ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಅವರು ತಮ್ಮ ಜೀವನದ ಕಷ್ಟದ ಸಮಯದಲ್ಲಿ ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದರು. ಆದರೆ, ಜೀವನದ ಪರೀಕ್ಷೆಗಳನ್ನು ಎದುರಿಸಲು ದೇವರೇ ಶಕ್ತಿ ನೀಡುತ್ತಾನೆ ಎಂಬ ಸತ್ಯವನ್ನು ಅರಿತುಕೊಂಡಿದ್ದಾಗಿ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.

ಚೆನ್ನೈ: ಭಾರತದ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಅವರು, ತಮ್ಮ ಜೀವನದ ಒಂದು ಹಂತದಲ್ಲಿ ದೇವರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದರಂತೆ. ನಾನು ಅಂಥದ್ದೇನು ತಪ್ಪು ಮಾಡಿದ್ದೆ? ಯಾಕೆ ದೇವರು ನನಗೆ ಇಂಥ ಶಿಕ್ಷೆ ಕೊಟ್ಟ? ನಾನು ಯಾರಿಗಾದರೂ ನೋವುಂಟು ಮಾಡಿದ್ನಾ? ಅಂತ ತಮಗೆ ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದರಂತೆ. ಧನ್ಯಾ ವರ್ಮಾ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಚಿತ್ರಾ, ಕಳೆದುಹೋದ ದೇವರ ನಂಬಿಕೆ ತಮಗೆ ಮತ್ತೆ ಹೇಗೆ ಬಂತು ಎಂಬುದರ ಬಗ್ಗೆಯೂ ವಿವರಿಸಿದ್ದಾರೆ.

"ಒಂದು ಸಮಯದಲ್ಲಿ ನನಗೂ ದೇವರ ಮೇಲಿನ ನಂಬಿಕೆ ಹೊರಟು ಹೋಗಿತ್ತು. ಆಗ ಯೋಚನೆ ಮಾಡ್ತಿದ್ದೆ, 'ನಾನು ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆ? ಯಾಕೆ ನನಗೆ ಇಂಥಾ ಶಿಕ್ಷೆ? ನಾನು ಯಾರಿಗಾದ್ರೂ ನೋವು ಕೊಟ್ಟನಾ? ರಿಯಾಲಿಟಿ ಶೋಗಳಲ್ಲಿ ಮಕ್ಕಳ ತಪ್ಪುಗಳನ್ನು ಹೇಳಿದ್ದು ಅವರಿಗೆ ಬೇಜಾರಾಯ್ತಾ? ಅವರ ಶಾಪ ಏನಾದ್ರೂ ತಟ್ಟಿತಾ?' ಈ ರೀತಿ ಏನೇನೋ ಯೋಚನೆಗಳು ತಲೆಗೆ ಬರುತ್ತಿದ್ದವು," ಎಂದು ಕೆ.ಎಸ್. ಚಿತ್ರಾ ಹೇಳಿದ್ದಾರೆ.

ಪರೀಕ್ಷೆಗಳನ್ನು ಎದುರಿಸಲು ಆ ದೇವರೇ ಶಕ್ತಿ ನೀಡ್ತಾನೆ

"ಆದರೆ, ಅಂಥ ಸಮಯದಲ್ಲಿ ನಮಗೆ ದಾರಿ ತೋರಿಸಲು ದೇವರು ಬೇರೆ ಬೇರೆ ರೂಪದಲ್ಲಿ ಸಂದೇಶವಾಹಕರನ್ನು ಕಳುಹಿಸುತ್ತಾನೆ. ದೇವರು ಇದ್ದಾನೆ ಅಂತ ನಾನು ನಂಬುವುದೇ ಈ ಕಾರಣಕ್ಕೆ. ಆ ಘಟನೆ ನಡೆಯೋವರೆಗೂ, ಏನಾದ್ರೂ ಕಷ್ಟ ಬಂದ್ರೆ ದೀಪ ಹಚ್ಚಿ, ಇಷ್ಟು ವರ್ಷ ದೇವರ ನಾಮಸ್ಮರಣೆ ಮಾಡಿದ್ರೂ ಯಾಕೆ ಹೀಗಾಯ್ತು ಅಂತ ಯೋಚಿಸುತ್ತಿದ್ದೆ. ಆದರೆ, ನಂತರ ನನಗೆ ಅರ್ಥವಾಯಿತು, ನಮ್ಮ ಹಣೆಬರಹದಲ್ಲಿ ಏನಿದೆಯೋ ಅದು ಆಗಿಯೇ ಆಗುತ್ತೆ. ಜೀವನದಲ್ಲಿ ಪರೀಕ್ಷೆಗಳು ಇದ್ದೇ ಇರುತ್ತವೆ. ಆ ಪರೀಕ್ಷೆಗಳನ್ನು ಎದುರಿಸುವ ಶಕ್ತಿಯನ್ನು ದೇವರು ನಮಗೆ ಕೊಡುತ್ತಾನೆ," ಎಂದು ಚಿತ್ರಾ ತಮ್ಮ ಮಾತು ಮುಗಿಸಿದರು.

ಇದನ್ನೂ ಓದಿ: 1988ರಲ್ಲಿ ಮಿಸ್ ಆದ ಕ್ಷಣವನ್ನು ಸೆರೆ ಹಿಡಿದುಕೊಂಡ ಸುಧಾರಾಣಿ; ಆಮೀರ್ ಖಾನ್ ಜೊತೆ ಫೋಟೋ

2011ರಲ್ಲಿ ಚಿತ್ರಾ ಪುತ್ರಿಯ ಸಾವು

ಕೆ.ಎಸ್. ಚಿತ್ರಾ ಅವರ ಎಂಟು ವರ್ಷದ ಮಗಳು ನಂದನಾ, ಏಪ್ರಿಲ್ 14, 2011 ರಂದು ದುಬೈನ ಎಮಿರೇಟ್ಸ್ ಹಿಲ್ಸ್‌ನಲ್ಲಿರುವ ವಿಲ್ಲಾವೊಂದರಲ್ಲಿ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಚಿತ್ರಾ ಸಂಗೀತ ಕಚೇರಿಗೆ ತಯಾರಿ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿತ್ತು. ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಮಗಳು ಬದುಕುಳಿದಿರಲಿಲ್ಲ. ಮಗಳ ಸಾವಿನ ಬಗ್ಗೆ ಚಿತ್ರಾ ಹಲವು ಹೇಳಿಕೊಂಡಿದ್ದಾರೆ. ಇತ್ತೀಚಿನ ಸಂದರ್ಭದಲ್ಲಿ ನಿಖರವಾಗಿ ಯಾವುದೇ ವಿಷಯವನ್ನು ಉಲ್ಲೇಖಿಸದೇ ಚಿತ್ರಾ ಮಾತನಾಡಿದ್ದಾರೆ.

ಇದನ್ನೂ ಓದಿ: ಆಶಾ ಭೋಸ್ಲೆ ಹೆಸರಿನಲ್ಲಿರೋ ಗಿನ್ನೆಸ್ ದಾಖಲೆ ಕೇಳಿದ್ರೆ ನಿಜಕ್ಕೂ ಭಾರತೀಯರಿಗೆ ಹೆಮ್ಮೆ ಆಗುತ್ತೆ!