ಬಾಕ್ಸ್ ಆಫೀಸ್‌ನಲ್ಲಿ 'ಸು ಫ್ರಮ್ ಸೋ' ಹಾಗೂ 'ಪ್ರೇಮದ ಊರಲಿ' ಚಿತ್ರಗಳ ನಡುವೆ ರೋಚಕ ಪೈಪೋಟಿ ಏರ್ಪಟ್ಟಿದೆ. ಮೂರನೇ ಶನಿವಾರದ ಕಲೆಕ್ಷನ್‌ನಲ್ಲಿ 'ಪ್ರೇಮದ ಊರಲಿ' ಸಿನಿಮಾ 'ಸು ಫ್ರಮ್ ಸೋ' ಚಿತ್ರವನ್ನು ಹಿಂದಿಕ್ಕಿ ಅಚ್ಚರಿ ಮೂಡಿಸಿದೆ. ಕಡಿಮೆ ಬಜೆಟ್‌ನ ಈ ಎರಡೂ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಬಾಕ್ಸ್ ಆಫೀಸ್ ಅಂಗಳದಲ್ಲಿ ಈ ಹಿಂದೆ ರೆಕಾರ್ಡ್ ಮಾಡಿದ್ದ 'ಸು ಫ್ರಮ್ ಸೋ' ಹಾಗೂ ಹಾಲಿ ದಾಖಲೆ ರೀತಿಮುನ್ನುಗ್ಗುತ್ತಿರುವ 'ಪ್ರೇಮದ ಊರಲಿ' ಎರಡು ಚಿತ್ರಗಳ ನಡುವೆ ಬಾಕ್ಸಾಫೀಸಿನ ದಾಖಲೆ ನಿರ್ಮಾಣದಲ್ಲಿ ರೋಚಕ ಪೈಪೋಟಿ ಏರ್ಪಟ್ಟಿದೆ. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ‘ಸು ಫ್ರಮ್ ಸೋ’ (Su From So) ಹಾಗೂ ಹಾಲಿ ಭರ್ಜರಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ (Premada Oorali) ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಬಿಡುಗಡೆಯಾಗಿ 16 ದಿನಗಳಲ್ಲಿ ಪೂರೈಸಿರುವ ಈ ಎರಡೂ ಸಿನಿಮಾಗಳ ಒಟ್ಟು ನೆಟ್ ಕಲೆಕ್ಷನ್ ಹೋಲಿಕೆ ವಿವರಗಳು ಹೊರಬಿದ್ದಿದ್ದು, ಚಿತ್ರಪ್ರೇಮಿಗಳ ಗಮನ ಸೆಳೆಯುತ್ತಿವೆ.

ಸ್ಯಾಕ್ನಿಲ್ಕ್ ರಿಪೋರ್ಟ್

ಖ್ಯಾತ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ತಾಣ 'ಸ್ಯಾಕ್ನಿಲ್ಕ್' (Sacnilk) ನೀಡಿರುವ ಅಂಕಿಅಂಶಗಳ ಪ್ರಕಾರ, ‘ಸು ಫ್ರಮ್ ಸೋ’ ಚಿತ್ರವು ರಾಜ್ ಬಿ ಶೆಟ್ಟಿಯಂತಹ ಸ್ಟಾರ್ ನಟರಿದ್ದ ಕಾರಣ ಮೊದಲ ದಿನದಿಂದಲೂ ಭರ್ಜರಿ ಮುನ್ನಡೆ ಕಾಯ್ದುಕೊಂಡಿತ್ತು. ಮೊದಲ ವಾರದಲ್ಲಿ ₹20.15 ಕೋಟಿ ಗಳಿಸಿದ್ದ ಈ ಚಿತ್ರ, ಎರಡನೇ ವಾರದಲ್ಲಿ ಮತ್ತಷ್ಟು ವೇಗ ಪಡೆದು ₹27.90 ಕೋಟಿ ಬಾಚಿಕೊಂಡಿತ್ತು. ಇನ್ನು ಮೂರನೇ ವಾರದ ಶುಕ್ರವಾರ ₹3.10 ಕೋಟಿ ಹಾಗೂ ಶನಿವಾರ ₹6.10 ಕೋಟಿ ಗಳಿಕೆ ಕಾಣುವ ಮೂಲಕ ಒಟ್ಟಾರೆಯಾಗಿ 16 ದಿನಗಳಲ್ಲಿ ₹57.25 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ ಬ್ಲಾಕ್‌ಬಸ್ಟರ್ ದಿಕ್ಕಿನಲ್ಲಿ ಸಾಗಿತ್ತು.

ಸು ಫ್ರಮ್ ಸೋ ಹಿಂದಿಕ್ಕಿದ ಪ್ರೇಮದ ಊರಲಿ

ಇದೀಗ 'ಪ್ರೇಮದ ಊರಲಿ’ ಸಿನಿಮಾ ಆರಂಭದಲ್ಲಿ ಮಂದಗತಿಯಲ್ಲಿದ್ದರೂ, ನಂತರ ಮೌತ್ ಪಬ್ಲಿಸಿಟಿಯಿಂದ ಅಚ್ಚರಿಯ ಜಂಪ್ ಕಂಡಿದೆ. ಮೊದಲ ವಾರ ಕೇವಲ ₹5.32 ಕೋಟಿ ಗಳಿಸಿದ್ದ ಈ ಚಿತ್ರ, ಎರಡನೇ ವಾರದಲ್ಲಿ ಬರೋಬ್ಬರಿ ₹23.65 ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಅಷ್ಟೇ ಅಲ್ಲದೆ, ಮೂರನೇ ವಾರಾಂತ್ಯದಲ್ಲಿ 'ಸು ಫ್ರಮ್ ಸೋ' ಚಿತ್ರಕ್ಕಿಂತ ಹೆಚ್ಚಿನ ಗಳಿಕೆ ದಾಖಲಿಸಿದೆ. 3ನೇ ಶುಕ್ರವಾರ ₹4.50 ಕೋಟಿ ಹಾಗೂ ಶನಿವಾರ ₹6.44 ಕೋಟಿ ಗಳಿಸುವ ಮೂಲಕ 16 ದಿನಗಳಲ್ಲಿ ಒಟ್ಟು ₹39.91 ಕೋಟಿ ಕಲೆಕ್ಷನ್ ಮಾಡಿದೆ. ಶೀಘ್ರದಲ್ಲೇ ಈ ಚಿತ್ರ ₹40 ಕೋಟಿ ಗಡಿ ದಾಟಲಿದೆ.

ಕಡಿಮೆ ಬಜೆಟ್ ಹೆಚ್ಚು ಲಾಭ

ಒಟ್ಟಾರೆ ಕಲೆಕ್ಷನ್ ಲೆಕ್ಕಾಚಾರದಲ್ಲಿ 16 ದಿನಗಳಲ್ಲಿ ₹57 ಕೋಟಿಗೂ ಹೆಚ್ಚು ಗಳಿಸಿ ‘ಸು ಫ್ರಮ್ ಸೋ’ ಮೇಲುಗೈ ಸಾಧಿಸಿತ್ತು. ಅದಕ್ಕೆ ಹೋಲಿಸಿದರೆ 3ನೇ ವಾರದ ದೈನಂದಿನ ಗಳಿಕೆಯಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಪೈಪೋಟಿ ನೀಡುತ್ತಾ ಮುನ್ನುಗ್ಗುತ್ತಿದೆ. ಕಡಿಮೆ ಬಜೆಟ್, ಹೊಸಬರ, ಹೊಸತನದ ಹಾಗೂ ಸ್ಟಾರ್ ನಟರಿಲ್ಲದ, ಬೃಹತ್ ಪ್ರಚಾರವಿಲ್ಲದ ಸು ಫ್ರಮ್ ಸೋ ಸಿನಿಮಾದ ರೀತಿಯಲ್ಲಿ ಪ್ರೇಮದ ಊರಲಿ ಸಿನಿಮಾ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಧೂಳೆಬ್ಬಿಸುತ್ತಿದೆ.