‘ಕಾಂತಾರ’ ಖ್ಯಾತಿಯ ರುಕ್ಮಿಣಿ ವಸಂತ್ ಕಾಲಿವುಡ್‌ಗೆ ಮರಳಿದ್ದಾರೆ. ಎಸ್.ಎಸ್. ಶ್ರೀ ಕಾರ್ತಿಕ್ ನಿರ್ದೇಶನದ ಹೊಸ ತಮಿಳು ಚಿತ್ರದಲ್ಲಿ ‘ತಾರಾ’ ಆಗಿ ಕಾಣಿಸಿಕೊಳ್ಳಲಿದ್ದು, 2027ರಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ’ ಹಾಗೂ ‘ಕಾಂತಾರ’ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ರುಕ್ಮಿಣಿ ವಸಂತ್ ಈಗ ಪರಭಾಷೆಯಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಬೆನ್ನಲ್ಲೇ ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲೂ ಬ್ಯುಸಿಯಾಗಿರುವ ರುಕ್ಮಿಣಿ, ಇದೀಗ ಮತ್ತೊಮ್ಮೆ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಶುಕ್ರವಾರ ತಮ್ಮ ಹೊಸ ತಮಿಳು ಸಿನಿಮಾವನ್ನು ಘೋಷಿಸಿರುವ ಅವರು, ಈ ಬಾರಿ ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ತಮಿಳಿನಲ್ಲಿ ರುಕ್ಮಿಣಿ ವಸಂತ್ ಹೊಸ ಸಿನಿಮಾ ಘೋಷಣೆ!

‘ಏಸ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪರಿಚಯವಾಗಿದ್ದ ರುಕ್ಮಿಣಿ ವಸಂತ್, ಬಳಿಕ ‘ಮದರಾಸಿ’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಂದು ತಮಿಳು ಸಿನಿಮಾಗೆ ಸಹಿ ಹಾಕುವ ಮೂಲಕ ಕಾಲಿವುಡ್‌ನಲ್ಲಿ ತಮ್ಮ ಪ್ರಯಾಣವನ್ನು ಮುಂದುವರಿಸಿದ್ದಾರೆ. ತಮಿಳಿನ ‘ಕನಂ’, ತೆಲುಗಿನ ‘ಒಕೆ ಒಕ ಜೀವಿತಂ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಎಸ್.ಎಸ್. ಶ್ರೀ ಕಾರ್ತಿಕ್ ಈ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಘೋಷಣೆಯ ಜೊತೆಗೆ ರುಕ್ಮಿಣಿ ಅವರ ಪಾತ್ರದ ಪರಿಚಯ ಮಾಡಿಕೊಡುವ ಟೀಸರ್ ಕೂಡ ಬಿಡುಗಡೆಯಾಗಿದೆ.

‘ತಾರಾ’ ಆಗಿ ಕಾಣಿಸಿಕೊಳ್ಳಲಿರುವ ಕನಕವತಿ!

ಈ ಹೊಸ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ‘ತಾರಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಡುಗಡೆಯಾಗಿರುವ ಟೀಸರ್ ಗಮನಿಸಿದರೆ, ಇದೊಂದು ವಿಭಿನ್ನ ಪ್ರಯಾಣದ ಕಥೆಯಾಗಿರುವ ಸುಳಿವು ಸಿಗುತ್ತದೆ. ಅಂದರೆ, ಈ ಬಾರಿ ನಟಿ ಟ್ರಾವೆಲ್ ಸ್ಟೋರಿಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ರುಕ್ಮಿಣಿ ಜೊತೆಗೆ ದೇವ್ ರಾಮ್‌ನಾಥ್ ಮತ್ತು ವಿನಾಯಕ್ ವೈದಿನಾಥನ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದ್ದು, 2027ರಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

ದಕ್ಷಿಣದ ಚಿತ್ರರಂಗಗಳಲ್ಲಿ ರುಕ್ಮಿಣಿಗೆ ಹೆಚ್ಚಿದ ಬೇಡಿಕೆ!

ರುಕ್ಮಿಣಿ ವಸಂತ್ ಸದ್ಯ ದಕ್ಷಿಣ ಭಾರತದ ಹಲವು ಚಿತ್ರರಂಗಗಳಲ್ಲಿ ಬ್ಯುಸಿಯಾಗಿರುವ ನಟಿ. ಕನ್ನಡದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಅವರು, ಈಗ ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲೂ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಕನ್ನಡದ ‘ಮಂಗಳಗೌರಿ’ ಚಿತ್ರದಲ್ಲಿ ರುಕ್ಮಿಣಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಹಿರಿಯ ನಟಿ ಮಾಲಾಶ್ರೀ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಜೂನಿಯರ್ ಎನ್‌ಟಿಆರ್ ಅಭಿನಯದ ತೆಲುಗು ಸಿನಿಮಾ ‘ಡ್ರ್ಯಾಗನ್’ನಲ್ಲೂ ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಇದರ ಜತೆಗೆ ಮಲಯಾಳಂ ನಟ ನಿವಿನ್ ಪೌಲಿ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಸಿನಿಮಾದಲ್ಲೂ ಅವರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ರುಕ್ಮಿಣಿ, ಇದೀಗ ಹೊಸ ತಮಿಳು ಚಿತ್ರದ ಮೂಲಕ ತಮ್ಮ ಸಿನಿ ಪಯಣಕ್ಕೆ ಮತ್ತೊಂದು ಭಾಷೆಯನ್ನು ಸೇರಿಸಿಕೊಂಡಿದ್ದಾರೆ. ‘ಕಾಂತಾರ’ದ ಕನಕವತಿ ಎಂದೇ ಕನ್ನಡಿಗರ ಮನಗೆದ್ದಿರುವ ರುಕ್ಮಿಣಿ ವಸಂತ್, ಈಗ ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಬೇಡಿಕೆಯ ನಟಿಯಾಗಿ ಬೆಳೆಯುತ್ತಿದ್ದಾರೆ. ಅವರ ಹೊಸ ತಮಿಳು ಸಿನಿಮಾ ಯಾವ ಶೀರ್ಷಿಕೆಯಲ್ಲಿ ಬರಲಿದೆ, ‘ತಾರಾ’ ಪಾತ್ರದ ಮೂಲಕ ಅವರು ಹೇಗೆ ಮೋಡಿ ಮಾಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.