1998ರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಕ್ಷಮೆಯಾಚಿಸದ ಕಾರಣ ಬಿಷ್ಣೋಯಿ ಗ್ಯಾಂಗ್ ಅವರ ಆಪ್ತರನ್ನು ಗುರಿಯಾಗಿಸುತ್ತಿದೆ. ಟೈಗರ್ ಶ್ರಾಫ್ ಮೇಲಿನ ದಾಳಿ ಮತ್ತು ಬಾಬಾ ಸಿದ್ದಿಕಿ ಹತ್ಯೆ ಇದರ ಮುಂದುವರಿದ ಭಾಗವಾಗಿದೆ. ಸಲ್ಮಾನ್ ಖಾನ್ ಕ್ಷಮೆ ಕೇಳದಿದ್ದರೆ ಇನ್ನಷ್ಟು ಜೀವಗಳಿಗೆ ಅಪಾಯವಿದೆ ಎಂದು ಬಿಷ್ಣೋಯ್ ಸಮಾಜ ಎಚ್ಚರಿಸಿದೆ.

ಮುಂಬೈ: ಮೊನ್ನೆ ನಟ ಟೈಗರ್​ ಶ್ರಾಫ್​ ಮೇಲೆ ನಡೆದ ಕೊಲೆ ಯತ್ನದ ಹಿಂದೆ ಇರುವುದು ಬಿಷ್ಣೋಯಿ ಗ್ಯಾಂಗ್​ನ ಸದಸ್ಯರು ಎಂದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ. ಇದಕ್ಕೆ ಕಾರಣ ನಟ ಸಲ್ಮಾನ್​ ಖಾನ್​. ಸಲ್ಮಾನ್​ ಖಾನ್​ ಅವರ ಸಹವರ್ತಿಯಾಗಿರುವವರ ಪೈಕಿ ಇದಾಗಲೇ ನಟನ ಹಟದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ನಟನ ನಿಕಟವರ್ತಿಯಾಗಿರುವ ಕಾರಣಕ್ಕೆ ಟೈಗರ್​ ಶ್ರಾಫ್​ ಕೂಡ ಸಾವಿನ ಸಮೀಪ ಹೋಗಿ ಬಂದಿದ್ದಾರೆ. ಸಲ್ಮಾನ್​ ಖಾನ್​ನ ಒಂದೇ ಒಂದು ಕ್ಷಮೆ ಇನ್ನೂ ಟಾರ್ಗೆಟ್​ ಲಿಸ್ಟ್​ನಲ್ಲಿ ಇರುವವರ ಜೀವ ಕಾಪಾಡಬಹುದಾಗಿದೆ. ಆದರೆ ಖಾನ್​ ಸಾಹೇಬ್ರು ಮಾತ್ರ ಕ್ಷಮೆ ಕೋರದೆ ತಮ್ಮ ಹಟದಿಂದ ಇನ್ನೂ ಹಲವರ ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ ಎಂದು ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಕ್ಷಮೆಗೆ ಆಗ್ರಹ

ಪ್ರಸಿದ್ಧ ಪಂಜಾಬಿ ಗಾಯಕ ಮತ್ತು ರಾಜಕಾರಣಿ ಸಿಧು ಮೂಸೆವಾಲಾ 2022ರಲ್ಲಿ ಕೊಲೆಯಾಗಿದ್ದರೆ, ಇನ್ನೂ ಕೆಲವು ಸಲ್ಮಾನ್​ ನಿಕಟವರ್ತಿಗಳು ಬಿಷ್ಣೋಯಿ ಲಿಸ್ಟ್​ನಲ್ಲಿ ಇದ್ದಾರೆ. 1998ರಿಂದ ಸಲ್ಮಾನ್​ ಖಾನ್​ ಮತ್ತು ಬಿಷ್ಣೋಯಿ ಸಮುದಾಯದ ನಡುವೆ ನಡೆಯುತ್ತಿರುವ ಈ ಜಟಾಪಟಿಯಿಂದ ಇದಾಗಲೇ ಹಲವಾರು ಬಾರಿ ಸಲ್ಮಾನ್​ ಮೇಲೆ ಖುದ್ದು ದಾಳಿಯಾಗಿದ್ದರೂ ಅವರು ಬಚಾವ್​ ಆಗಿದ್ದಾರೆ. ಆದರೆ ಪ್ರತಿಬಾರಿಯೂ ಎಲ್ಲರೂ ಬಚಾವಾಗಬೇಕೆಂದು ಇಲ್ಲ. ಲಾರೆನ್ಸ್​ ಬಿಷ್ಣೋಯಿ ಜೈಲಿನಲ್ಲಿ ಇದ್ದರೂ, ಆತನ ಸಹಚರರು ಸಲ್ಮಾನ್​ ಮೇಲಿನ ಸಿಟ್ಟನ್ನು ಅವರ ನಿಕಟವರ್ತಿಗಳ ಮೇಲೆ ತೆಗೆದುಕೊಳ್ಳುತ್ತಾ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಅವರನ್ನು ತಡೆಯುವವರೇ ಇಲ್ಲವಾಗಿರುವುದು ಒಂದೆಡೆಯಾದರೆ, ಸಲ್ಮಾನ್​ ಖಾನ್​ನ ಹಟದಿಂದ ಇನ್ನೆಷ್ಟು ಜೀವಗಳು ಬಲಿಯಾಗಬೇಕು ಎಂದು ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಬಿಷ್ಣೋಯ್ ಸಮಾಜದ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ಬುಡಿಯಾ ಅವರು ಕ್ಷಮೆ ಕೋರದೇ ಹೋದರೆ ಇನ್ನೂ ಹಲವು ಜೀವಗಳ ಹೋಗುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಲ್ಮಾನ್​ ಖಾನ್​ ಇದನ್ನು ತಡೆಯಬೇಕು ಎಂದಿರುವ ಅವರು, ಪರೋಕ್ಷವಾಗಿ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ. ಆ ವ್ಯಕ್ತಿ ನಮ್ಮ ತತ್ವಗಳಿಗೆ ವಿರುದ್ಧವಾದದ್ದನ್ನು ಮಾಡಿದ್ದಾನೆ. ಇದಕ್ಕೂ ಮುಂಚೆಯೂ ಹಲವಾರು ಜಗಳಗಳು ಮತ್ತು ವಿವಾದಗಳು ನಡೆದಿವೆ. ಇದಕ್ಕೆ ಸಲ್ಮಾನ್​ ಖಾನ್​ ಏಕೆ ಅಂತ್ಯ ಹಾಡುವುದಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಅಷ್ಟಕ್ಕೂ ಸಲ್ಮಾನ್​ ಖಾನ್​ ಮೇಲೆ ಏಕಿಷ್ಟು ಕೋಪ?

ಬಿಷ್ಣೋಯಿ ಸಮುದಾಯದವರು ದೇವರು ಎಂದೇ ನಂಬುತ್ತಿರುವ ಕೃಷ್ಣಮೃಗವನ್ನು ಕೊಂದಿರುವ ಆರೋಪ ಸಲ್ಮಾನ್​ ಖಾನ್​ ಅವರ ಮೇಲೆ ಇದೆ. 1998ರಲ್ಲಿ ಈ ಘಟನೆ ನಡೆದಿದೆ. ಹಲವಾರು ಬಾರಿ ಲಾರೆನ್ಸ್​ ಬಿಷ್ಣೋಯಿ ಸಮುದಾಯದವರು ನಟನಿಗೆ ಇಟ್ಟಿದ್ದ ಬೇಡಿಕೆ ಒಂದೇ. ಅದು ಅಂದು ಕೃಷ್ಣಮೃಗ ಕೊಂದ ತಪ್ಪಿಗೆ ಕ್ಷಮೆ ಕೋರಬೇಕು ಎನ್ನುವುದು. ದಶಕ ಕಳೆದರೂ ಇದುವರೆಗೂ ಸಲ್ಮಾನ್​ ಖಾನ್​ ಕ್ಷಮೆ ಕೋರಲಿಲ್ಲ. ಈ ಕ್ಷಮೆ ಎನ್ನುವ ಮಾತು ಹಂತ ಹಂತವಾಗಿ ಬೆಳೆಯುತ್ತಾ ಇಂದು ಸಲ್ಮಾನ್ ಖಾನ್​ ಆಪ್ತರು ಎನಿಸಿಕೊಂಡವರ ಜೀವಕ್ಕೆ ಮುಳ್ಳಾಗುತ್ತಿದೆ. ಇದಾಗಲೇ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಮಾಡಿರುವ ಬಿಷ್ಣೋಯಿ ಗ್ಯಾಂಗ್​ನವರು, ಇದಕ್ಕೆ ಕಾರಣ ಕೂಡ ಸಲ್ಮಾನ್​ ಖಾನ್​ ಎಂದಿದ್ದಾರೆ. ಸಲ್ಮಾನ್​ ನಿಕಟವರ್ತಿಗಳಿಗೆ ಇದೇ ಶಿಕ್ಷೆಯಾಗುತ್ತದೆ ಎಂದೂ ಹೇಳಿದ್ದಾರೆ. ಇಷ್ಟು ಆಗುತ್ತಿದ್ದಂತೆಯೇ ಸೋಷಿಯಲ್​ ಮೀಡಿಯಾದಲ್ಲಿ ಕ್ಷಮೆ ಕೋರುವಂತೆ ಸಲ್ಮಾನ್​ ಖಾನ್​ಗೆ ಒತ್ತಡ ಹೆಚ್ಚಾದರೂ ನಟ ತಾನು ತಪ್ಪು ಮಾಡೇ ಇಲ್ಲ ಎನ್ನುತ್ತಿದ್ದಾರೆ.

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಇದಾಗಲೇ ಹೇಳಿದ್ದಾನೆ. ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದ. ಇದರ ಹೊರತಾಗಿಯೂ ಸಲ್ಮಾನ್​ ಖಾನ್​ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್​ ಎಚ್ಚರಿಕೆ ನೀಡುತ್ತಲೇ ಇದೆ. ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾನೆ. ಇದರ ಬೆನ್ನಲ್ಲೇ ಕೊಲೆ ಬೆದರಿಕೆ, ಗುಂಡಿನ ದಾಳಿ ನಡೆಯುತ್ತಿದೆ.