'ಲಕ್ಷ್ಮೀ ನಿವಾಸ' ಚಿನ್ನುಮರಿ ಉರ್ಫ್ ಜಾಹ್ನವಿ ಅಂದರೆ ನಟಿ ಚಂದನಾ ಅನಂತಕೃಷ್ಣ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಸಮಯದಲ್ಲಿ ಅವರ ವಿಶೇಷ ವಿಡಿಯೋ ರಿಲೀಸ್ ಆಗಿದೆ. ನಟಿಯ ಇಂಟರೆಸ್ಟಿಂಗ್ ಲೈಫ್ ಸ್ಟೋರಿ ಕೇಳಿ
ಚಿನ್ನುಮರಿ ಎಂದ್ರೆ ಸಾಕು, ಸೀರಿಯಲ್ ಪ್ರೇಮಿಗಳಿಗೆ ನೆನಪಾಗುವುದು ಸೈಕೋ ಜಯಂತ್ ಪತ್ನಿ ಲಕ್ಷ್ಮೀ ನಿವಾಸದ ಜಾನು. ಸದ್ಯ ಈಕೆ ಜಾಹ್ನವಿ ಶ್ರೀಲಂಕಾದ ಸಮುದ್ರದಲ್ಲಿ ಬಿದ್ದು, ಚೆನ್ನೈನಲ್ಲಿ ಎದ್ದು ಸದ್ಯ ಸೀರಿಯಲ್ನಲ್ಲಿ ವಿಶ್ವನ ಮನೆ ತಲುಪಿದ್ದಾಳೆ. ಅತ್ತ ತನ್ನ ಪತ್ನಿ ಸತ್ತೇ ಹೋದಳು ಎಂದು ಜಯಂತ್ ಗೋಗರೆಯುತ್ತಿದ್ದಾನೆ. ಆದರೆ, ಸೈಕೋ ಜಯಂತ್ಗೆ ತನ್ನ ಪತ್ನಿ ಬದುಕಿದ್ದಾಳೆ ಎಂದೇ ಎನ್ನಿಸುತ್ತಿದೆ. ಆದ್ದರಿಂದ ಅವಳನ್ನು ಹುಡುಕಲು ಡಿಟೆಕ್ಟಿವ್ನ ಇಟ್ಟಿದ್ದಾನೆ. ಈಗ ಜಾಹ್ನವಿ ಬದುಕಿದ್ದಾಳೆ ಎನ್ನುವ ಸುಳಿವು ಅವನಿಗೆ ಸಿಕ್ಕಿದೆ. ಇನ್ನೇನು ಜಾಹ್ನವಿ ಏನಾದ್ರೂ ಅವನ ಕೈಗೆ ಸಿಕ್ಕರೆ ಮುಗೀತು ಕಥೆ. ಒಟ್ಟಿನಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್ ರೋಚಕ ಹಂತಕ್ಕೆ ಬಂದು ನಿಂತಿದೆ. ಕೆಲವರು ಜಯಂತ್ನ ಲವ್ ನೋಡಿ ಜಾನು ಸಿಗಲಿ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಬೇಡಪ್ಪಾ ಬೇಡ, ಜಾನು ವಿಶ್ವನನ್ನೇ ಮದ್ವೆಯಾಗಲಿ ಎನ್ನುತ್ತಿದ್ದಾರೆ. ಇನ್ನೇನಾದ್ರೂ ಜಾನು ಬೇರೆಯವರನ್ನು ಮದ್ವೆಯಾದರೆ ಮಾರನೆಯ ದಿನವೇ ಇವರ ಸಾವು ಎನ್ನುವುದೂ ಎಲ್ಲರಿಗೂ ಗೊತ್ತಿದ್ದದ್ದೇ. ಆದ್ದರಿಂದ ವೀಕ್ಷಕರು ಕೂಡ ಚಿನ್ನುಮರಿ ಸ್ಥಿತಿಗೆ ಮರುಗುತ್ತಿದ್ದಾರೆ. ಅಯ್ಯೋ ನಮ್ ಚಿನ್ನುಮರಿಗೆ ಏನಾದ್ರೂ ಕಷ್ಟನಲ್ಲಪ್ಪಾ ಎಂದು ಆಕೆಯ ಸ್ಥಿತಿ ಕಂಡು ಕಣ್ಣೀರು ಇಡುತ್ತಿದ್ದಾರೆ.
ಹಾಗೆಂದು ಇದು ಸೀರಿಯಲ್ ಕಥೆಯಷ್ಟೇ. ಅಸಲಿ ಜೀವನದಲ್ಲಿ ಚಿನ್ನುಮರಿ ಉರ್ಫ್ ಚಂದನಾ ಅನಂತಕೃಷ್ಣ ಅವರಿಗೆ ಇಂದು (ಜೂನ್ 26) ಹುಟ್ಟುಹಬ್ಬದ ಸಂಭ್ರಮ. ಈ ಕುರಿತು ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದು, ನಟಿಗೆ ಶುಭಾಶಯ ಕೋರಿದೆ. ನಟಿ, ಈಚೆಗಷ್ಟೇ ಉದ್ಯಮಿ ಪ್ರತ್ಯಕ್ಷ್ ಅವರನ್ನು ಮದುವೆಯಾಗಿ ಸಂತೋಷದಿಂದ ಜೀವನ ಕಳೆಯುತ್ತಿದ್ದಾರೆ. ಚಿತ್ರನಟ ದಿವಂಗತ ಉದಯ್ ಹುತ್ತಿನಗದ್ದೆ - ನಟಿ ಲಲಿತಾಂಜಲಿ ದಂಪತಿಯ ಮಗ ಪ್ರತ್ಯಕ್ಷ್. ಇವರು ಮೂಲತಃ ಚಿಕ್ಕಮಗಳೂರಿನವರು. ಇವರ ತಂದೆ ಉಯದ್ ಅವರು, ಕೆಲ ವರ್ಷ ಹಲವು ಚಿತ್ರಗಳಲ್ಲಿ ನಟಿಸಿದರು. 1987ರಲ್ಲಿ ತೆರೆ ಕಂಡಿದ್ದ ಆರಂಭ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದವರು.
ಅಗ್ನಿಪರ್ವ , ಶುಭ ಮಿಲನ , ಜಯಭೇರಿ , ಉದ್ಭವ , ಅಮೃತ ಬಿಂದು , ಶಿವಯೋಗಿ ಅಕ್ಕಮಹಾದೇವಿ , ಉಂಡು ಹೋದ ಕೊಂಡು ಹೋದ , ಕ್ರಮ ಮುಂತಾದ ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ. ಬಳಿಕ ಅವರು, ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮುಂದುವರೆಸಿದರು. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದಾರೆ. 2022ರಲ್ಲಿ ಅವರು ನಿಧನರಾಗಿದ್ದು, ಪ್ರತ್ಯಕ್ಷ್ ಅವರೂ ಕಾಫಿ ಎಸ್ಟೇಟ್ ನೋಡಿಕೊಳ್ಳುತ್ತಿದ್ದಾರೆ. ಮದುವೆಯಾದ ಮೇಲೆ ಸೀರಿಯಲ್ನಿಂದ ದೂರವಾಗ್ತಾ ಎಂದು ಕೆಲವರು ನೋವು ತೋಡಿಕೊಂಡಿದ್ದು ಇತ್ತು. ಆದರೆ ಮದುವೆಗೂ ಮೊದಲೇ ಮುಂದಿನ ಕೆಲವು ಸೀರಿಯಲ್ ಕಂತುಗಳ ಶೂಟಿಂಗ್ ಮುಗಿಸಿ ಹೋಗಿದ್ದ ಚಂದನಾ ಅವರು, ಮದುವೆಯಾದ ಬಳಿಕವೂ ಮುಂದುವರೆದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.
ಇನ್ನು ಚಂದನಾ ಕುರಿತು ಹೇಳುವುದಾದರೆ, ಇವರು ಭರತನಾಟ್ಯ ಕಲಾವಿದೆ ಕೂಡ. ಅದರ ಜೊತೆಯಲ್ಲಿಯೇ ತಾವು ಅತ್ಯಂತ ಸುಂದರವಾಗಿ ಹಾಡಬಲ್ಲೆ ಎನ್ನುವುದನ್ನೂ ಇದರಲ್ಲಿ ತೋರಿಸಿಕೊಟ್ಟಿದ್ದಾರೆ. ಗಾಯನವೊಂದಕ್ಕೆ ದನಿಯಾಗಿದ್ದಾರೆ. ಇನ್ನು ಇವರ ಮದುವೆಯ ಕುರಿತು ಹೇಳುವುದಾದರೆ, ಕಳೆದ ತಿಂಗಳು ಮದುವೆಯಾಗಿದೆ. ಇವರದ್ದು ಅರೆಂಜ್ಡ್ ಮ್ಯಾರೇಜ್. ಇವರದ್ದು ಹಿರಿಯರು ನೋಡಿ ಆಗಿರುವ ಮದುವೆಯಾಗಿರುವ ಕಾರಣ, ಮದುವೆಯ ಬಗ್ಗೆ ಅವರು ಈಚೆಗೆ ಸಂದರ್ಶನವೊಂದರಲ್ಲಿ ತಮಾಷೆಯಾಗಿ ಉತ್ತರಿಸಿದ್ದರು. ಪ್ರತ್ಯಕ್ಷ್ ಅವರು ಹೇಳಿದ್ದೇನೆಂದರೆ, ಹೀಗೆ ಒಂದು ದಿನ ಆಫೀಸ್ನಲ್ಲಿ ಕೆಲಸ ಮಾಡುತ್ತಿರುವಾಗ, ಅಮ್ಮ ಮದುವೆಯ ಬಗ್ಗೆ ಹೇಳಿದ್ರು. ಅದು ಇದು ಮಾತೆಲ್ಲಾ ಆದ ಬಳಿಕ ಫೋಟೋ ನೋಡಿದೆ. ಫೋಟೋ ನೋಡಿದ ತಕ್ಷಣ ಈಕೆಯನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿದೆ. ಆ ಫೋಟೋದಲ್ಲಿ ಇವಳು ಒಳ್ಳೆ ಮಗು ಥರ ಕಾಣಿಸ್ತಾ ಇದ್ಲು. ಬಾಲ್ಯ ವಿವಾಹ ಆಗತ್ತೆ, ಬೇಡಪ್ಪಾ ಇವಳು ನನಗೆ ಎಂದೆ ಎಂದು ತಮಾಷೆ ಮಾಡಿದ್ದರು. ಒಟ್ಟಿನಲ್ಲಿ ನಟಿ ಲೈಫ್ ಅನ್ನು ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಸೀರಿಯಲ್ ಬಗ್ಗೆ ಮಾತ್ರ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.
