ಯಶಸ್ವಿ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್‌, ಜನರ ಕನಸಿನ ಮೇಲೆ ಸಾಲ ಮಾಡದೆ ಸ್ವಂತ ಬಂಡವಾಳದಿಂದ 'ಕಾನ್ಫಿಡೆಂಟ್‌' ಸಾಮ್ರಾಜ್ಯವನ್ನು ಕಟ್ಟಿದರು. ಆದರೆ, ಐ.ಟಿ. ಅಧಿಕಾರಿಗಳ ಕಿರುಕುಳದಿಂದಾಗಿ ಅವರ ಬದುಕು ದುರಂತ ಅಂತ್ಯ ಕಂಡಿದೆ ಎಂದು ಅವರ ಸಹೋದರ ಆರೋಪಿಸಿದ್ದಾರೆ.

ಬೆಂಗಳೂರು: ಜನರ ಕನಸು ಅಡಮಾನವಿಟ್ಟು ಸಾಲ ಮಾಡದೆ ದೇಶ-ವಿದೇಶದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬಹುದೊಡ್ಡ ಸಾಮ್ರಾಜ್ಯ ಕಟ್ಟಿ ಯಶಸ್ವಿ ಉದ್ಯಮಿ ಎನ್ನಿಸಿಕೊಂಡಿದ್ದ ಸಿ.ಜೆ.ರಾಯ್‌ ಅವರ ಬದುಕು ದುರಂತ ಅಂತ್ಯ ಕಂಡಿದ್ದು ವಿಧಿಯಾಟವೇ ಸರಿ.

‘ನಾನು ರಿಯಲ್ ಎಸ್ಟೇಟ್ ಕ್ಷೇತ್ರವನ್ನು ನಾನಾಗಿಯೇ ಅರಸಿಕೊಂಡು ಬಂದೆನೇ ಹೊರತು ಆಕಸ್ಮಿಕವಾಗಿ ಬರಲಿಲ್ಲ (ಬೈ ಚಾಯ್ಸ್‌ ರಿಯಲ್ ಎಸ್ಟೇಟ್, ನಾಟ್ ಬೈ ಚಾನ್ಸ್)’ ಎಂದಿದ್ದ ಅವರು, ‘ಕಾನ್ಫಿಡೆಂಟ್‌’ ಕಂಪನಿ ಮೂಲಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೊಸ ಚರಿತ್ರೆ ಬರೆದರು. ಉದ್ಯಮ ರಂಗಕ್ಕೆ ಕಾಲಿಟ್ಟ ಮೊದಲ ಹೆಜ್ಜೆಯಿಂದಲೂ ತಮ್ಮ ಸಾಮರ್ಥ್ಯದ ಮೇಲೆ ಇಟ್ಟುಕೊಂಡಿದ್ದ ಅಪರಿಮಿತ ವಿಶ್ವಾಸವೇ ರಾಯ್ ಅವರಿಗೆ ಮುಳ್ಳಾಯಿತೇ ಎಂಬ ಪ್ರಶ್ನೆ ಇದೀಗ ಮೂಡಿದೆ.

ರಿಯಲ್ ಎಸ್ಟೇಟ್ ಅಂದರೆ ಜನರ ಕನಸುಗಳ ಮಾರಾಟ ಮಾಡಿ ಲಾಭ ಎನ್ನುವ ಕಾಲದಲ್ಲಿ ರಾಯ್ ಅವರು, ನಾನು ಜನರ ಕನಸಿನ ಮೇಲಿನ ಸಾಲಗಾರನಲ್ಲ ಎಂದಿದ್ದು ಅಚ್ಚರಿಗೊಳಿಸಿತ್ತು.

ತಮ್ಮ ಮಾತಿಗೆ ಬದ್ಧರಾಗಿಯೇ 2005ರಲ್ಲಿ ತಮ್ಮ ಸ್ವಂತ ದುಡ್ಡನ್ನೇ ಮೂಲ ಬಂಡವಾಳವಾಗಿಸಿ ಕಂಪನಿ ಸ್ಥಾಪಿಸಿದರು. ಬೆಂಗಳೂರು ಬಿಟ್ಟು ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮುನ್ನುಡಿಯಿಟ್ಟಿರು. ಅಲ್ಲಿಂದ ಪ್ರಾರಂಭವಾಯಿತು ಭೂ ವ್ಯವಹಾರದಲ್ಲಿ ರಾಯ್ ಪರ್ವ. ನಂತರ ದೇಶ-ವಿದೇಶಗಳಿಗೆ ಸಾಮಾಜ್ಯ ವಿಸ್ತರಣೆಯಾಯಿತು.

ರಾಯ್ ಅವರು ವಿವಿಧೆಡೆ ನೀಡಿದ್ದ ಸಂದರ್ಶನಗಳಲ್ಲಿ ತಾವು ಜೀವನದಲ್ಲಿ ಬೆಳೆದು ಬಂದ ಬಗೆಯನ್ನು ಎಳೆ ಎಳೆಯಾಗಿ ವಿವರಿಸಿದ್ದರು.

ಬ್ಯುಸಿನೆಸ್ ಈಸ್ ನಾಟ್ ಪಾರ್ಟ್‌ ಟೈಮ್:

ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸುವ ಮುನ್ನ ಖಾಸಗಿ ಕಂಪನಿಗಳಲ್ಲಿ ರಾಯ್ ದುಡಿದಿದ್ದರು. 1990ರಲ್ಲಿ ಬಿಪಿಓ ಕಂಪನಿಯಲ್ಲಿ ಪುಟ್ಟ ನೌಕರಿಗೆ ಸೇರಿದ್ದ ರಾಯ್. ನಂತರ ಕೆಲ ಕಂಪನಿಗಳಲ್ಲಿ ಕೆಲಸ ಮಾಡಿದರು. 1997ರ ಬಳಿಕ ವೈಟ್ ಕಾಲರ್ ಜಾಬ್ ತೊರೆದು ರಿಯಲ್ ಎಸ್ಟೇಟ್ ಉದ್ಯಮಕ್ಕಿಳಿದರು. ನಾನೂ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಕೆಲಸ ಮಾಡಿದ್ದೇನೆ ಎಂದಿದ್ದ ಅವರು, 90 ದಶಕ ಕೊನೆಯಲ್ಲಿ ಆಗಷ್ಟೇ ಬಹುರಾಷ್ಟ್ರೀಯ ಕಂಪನಿ ಕಲ್ಚರ್ ಪರಿಚಯವಾಗಿದ್ದ ಕಾಲದಲ್ಲಿ ರಿಯಲ್ ಎಸ್ಟೇಟ್ ಆರಂಭಿಸಿದ್ದರು. ಬ್ಯುಸಿನೆಸ್ ಹಿಸ್ ನಾಟ್ ಪಾರ್ಟ್‌ ಟೈಮ್ ಜಾಬ್‌. ದಿ ಹಿಸ್ ಫುಲ್ ಟೈಮ್‌ ಎಂದಿದ್ದರು.

ಸಾಲ ಪಡೆಯದೇ ಉದ್ಯಮ ಸ್ಥಾಪನೆ:

ನಾನು ಸಾಲ ಮಾಡದೆ 2005ರಲ್ಲಿ ಉದ್ಯಮ ಸ್ಥಾಪಿಸಿದೆ ಎಂದರೆ ಅಚ್ಚರಿ ಆಗಬಹುದು. ನನಗೆ ಜನರ ಕನಸಿನ ಮೇಲೆ ಸಾಲ ಪಡೆಯಲು ಇಷ್ಟವಿರಲಿಲ್ಲ. ನಾನು ಅಭಿವೃದ್ಧಿಪಡಿಸಿದ ಲೇಔಟ್‌ನಲ್ಲಿ ತಮ್ಮ ಕನಸಿನ ಮನೆ ಕಟ್ಟಲು ಜನ ನಿವೇಶನ ಖರೀದಿಸುತ್ತಾರೆ. ಏನಾದರೂ ಆರ್ಥಿಕ ಹಿಂಜರಿತ ಬಂದರೆ ನನ್ನ ಪ್ರಾಜೆಕ್ಟ್ ಹಾಳಾಗುವುದಲ್ಲದೆ ಜನರ ಕನಸೂ ಭಗ್ನವಾಗುತ್ತಿತ್ತು. ಹೀಗಾಗಿ ನಾನೇ ದುಡ್ಡು ಹಾಕಿ ನನ್ನ ಯೋಜನೆ ಅನುಷ್ಠಾನಗೊಳಿಸುತ್ತಿದ್ದೆ. ಇದರಿಂದ 2008 ಹಾಗೂ 2016ರ ವಿಶ್ವ ಆರ್ಥಿಕ ಹಿಂಜರಿತ ಮತ್ತು ಕೊರೋನಾ ಕಾಲದಲ್ಲಿ ನಮ್ಮ ಕಂಪನಿಗೆ ಆರ್ಥಿಕವಾಗಿ ತೊಂದರೆ ಆಗಲಿಲ್ಲ ಎಂದಿದ್ದರು ರಾಯ್‌.

ಉದ್ಯಮ ಶುರುವಾದ ಕತೆ

2001ರಲ್ಲಿ ಸರ್ಜಾಪುರ ವ್ಯಾಪ್ತಿಯಲ್ಲಿ ತಲಾ ಎಕರೆಗೆ 6 ಲಕ್ಷ ರು. ಇತ್ತು. ಆಗ ಮಾರುಕಟ್ಟೆ ಮೌಲ್ಯಕ್ಕಿಂತ 1 ಲಕ್ಷ ರು. ಹೆಚ್ಚಿಗೆ ಕೊಟ್ಟು ಜಮೀನು ಖರೀದಿಸಿದೆ. ಈಗಲೂ ಅಲ್ಲಿನ ಜನರನ್ನು ಕೇಳಿ ರಾಯ್ ಅಂದರೆ ಕೈ ಬಿಚ್ಚಿ ಕೊಡುವವ ಎನ್ನುತ್ತಾರೆ. ರಸ್ತೆ ಬದಿಯ 1 ಎಕರೆ ಜಮೀನಿಗೆ 25 ಲಕ್ಷ ರು. ಇತ್ತು. ಈಗ 43 ಕೋಟಿ ರು. ಆಗಿದೆ. ನಾನು ಯೋಜನೆ ರೂಪಿಸಿದರೆ ನನ್ನಿಂದ ಆ ಪ್ರದೇಶದ ಹಲವು ಜನರಿಗೆ ಅನುಕೂಲವಾಗುವಂತೆ ಇರುತ್ತಿತ್ತು. ಕಿರಾಣಿ ಅಂಗಡಿಯಿಂದ ಸೂಪರ್ ಮಾರ್ಕೆಟ್‌ವರೆಗೆ ಎಲ್ಲರಿಗೂ ಎಂದು ಅವರು ಹೇಳುತ್ತಿದ್ದರು.

ನಾನು ಆರಿಸಿದ ಸರ್ಜಾಪುರದ ಒಂದೆಡೆ ಎಲೆಕ್ಟ್ರಾನಿಕ್ ಸಿಟಿ ಮತ್ತೊಂದೆಡೆ ವೈಟ್‌ಫೀಲ್ಡ್ ಇತ್ತು. ಅಂದು ಐಟಿ ಕಂಪನಿಗಳ ಬಾಹುಳ್ಯದ ಪ್ರದೇಶವಾಗಿದ್ದವು. ನಂತರ ಮಾನ್ಯತಾ ಬಂತು. ಆಗ ಸರ್ಜಾಪುರದಲ್ಲಿ ಒಳ್ಳೆಯ ಶಾಲೆಗಳಿದ್ದವು. ನಾನು ಐಟಿ ಕಂಪನಿ ಉದ್ಯೋಗಿಗಳಿಗೆ ಮಕ್ಕಳ ವಿದ್ಯಾಭ್ಯಾಸ ದೃಷ್ಟಿಯಿಂದ ಸರ್ಜಾಪುರದಲ್ಲಿ ನೆಲೆ ನಿಲ್ಲುವಂತೆ ಯೋಜನೆ ರೂಪಿಸಿದೆ. ನಿಮ್ಮ ಕೆಲಸಕ್ಕೆ ಎಲ್ಲಿಗೆ ಬೇಕಾದರೂ ಹೋಗಿ ಆದರೆ ಕುಟುಂಬ ಒಂದೆಡೆ ನೆಲೆ ನಿಲ್ಲಲಿ. ಉದ್ಯೋಗಕ್ಕಾಗಿ ನೀವು (ಪೋಷಕರು) ಪ್ರಯಾಣಿಸಿ. ಆದರೆ ಶಾಲೆಗೆ ಮಕ್ಕಳು ಯಾಕೆ ಪ್ರಯಾಣಿಸಬೇಕು ಎಂದು ಹೇಳಿದೆ. ಅದೂ ಯಶಸ್ಸು ಕಂಡಿತು ಎಂದು ವಿವರಿಸಿದ್ದರು.

ನಾನು ಕಂಪನಿ ಶುರು ಮಾಡಿದಾಗ ನನ್ನ ಪತ್ನಿ ಹಾಗೂ ನಾಲ್ವರು ಸ್ನೇಹಿತರು ನಿರ್ದೇಶಕರಾಗಿದ್ದರು. ಆಗ ಸಿಬಿಡಿ ಏರಿಯಾದಲ್ಲಿ ಮಾಡಬೇಕಾ ಅಥವಾ ಬೇರೆಡೆ ಮಾಡಬೇಕಾ ಎನ್ನುವ ಚರ್ಚೆ ನಡೆದಿತ್ತು. ಅಂದು ನನ್ನಲ್ಲಿದ್ದ ದುಡ್ಡಿನಲ್ಲಿ ಸಿಬಿಡಿ ಏರಿಯಾದಲ್ಲಿ ಎರಡು ಪ್ರಾಜೆಕ್ಟ್ ಮಾಡಬಹುದಾಗಿತ್ತು. ಆದರೆ ಸರ್ಜಾಪುರದಲ್ಲಿ 100-150 ಎಕರೆ ಜಮೀನು ಖರೀದಿಸಬಹುದಾಗಿತ್ತು. ಕಡಿಮೆ ಖರ್ಚಿದಲ್ಲಿ ದೊಡ್ಡದಾಗಿ ಸಾಧಿಸುವ ಧ್ಯೇಯವಿತ್ತು. ಅಂದು ನನ್ನ ಯೋಜನೆಗೆ ಪತ್ನಿಯಿಂದ ಮಾತ್ರ ಬೆಂಬಲ ಸಿಕ್ಕಿತು. ಅಂತಿಮವಾಗಿ ಸರ್ಜಾಪುರ ಆರಿಸಿದೆ. ಬೆಂಗಳೂರು ಬೇಡ ಎಂಬ ತೀರ್ಮಾನದಿಂದ 10 ಪಟ್ಟು ಲಾಭವಾಯಿತು ಎಂದು ಮಾಹಿತಿ ನೀಡಿದ್ದರು.

94ರಲ್ಲಿ ಮೊದಲು ಕಾರು ಖರೀದಿ

1994ರಲ್ಲಿ ನಾನು 1 ಲಕ್ಷ 10 ಸಾವಿರ ರು.ಗೆ ಮಾರುತಿ-800 ಖರೀದಿಸಿದೆ. ನನ್ನ ಜೀವನದ ಮೊದಲ ಕಾರು ಅದಾಗಿತ್ತು. ಈ ಕಾರು ಕೊಳ್ಳುವ ಮುನ್ನ ನನಗೆ ಡ್ರೈವಿಂಗ್ ಬರುತ್ತಿರಲಿಲ್ಲ. ನಂತರ ಕಾರು ಮಾರಾಟ ಮಾಡಿ ಬೇರೊಂದು ಖರೀದಿಸಿದೆ. ಆದರೆ ಮೊದಲ ಕಾರಿನ ಮೇಲೆ ತುಂಬಾ ಎಮೋಷನಲ್ ಫೀಲಿಂಗ್‌ ಇತ್ತು. ಹಾಗಾಗಿ ಮೂವತ್ತು ವರ್ಷಗಳ ಹಿಂದೆ ಮಾರಾಟ ಮಾಡಿದ್ದ ಕಾರನ್ನು ಹುಡುಕಿ ಕೊಟ್ಟರೆ 10 ಲಕ್ಷ ರು. ಬಹುಮಾನ ಕೊಡುವುದಾಗಿ ಹೇಳಿದೆ. ಕೊನೆಗೆ ನನ್ನ ಮೊದಲ ಕಾರು ಸಿಕ್ಕಿತು.

ಸೇಲ್ಸ್ ಮ್ಯಾನ್ ಬೈದಿದ್ದು ಕಾರ್ ಕ್ರೇಜ್ ಹುಟ್ಟಿತು

ಕೋರಮಂಗಲದ ಬಳಿ ನಮ್ಮ ಮನೆ ಇತ್ತು. ಬಾಲ್ಯದಲ್ಲಿ ನನ್ನ ತಂದೆ ಬಳಿ ಸ್ಕೂಟರ್ ಮಾತ್ರ ಇತ್ತು. ಸ್ಕೂಲ್‌ಗೆ ಬಸ್ಸಿನಲ್ಲಿ ಹೋಗಿ ಬರುತ್ತಿದೆ. ಒಂದು ದಿನ ಸ್ಕೂಲ್‌ಗೆ ಹೋಗುವಾಗ ಡಾಲ್ಫಿನ್ ಕಾರು ಶೋ ರೂಂ ಮುಂದೆ ಜನ ಸಾಗರ ನೆರೆದಿತ್ತು. ಮಾರುತಿಗೂ ಮುನ್ನ ಮಾರುಕಟ್ಟೆಗೆ ಡಾಲ್ಫಿನ್ ಬಂದಿತ್ತು. ಆಗಿನ ಕಾಲಕ್ಕೆ ಆ ಕಾರು ದೊಡ್ಡ ಹವಾ ಸೃಷ್ಟಿಸಿತ್ತು. ನಾನು ಜನರ ಗುಂಪಿನಲ್ಲಿ ಸ್ಕೂಲ್ ಬ್ಯಾಗ್‌ ಅನ್ನು ತೂರಿಸಿಕೊಂಡು ಜಾಗ ಮಾಡಿಕೊಂಡು ನುಗ್ಗಿದೆ. ಆಗ ಆ ಶೋ ರೂಂನ ಸೇಲ್ಸ್ ಮ್ಯಾನ್‌, ನನ್ನನ್ನು ನೋಡಿ ಲೇ ಹೋಗೋ, ನೀನೇನು ಕಾರು ತಗೋಳ್ತೀಯಾ ಎಂದು ಬೈದು ಹೊರಗೆ ಕಳುಹಿಸಿದ್ದ. ಅಂದೇ ಮುಂದೊಂದು ದಿನ ನಾನು ಎಲ್ಲಾ ಮಾದರಿಯ ಕಾರು ಖರೀದಿಸುವೆ ಎಂದು ಶಪಥ ಮಾಡಿದೆ. ಇದಾದ ಬಳಿಕ ನನ್ನ ಮಗನಿಗೆ ಬಾಲ್ಯದಲ್ಲಿ ಆಟವಾಡುವಾಗ ರೋಲ್ಸ್ ರಾಯ್, ಪೆರಾರಿ ಕಾರಿನ ಆಟಿಕೆ ಕೊಡಿಸಿ ದೊಡ್ಡವನಾದ ಮೇಲೆ ರಿಯಲ್‌ ಕಾರು ಕೊಡಿಸುವೆ ಎಂದಿದ್ದೆ. ಆ ಎರಡು ಮಾತುಗಳು ನನ್ನ ಮನಸ್ಸಿನಲ್ಲಿದ್ದವು. ಅಂತೆಯೇ ಈಗ ನನ್ನ ಬಳಿ 6 ರೋಲ್ಸ್ ರಾಯ್‌ಗಳು ಸೇರಿ 20 ಕಾರುಗಳಿವೆ ಎಂದಿದ್ದರು ರಾಯ್.

ದಿನಕ್ಕೊಂದು ಬಣ್ಣದ ಕಾರು:

ಮೊದಲ ಕಾರು ಕೊಳ್ಳುವಾಗ ಕೈಯಲ್ಲಿ 10 ಸಾವಿರ ರು. ಮಾತ್ರ ಇತ್ತು. ಆಗ ಸ್ನೇಹಿತರಿಂದ ಹಣ ಪಡೆದು ಕಾರು ಖರೀದಿಸಿ ಮನೆಗೆ ತೆಗೆದುಕೊಂಡು ಹೋದಾಗ ಪತ್ನಿಗೆ ಅಶ್ಚರ್ಯವಾಗಿತ್ತು. ಇಷ್ಟಕ್ಕೆ ಯಾಕೆ ಕಣ್ಬಿಟ್ಟು ನೋಡ್ತೀಯಾ. ಇನ್ನೂ 6 ಕಾರುಗಳು ಬರುತ್ತವೆ. ದಿನಕ್ಕೊಂದು ಬಣ್ಣದ ಕಾರಿನಲ್ಲಿ ಓಡಾಡುವೆ ಎಂದಿದ್ದೆ. ಈ ಮಾತಿಗೆ ಮೊದಲು ಈಗಿನ ಕಾರಿನ ಸಾಲ ತೀರಿಸಿ ಎಂದಿದ್ದಳು ನನ್ನ ಪತ್ನಿ. ಆದರೆ ಈಗ 6 ರೋಲ್ಸ್ ರಾಯ್‌ ಕಾರುಗಳಲ್ಲಿ ಪತ್ನಿ ಜತೆ ಓಡಾಡುವೆ.

ತಾಯಿ ಹಾಕಿದ ಬುನಾದಿ:

1995-97ರಲ್ಲಿ ಬೆಂಗಳೂರಿನಲ್ಲಿ 30*40 ನಿವೇಶನಗಳಲ್ಲಿ ಮನೆ ಕಟ್ಟಿ ರಾಯ್ ತಾಯಿ ಮಾರಾಟ ಮಾಡುತ್ತಿದ್ದರು. ಆಗ ತಮ್ಮ ತಾಯಿ ಬಳಿ ಅಕೌಂಟೆಂಟ್ ಇದ್ದರು. ತಮ್ಮ ತಾಯಿ ಕಲಿಸಿದ ರಿಯಲ್ ಎಸ್ಟೇಟ್ ಲೆಕ್ಕಾಚಾರ ಕಾನ್ಫಿಡೆಂಟ್ ಸಾಮ್ರಾಜ್ಯ ಕಟ್ಟಲು ಬುನಾದಿ ಹಾಕಿತು. ತಮ್ಮ ತಾಯಿ 10ನೇ ತರಗತಿ ಓದಿದ್ದರು. ಆಗಿನ ಕಾಲಕ್ಕೆ ಅದು ದೊಡ್ಡ ಶೈಕ್ಷಣಿಕ ಅರ್ಹತೆ ಆಗಿತ್ತು. ತಾಯಿಗೆ ಮನೆ ನಿರ್ಮಾಣದಲ್ಲಿದ್ದ ಲೆಕ್ಕಾಚಾರ ಅದ್ಭುತವಾಗಿತ್ತು. ಇಂತಿಷ್ಟು ಸಿಮೆಂಟ್‌, ಜಲ್ಲಿ, ಕಲ್ಲು ಬೇಕು ಎಂದು ಹೇಳುತ್ತಿದ್ದರು. ಅಷ್ಟೇ ಪ್ರಮಾಣದಲ್ಲಿ ನಿರ್ಮಾಣ ವೆಚ್ಚವಾಗುತ್ತಿತ್ತು ಎಂದು ರಾಯ್ ಹೇಳಿಕೊಂಡಿದ್ದರು.

ರೋಟಿ ಕಪ್ಡಾ ಮಕಾನ್:

ಜಗತ್ತಿನಲ್ಲಿ ಎಲ್ಲೇ ಹೋದ್ರೂ ರೋಟಿ (ಆಹಾರ), ಕಪ್ಡಾ (ಬಟ್ಟೆ) ಹಾಗೂ ಮಕಾನ್‌ (ಮನೆ) ಉದ್ಯಮಗಳಿರುತ್ತವೆ. ಅವುಗಳನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಜನ ಜೀವಿಸಲು ಆಹಾರ ಸ್ವೀಕರಿಸಲೇಬೇಕು, ಮಾನ ಮಚ್ಚಲು ಬಟ್ಟೆ ಹಾಗೂ ನೆಲೆಗೊಳ್ಳಲು ಮನೆ ಇರಲೇ ಬೇಕು. ಬೇರೆ ವಿನ್ಯಾಸಗಳಲ್ಲಿ ಆ ಉದ್ಯಮಗಳನ್ನು ರೂಪಿಸಬಹುದು. ಅದೇ ರೀತಿ ನಾನು ಮಕಾನ್ ಆರಿಸಿಕೊಂಡೆ. ನನಗೆ ನನ್ನ ಕನಸು ಮತ್ತು ಧ್ಯೇಯದ ಬಗ್ಗೆ ಸ್ಪಷ್ಟತೆ ಇತ್ತು. ಅದು ಜನರ ನೆಲೆಗಳನ್ನು 100 ವರ್ಷ ಬಾಳಿಕೆ ಬರುವಂತೆ ಕಟ್ಟಬೇಕು ಎನ್ನುವುದಾಗಿತ್ತು ಎಂದಿದ್ದರು ರಾಯ್‌.

ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ:

ನನ್ನ ತಮ್ಮ ಸಿ.ಜೆ.ರಾಯ್‌ ಆತ್ಮಹತ್ಯೆಗೆ ಕೇರಳದ ಐ.ಟಿ.ಅಧಿಕಾರಿಗಳ ಕಿರುಕುಳ ಹಾಗೂ ಒತ್ತಡವೇ ಕಾರಣ ಎಂದು ಸಹೋದರ ಸಿ.ಜೆ.ಬಾಬು ಐ.ಟಿ.ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳದ ಐ.ಟಿ.ಅಧಿಕಾರಿಗಳು ಜ.28ರಿಂದ ನನ್ನ ತಮ್ಮ ಸಿ.ಜೆ.ರಾಯ್‌ ಅವರನ್ನು ವಿಚಾರಣೆ ಮಾಡುತ್ತಿದ್ದರು. ಅದರಂತೆ ಶುಕ್ರವಾರವೂ ಕಚೇರಿಗೆ ಬಂದು ವಿಚಾರಣೆ ಮಾಡಿದ್ದಾರೆ. ಐಟಿ ಇಲಾಖೆಯ ಅಡಿಷನಲ್‌ ಕಮಿಷನರ್‌ ಕೃಷ್ಣ ಪ್ರಸಾದ್‌ ಸಹ ಅಧಿಕಾರಿಗಳ ತಂಡದಲ್ಲಿದ್ದರು ಎಂದು ಹೇಳಿದರು.

ಐ.ಟಿ.ಅಧಿಕಾರಿಗಳ ಒತ್ತಡ ಇತ್ತು:

ಈ ಐಟಿ ಅಧಿಕಾರಿಗಳು ಜ.27ರಂದು ನನ್ನ ಮನೆಗೆ ಬಂದು ನನ್ನನ್ನೂ ವಿಚಾರಣೆ ಮಾಡಿದ್ದರು. ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದೆ. ಕಾರ್ಯ ನಿಮಿತ್ತ ವಿದೇಶಕ್ಕೆ ಬಂದಿದ್ದೇನೆ. ಗುರುವಾರ ಸಿ.ಜೆ.ರಾಯ್‌ ನನಗೆ ಕರೆ ಮಾಡಿ ಯಾವಾಗ ಬರುವೆ ಎಂದು ಕೇಳಿದರು. ಅದಕ್ಕೆ ಶುಕ್ರವಾರ ಸಂಜೆ ಬರುವೆ ಎಂದಿದ್ದೆ. ಐ.ಟಿ.ಅಧಿಕಾರಿಗಳ ಒತ್ತಡ ಇದೆ ಎಂದು ರಾಯ್‌ ಹೇಳಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ ಸಹ ನನಗೆ ಕರೆ ಮಾಡಿ ಇಂದೂ ಐ.ಟಿ.ಅಧಿಕಾರಿಗಳು ಕಚೇರಿಗೆ ಬರುತ್ತಿರುವ ವಿಚಾರ ಹೇಳಿದರು ಬಾಬು ತಿಳಿಸಿದರು.

ಡಿಸೆಂಬರ್‌ನಲ್ಲೂ ಐ.ಟಿ.ವಿಚಾರಣೆ:

ಡಿಸೆಂಬರ್‌ ತಿಂಗಳಲ್ಲೂ ಕೇರಳದ ಐ.ಟಿ.ಅಧಿಕಾರಿಗಳು ಆದಾಯ ತೆರಿಗೆ ವಿಚಾರವಾಗಿ ಸಿ.ಜೆ.ರಾಯ್‌ ಕಚೇರಿಗೆ ಬಂದು ವಿಚಾರಣೆ ಮಾಡಿದ್ದರು. ನನ್ನ ತಮ್ಮ ರಾಯ್‌ಗೆ ಸಾಲ ಇರಲಿಲ್ಲ. ವೈರಿಗಳು ಇರಲಿಲ್ಲ. ಬೆದರಿಕೆಗಳು ಇರಲಿಲ್ಲ. ಕೌಟುಂಬಿಕ ಸಮಸ್ಯೆಗಳೂ ಇರಲಿಲ್ಲ. ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡರು ಎಂದು ಗೊತ್ತಿಲ್ಲ. ಐ.ಟಿ.ಅಧಿಕಾರಿಗಳ ಒತ್ತಡ ಇದ್ದದ್ದು ಸತ್ಯ. ಅವರ ಟಾಗೆರ್ಟ್‌ ಏನೆಂಬುದು ಗೊತ್ತಿಲ್ಲ. ಐಟಿ ಇಲಾಖೆ ಅಡಿಷನಲ್‌ ಕಮಿಷನರ್‌ ಕೃಷ್ಣ ಪ್ರಸಾದ್‌ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಬೇಕು ಎಂದು ಹೇಳಿದರು.

ದೇಶ-ವಿದೇಶಗಳಲ್ಲಿ ಪ್ರಾಜೆಕ್ಟ್‌:

ಸಿ.ಜೆ.ರಾಯ್‌ ಅವರು ಕರ್ನಾಟಕ, ಕೇರಳ, ದುಬೈ ಸೇರಿ ವಿವಿಧೆಡೆ ರಿಯಲ್‌ ಎಸ್ಟೇಟ್‌ ಪ್ರಾಜೆಕ್ಟ್‌ಗಳನ್ನು ನಡೆಸುತ್ತಿದ್ದರು. ಕೇರಳವೊಂದರಲ್ಲೇ 60 ಪ್ರಾಜೆಕ್ಟ್‌ ಮಾಡಿದ್ದಾರೆ. ಬಂಗಾರಪೇಟೆಯಲ್ಲಿ ಗಾಲ್ಫ್‌ ಕೋರ್ಟ್‌ ನಿರ್ಮಾಣ ಸೇರಿ ವಿವಿಧೆಡೆ ಜಂಟಿ ಮಾಲೀಕತ್ವದಲ್ಲಿ ಹಲವು ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದರು. ಎರಡು ವರ್ಷಗಳಲ್ಲಿ ನನಗೆ 700-800 ಕೋಟಿ ರು. ಆದಾಯ ಬರಲಿದೆ ಎಂದು ನನ್ನೊಂದಿಗೆ ಹೇಳಿಕೊಂಡಿದ್ದರು ಎಂದು ತಿಳಿಸಿದರು.

ಸಿ.ಜೆ.ರಾಯ್‌ ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ. ಅವರ ಬಳಿ ಕಳೆದ 20 ವರ್ಷಗಳಿಂದ ಪಿಸ್ತೂಲ್‌ ಇತ್ತು. 2016ರಲ್ಲಿ ಬೆಂಗಳೂರು ಐ.ಟಿ.ಅಧಿಕಾರಿಗಳು ಕಡೆಯದಾಗಿ ಸಿ.ಜೆ.ರಾಯ್‌ ಅವರನ್ನು ವಿಚಾರಣೆ ಮಾಡಿದ್ದರು. ಆಗ ಯಾವುದೇ ಸಮಸ್ಯೆಯಾಗಲಿಲ್ಲ. ಇದೀಗ ಕೇರಳ ಐ.ಟಿ.ಅಧಿಕಾರಿಗಳು ಬಂದಾಗ ಬಳಿಕ ಸಮಸ್ಯೆಯಾಗಿದೆ ಎಂದು ಹೇಳಿದರು.

ಕುಟುಂಬ ದುಬೈನಲ್ಲಿ ನೆಲೆ:

ನಾವು ಮೂರು ಜನ ಅಣ್ಣ ತಮ್ಮಂದಿರು. ಸಿ.ಜೆ.ರಾಯ್‌ ಕೊನೆಯವರು. ಸಿ.ಜೆ.ರಾಯ್‌ಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಕಳೆದ 15 ವರ್ಷಗಳಿಂದ ಕುಟುಂಬ ದುಬೈನಲ್ಲಿ ನೆಲೆಸಿದೆ. ರಾಯ್‌ ಆತ್ಮಹತ್ಯೆಗೆ ಬಗ್ಗೆ ಪೊಲೀಸರು ತನಿಖೆ ನಡೆಸಿ, ಸತ್ಯಾಂಶ ಹೊರ ತೆಗೆಯಬೇಕು ಎಂದು ಸಿ.ಜೆ.ಬಾಬು ಆಗ್ರಹಿಸಿದರು.

ಸಿ.ಜೆ.ರಾಯ್‌ಗೆ ಸಮಾಜ ಸೇವೆ ಮಾಡುವ ತುಡಿತವಿತ್ತು. 301 ವಿದ್ಯಾರ್ಥಿಗಳಿಗೆ ಗರಿಷ್ಠ 50 ಸಾವಿರ ರು.ನಂತೆ ಸ್ಕಾಲರ್‌ ಶಿಪ್‌ ನೀಡುವುದಾಗಿ ಘೋಷಿಸಿದ್ದರು. ಜುಲೈ ತಿಂಗಳಿಂದ ಅರ್ಜಿ ಹಾಕುವಂತೆಯೂ ಹೇಳಿದ್ದರು. ರಾಯ್‌ ಎಲ್ಲ ಪಕ್ಷದ ರಾಜಕಾರಣಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ದೇಶದಲ್ಲಿ ಶೇ.6.68ರಷ್ಟು ಮಂದಿ ಆದಾಯ ತೆರಿಗೆ ಪಾವತಿಸುತ್ತಾರೆ. ಈ ಪೈಕಿ ಶೇ.4ರಷ್ಟು ಉದ್ಯೋಗಿಗಳು, ಶೇ.2.68ರಷ್ಟು ಉದ್ಯಮಿಗಳು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಐ.ಟಿ. ಇಲಾಖೆ ಅಧಿಕಾರಿಗಳು ಉದ್ಯಮಿಗಳಿಗೆ ಹೀಗೆ ತೊಂದರೆ ಕೊಟ್ಟರೆ ಸಿ.ಜೆ.ರಾಯ್‌ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ

-ಸಿ.ಜೆ.ಬಾಬು, ಉದ್ಯಮಿ ಸಿ.ಜೆ.ರಾಯ್‌ ಸಹೋದರ