ಭರ್ಜರಿ ಬ್ಯಾಚುಲರ್ಸ್​ ಮೂಲಕ ಹವಾ ಸೃಷ್ಟಿಸ್ತಿರೋ ಜೋಡಿಗಳಲ್ಲಿ ಒಂದು ಡ್ರೋನ್​ ಪ್ರತಾಪ್ ಮತ್ತು ಗಗನಾ. ಆದರೆ ಗಗನಾ ಬಗ್ಗೆ ಅವರ ಅಭಿಮಾನಿಗಳಿಗೆ ಕಳವಳ ಶುರುವಾಗಿದೆ. ಇದೇನಿದು? 

ಮಹಾನಟಿಯ ಮೊದಲ ಸೀಸನ್​ ಮೂಲಕ ಮನೆಮಾತಾದವರು ಚಿತ್ರದುರ್ಗದ ಗಗನಾ. ಇದೀಗ ಅವರಿಗೆ ರಿಯಾಲಿಟಿ ಷೋಗಳಲ್ಲಿ ಭಾರಿ ಬೇಡಿಕೆ ಇದ್ದು, ಸದ್ಯ ಜೀ ಕನ್ನಡದ ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಷೋನಲ್ಲಿ ಡ್ರೋನ್​​ ಪ್ರತಾಪ್​ಗೆ ಜೋಡಿಯಾಗಿದ್ದಾರೆ. ಇದಾಗಲೇ ಈ ಜೋಡಿ ಭಾರಿ ಮೋಡಿ ಮಾಡುತ್ತಲೇ ಇದೆ. ಈ ರಿಯಾಲಿಟಿ ಷೋನಲ್ಲಿ ಪೈಪೋಟಿಗೆ ಬಿದ್ದವರಂತೆ ಸ್ಪರ್ಧಾ ಜೋಡಿಗಳು ರೊಮಾನ್ಸ್​ನಲ್ಲಿ ತೊಡಗಿಸಿಕೊಂಡಿವೆ. ಪ್ರಪೋಸಲ್​ ರೌಂಡ್, ಆ ರೌಂಡ್​, ಈ ರೌಂಡ್​ ಎನ್ನುತ್ತಲೇ ರಿಯಲ್​ ಪ್ರೇಮಿಗಳನ್ನೂ ನಾಚಿಸುವಂತೆ ಈ ಜೋಡಿಗಳು ಕಾಣಿಸಿಕೊಳ್ಳುತ್ತಿವೆ. ಬಹುತೇಕ ರಿಯಾಲಿಟಿ ಷೋಗಳು ಸ್ಕ್ರಿಪ್ಟೆಡ್​ ಆಗಿದ್ದರೂ, ಇಲ್ಲಿ ನಡೆಯುತ್ತಿರುವುದೆಲ್ಲಾ ಸತ್ಯ ಎಂದೇ ನಂಬುವ ದೊಡ್ಡ ವರ್ಗದ ಪ್ರೇಕ್ಷಕರೂ ಇದ್ದಾರೆ.

ಅದೇನೇ ಇರಲಿ, ಸದ್ಯ ಡ್ರೋನ್​ ಪ್ರತಾಪ್​ ಮತ್ತು ಗಗನಾರ ಹವಾ ಹೆಚ್ಚಿದೆ. ಇಬ್ಬರೂ ಪ್ರೇಮಿಗಳಂತೆ ದಿನದಿಂದ ದಿನಕ್ಕೆ ವರ್ತಿಸುತ್ತಿದ್ದಾರೆ. ಗಗನಾಗಾಗಿ ಮಹಾತ್ಯಾಗಿಯಾದವರಂತೆ ಡ್ರೋನ್​ ಪ್ರತಾಪ್​ ವರ್ತಿಸುತ್ತಿದ್ದರೆ, ಆ ಪ್ರೀತಿಯನ್ನು ನೋಡಿ, ಜೀವನದಲ್ಲಿ ಪ್ರೀತಿಯನ್ನೇ ಕಾಣದವರಂತೆ ಗಗನಾ ಕಣ್ಣೀರು ಸುರಿಸುತ್ತಿದ್ದಾರೆ. ಇದೇ ವೇಳೆ ಇದಾಗಲೇ ಗಗನಾಳ ಮನೆಗೂ ಡ್ರೋನ್​ ಪ್ರತಾಪ್​ ಹೋಗಿ ಬಂದಾಗಿದೆ. ಅಲ್ಲಿ ಅಡುಗೆ ಮನೆಯಲ್ಲಿ ತಬ್ಬಿಕೊಳ್ಳುವ ಆಸೆಯಾಗಿತ್ತು ಎಂದೂ ಡ್ರೋನ್​ ವೇದಿಕೆ ಮೇಲೆ ಹೇಳಿದ್ದಾರೆ. ಇಂಥ ಹಲವು ಮಾತುಗಳು ಮೊದಲೇ ಅವರಿಗೆ ಬರೆದುಕೊಟ್ಟಿರಲಾಗುತ್ತದೆ ಎನ್ನುವ ಮಾತುಗಳೂ ಇವೆಯಾದರೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಸ್ಪರ್ಧಿಗಳೂ ನಾಟಕ ಮಾಡಬೇಕಾಗುತ್ತದೆ, ಅತ್ತ ಎಲ್ಲವನ್ನೂ ಬಲ್ಲ ತೀರ್ಪುಗಾರರೂ (ಹೇಳಿ ಕೇಳಿ ಆ ಸ್ಥಾನದಲ್ಲಿ ಇರುವವರು ಕೂಡ ನಟ-ನಟಿಯರೇ) ನಾಟಕ ಮಾಡಲೇಬೇಕಾಗುವ ಅನಿವಾರ್ಯತೆ ಬಹುತೇಕ ಎಲ್ಲಾ ಭಾಷೆಗಳ ಎಲ್ಲಾ ರಿಯಾಲಿಟಿ ಷೋಗಳಲ್ಲಿಯೂ ಇದೆ.

ಆದರೆ, ಇದೀಗ ಗಗನಾ ಮತ್ತು ಡ್ರೋನ್​ ಪ್ರತಾಪ್​ ಒಂದು ಹಂತ ಮೀರಿರುವುದನ್ನು ನೋಡಿ, ಅದರಲ್ಲಿಯೂ ಡ್ರೋನ್​ ಬಣ್ಣಬಣ್ಣದ ಮಾತುಗಳಿಂದ ಗಗನಾರನ್ನು ಇಂಪ್ರೆಸ್​ ಮಾಡುವುದನ್ನು ನೋಡಿ ಹಲವು ವೀಕ್ಷಕರು ಇದೆಲ್ಲಾ ಸತ್ಯ ಎಂದೇ ನಂಬಿ, ನಮ್ಮೂರ ಹುಡುಗಿಗೆ ಅನ್ಯಾಯ ಆಗ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಡ್ರೋನ್​ ಪ್ರತಾಪ್​ ಈ ಮಟ್ಟಿಗೆ ಬೆಳೆಯಲು ಕಾರಣ, ಅವರ ಕಾಂಟ್ರವರ್ಸಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ತಾವೊಬ್ಬ ಡ್ರೋನ್​ ತಯಾರಕ, ವಿಜ್ಞಾನಿ ಎಂದೆಲ್ಲಾ ಹೇಳಿ ಘಟಾನುಘಟಿಗಳನ್ನೂ ಯಾಮಾರಿಸಿರುವ ಚಾಣಾಕ್ಷ ಅವರು. ತಮ್ಮ ಜೀವನದ ಬಗ್ಗೆ ಸುಳ್ಳಿನ ಕಂತೆಗಳನ್ನೇ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಹೇಳಿ, ಕೊನೆಗೆ ಕುಟುಂಬದವರನ್ನೇ ಒಂದು ಹಂತದಲ್ಲಿ ದೂರ ಮಾಡಿಕೊಂಡವರು ಡ್ರೋನ್​. ಇವರ ಸುಳ್ಳಿನ ಕಂತೆ ಬಯಲಾಗುತ್ತಲೇ ಜೈಲುವಾಸ ಕೂಡ ಅನುಭವಿಸಿ ಬಂದವರು. ಇಂಥವರಿಗಾಗಿಯೇ ಬಿಗ್​ಬಾಸ್​ ಬಾಗಿಲು ತೆರೆದಿರುತ್ತದೆ. ಬಿಗ್​ಬಾಸ್ ಮನೆಯೊಳಕ್ಕೆ ಹೋಗುತ್ತಲೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡವರು ಅವರು.

ಆದರೆ, ಇವರ ಹಿನ್ನೆಲೆ ಬಲ್ಲವರು ಇಂದಿಗೂ ಡ್ರೋನ್​ ಪ್ರತಾಪ್​ರ ಆ ಹಿಂದಿನ ಸುಳ್ಳಿನ ಕಂತೆಗಳನ್ನೇ ಪದೇ ಪದೇ ಹೇಳುತ್ತಲೇ ಇರುತ್ತಾರೆ. ಇದಾಗಲೇ ಡ್ರೋನ್​ ಪ್ರತಾಪ್​ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲೇ, ಬಿಗ್​ಬಾಸ್​ ಮನೆಯಲ್ಲಿ ಸೌಮ್ಯವಾದ, ಮೃದುವಾದ ಮಾತುಗಳಿಂದ ಎಲ್ಲರನ್ನೂ ಗೆಲ್ಲುತ್ತಲೇ ಬಂದವರು. ಆದರೂ ಯಾಕೋ ಈ ಹಿಂದೆ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಮೃದುವಾದ ಮಾತುಗಳಿಂದ ಎಲ್ಲರನ್ನೂ ಮರಳು ಮಾಡಿದಂತೆಯೇ ಕಾಣಿಸುತ್ತಿದ್ದಾರೆ ಡ್ರೋನ್​. ಇದೇ ಕಾರಣಕ್ಕೆ ಗಗನಾ ಎಲ್ಲಿ ನಿಜವಾಗಿಯೂ ಈ ಮಾತುಗಳಿಗೆ ಮರುಳಾಗಿ ಬಿಡುತ್ತಾರೆಯೋ ಎನ್ನುವ ಆತಂಕ ನೆಟ್ಟಿಗರದ್ದು. ಇದಾಗಲೇ ಹಲವು ಸಲ ಗಗನಾ ಡ್ರೋನ್​ ಪ್ರತಾಪ್​ರನ್ನು ಹಾಡಿ ಹೊಗಳಿದ್ದು ಇದೆ. ನಿಮ್ಮ ಹೆಂಡತಿಯಾಗುವವಳು ಪುಣ್ಯವಂತೆ ಎಂದೆಲ್ಲಾ ಹೇಳಿದ್ದಾರೆ. ಅದಕ್ಕೇ ಗಗನಾ ಅಭಿಮಾನಿಗಳಿಗೆ ಏನೋ ಆತಂಕ ಇದ್ದಂತಿದೆ. ಅದಕ್ಕಾಗಿಯೇ ನಮ್ಮ ಮನೆ ಮಗಳಂತಿರುವ ಗಗನಾಗೆ ಅನ್ಯಾಯ ಮಾಡಬೇಡ್ರಪ್ಪೋ ಎನ್ನುತ್ತಿದ್ದಾರೆ.

View post on Instagram