಾರ್ ಕಿಡ್ ಇತ್ತೀಚೆಗೆ ತಮ್ಮ ಬಹುಕಾಲದ ಗೆಳೆಯ ಮೈಲ್ಸ್ ಮ್ಯಾಂಟ್ಜಾರಿಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಮವಾರ ಇನ್‌ಸ್ಟಾಗ್ರಾಮ್‌ನಲ್ಲಿ ಈ ಖುಷಿ ಸುದ್ದಿ ಹಂಚಿಕೊಂಡ ದಿಶಾನಿ, ಪ್ರಪೋಸಲ್‌ನ ಹಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಮೈಲ್ಸ್ ಮಂಡಿಯೂರಿ ದಿಶಾನಿಗೆ ಮದುವೆಯ ಪ್ರಪೋಸಲ್ ಇಟ್ಟಿದ್ದಾರೆ.

ಇನ್ನೊಂದು ಫೋಟೋದಲ್ಲಿ ದಿಶಾನಿ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ತೋರಿಸುತ್ತಾ ಸಂಭ್ರಮಿಸಿದ್ದಾರೆ. ಕೊನೆಯ ಫೋಟೋದಲ್ಲಿ ಈ ಜೋಡಿ ರೊಮ್ಯಾಂಟಿಕ್ ಆಗಿ ಕಿಸ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ, "06.12.2026. ಜೀವನಪೂರ್ತಿ ಜೊತೆಯಾಗಿ ಸಾಗುವ ನಿರ್ಧಾರ. ಇದುವರೆಗಿನ ಅತೀ ಸುಲಭದ ನಿರ್ಧಾರ ಇದಾಗಿತ್ತು," ಎಂದು ಬರೆದುಕೊಂಡಿದ್ದಾರೆ. ಈ ಘೋಷಣೆ ಅಭಿಮಾನಿಗಳು ಮತ್ತು ಗಣ್ಯರ ಗಮನ ಸೆಳೆದಿದೆ. ಸೆಲಿನಾ ಜೇಟ್ಲಿ ಜೊತೆಗೆ ದಿಶಾನಿ ಸಹೋದರರು ಕೂಡ ಪೋಸ್ಟ್ ಲೈಕ್ ಮಾಡಿ ಶುಭ ಹಾರೈಸಿದ್ದಾರೆ.

ಯಾರು ಮಿಥುನ್ ಚಕ್ರವರ್ತಿ ಅವರ ಭಾವಿ ಅಳಿಯ?

ದಿಶಾನಿ ಚಕ್ರವರ್ತಿ ಅವರ ನಿಶ್ಚಿತಾರ್ಥದ ನಂತರ, ಮಿಥುನ್ ಅವರ ಭಾವಿ ಅಳಿಯ ಯಾರು, ಏನು ಮಾಡುತ್ತಾರೆ ಎಂಬ ಪ್ರಶ್ನೆಗಳು ಎದ್ದಿವೆ. ದಿಶಾನಿ, ಮೈಲ್ಸ್ ಮ್ಯಾಂಟ್ಜಾರಿಸ್ ಎಂಬುವವರನ್ನು ವರಿಸಲಿದ್ದಾರೆ. ಮೈಲ್ಸ್ ಅವರ ಇನ್‌ಸ್ಟಾ ಬಯೋ ಪ್ರಕಾರ, ಅವರು ಒಬ್ಬ ಸ್ಟೆಡಿಕಾಮ್ ಆಪರೇಟರ್ ಮತ್ತು ಕಲರಿಸ್ಟ್ ಆಗಿ ಕೆಲಸ ಮಾಡುತ್ತಾರೆ. ಈ ಜೋಡಿ ತಮ್ಮ ಸಂಬಂಧವನ್ನು ಹೆಚ್ಚು ಬಹಿರಂಗಪಡಿಸಿರಲಿಲ್ಲ. ಆದರೆ, ನಿಶ್ಚಿತಾರ್ಥದ ಫೋಟೋಗಳು ಅವರ ವಿಶೇಷ ಕ್ಷಣಗಳ ಝಲಕ್ ನೀಡಿ ಅಭಿಮಾನಿಗಳನ್ನು ಖುಷಿಪಡಿಸಿವೆ. ದಿಶಾನಿ ಬಗ್ಗೆ ಹೇಳುವುದಾದರೆ, ಅವರು ಮಿಥುನ್ ಮತ್ತು ಅವರ ಪತ್ನಿ, ನಟಿ ಯೋಗಿತಾ ಬಾಲಿ ಅವರ ದತ್ತು ಪುತ್ರಿ. ಈ ದಂಪತಿಗೆ ದಿಶಾನಿ ಸೇರಿ ಒಟ್ಟು ನಾಲ್ಕು ಮಕ್ಕಳು. ಮೂವರು ಗಂಡು ಮಕ್ಕಳಿದ್ದು, ಅವರ ಹೆಸರು ಮಿಮೋಹ್, ಉಶ್ಮೆ ಮತ್ತು ನಮಾಶಿ.