ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಯಶ್ ಮಾತ್ರವಲ್ಲದೆ, ಕಿಯಾರಾ ಅಡ್ವಾಣಿ ಅವರ ಅಭಿನಯ ಹಾಗೂ ಪಾತ್ರದ ಬಗ್ಗೆಯೂ ಭಾರೀ ಚರ್ಚೆ ನಡೆಯುತ್ತಿದೆ. ಟಾಕ್ಸಿಕ್’ ಸಿನಿಮಾದ ಟೀಸರ್ ಮತ್ತು ಟ್ರೈಲರ್‌ನಲ್ಲಿ ಕಿಯಾರಾ ಅಡ್ವಾಣಿ ಅವರ ಪಾತ್ರಕ್ಕೆ ಜೀವ ತುಂಬಿದ ಮತ್ತೊಂದು ಪ್ರಮುಖ ಧ್ವನಿಯ ಕಥೆ ಇದೀಗ ಗಮನ ಸೆಳೆಯುತ್ತಿದೆ.
ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಯಶ್ ಅಭಿಮಾನಿಗಳು ಬಹು ದಿನಗಳಿಂದ ಕಾದಿದ್ದ ಕ್ಷಣ ಕೊನೆಗೂ ಬಂದಿದೆ. ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದು, ರಾಕಿಂಗ್ ಸ್ಟಾರ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಯಶ್ ಮಾತ್ರವಲ್ಲದೆ, ಕಿಯಾರಾ ಅಡ್ವಾಣಿ ಅವರ ಅಭಿನಯ ಹಾಗೂ ಪಾತ್ರದ ಬಗ್ಗೆಯೂ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ಟಾಕ್ಸಿಕ್’ ಸಿನಿಮಾದ ಟೀಸರ್ ಮತ್ತು ಟ್ರೈಲರ್‌ನಲ್ಲಿ ಕಿಯಾರಾ ಅಡ್ವಾಣಿ ಅವರ ಪಾತ್ರಕ್ಕೆ ಜೀವ ತುಂಬಿದ ಮತ್ತೊಂದು ಪ್ರಮುಖ ಧ್ವನಿಯ ಕಥೆ ಇದೀಗ ಗಮನ ಸೆಳೆಯುತ್ತಿದೆ. ಅದು ಡಬ್ಬಿಂಗ್ ಕಲಾವಿದೆ ರಿಚಾ ಶಾಸ್ತ್ರಿ ಅವರದ್ದು.
10 ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಿಚಾ, ಕೊರೊನಾ ನಂತರ ಡಬ್ಬಿಂಗ್ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಪಾಡ್‌ಕಾಸ್ಟ್ ನಲ್ಲ ಮಾತನಾಡಿದ ಅವರು, ಟಾಕ್ಸಿಕ್ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ, 120ಕ್ಕೂ ಹೆಚ್ಚು ಜನರ ನಡುವೆ ಆಡಿಷನ್ ಗೆದ್ದಿದ್ದು ಹೇಗೆ ಹಾಗೂ ಯಶ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.
120 ಜನರ ನಡುವೆ ರಿಚಾಗೆ ಒಲಿದ ಅದೃಷ್ಟ
ಟಾಕ್ಸಿಕ್’ ಸಿನಿಮಾದ ಡಬ್ಬಿಂಗ್‌ಗಾಗಿ ಆಕಾಶ್ ಸ್ಟುಡಿಯೋದಿಂದ ಜಯದೇವ್ ಮೋಹನ್ ಅವರು ರಿಚಾ ಅವರಿಗೆ ಕರೆ ಮಾಡಿದ್ದರು. ಸ್ಯಾಂಪಲ್ ನೀಡಲು ತೆರಳಿದ್ದ ಅವರು, ತಾರಾ ಸುತಾರಿಯಾ ಮತ್ತು ನಯನತಾರಾ ಪಾತ್ರಗಳಿಗೆ ಧ್ವನಿ ನೀಡಿ ಬಂದಿದ್ದರು. ಆದರೆ ಅಲ್ಲಿಗೆ ಈಗಾಗಲೇ 100ರಿಂದ 120 ಜನರು ಆಡಿಷನ್ ನೀಡಿದ್ದರು ಎಂಬ ವಿಚಾರ ತಿಳಿದಾಗ, ತಾನು ಸೆಲೆಕ್ಟ್ ಆಗುವ ಬಗ್ಗೆ ಇದ್ದ ಆತ್ಮವಿಶ್ವಾಸ ಕ್ಷಣಾರ್ಧದಲ್ಲಿ ಕಡಿಮೆಯಾಯಿತು ಎಂದು ರಿಚಾ ನೆನಪಿಸಿಕೊಂಡಿದ್ದಾರೆ. ಆದರೂ ಅವರ ಪ್ರತಿಭೆ ಕೈಬಿಡಲಿಲ್ಲ. ತಾರಾ ಸುತಾರಿಯಾ ಪಾತ್ರಕ್ಕೆ ರಿಚಾ ಅವರ ಧ್ವನಿ ಓಕೆಯಾಯಿತು.
ಹುಟ್ಟುಹಬ್ಬದ ದಿನ ಬಂದ ಯಶ್ ಕಾಲಿಂಗ್
ತಾರಾ ಪಾತ್ರಕ್ಕೆ ಧ್ವನಿ ಅಂತಿಮಗೊಂಡ ಬಳಿಕ ರಿಚಾ ತಮ್ಮ ಮನೆಯಲ್ಲಿ ಹುಟ್ಟುಹಬ್ಬದ ಗೆಟ್-ಟುಗೆದರ್ ಆಯೋಜಿಸಿದ್ದರು. ಆಗ ಸಂಜೆ ಸುಮಾರು 7:30ಕ್ಕೆ ಬಂದ ಒಂದು ಫೋನ್ ಕಾಲ್ ಅವರ ಇಡೀ ದಿನವನ್ನೇ ಬದಲಿಸಿತು. ಜಯದೇವ್ ಮೋಹನ್ ಕರೆ ಮಾಡಿ, ಗೀತು ಮೋಹನ್‌ದಾಸ್ ಮತ್ತು ಯಶ್ ಅವರು ತಮ್ಮ ಧ್ವನಿಯನ್ನು ಇಷ್ಟಪಟ್ಟಿದ್ದಾರೆ. ಕಿಯಾರಾ ಅಡ್ವಾಣಿ ಅವರ ಪಾತ್ರಕ್ಕೂ ಧ್ವನಿ ನೀಡಲು ಮತ್ತೊಮ್ಮೆ ಟ್ರೈ ಮಾಡಬೇಕು ಎಂದು ತಿಳಿಸಿದ್ದರು. ಈ ಸುದ್ದಿ ಕೇಳಿದ ರಿಚಾ, ಖುಷಿಯಿಂದ ತಕ್ಷಣ ಆಕಾಶ್ ಸ್ಟುಡಿಯೋಗೆ ತೆರಳಿದ್ದರು.
ಕಿಯಾರಾ ಪಾತ್ರಕ್ಕೆ ಸಿಕ್ಕಿದ್ದು ಸುಲಭದ ಅವಕಾಶವಲ್ಲ
ಸ್ಟುಡಿಯೋಗೆ ಹೋದ ಕೂಡಲೇ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ರಿಚಾ ಅವರ ಧ್ವನಿಯನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಅಂತಿಮ ಆಯ್ಕೆಗೆ ಸುಲಭವಾದ ಸೀನ್ ನೀಡಲಿಲ್ಲ. ಭಾವುಕತೆಯಿಂದ ಕೂಡಿದ ಕಠಿಣ ಸಿಂಕ್ ಸೌಂಡ್ ಸೀನ್ ಅನ್ನು ಸ್ಯಾಂಪಲ್ ಆಗಿ ನೀಡಲಾಯಿತು. ಚಳಿಯ ವಾತಾವರಣದಲ್ಲಿದ್ದರೂ ಧ್ವನಿಯಲ್ಲಿ ಭಾವನೆ, ನಡುಕ ಮತ್ತು ಪಾತ್ರದ ತೀವ್ರತೆಯನ್ನು ಸರಿಯಾಗಿ ತರುವ ಸವಾಲು ರಿಚಾ ಅವರ ಮುಂದಿತ್ತು. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಸೌಂಡ್ ಇಂಜಿನಿಯರ್ ಆನಂದ್ ಕೂಡ ಅವರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಬಳಿಕ ಕಿಯಾರಾ ಪಾತ್ರಕ್ಕೆ ಈ ಹಿಂದೆ ಆಯ್ಕೆಯಾಗಿದ್ದ ಮತ್ತೊಬ್ಬ ಕಲಾವಿದೆಯ ಧ್ವನಿಯನ್ನು ರಿಪ್ಲೇಸ್ ಮಾಡಿ ರಿಚಾ ಅವರ ಧ್ವನಿಯನ್ನೇ ಅಂತಿಮಗೊಳಿಸಲಾಯಿತು.
ಯಶ್ ಜೊತೆ ಕೆಲಸ ಮಾಡಿದ ಅನುಭವ ಮರೆಯಲಾಗದು
ಬಾಂಬೆಯಲ್ಲಿ ಕರೆಕ್ಷನ್ ಡಬ್ಬಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ರಿಚಾ ಅವರಿಗೆ ಯಶ್ ಅವರನ್ನು ಹತ್ತಿರದಿಂದ ನೋಡುವ ಹಾಗೂ ಅವರ ನಿರ್ದೇಶನದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಟ್ರೈಲರ್ ನೋಡಿದಾಗಲೇ ತಮಗೆ ಯಶ್ ಕಾಣಿಸಲಿಲ್ಲ, ಬದಲಿಗೆ ಪಾತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ನಟ ರಾಕ್ಷಸ ಕಾಣಿಸಿಕೊಂಡರು ಎಂದು ರಿಚಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಹಾಲಿವುಡ್ ಮಟ್ಟದಲ್ಲಿ ಮೂಡಿಬಂದಿದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಯಶ್ ಅವರ ಲುಕ್ ರಿವೀಲ್ ಆಗಬಾರದು ಎಂಬ ಕಾರಣಕ್ಕೆ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಪಕ್ಕದಲ್ಲೇ ಕುಳಿತು ಸೀನ್‌ಗಳ ಕುರಿತು ಇನ್‌ಪುಟ್ ನೀಡಿ ಕೆಲಸ ಮಾಡಿಸಿದ್ದು ತಮ್ಮ ಪಾಲಿಗೆ ವಿಶೇಷ ಅನುಭವ ಎಂದು ರಿಚಾ ಹೇಳಿದ್ದಾರೆ.
ಕಿಯಾರಾ ಕನ್ನಡದ ಲಿಪ್ ಮೂವ್‌ಮೆಂಟ್‌ಗೆ ತಕ್ಕಂತೆ ಧ್ವನಿ
ಟಾಕ್ಸಿಕ್’ನಲ್ಲಿ ಕಿಯಾರಾ ಅಡ್ವಾಣಿ ಕನ್ನಡದ ಸಂಭಾಷಣೆಗಳಿಗೆ ತಕ್ಕಂತೆ ಲಿಪ್ ಮೂವ್‌ಮೆಂಟ್ ನೀಡಿದ್ದರು. ಹೀಗಾಗಿ ಅವರ ಮುಖಭಾವ, ತುಟಿ ಚಲನೆ ಮತ್ತು ಭಾವನೆಗಳಿಗೆ ಸರಿಯಾಗಿ ಕನ್ನಡ ಧ್ವನಿಯನ್ನು ಹೊಂದಿಸುವುದು ರಿಚಾ ಅವರ ದೊಡ್ಡ ಜವಾಬ್ದಾರಿಯಾಗಿತ್ತು. ಪರದೆಯ ಮೇಲೆ ಕಿಯಾರಾ ಅವರ ಅಭಿನಯ ಎಷ್ಟು ಮುಖ್ಯವೋ, ಅವರ ಪಾತ್ರಕ್ಕೆ ಸರಿಯಾದ ಧ್ವನಿ ನೀಡುವುದೂ ಅಷ್ಟೇ ಸವಾಲಿನ ಕೆಲಸವಾಗಿತ್ತು.
ಧ್ವನಿ ಉಳಿಸಿಕೊಳ್ಳಲು ರಿಚಾ ಮಾಡಿದ ತ್ಯಾಗವೇ ಬೇರೆ
ಡಬ್ಬಿಂಗ್ ಕಲಾವಿದರಿಗೆ ಧ್ವನಿಯೇ ದೊಡ್ಡ ಆಸ್ತಿ. ‘ಟಾಕ್ಸಿಕ್’ ಸಿನಿಮಾದ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ರಿಚಾ ತಮ್ಮ ಧ್ವನಿಗೆ ಯಾವುದೇ ತೊಂದರೆಯಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು. ಬಿಸಿನೀರನ್ನೇ ಕುಡಿಯುವುದು, ಐಸ್‌ಕ್ರೀಮ್ ದೂರವಿಡುವುದು, ಮಳೆಯಲ್ಲಿ ನೆನೆಯದಿರುವುದು ಹಾಗೂ ಈಜುಕೊಳದಿಂದ ದೂರವಿರುವುದು ಸೇರಿದಂತೆ ಹಲವು ನಿಯಮಗಳನ್ನು ಪಾಲಿಸಿದ್ದರು. ಸಣ್ಣ ಪ್ರಮಾಣದಲ್ಲಿ ಶೀತದ ಲಕ್ಷಣ ಕಂಡರೂ ಧ್ವನಿ ಹಾಳಾಗದಂತೆ ತಕ್ಷಣ ಎಚ್ಚರಿಕೆ ವಹಿಸುತ್ತಿದ್ದರು. ರಿಚಾ ಹೇಳಿದಂತೆ, ಧ್ವನಿಗೆ ಮುಖ ಇಲ್ಲದಿರಬಹುದು. ಆದರೆ ಪ್ರತಿಯೊಂದು ಧ್ವನಿಯ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ.
