ಸಲ್ಮಾನ್ ಖಾನ್ ಅವರಿಂದ ರಕ್ಷಣೆ ಪಡೆಯಲು ಐಶ್ವರ್ಯ ರೈ ಒಮ್ಮೆ ಕೇತನ್ ಕರಾಂಡೆ ಎಂಬ ಬಾಡಿಗಾರ್ಡ್ ಅನ್ನು ನೇಮಿಸಿಕೊಂಡಿದ್ದರು. ಆದರೆ ಸಲ್ಮಾನ್ ಜೊತೆಗಿನ ಒಂದು ಘಟನೆಯ ನಂತರ ಆ ಬಾಡಿಗಾರ್ಡ್ ವಾರದಲ್ಲೇ ಕೆಲಸ ಬಿಟ್ಟುಬಿಟ್ಟರು ಎಂಬ ರೋಚಕ ಕಥೆ ಈಗ ಬಹಿರಂಗವಾಗಿದೆ.
ಮುಂಬೈ: ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಅವರ ಲವ್ ಸ್ಟೋರಿ ಸಿನಿ ಪ್ರಿಯರಿಗೆ ಹೊಸ ವಿಷಯವೇನಲ್ಲ. ಹಲವು ವರ್ಷಗಳ ಈ ಲವ್ಸ್ಟೋರಿ ಬಾಲಿವುಡ್ನಲ್ಲಿ ಅಂದಿನ ಜಮಾನಾದಲ್ಲಿ ದೊಡ್ಡ ಸುದ್ದಿಯನ್ನೇ ಮಾಡಿತ್ತು. ಇಬ್ಬರೂ ಮದುವೆಯಾಗುತ್ತಾರೆ ಎಂದೇ ಅಂದುಕೊಂಡಿದ್ದರು. ಆದರೆ ಆಮೇಲೆ ಆದದ್ದೆಲ್ಲಾ ಈಗ ಇತಿಹಾಸ. ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದರೆ, ಐಶ್ವರ್ಯದ ನೆನಪಿನಲ್ಲಿ ಸಲ್ಲು ಭಾಯಿ ಇನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಸಂದರ್ಶನಗಳಲ್ಲಿ ಹುಡುಗಿಯೊಬ್ಬಳು ತನಗೆ ಮೋಸ ಮಾಡಿದಳು ಎಂದು ಐಶ್ ಬೇಬಿಗೆ ಟಾಂಟ್ ಮೇಲೆ ಟಾಂಟ್ ಕೊಡುತ್ತಲೇ ಇದ್ದಾರೆ. ಐಶ್ವರ್ಯ ರೈ ದೂರವಾದ ಮೇಲೆ ಅವರ ಮನೆಗೆ ರಾತ್ರಿಯೆಲ್ಲಾ ಬಂದು ಸಲ್ಮಾನ್ ಖಾನ್ ಗಲಾಟೆ ಮಾಡಿರುವ ಸುದ್ದಿಯೂ ಸಾಕಷ್ಟು ಸದ್ದು ಮಾಡಿತ್ತು.
ಸಲ್ಮಾನ್ ಖಾನ್ ಅವರಿಂದ ದೂರವಾದ ಮೇಲೆ ಐಶುಗೆ ಅವರು ಬೇಡವಾಗಿತ್ತು. ಆದರೆ ಸಲ್ಲು ಭಾಯಿ ಬಿಡಬೇಕಲ್ಲ. ಐಶ್ವರ್ಯಗೆ ಕಾಟ ಕೊಡಲು ಶುರು ಮಾಡಿದ್ದರಂತೆ. ಆದ್ದರಿಂದ ಅವರಿಂದ ಬಚಾವಾಗಲು ಕೇತನ್ ಕರಾಂಡೆ ಎನ್ನುವ ಬಾಡಿಗಾರ್ಡ್ ಅನ್ನು ಐಶ್ವರ್ಯ ನೇಮಿಸಿಕೊಂಡಿದ್ದರಂತೆ. ಆದರೆ ಈಗಲೂ ಆ ವಿಷಯ ಯಾರಿಗೂ ಗೊತ್ತಿಲ್ಲ, ಇದೇ ಮೊದಲ ಬಾರಿಗೆ ರಿವೀಲ್ ಮಾಡ್ತಿರೋದು ಎಂದು ಕೇತನ್ ಅವರು ಅಂದು ನಡೆದ ಘಟನೆಯ ಬಗ್ಗೆ ಹಾಗೂ ವಾರದಲ್ಲಿಯೇ ಸುಸ್ತಾಗಿ ಕೆಲಸ ಬಿಟ್ಟ ರೋಚಕ ಸ್ಟೋರಿಯನ್ನು ಸಿಮ್ರನ್ ಅಹುಜಾ ಷೋನಲ್ಲಿ ಹೇಳಿಕೊಂಡಿದ್ದಾರೆ.
ಅಂದು ಆಗಿದ್ದೇನು?
ನನ್ನನ್ನು ಐಶ್ವರ್ಯ ರೈ, ಸಲ್ಮಾನ್ ಖಾನ್ರಿಂದ ಬಚಾವಾಗಲು ನೇಮಿಸಿಕೊಂಡಿದ್ದರು. ನಾನೋ ಸಲ್ಮಾನ್ ಖಾನ್ ಫ್ಯಾನ್ ಕೂಡ. ಆದರೆ ಐಶ್ವರ್ಯ ಅವರು ನೇಮಿಸಿಕೊಂಡಿದ್ದರಿಂದ ಹೋಗದೇ ವಿಧಿಯಿರಲಿಲ್ಲ. ಆದರೆ ನಾನು ಅವರ ಬಾಡಿಗಾರ್ಡ್ ಆಗಿದ್ದ ಕಾರಣ ಮಾತ್ರ ಯಾರಿಗೂ ತಿಳಿದಿರಲಿಲ್ಲ. ಅಷ್ಟಕ್ಕೂ ಸಲ್ಮಾನ್ ಖಾನ್ ಮೊದಲಿನಿಂದಲೂ ಸ್ಟಾರ್ ಆಗಿವದ್ದರು, ಮತ್ತು ಈಗ ಅವರು ತುಂಬಾ ಜನರಿಗೆ ಸಹಾಯ ಮಾಡಿದ್ದಾರೆ. ಸಲ್ಮಾನ್ ಖಾನ್ ನಿಸ್ಸಂದೇಹವಾಗಿ ತುಂಬಾ ಒಳ್ಳೆಯ ವ್ಯಕ್ತಿ. ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಸಮರ್ಪಣೆಯನ್ನು ಹೊಂದಿದ್ದಾರೆ. ನಾನು ಅವರೊಂದಿಗೆ ಎರಡು ಅಥವಾ ಮೂರು ಚಿತ್ರಗಳಿಗೆ ಅನೇಕ ಸೆಟ್‌ಗಳಲ್ಲಿ ಕೆಲಸ ಮಾಡಿದ್ದೇನೆ. ಈಗ ಬಿಗ್ಬಾಸ್ನಲ್ಲಿಯೂ ಅವರ ಜೊತೆಕೆಲಸ ಮಾಡುತ್ತಿದ್ದೇನೆ. ಆಗಲೂ ಅವರೆಂದರೆ ನನಗೆ ಇಷ್ಟವಾಗಿತ್ತು. ಆದರೆ, ಐಶ್ವರ್ಯ ಅವರು ನೇಮಿಸಿಕೊಂಡಿದ್ದರಿಂದ ನನಗೆ ಬೇರೆ ವಿಧಿ ಇರಲಿಲ್ಲ ಎಂದಿದ್ದಾರೆ.
ನಾನು ಐಶ್ವರ್ಯಾ ಅವರ ಅಂಗರಕ್ಷಕ ಎಂದು ಯಾರಿಗೂ ಹೇಳಿರಲಿಲ್ಲ.ಈಗ 20 ವರ್ಷ ಮೇಲಾಯ್ತು ಬಿಡಿ. ಆದರೆ ಅಂದು ನಡೆದ ಘಟನೆಯ ಬಳಿಕ ನಾನು ಆ ಕೆಲಸ ಬಿಟ್ಟೆ ಎಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಕೇತನ್. ನಾನು ಒಮ್ಮೆ ಐಶ್ವರ್ಯಾ ರೈ ಮೇಡಂ ಅವರನ್ನು ಮನೆಯಿಂದ ಕರೆದುಕೊಂಡು ಹೋಗಿ, ಅವರನ್ನು ಕಾರಿನಲ್ಲಿ ಕೂಡ್ರಿಸಬೇಕಾಗಿತ್ತು. ಅವರು ಕಾರಿನಲ್ಲಿ ಕುಳಿತು ಶೂಟಿಂಗ್ಗೆ ಹೋಗಬೇಕಾಗಿತ್ತು. ಸಲ್ಮಾನ್ ಖಾನ್ ಅವರಿಂದ ಬಚಾವ್ ಮಾಡಿ ಅವರನ್ನು ಸುರಕ್ಷಿತವಾಗಿ ಶೂಟಿಂಗ್ ಸೆಟ್ಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿತ್ತು. ಅದು 'ಕುಚ್ ನಾ ಕಹೋ' ಎಂಬ ಸಿನಿಮಾ ಶೂಟಿಂಗ್ ಆಗಿತ್ತು ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.
ಮೇಡಂ ಅವರನ್ನು ಮನೆಯಿಂದ ಕರೆದುಕೊಂಡು ಹೋಗಿ, ಕಾರಿನಲ್ಲಿ ಕುಳಿತು ಹೊರಟೆವು. ಶೂಟಿಂಗ್ ಮುಗಿದು ಅಲ್ಲಿಂದ ವಿಕ್ರಮ್ ಭಟ್ ಅವರ ಫ್ಯಾಷನ್ ಶೋಗೆ ಹೋಗುತ್ತಿದ್ದೆವು. ಆಗ ನೋಡಿದ್ರೆ ಸಲ್ಮಾನ್ ಖಾನ್ ಮುಂದೆಯೇ ಇದ್ದರು. ನಾವೆಲ್ಲರೂ ಭಯಭೀತರಾಗಿದ್ದೆವು, ಏನು ಮಾಡಬೇಕೆಂದು ಯೋಚಿಸುತ್ತಿದ್ದೆವು. ಕಾರಿನಿಂದ ಇಳಿದು ಏನಾದರೂ ಮಾಡ್ಲಾ ಎಂದು ಡ್ರೈವರ್ಗೆ ಕೇಳಿದೆ. ಅದಕ್ಕೆ ಆತ ಬೇಡ, ನಾನೇ ಏನಾದರೂ ಮಾಡುತ್ತೇನೆ ಎಂದು ಅತಿ ವೇಗದಿಂದ ಕಾರನ್ನು ಚಲಾಯಿಸಿ ಸಲ್ಮಾನ್ ಖಾನ್ ಅವರ ಕಾರಿಗಿಂತ ಅತಿ ವೇಗದಲ್ಲಿ ಮುಂದೆ ಹೋದ. ಅದೇ ಕೊನೆ. ನನಗೆ ಯಾಕೋ ಇಂಥ ಬಾಡಿಗಾರ್ಡ್ ಕೆಲಸ ಬೇಡ ಎಂದು ವಾರದಲ್ಲಿಯೇ ಕೆಲಸ ಬಿಟ್ಟುಬಿಟ್ಟೆ ಎಂದಿದ್ದಾರೆ.
ನಾನು ದೇಹದಾರ್ಢ್ಯ ಮತ್ತು ನನ್ನ ದೇಹವನ್ನು ಕಾಪಾಡಿಕೊಳ್ಳುವುದರಲ್ಲಿ ನಿರತನಾಗಿದ್ದೆ. ನಾನು ಯಾವುದೇ ಜಗಳಗಳಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ ಎಂದು ನಾನು ಹೇಳಿದೆ. ಅಷ್ಟಕ್ಕೂ ಇದು ಪ್ರೀತಿಯಲ್ಲಿರುವ ಇಬ್ಬರು ಜನರ ನಡುವೆ ನಡೆಯುತ್ತಿರುವ ಜಗಳ. ಅದರ ಮಧ್ಯೆ ನಾನು ಹೋಗಲು ಬಯಸಲಿಲ್ಲ. ನಾನು ಇಬ್ಬರ ಅಭಿಮಾನಿಯೂ ಆಗಿ ಒಬ್ಬರ ವಿರುದ್ಧ ಹೋಗಲು ಇಚ್ಛೆ ಪಡದೇ ಕೆಲಸ ಬಿಟ್ಟುಬಿಟ್ಟೆ ಎಂದು ನೆನಪಿಸಿಕೊಂಡಿದ್ದಾರೆ.















