ದೇಶಾದ್ರಿ ಹೊಸ್ಮನೆ

ರಶ್ಮಿಕಾ ಬೆಂಗಳೂರಿನಲ್ಲೇ ಇರೋದಾ?

ಅನುಮಾನವೇ ಬೇಡ, ನಾನು ಇಲ್ಲೇ ಇರೋದು. ನನ್ನೂರು ಇದು ಅಂದ್ಮೇಲೆ, ಮತ್ತೊಂದು ಊರು ನನಗ್ಯಾಕೆ? ನಾನು ಕನ್ನಡತಿ, ಕನ್ನಡವೇ ನನ್ನ ಆದ್ಯತೆ.

ರಶ್ಮಿಕಾ ಟಾಲಿವುಡ್‌ಗೆ ಹಾರಿ ಕನ್ನಡ ಮರೆತು ಬಿಟ್ರು ಎನ್ನುವ ಟೀಕೆಗಳಿಗೆ ಏನಂತೀರಿ?

ಸುದ್ದಿಯಲ್ಲಿರುವ ಜನರ ಬಗ್ಗೆ ಕೆಲವರಿಗೆ ಏನೇನೋ ಮಾತನಾಡುವ ಅಭ್ಯಾಸ. ಅವರ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ನಾನು ಮತ್ತೆ ಮತ್ತೆ ಹೇಳುತ್ತಿದ್ದರೂ ಸೋಷಲ್‌ ಮೀಡಿಯಾದಲ್ಲಿ ಕೆಲವರು ಹಾಗೆ ಟ್ರೋಲ್‌ ಮಾಡುತ್ತಾರೆ, ಮಾತನಾಡುತ್ತಾರೆ, ಅವರಿಗೆ ನಾನು ಮತ್ತೆ ಮತ್ತೆ ಉತ್ತರಿಸುವಷ್ಟು ಸಮಯ ಇಲ್ಲ. ನನ್ನ ಕೆಲಸವನ್ನು ನಾನು ಮಾಡುತ್ತಿರುತ್ತೇನೆ. ಅವರ ಕೆಲಸ ಅವರು ಮಾಡಲಿ ಬಿಡಿ.

ಈಗ ‘ಯಜಮಾನ’ನ ಜತೆಗೆ ಬರುತ್ತಿದ್ದೀರಿ, ಹೇಗನಿಸುತ್ತೆ?

ಪ್ರತಿ ಸಿನಿಮಾವೂ ನನಗೆ ವಿಶೇಷ ಮತ್ತು ಹೊಸ ಸಿನಿಮಾದ ಹಾಗೆಯೇ. ಈ ಸಿನಿಮಾ ಕೂಡ ಅದಕ್ಕಿಂತ ಭಿನ್ನವಾಗಿಲ್ಲ. ಮೊದಲ ಸಿನಿಮಾ ‘ಕಿರಿಕ್‌ ಪಾರ್ಟಿ’ಯ ರಿಲೀಸ್‌ ಟೈಮ್‌ನಲ್ಲಿದ್ದ ಎಕ್ಸೈಟ್‌ಮೆಂಟ್‌ ಈ ಸಿನಿಮಾದಲ್ಲೂ ಇದೆ. ಯಾಕಂದ್ರೆ, ನಾನಿನ್ನು ಇಲ್ಲಿಗೆ ನ್ಯೂ ಕಮರ್‌. ನಟನೆಯನ್ನೇ ವೃತ್ತಿಯಾಗಿ ಸ್ವೀಕರಿಸಿದಾಗ ಅದರ ಭವಿಷ್ಯದ ಬಗ್ಗೆಯೂ ಯೋಚನೆ ಇರಬೇಕು. ಒಂದಾದ ನಂತರ ಒಂದು ಹೇಗೆ ಎನ್ನುವ ಆಲೋಚನೆ ಇರಬೇಕು. ಆ ಹಾದಿಯಲ್ಲಿ ನನಗೆ ಪ್ರತಿ ಸಿನಿಮಾವೂ ಮುಖ್ಯ.

ದರ್ಶನ್‌ ಅವರ ಜತೆಗೆ ಅಭಿನಯಿಸುವ ಅವಕಾಶ ಬಂದಾಗ, ನಿಮಗೆ ಅನಿಸಿದ್ದೇನು?

ಮೊದಲಿಗೆ ಥ್ರಿಲ್‌ ಆದೆ. ಅದಕ್ಕೆ ಕಾರಣ ದರ್ಶನ್‌ ಅವರ ಜತೆಗೆ ಅಭಿನಯಿಸುವ ಅವಕಾಶ ಸಿಕ್ತು ಅಂತ. ಹಾಗೆ ನೋಡಿದ್ರೆ ನನಗಿದು ಸೆಕೆಂಡ್‌ ಚಾನ್ಸ್‌. ಆಗಲೇ ಒಂದು ಚಾನ್ಸ್‌ ಬಂದಿತ್ತು. ಅದು ಕಾರಣಾಂತರದಿಂದ ಕೈ ತಪ್ಪಿ ಹೋಗಿತ್ತು. ಆ ನಂತರ ಮತ್ತೆ ಅವಕಾಶ ಬಂತು ಅಂತ ಖುಷಿ ಆಯ್ತು. ಅವರ ಜತೆಗೆ ಅಭಿನಯಿಸುವುದು ಎಷ್ಟುಕಷ್ಟವೋ ಅಂಥ ಭಯವೂ ಆಗಿತ್ತು. ಆದ್ರೆ ಅವೆಲ್ಲ ಆ ಕ್ಷಣಕ್ಕೆ ಮಾತ್ರ ಅಂತ ಸೆಟ್‌ಗೆ ಹೋದಾಗ ನನಗಾದ ಅನುಭವ.

ಯಜಮಾನ ಟೈಟಲ್‌ಗೂ ಒಂದು ದೊಡ್ಡ ಮಹತ್ವ ಇದೆ, ಈ ಟೈಟಲ್‌ ಕೇಳಿದಾಗ ನಿಮಗನಿಸಿದ್ದೇನು?

ಯಜಮಾನ ಅಂದಾಕ್ಷಣ ಕನ್ನಡದ ಚಿತ್ರಪ್ರೇಮಿಗಳಿಗೆ ನನಪಾಗುವುದು ವಿಷ್ಣು ಸರ್‌. ಅವರು ಅಭಿನಯಿಸಿದ್ದ ಚಿತ್ರದ ಟೈಟಲ್‌ನಲ್ಲೇ ಒಂದು ಸಿನಿಮಾ ಆಗುತ್ತಿದ್ದು, ಅದರಲ್ಲಿ ನಾನು ನಾಯಕಿ ಆಗುವ ಅವಕಾಶವೇ ಅಂತ ಅಂದಾಗ ಸಹಜವಾಗಿಯೇ ನನಗೆ ಮೊದಲು ನೆನಪಾಗಿದ್ದು ವಿಷ್ಣು ಸರ್‌. ಅವರ ವ್ಯಕ್ತಿತ್ವಕ್ಕೆ ಅಂಟಿಕೊಂಡ ಅಷ್ಟುದೊಡ್ಡ ಟೈಟಲ್‌ಗೆ ನ್ಯಾಯ ಒದಗಿಸುತ್ತಾರಾ ಹೇಗೆ ಏನೋ ಎನುತ್ತಿದ್ದಾಗ ‘ನೀನು ನಿನ್ನ ಪಾತ್ರ ಮಾಡಮ್ಮ ಸುಮ್ನೆ, ನಿರ್ದೇಶಕರು ಆ ಕೆಲಸ ಮಾಡ್ತಾರೆ’ ಅಂತ ನಿರ್ಮಾಪಕರಾದ ಸುರೇಶ್‌ ಸರ್‌ ಹೇಳಿದ್ರು. ಇವತ್ತು ಅದು ಆಗಿದೆ. ಪ್ರೇಕ್ಷಕರಿಗೂ ಅದು ಇಷ್ಟವಾಗುತ್ತೆ.

ದರ್ಶನ್‌ ಮತ್ತು ನಿಮ್ಮ ಕಾಂಬಿನೇಷನ್‌ ಬಗ್ಗೆ ಸಿಕ್ಕಾಪಟ್ಟೆಟಾಕ್‌ ಇದೆ...

ಹೌದು, ಇಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ ಎನ್ನುವುದು ಚಿತ್ರತಂಡದ ಮಾತು ಕೂಡ. ಆರಂಭದಲ್ಲೇ ಇಂತಹ ಮೆಚ್ಚುಗೆ ಸಿಕ್ಕರೆ ನಮಗೂ ಖುಷಿ. ಪ್ರೇಕ್ಷಕರಿಗೆ ಅದು ತುಲುಪುತ್ತದೆ ಎನ್ನುವ ನಂಬಿಕೆ. ನಾವಿಬ್ಬರು ತೆರೆ ಮೇಲೆ ಬಂದಾಗ ಕಾಮಿಡಿಯಿದೆ. ರೊಮ್ಯಾನ್ಸ್‌ ಇದೆ. ನೋಡುವುದಕ್ಕೂ ಚೆಂದ ಎನಿಸುತ್ತೆ. ಅಷ್ಟುಮಾತ್ರ ನಾನಿಲ್ಲಿ ಹೇಳುತ್ತೇನೆ.

ದರ್ಶನ್‌ ಅವರ ವ್ಯಕ್ತಿತ್ವದ ಬಗ್ಗೆ ಹೇಳೋದಾದ್ರೆ?

ನಾನು ಕಂಡ ಉತ್ತಮ ಹ್ಯೂಮನ್‌ ಬೀಯಿಂಗ್‌. ಅಷ್ಟುದೊಡ್ಡ ನಟರಾದರೂ, ಕಿಂಚಿತ್ತು ಅಹಂಕಾರ ಇಲ್ಲ. ಅವರು ಮಗು ಥರ. ನಾನು ಹೊಸಬಳು, ನಟನೆ ಕಲಿಯಬೇಕಾದ ಹುಡುಗಿ ಅಂತ ಯಾವತ್ತಿಗೂ ನನ್ನ ನೋಡಲಿಲ್ಲ. ಅವರ ಮಾತುಗಳಲ್ಲೂ ಆ ರೀತಿಯ ಗುಣ ಕಾಣಲಿಲ್ಲ. ಹೊಸಬರನ್ನು ಪ್ರೋತ್ಸಾಹಿಸುವ, ಹಾಗಲ್ಲ-ಹೀಗೆ ಅಂತ ನಟನೆಯನ್ನು ಕಲಿಸುವ ರೀತಿ, ಮೇಲಾಗಿ ಸೆಟ್‌ನಲ್ಲಿ ನಮ್ಮನ್ನು ನೋಡಿ ಕೊಳ್ಳುವ ರೀತಿ ಅತ್ಯದ್ಭುತ.

‘ಪೊಗರು’ ಚಿತ್ರದಲ್ಲೂ ರಶ್ಮಿಕಾ ಸಿಕ್ಕಾಪಟ್ಟೆಬೋಲ್ಡ್‌ ಕ್ಯಾರೆಕ್ಟರ್‌ ಮಾಡುತ್ತಿದ್ದಾರೆನ್ನುವುದು ನಿಜವಾ?

ಬೋಲ್ಡ್‌ ಅಂತೇನೂ ಇಲ್ಲ. ಅಲ್ಲಿ ನಾನು ಒಂಥರ ಟೀಚರ್‌ ಇದ್ದ ಹಾಗೆ. ಹೀರೋಗೆ ಸಾಮಾಜಿಕ ಕಾಳಜಿ ಬಗ್ಗೆ ಪಾಠ ಮಾಡುತ್ತೇನೆ. ಹಾಗಲ್ಲ, ಹೀಗೆ ಅಂತ ಹೇಳುತ್ತಿರುತ್ತೇನೆ. ಆ ಮಟ್ಟಿಗೆ ಅದು ಕೂಡ ತುಂಬಾ ಡಿಫರೆಂಟ್‌ ಕ್ಯಾರೆಕ್ಟರ್‌. ಪ್ರತಿ ಸಿನಿಮಾಕ್ಕೂ ಈ ರೀತಿಯ ಡಿಫರೆಂಟ್‌ ಪಾತ್ರ ಸಿಕ್ಕರೆ ಅಭಿನಯಿಸುವುದಕ್ಕೂ ಖುಷಿ ಆಗುತ್ತೆ. ಸದಾ ನಾನು ಬಯಸೋದು ಇಂತಹ ಪಾತ್ರಗಳನ್ನೇ.

ಕನ್ನಡದಲ್ಲಿ ಬ್ಯುಸಿ ಆಗುತ್ತಿದ್ದೀರಿ, ಅತ್ತ ಟಾಲಿವುಡ್‌ನಲ್ಲಿ ಹೇಗಿದೆ ನಿಮ್ಮ ಸಿನಿ ಜರ್ನಿ?

ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದೇನೆ. ಪೊಗರು ಶೂಟಿಂಗ್‌ ಟೈಮ್‌ನಲ್ಲೇ ಡಿಯರ್‌ ಕಾಮ್ರೆಡ್‌ ಶೂಟಿಂಗ್‌ ಕೂಡ ನಡೆಯುತ್ತಿದೆ. ಬಿಡುವು ಇಲ್ಲ. ಭೀಷ್ಮ ಹೆಸರಿನ ಮತ್ತೊಂದು ಸಿನಿಮಾಕ್ಕೆ ಇನ್ನು ಶೂಟಿಂಗ್‌ ಶುರುವಾಗಬೇಕಿದೆ. ಜರ್ನಿ ಚೆನ್ನಾಗಿದೆ. ನಟರು ಬ್ಯುಸಿ ಆಗಿದ್ದಷ್ಟುಒಳ್ಳೆಯದು ಅಲ್ವಾ?

ರಶ್ಮಿಕಾಳಂಥ ಮಗಳು ನಿಜ ಜೀವನದಲ್ಲಿ ಬೇಕೆಂದ ನಟ ಶಂಕರ್ ಅಶ್ವಥ್!

ಸೌತ್‌ನ ಕೆಲವು ಸ್ಟಾರ್‌ಗಳ ಜತೆಗೆ ರಶ್ಮಿಕಾ ಹೆಸರು ಕೇಳಿಬರುತ್ತಿದೆ ಎನ್ನುವ ರೂಮರ್ಸ್‌ಗಳ ಬಗ್ಗೆ ...

ಜಸ್ಟ್‌ ಇಗ್ನೋರ್‌. ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಸೋಷಲ್‌ ಮೀಡಿಯಾದಲ್ಲಿನ ಟ್ರೋಲ್‌ಗಳ ಬಗ್ಗೆ...

ಇದು ನನಗೊಬ್ಬಳಿಗೆ ಅಲ್ಲ ಬಿಡಿ, ಬಾಲಿವುಡ್‌ನ ಬಿಗ್‌ಬಿ ಅಮಿತಾಬ್‌ ಬಚ್ಚನ್‌ ಅವರಿಗೂ ಬಿಟ್ಟಿಲ್ಲ. ಅವೆಲ್ಲವನ್ನು ನೋಡುವಷ್ಟು, ಪ್ರತಿಕ್ರಿಯಿಸುವಷ್ಟುನನಗೆ ಸಮಯ ಇಲ್ಲ. ಇಷ್ಟಕ್ಕೂ ನಾನೇಕೆ ನನ್ನ ಟೈಮ್‌ ವೆಸ್ಟ್‌ ಮಾಡ್ಬೇಕು. ನಂಗೂ ಮಾಡ್ಲಿಕ್ಕೆ ಸಾಕಷ್ಟುಕೆಲಸ ಇದೆ. ಆ ಕಡೆಯಷ್ಟೇ ನನ್ನ ಗಮನ. ಕೆಲವೊಮ್ಮೆ ಕೆಲವನ್ನು ಸಹಿಸಿಕೊಳ್ಳಲೇಬೇಕಾಗುತ್ತದೆ. ಅಷ್ಟುತಾಳ್ಮೆ ನನಗೂ ಬಂದಿದೆ.ಅದೇನೆ ಆದ್ರೂ ನಮ್ಮ ಕೆಲಸ ನಾವು ಮಾಡುತ್ತೀರಬೇಕು. ಅವರ ಕೆಲಸ ಅವರು ಮಾಡುತ್ತಿರಲಿ.

ನೀವು ಸೋಷಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಇರ್ತಿರಿ..

ಪ್ರೇಕ್ಷಕರನ್ನು, ಅಭಿಮಾನಿಗಳನ್ನು ಸುಲಭವಾಗಿ ತಲುಪಬಹುದಾದ ಮಾಧ್ಯಮವದು. ಈಗ ಅದರಲ್ಲಿ ಆ್ಯಕ್ಟಿವ್‌ ಆಗಿರಲೇಬೇಕು. ಹಾಗಂತ ಟ್ರೋಲ್‌ಗಳು ಏನ್‌ ಬಂದಿವೆ, ಹೇಗಿವೆ ಅಂತ ನೋಡುವುದಕ್ಕಲ್ಲ. ಅನೇಕ ಒಳ್ಳೆಯ ಸಂಗತಿಗಳನ್ನು ಹಂಚಿಕೊಳ್ಳಬೇಕಾಗಿರುತ್ತದೆ. ಕೆಲವು ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕಾಗುತ್ತದೆ. ಆ ಕಾರಣಕ್ಕೆ ಮಾತ್ರ.

ರಶ್ಮಿಕಾರನ್ನು ವರಿಸಲು ಮುಂದಾದ ಹೈದರಾಬಾದ್ ಹುಡುಗ!

ಕನ್ನಡದ ನಿರ್ದೇಶಕರಿಗೆ ರಶ್ಮಿಕಾ ಈಗ ಅಷ್ಟುಸುಲಭವಾಗಿ ಸಿಗುತ್ತಿಲ್ಲ ಎನ್ನುವ ಆಕ್ಷೇಪಗಳಿವೆ...

ಖಂಡಿತಾ ಹಾಗಿಲ್ಲ. ನನಗೆ ನಿರ್ದೇಶಕರು ಹೊಸಬರು, ಹಳಬರು ಅಂತೇನು ಭೇದ ಭಾವ ಇಲ್ಲ. ಇಂತಹವರ ಸಿನಿಮಾಗಳಲ್ಲೇ ಅಭಿನಯಿಸಬೇಕು ಅಂತಲೂ ಇಲ್ಲ. ನನಗೆ ಕತೆ ಮುಖ್ಯ. ಹಾಗೆಯೇ ಪಾತ್ರವೂ ಮುಖ್ಯ. ನನ್ನ ಆದ್ಯತೆ ಅವರೆಡು ಮಾತ್ರ. ನಮ್ಮನ್ನು ನಾವು ಗುರುತಿಸಿಕೊಳ್ಳುವುದಕ್ಕೆ , ಪ್ರತಿಭೆ ತೋರಿಸಿಕೊಳ್ಳುವುದಕ್ಕೆ ಸಿಗುವ ಅವಕಾಶಗಳು ಅವು. ಅವು ಚೆನ್ನಾಗಿರಬೇಕೆನ್ನುವುದು ನನ್ನ ಡಿಮ್ಯಾಂಡ್‌ ಮಾತ್ರ.