'ಪ್ರೇಮದ ಊರಲಿ' ಹಾಡಿನಿಂದ ಸೃಷ್ಟಿಯಾದ ಇತಿಹಾಸ! ವರನಟ ಡಾ. ರಾಜ್ ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್, ಶಿವಣ್ಣನ ಸಿನಿಮಾ ಸಾಲಿಗೆ ಸೇರಿದ 'ಪ್ರೇಮದ ಊರಲಿ'. ಕಿರುತೆರೆಯಿಂದ ಬೆಳ್ಳಿತೆರೆಗೆ ಗೆದ್ದ ನಟ ಶ್ರೀರಾಮ್ ಬಿಚ್ಚಿಟ್ಟ ರೋಚಕ ಸತ್ಯಗಳು. ಇಲ್ಲಿದೆ ಸಂಪೂರ್ಣ ವಿವರ.
ಈ ಹಿಂದೆ ವರನಟ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಸಿನಿಮಾಗಳು ರಿಲೀಸ್ ಆದಾಗ ಅಥವಾ ಶಿವರಾಜ್ ಕುಮಾರ್ ಅವರ 'ಜನುಮದ ಜೋಡಿ' ಅಂತಹ ಕಲ್ಟ್ ಸಿನಿಮಾಗಳು ತೆರೆಕಂಡಾಗ ಹಳ್ಳಿಗಳಿಂದ ಜನ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳನ್ನು ಕಟ್ಟಿಕೊಂಡು ಥಿಯೇಟರ್‌ಗಳ ಮುಂದೆ ಜಾತ್ರೆಯಂತೆ ಜಮಾಯಿಸುತ್ತಿದ್ದರು. ಅಂತಹದ್ದೇ ಅಪರೂಪದ, ಭಾವನಾತ್ಮಕ ವಾತಾವರಣ 'ಪ್ರೇಮದ ಊರಲಿ ಸಿನಿಮಾಗೆ' ಮತ್ತೆ ಮರುಕಳಿಸಿದೆ! ಎಲ್ಲೆಲ್ಲೂ ಕೇಳಿಬರುತ್ತಿರೋದು ಒಂದೇ ಹಾಡು— ‘ಪ್ರೇಮದ ಊರಲಿ... ಏರುಪೇರು ಹೃದಯ...’
ಕೇವಲ 2.5 ರಿಂದ 3 ಕೋಟಿ ರೂಪಾಯಿಗಳ ಕಡಿಮೆ ಬಜೆಟ್‌ನಲ್ಲಿ ತಯಾರಾಗಿ, ಇಂದು ಬರೋಬ್ಬರಿ 33 ಕೋಟಿ ರೂಪಾಯಿ ಕಲೆಕ್ಷನ್‌ನತ್ತ ದಾಪುಗಾಲು ಹಾಕುತ್ತಿರುವ ಈ ಅದ್ಭುತ ಸಿನಿಮಾದ ಹೀರೋ ಶ್ರೀರಾಮ್ (ಶ್ರೀ) ತಮ್ಮ ಯಶಸ್ಸಿನ ಸವಿಯನ್ನು, ಕಣ್ಣೀರ ಹಿಂದಿನ ಶ್ರಮವನ್ನು ಹಂಚಿಕೊಂಡಿದ್ದಾರೆ.
'ನನಗೆ ಪ್ರೈವೆಸಿ ಬೇಡ, ಜನ ನನ್ನನ್ನು ಗುರುತಿಸಬೇಕು ಅಂತಲೇ ಬಂದಿದ್ದು!'
ಸಾಮಾನ್ಯವಾಗಿ ದೊಡ್ಡ ಸ್ಟಾರ್ ಆದವರು ತಮಗೆ ಪ್ರೈವೆಸಿ ಬೇಕು ಎನ್ನುತ್ತಾರೆ. ಆದರೆ ನಟ ಶ್ರೀರಾಮ್ ಹೇಳುವುದೇ ಬೇರೆ:
"ನನಗೆ ಪ್ರೈವೆಸಿ ಬೇಡ ಅನ್ನೋದೇ ತಲೆಯಲ್ಲಿ ಇತ್ತು. ಹೊರಗೆ ಹೋದರೆ ಪಾನಿಪುರಿ ತಿನ್ನೋಕೂ ಜನ ಬಿಡಬಾರದು, ಜನ ಬಂದು ನನ್ನನ್ನು ಮಾತಾಡಿಸಬೇಕು, ಗುರುತಿಸಬೇಕು ಅನ್ನೋದಕ್ಕಾಗಿಯೇ ಇಷ್ಟೆಲ್ಲಾ ಕಷ್ಟಪಟ್ಟಿದ್ದು. ಯಾವುದೋ ಕಾಲದಲ್ಲಿ ಒಂದು ಫೋನ್ ಕಾಲ್ ಕೂಡ ಬರ್ತಿರಲಿಲ್ಲ. ಇವತ್ತು ಕಂಟಿನ್ಯೂಯಸ್ ಆಗಿ ಕಾಲ್ಸ್ ಬರ್ತಿದೆ. ಜನ ಯಾಕೆ ಎರಡು ಫೋನ್, ಎರಡು ನಂಬರ್ ಇಟ್ಟುಕೊಳ್ತಾರೆ ಅನ್ನೋದು ಇವತ್ತು ಅರ್ಥವಾಗ್ತಿದೆ. ಇದೆಲ್ಲಾ ನಾನು ಮಾಡಿದ ಕೆಲಸಕ್ಕೆ ಸಿಕ್ಕ ಫಲ."
ಕದ್ದುಮುಚ್ಚಿ ಥಿಯೇಟರ್‌ನಲ್ಲಿ ಪ್ರೇಕ್ಷಕರ ಕಣ್ಣೀರು ನೋಡಿದ ನಟ!
ಯಶಸ್ಸು ತಲೆಗೇರದಂತೆ ಇಂದಿಗೂ ಪ್ರೇಕ್ಷಕನ ಸ್ಥಾನದಲ್ಲೇ ನಿಂತಿರುವ ಶ್ರೀರಾಮ್, ಇತ್ತೀಚೆಗೆ ಯಾರಿಗೂ ತಿಳಿಯದಂತೆ ಥಿಯೇಟರ್‌ಗೆ ತೆರಳಿ ಪ್ರೇಕ್ಷಕರ ಜೊತೆ ಸಿನಿಮಾ ನೋಡಿದ್ದಾರೆ.
‘ನಾನು ನಟನಾಗೋದಕ್ಕಿಂತ ಮುಂಚೆ ಒಬ್ಬ ಸಾಮಾನ್ಯ ಪ್ರೇಕ್ಷಕ. ಸಿನಿಮಾ ಮುಗಿದ ಮೇಲೆ ಜನ ಯಾವ ಸೀನ್‌ಗೆ ಎಂಜಾಯ್ ಮಾಡ್ತಾರೆ, ಕೊನೆಯಲ್ಲಿ ಕಣ್ಣೀರು ಹಾಕಿದ್ರಾ ಅನ್ನೋದನ್ನ ನೋಡೋಕೆ ಕದ್ದುಮುಚ್ಚಿ ಹೋಗಿ ನೋಡಿದೆ. ಜನ ಥಿಯೇಟರ್‌ನಲ್ಲಿ ಕ್ಲೈಮ್ಯಾಕ್ಸ್ ನೋಡಿ ಅಳ್ತಾ ಇರೋದನ್ನ ನೋಡಿದಾಗ ಎದೆಯುಬ್ಬಿ ಬಂತು. ದೇವರ ಕೃಪೆ ಮತ್ತು ರಾಯರ ಆಶೀರ್ವಾದ ಇಲ್ಲದೆ ಇದು ಸಾಧ್ಯವಿಲ್ಲ.’
3 ಕೋಟಿ ಬಜೆಟ್.. 33 ಕೋಟಿ ಬಾಕ್ಸ್ ಆಫೀಸ್: ಜನರಿಗೆ ಬೇಕಿರೋದು ಕಂಟೆಂಟ್!
ಇವತ್ತಿನ ಪ್ಯಾನ್ ಇಂಡಿಯಾ ಮತ್ತು ನೂರಾರು ಕೋಟಿ ಬಜೆಟ್ ಸಿನಿಮಾಗಳ ನಡುವೆ ಈ ಪುಟ್ಟ ಸಿನಿಮಾ ಮಾಡಿರುವ ಕಲೆಕ್ಷನ್ ಧೂಳೆಬ್ಬಿಸಿದೆ. ಇದರ ಬಗ್ಗೆ ಮಾತನಾಡುತ್ತಾ:
"ಚಿಕ್ಕ ಸಿನಿಮಾ, ದೊಡ್ಡ ಸಿನಿಮಾ ಅನ್ನೋದು ಬಜೆಟ್‌ನಿಂದ ಅಳೆಯಬಾರದು. ನಾವು ಹಾಕಿರೋ ಪರಿಶ್ರಮ, ಪ್ರಾಮಾಣಿಕತೆಯಿಂದ ಅಳೆಯಬೇಕು. ಜನರಿಗೆ ಕೋಟಿ ಕೋಟಿ ಬಜೆಟ್‌ಗಿಂತ ಒಳ್ಳೆ ಕಥೆ, ಮನಸ್ಸಿಗೆ ಮುಟ್ಟುವ ಹಾಡುಗಳು, ಎಮೋಷನ್ಸ್ ಇರೋ ಫೀಲ್ ಗುಡ್ ಮೂವಿ ಬೇಕು. 'ಇಷ್ಟು ಕೋಟಿ ಖರ್ಚು ಮಾಡಿದ್ದೀವಿ, ಬಂದು ನೋಡಿ' ಅಂತ ನಾವು ಹೇಳೋಕಾಗಲ್ಲ. ಇವತ್ತು ನಮ್ಮ ಕನ್ನಡ ಸಿನಿಮಾ ಇಷ್ಟು ದುಡ್ಡು ಮಾಡ್ತಿದೆ ಅಂತ ಹೆಮ್ಮೆಯಿಂದ ಜನರೇ ಮಾತಾಡಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರ ಹೃದಯ ಶ್ರೀಮಂತಿಕೆ ಮುಂದೆ ಬಜೆಟ್ ಗೌಣ."
ಕಿರುತೆರೆಯಿಂದ ಬೆಳ್ಳಿತೆರೆಗೆ: "ಬರೆದ ಹಾಳೆ ಮೇಲೆ ತಿದ್ದಿ ಬರೆಯೋದು ಬಾರಿ ಕಷ್ಟ"
ಟಿವಿ ಸೀರಿಯಲ್‌ಗಳಿಂದ ಸಿನಿಮಾಗೆ ಬಂದು ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ ಎಂಬುದನ್ನು ಶ್ರೀರಾಮ್ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ:
ಇದು ರಾತ್ರೋರಾತ್ರಿ ಸಿಕ್ಕ ಯಶಸ್ಸಲ್ಲ, ಇದು ನನ್ನ ಐದನೇ ಸಿನಿಮಾ. ಟಿವಿಯಲ್ಲಿ ಜನ ನಮ್ಮನ್ನು ಪ್ರತಿದಿನ ನೋಡಿ ಒಂದು ಪಾತ್ರದ ಮೂಲಕ ಅವರ ಮನೆಯ ಮಗನಂತೆ ಒಪ್ಪಿಕೊಂಡಿರುತ್ತಾರೆ. ಖಾಲಿ ಹಾಳೆಯ ಮೇಲೆ ಬರೆಯುವುದು ಸುಲಭ, ಆದರೆ ಈಗಾಗಲೇ ಬರೆದಿರುವ ಹಾಳೆಯಲ್ಲಿ ಹಳೆಯದನ್ನು ಅಳಿಸಿ, ತಿದ್ದಿ ಹೊಸ ಇಮೇಜ್ (ಸಂತು ಪಾತ್ರ) ಕೊಡುವುದು ತುಂಬಾ ಕಷ್ಟ. ಆದರೆ ಜನರು ನನ್ನ ಹಳೆಯ ಇಮೇಜ್ ಮರೆತು 'ಸಂತು'ವಾಗಿ ಅಪ್ಪಿಕೊಂಡಿದ್ದಾರೆ.
ಕನ್ನಡ ಸಿನಿಮಾರಂಗದಲ್ಲಿ ಕಂಟೆಂಟ್ ಇರುವ ಕಥೆಗಳಿಗೆ ಎಂದಿಗೂ ಸಾವಿಲ್ಲ ಎಂಬುದನ್ನು 'ಪ್ರೇಮದ ಊರಲಿ' ಸೃಷ್ಟಿಸಿರುವ ಈ ಜನಪ್ರವಾಹ ಮತ್ತೊಮ್ಮೆ ಸಾಬೀತುಪಡಿಸಿದೆ.


