'ಸೇವ್ ಬಾಕ್ಸ್' ಆನ್‌ಲೈನ್ ಹರಾಜು ಅಪ್ಲಿಕೇಶನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಲೆಯಾಳಂ ನಟ ಜಯಸೂರ್ಯ ಅವರ ₹39 ಲಕ್ಷ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ. ಜಯಸೂರ್ಯ ಈ ಸೇವ್‌ ಬಾಕ್ಸ್‌ ಅಪ್ಲಿಕೇಶನ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು .

ಎರ್ನಾಕುಲಂ: ಆನ್‌ಲೈನ್ ಹರಾಜು ಅಪ್ಲಿಕೇಶನ್ 'ಸೇವ್ ಬಾಕ್ಸ್' ನಲ್ಲಿ ನಡೆದ ಬಹುಕೋಟಿ ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆಯಾಳಂ ನಟ ಜಯಸೂರ್ಯ ವಿರುದ್ಧ ಜಾರಿ ನಿರ್ದೇಶನಾಲಯ (ED) ಕಠಿಣ ಕ್ರಮ ಕೈಗೊಂಡಿದೆ. ಹಗರಣದ ಮೂಲಕ ಅವರು ಕಳಂಕಿತ ಹಣವನ್ನು ಪಡೆದಿದ್ದಾರೆ ಎಂದು ಕಂಡುಬಂದ ನಂತರ ಜಾರಿ ನಿರ್ದೇಶನಾಲಯ (ED) ನಟ ಜಯಸೂರ್ಯ ಅವರಿಗೆ ಸೇರಿದ 39 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಜಯಸೂರ್ಯ ಸೇವ್ ಬಾಕ್ಸ್ ಅಪ್ಲಿಕೇಶನ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಸೇವೆ ಸಲ್ಲಿಸಿದ್ದರು. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ನಟನಿಗೆ ಬಂದ ಹೆಚ್ಚಿನ ಹಣ ಹೂಡಿಕೆದಾರರಿಗೆ ವಂಚಿಸಿದ ನಿಧಿಯಿಂದ ಬಂದಿದೆ ಎಂದು ಜಾರಿ ನಿರ್ದೇಶನಾಲಯದ ಆರೋಪವಾಗಿದೆ. ಪ್ರಸ್ತುತ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಯಸೂರ್ಯ ಅವರನ್ನು ಕೇರಳದ ಕೊಚ್ಚಿಯ ED ಕಚೇರಿಯಲ್ಲಿ ಎರಡು ಬಾರಿ ವಿಚಾರಣೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ನಟನನ್ನು ಆರೋಪಿಯನ್ನಾಗಿ ಮಾಡುವ ಸಾಧ್ಯತೆ ಇದೆ ಎಂದು ಕೆಲ ವರದಿಗಳು ಸೂಚಿಸಿವೆ.

ಇದನ್ನೂ ಓದಿ: ಬೇರೆಯವರ ವಸ್ತುಗಳನ್ನು ನಿಮ್ಮದೆಂದು ಪ್ರದರ್ಶಿಸಬೇಡಿ: ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಡಾಗ್ ವಿವಾದದ ಬಳಿಕ ಸರ್ಕಾರದ ಎಚ್ಚರಿಕೆ

ಸೇವ್ ಬಾಕ್ಸ್ ಹೂಡಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜಯಸೂರ್ಯ ಮತ್ತು ಅವರ ಪತ್ನಿ ಸರಿತಾ ಅವರ ಬ್ಯಾಂಕ್ ಖಾತೆಗಳಿಗೆ ಸರಿಸುಮಾರು 1 ಕೋಟಿ ರೂ. ಬಂದಿದೆ. ಈ ಮೊತ್ತವನ್ನು ಪ್ರಮುಖ ಆರೋಪಿ ಸ್ವಫಿಕ್ ರಹೀಮ್ ಅವರ ಖಾತೆಯಿಂದ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯವು ಹೇಳಿದರೆ. ಆದರೆ ಈ ಹಣವು ಕಂಪನಿಯ ಬ್ರಾಂಡ್ ರಾಯಭಾರಿಯಾಗಿದ್ದ ಅವರ ಸೇವೆಗಳಿಗೆ ಸಂಭಾವನೆಯಾಗಿ ಸಿಕ್ಕಿದ್ದು ಎಂದು ಜಯಸೂರ್ಯ ಹೇಳಿದ್ದಾರೆ.

ಏನಿದು ಸೇವ್ ಬಾಕ್ಸ್ ಹಗರಣ ?

ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್ ಫೋನ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳನ್ನು ಹರಾಜಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಯಶಸ್ವಿಯಾಗಿ ಗೆಲ್ಲಬಹುದು ಎಂಬ ಆಮಿಷದೊಂದಿಗೆ ಸೇವ್ ಬಾಕ್ಸ್ ಅಪ್ಲಿಕೇಶನ್ ತನ್ನ ಕಾರ್ಯಾಚರಣೆ ಪ್ರಾರಂಭಿಸಿತು. ತ್ರಿಶೂರ್ ಮೂಲದ ಸ್ವಫಿಕ್ ರಹೀಮ್ ಈ ಪ್ರಕರಣದ ಪ್ರಮುಖ ಆರೋಪಿ. ಹರಾಜಿನಲ್ಲಿ ಭಾಗವಹಿಸಲು, ಬಳಕೆದಾರರು ನಿಜವಾದ ಹಣವನ್ನು ಬಳಸಿಕೊಂಡು ನಾಣ್ಯಗಳನ್ನು ಖರೀದಿಸಬೇಕಾಗಿತ್ತು. ಆದರೆ, ಇದರಲ್ಲಿ ಭಾಗವಹಿಸಿದ ಅನೇಕರಿಗೆ ಹರಾಜಾದ ಉತ್ಪನ್ನಗಳು ಸಿಗಲಿಲ್ಲ, ಮತ್ತೊಂದೆಡೆ ಅವರ ಹಣವು ವಾಪಸ್ ಬರಲಿಲ್ಲ. ಕೇವಲ ತ್ರಿಶೂರ್‌ ನಗರವೊಂದರಲ್ಲೇ ದಾಖಲಾದ ದೂರುಗಳಿಂದ, 43 ಲಕ್ಷ ರೂ. ವಂಚನೆ ಆಗಿರುವುದು ಬೆಳಕಿಗೆ ಬಂದಿದೆ.

ಚಿತ್ರರಂಗದ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಬೃಹತ್ ಪ್ರಚಾರ ಅಭಿಯಾನ

ಚಿತ್ರರಂಗದ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಬೃಹತ್ ಪ್ರಚಾರ ಅಭಿಯಾನಗಳನ್ನು ನಡೆಸುವ ಮೂಲಕ ಸೇವ್ ಬಾಕ್ಸ್ ಸಾರ್ವಜನಿಕರನ್ನು ಆಕರ್ಷಿಸಿತು. ಈ ಅಪ್ಲಿಕೇಶನ್ ಅನ್ನು ಭಾರತದ ಮೊದಲ ಬಿಡ್ಡಿಂಗ್ ಅಪ್ಲಿಕೇಶನ್ ಎಂದೂ ಪ್ರಚಾರ ಮಾಡಲಾಯಿತು. ಬ್ರ್ಯಾಂಡ್ ರಾಯಭಾರಿಯಾಗಿ ಅವರು ಪಡೆದ ಸಂಭಾವನೆ ಕಾನೂನುಬದ್ಧವಾಗಿದೆ ಎಂದು ನಟ ವಾದಿಸಿದರೂ, ಈ ಪಾವತಿಗಳಿಗೆ ಬಳಸಲಾದ ಹಣವು ವಂಚನೆಯ ಆದಾಯ ಎಂದು ತನಿಖಾ ಸಂಸ್ಥೆ ಹೇಳಿದೆ.

ಇದನ್ನೂ ಓದಿ: 5ನೇ ಮಗುವಿಗೆ 11 ತಿಂಗಳು ತುಂಬುತ್ತಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್

ಈ ಪ್ರಕರಣದಲ್ಲಿ ಜಯಸೂರ್ಯ ಅವರ ಪತ್ನಿ ಸರಿತಾ ಅವರನ್ನು ಇಡಿ ಈ ಹಿಂದೆ ವಿಚಾರಣೆ ನಡೆಸಿತ್ತು. ಹಣಕಾಸಿನ ವಹಿವಾಟಿನ ಕುರಿತು ಹೆಚ್ಚಿನ ಸ್ಪಷ್ಟತೆ ಪಡೆಯಲು ಇಡಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದು ತನಿಖೆ ಮುಂದುವರೆದಿದೆ.