ನಟ ಶ್ರೀಕಾಂತ್ ಬಂಧನದ ಬೆನ್ನಲ್ಲೇ ತಮಿಳು ನಟ ಕೃಷ್ಣನನ್ನು ಡ್ರಗ್ಸ್ ಸೇವನೆ ಆರೋಪದ ಮೇಲೆ ಬಂಧಿಸಲಾಗಿದೆ.
Tamil actor Krishna arrested: ಡ್ರಗ್ ಸೇವನೆ ಪ್ರಕರಣದಲ್ಲಿ ನಟ ಶ್ರೀಕಾಂತ್ ಬಂಧನ ಬೆನ್ನಲೇ ಮತ್ತೊಬ್ಬ ತಮಿಳು ನಟ ಕೃಷ್ಣ ಅವರನ್ನು ಪೊಲೀಸರು ಬಂಧಿಸಿದ್ದು, ತಮಿಳುನಾಡು ಚಿತ್ರರಂಗದಲ್ಲಿ ಈ ಡ್ರಗ್ ದಂಧೆ ಪ್ರಕರಣ ಕೋಲಾಹಲ ಎಬ್ಬಿಸಿದೆ. ಮೊದಲಿಗೆ ಈ ಪ್ರಕರಣದಲ್ಲಿ ನಟ ಶ್ರೀಕಾಂತ್ ಸಿಕ್ಕಿಬಿದ್ದಿದ್ದರು. ಇದಕ್ಕೂ ಮೊದಲು ಡ್ರಗ್ ಪೆಡ್ಲರ್ ಪ್ರಸಾದ್ ಎಂಬಾತನ ಬಂಧನವಾಗಿತ್ತು. ಆತ ನೀಡಿದ ಹೇಳಿಕೆ ಆಧರಿಸಿ ಶ್ರೀಕಾಂತ್‌ನನ್ನು ಬಂಧಿಸಿದ ಪೊಲೀಸರು ಆತನಿಗೆ ಮಾದಕದ್ರವ್ಯ ಸೇವನೆ ಪರೀಕ್ಷೆ ನಡೆಸಿದೆ ವೇಳೆ ಆತ ಡ್ರಗ್ ಸೇವಿಸಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ತಮಿಳುನಾಡು ಪೊಲೀಸರು ನಟ ಶ್ರೀಕಂತ್‌ನನ್ನು ಬಂಧಿಸಿದ್ದರು. ಇದರ ಜೊತೆ ಪ್ರಸಾದ್ ನಟ ಕೃಷ್ಣಗೂ ಡ್ರಗ್ಸ್ ಸೇವನೆ ಚಟ ಇದೆ ಎಂದು ಪೊಲೀಸರ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಈಗ ಚೆನ್ನೈನ ನುಂಗಬಾಕಂ ಪೊಲೀಸರು ನಟ ಕೃಷ್ಣನನ್ನು ಕೂಡ ಬಂಧಿಸಿದ್ದಾರೆ.
ಪ್ರಸಾದ್ ಹೇಳಿಕೆ ಆಧರಿಸಿ ನಟ ಕೃಷ್ಣನ ಬಂಧನ
ಪ್ರಸಾದ್ ಹೇಳಿಕೆ ಹಿನ್ನೆಲೆ ನಟ ಕೃಷ್ಣನನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸಮನ್ಸ್ ನೀಡಿದ್ದರು. ಆದರೆ ಈ ಸಮನ್ಸ್‌ಗೆ ನಟ ಕೃಷ್ಣ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಕೃಷ್ಣನ ಬಂಧನಕ್ಕೆ ಪೊಲೀಸರು 5 ತಂಡಗಳನ್ನು ರಚಿಸಿದ್ದರು. ಅದರಂತೆ ಕಾರ್ಯಾಚರಣೆಗೆ ಇಳಿದ ಪೊಲೀಸರು ನಿನ್ನೆ ನಟ ಕೃಷ್ಣನನ್ನು ಬಂಧಿಸಿದ್ದಾರೆ.

ಅತೀಯಾದ ಡ್ರಗ್ಸ್ ಸೇವಿಸುವ ತಾಕತ್ತಿಲ್ಲ ಎಂದ ಕೃಷ್ಣ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೃಷ್ಣನ ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆ ವೇಳೆ ನಟ ಕೃಷ್ಣ ಕಳೆದ ವರ್ಷ ತನಗೆ ಆಂಜಿಯೋ ಶಸ್ತ್ರಚಿಕಿತ್ಸೆ ನಡೆದಿದೆ ಹಾಗೂ ಅತಿಯಾದ ಡ್ರಗ್ಸ್ ಸೇವಿಸಿ ಅರಗಿಸಿಕೊಳ್ಳುವಷ್ಟು ತಾನು ಆರೋಗ್ಯವಾಗಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎಂದು ವರದಿಯಾಗಿದೆ.
ತಪಾಸಣೆಯಲ್ಲಿ ಡ್ರಗ್ಸ್ ಸೇವನೆ ವರದಿಯಾಗಿಲ್ಲ:
ಇದಲ್ಲದೆ, ತನಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಎಂದೂ, ಏನಾದರೂ ಆಘಾತಕಾರಿ ವಿಷಯ ಕೇಳಿದರೆ ಭಯ ಆಗುತ್ತದೆ ಎಂದೂ ಪೊಲೀಸರ ಮುಂದೆ ಹೇಳಿದ್ದಾನೆ. ಇದರ ಬೆನ್ನಲ್ಲೇ ನಟ ಕೃಷ್ಣಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಅವರು ಕಳೆದ 45 ದಿನಗಳಿಂದ ಯಾವುದೇ ನಿಷೇಧಿತ ಡ್ರಗ್ಸ್ ಸೇವಿಸಿಲ್ಲ ಎಂದು ತಿಳಿದು ಬಂದಿದೆ. ಅವರು ಡ್ರಗ್ಸ್ ಸೇವಿಸದಿದ್ದರೂ, ಅದನ್ನು ಮಾರಾಟ ಮಾಡಿದ್ದಾರಾ ಎಂಬ ಕೋನದಲ್ಲಿ ನಿನ್ನೆ ರಾತ್ರಿ ಪೂರ್ತಿ ಕೃಷ್ಣನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕೋಡ್‌ವರ್ಡ್ಸ್ ಮೂಲಕ ಕೃಷ್ಣ ಚಾಟಿಂಗ್
ಈ ವಿಚಾರಣೆಯ ವೇಳೆ ಪೊಲೀಸರು ನಟ ಕೃಷ್ಣನ ಮೊಬೈಲ್ ಅನ್ನೂ ಪರಿಶೀಲಿಸಲಾಗಿದೆ. ಅದರಲ್ಲಿ ಅವರು 2020 ರಿಂದ ಡಿಲೀಟ್ ಮಾಡಿದ್ದ ಸಂದೇಶಗಳನ್ನು ಕೂಡ ಮರುಪಡೆದು ವಿಚಾರಣೆ ನಡೆಸಿದ್ದಾರೆ. ಅದರಲ್ಲಿ ಅವರು ಕೆಲವು ಸ್ನೇಹಿತರ ಜೊತೆ ಕೋಡ್ ವರ್ಡ್‌ಗಳಲ್ಲಿ ಮಾತನಾಡಿರುವುದು ತಿಳಿದುಬಂದಿದೆ. ಆ ಕೋಡ್ ವರ್ಡ್‌ಗಳು ಡ್ರಗ್ಸ್‌ಗೆ ಸಂಬಂಧಿಸಿರಬಹುದು ಎಂದು ಶಂಕಿಸಿ, ನಟ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಸತತವಾಗಿ ಇಬ್ಬರು ನಟರು ಸಿಕ್ಕಿಬಿದ್ದಿರುವುದರಿಂದ ತಮಿಳುನಾಡು ಸಿನಿಮಾ ರಂಗದಲ್ಲಿ ಈ ವಿಚಾರ ಭಾರೀ ಸಂಚಲನ ಮೂಡಿಸಿದೆ.
ಕೃಷ್ಣ ಜೊತೆ ನುಂಗಬಾಕಂ ಪೊಲೀಸರು ಕೆವಿನ್ ಎಂಬ ಡ್ರಗ್ ಪೆಡ್ಲರ್‌ನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 4 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಪಬ್ಬೊಂದರಲ್ಲಿ ನಡೆದ ಗಲಾಟೆಯಲ್ಲಿ ಈ ಎಲ್ಲರೂ ಭಾಗಿಯಾಗಿದ್ದ ಬಗ್ಗೆ ವರದಿಯಾಗಿತ್ತು. ಇವರ ಜೊತೆಗೆ ತಮಿಳು ಚಿತ್ರರಂಗದ ಇನ್ನೂ ಅನೇಕರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
