ನಟ ಕಿಚ್ಚ ಸುದೀಪ್ ಮತ್ತು ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ ವಿರುದ್ಧ ಕಾಫಿ ತೋಟದ ಮಾಲೀಕರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. 'ವಾರಸ್ದಾರ' ಧಾರಾವಾಹಿ ಚಿತ್ರೀಕರಣದ ಒಪ್ಪಂದದಂತೆ ಹಣ ಪಾವತಿಸದೆ ವಂಚಿಸಿದ್ದಾರೆ ಮತ್ತು ತೋಟಕ್ಕೆ ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬೆಂಗಳೂರು: ಚಂದನವನದ ನಟ ಕಿಚ್ಚ ಸುದೀಪ್ ಮತ್ತು ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಕಾಫಿ ತೋಟದ ಮಾಲೀಕರು ದೂರು ಸಲ್ಲಿಕೆ ಮಾಡಿದ್ದಾರೆ. ಚಕ್ರವರ್ತಿ ಚಂದ್ರಚೂಡ ಬಿಗ್‌ಬಾಸ್ ಶೋನ ಮಾಜಿ ಸ್ಪರ್ಧಿ ಮತ್ತು ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಧಾರಾವಾಹಿ ಚಿತ್ರೀಕರಣಕ್ಕಾಗಿ ಒಪ್ಪಂದ ಮಾಡಿಕೊಂಡು ಕಾಫಿ ತೋಟ ಪಡೆದುಕೊಂಡಿದ್ದರು. ಧಾರಾವಾಹಿ ಚಿತ್ರೀಕರಣ ಅರ್ಧಕ್ಕೆ ನಿಂತಿದ್ದರಿಂದ ಒಪ್ಪಂದದ ಪ್ರಕಾರ ಹಣ ಪಾವತಿಸದೇ ವಂಚಿಸಿದ್ದಾರೆ ಎಂದು ತೋಟದ ಮಾಲೀಕರು ಆರೋಪಿಸಿದ್ದಾರೆ.
ಹಣ ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿರುವ ಕಾಫಿ ತೋಟದ ಮಾಲೀಕರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರೀಕರಣಕ್ಕಾಗಿ ಕಾಫಿ ತೋಟ ಮತ್ತು ಮರಗಳನ್ನು ನಾಶ ಮಾಡಿರುವ ಆರೋಪವೂ ಕೇಳಿ ಬಂದಿದೆ.
ಕಾಫಿ ತೋಟ ಮತ್ತು ಮನೆಯಲ್ಲಿನ ಚಿತ್ರೀಕರಣಕ್ಕಾಗಿ ಒಪ್ಪಂದ
ಈ ಕುರಿತು ಮಾತನಾಡಿರುವ ಕಾಫಿ ತೋಟದ ಮಾಲೀಕ ದೀಪಕ್, ನಮ್ಮೊಂದಿಗೆ ಎರಡು ವರ್ಷಕ್ಕಾಗಿ ಮಾಡಿಕೊಳ್ಳಲಾಗಿತ್ತು. ವಾರಸ್ದಾರ ಧಾರಾವಾಹಿಗಾಗಿ ನಮ್ಮ ಮನೆ ಮತ್ತು ಕಾಫಿ ತೋಟದಲ್ಲಿ ಚಿತ್ರೀಕರಣ ಮಾಡುವ ಒಪ್ಪಂದವಾಗಿತ್ತು. ಶೂಟಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ ಚಿತ್ರೀಕರಣ ಸ್ಥಗಿತಗೊಂಡಿತ್ತು ಎಂದು ಹೇಳಿದ್ದಾರೆ.
60ರ ಪೈಕಿ ನೀಡಿದ್ದು 10 ಲಕ್ಷ ರೂಪಾಯಿ
ಈ ಹಿಂದೆ ನಮ್ಮ ನಡುವಿನ ಒಪ್ಪಂದದ ಪ್ರಕಾರ 95 ಲಕ್ಷ ರೂಪಾಯಿ ನೀಡಬೇಕೆಂದು ಸುದೀಪ್ ಮತ್ತು ಚಕ್ರವರ್ತಿ ಚಂದ್ರಚೂಡ ವಿರುದ್ಧ ದೂರು ದಾಖಲಿಸಿದ್ದೆ. ಆ ಸಂದರ್ಭದಲ್ಲಿ ಸುದೀಪ್ ಅವರು 60 ಲಕ್ಷ ರೂಪಾಯಿ ನೀಡುವ ಭರವಸೆಯನ್ನು ನೀಡಿದ್ದರಿಂದ ದೂರು ಹಿಂಪಡೆದುಕೊಂಡಿದ್ದೆ. ಅಂದು 10 ಲಕ್ಷ ರೂಪಾಯಿಯ ಚೆಕ್ ನೀಡಿದ ಸುದೀಪ್ ಅವರು ಬಾಕಿ ಮೊತ್ತ ನೀಡದೇ ವಂಚಿಸಿದ್ದಾರೆ ಎಂದು ದೀಪಕ್ ಆರೋಪಿಸಿದ್ದಾರೆ.
ಹಣ ನೀಡದ ಹಿನ್ನೆಲೆ ಮತ್ತೊಮ್ಮೆ ನಟ ಕಿಚ್ಚ ಸುದೀಪ್ ಮತ್ತು ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ ವಿರುದ್ಧ ಮತ್ತೊಮ್ಮೆ ದೂರು ದಾಖಲಿಸಿರೋದಾಗಿ ದೀಪಕ್ ಹೇಳಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ವಾರಸ್ದಾರ ಧಾರಾವಾಹಿ ಪ್ರಸಾರವಾಗಿತ್ತು.
ಇದನ್ನೂ ಓದಿ: ಮಾರ್ಕ್ ಸುದೀಪ್ ಆಡಿದ ಮಾತುಗಳನ್ನು ಡಿಕೋಡ್ ಮಾಡಿದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ
ವಾರಸ್ದಾರ ಧಾರಾವಾಹಿ
ಚಿಕ್ಕಮಗಳೂರು ತಾಲೂಕಿನ ಬೈಗೂರು ಗ್ರಾಮದಲ್ಲಿ ವಾರಸ್ದಾರ ಧಾರಾವಾಹಿ ಚಿತ್ರೀಕರಣ ನಡೆಸಲಾಗಿತ್ತು. ಕಿಚ್ಚ ಸುದೀಪ್ ಧಾರಾವಹಿ ನಿರ್ಮಾಣ ಮಾಡಿದ್ದು, ಚಿತ್ರೀಕರಣಕ್ಕೆ ದೀಪಕ್ ಮಯೂರ್ ಅವರ ಮನೆಯನ್ನು ಬಾಡಿಗೆ ಪಡೆದುಕೊಳ್ಳಲಾಗಿತ್ತು. ಈ ಧಾರಾವಾಹಿಯಲ್ಲಿ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಚಿತ್ರಾಲಿ ಮತ್ತು ಯಗ್ನಾ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು. ಹೆಣ್ಣುಮಗು ಜನಿಸಿದಾಗ ಗ್ರಾಮದ ವಾರಸ್ದಾರಿಕೆಯ ಹಕ್ಕನ್ನು ಕಳೆದುಕೊಳ್ಳಬಾರದೆಂದು ತಾಯಿ ಹೆಣ್ಣು ಮಗುವನ್ನು ಗಂಡು ಎಂದು ಸುಳ್ಳು ಹೇಳುತ್ತಾರೆ. ಈ ಸುಳ್ಳಿನ ಸುತ್ತ ಕಥೆ ಸಾಗುತ್ತದೆ.


