ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನಲ್ಲಿ ಡ್ರೋನ್ ಪ್ರತಾಪ್ ಗಗನ್ ಅವರಿಗೆ ಜಡೆ ಹೆಣೆದು ಹೂವು ಮುಡಿಸಿದ್ದಾರೆ. ಇವರಿಬ್ಬರನ್ನು ವೇದಿಕೆ ಮೇಲೆ ನೋಡಿ ರಚಿತಾ ರಾಮ್ ಸುಸ್ತಾಗಿ ಹೋಗಿದ್ದಾರೆ. ಆಗಿದ್ದೇನು ನೋಡಿ!
ಡ್ರೋನ್ ಪ್ರತಾಪ್ ಸದ್ಯ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನ ಖುಷಿಯಲ್ಲಿದ್ದಾರೆ. ಕೆಲ ವಾರಗಳ ಹಿಂದಷ್ಟೇ ಡ್ರೋನ್ ಪ್ರತಾಪ್ ಇದೇ ರಿಯಾಲಿಟಿ ಷೋನ ವೇದಿಕೆಯ ಮೇಲೆ ಮತ್ತೋರ್ವ ಸ್ಪರ್ಧಿ ಗಗನಾ ಅವರಿಗೆ ತಾಳಿ ಕಟ್ಟಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಟಿ ರಚಿತಾ ರಾಮ್ ಅವರ ಸಮ್ಮುಖದಲ್ಲಿ ತಾಳಿ ಕಟ್ಟಲಾಗಿತ್ತು. ಮದುಮಗನ ಗೆಟಪ್‌ನಲ್ಲೇ ಬಂದು ಮದುವೆ ಮಾಡಿಕೊಂಡಿದ್ದರು. ಅಷ್ಟಕ್ಕೂ ಇದು ರವಿಚಂದ್ರನ್ ಅವರ ರಾಮಾಚಾರಿ ಸಿನಿಮಾದ ಮದುವೆ ಸೀನ್ ರಿಕ್ರೇಟ್ ಮಾಡಲಾಗಿತ್ತು. ಡ್ರೋನ್ ಪ್ರತಾಪ್ ಅವರ ರವಿಚಂದ್ರನ್ ಗೆಟಪ್‌ನಲ್ಲಿ ಮದುಮಗ ಆಗಿದ್ರೆ, ಮಾಲಾಶ್ರೀ ಗೆಟಪ್‌ನಲ್ಲಿ ಗಗನಾ ವಧುವಿನಂತೆ ಬಂದಿದ್ದರು. ಸಿನಿಮಾದಲ್ಲಿ ಥೇಟ್ ರವಿಚಂದ್ರನ್ ಅವರು ಪೆದ್ದನಂತೆ ಬಂದು ಮಾಲಾಶ್ರೀ ಕೊರಳಿಗೆ ತಾಳಿ ಕಟ್ಟಿದಂತೆಯೇ, ಪ್ರತಾಪ್ ಕೂಡ ಗಗನಾ ಕೊರಳಿಗೆ ತಾಳಿ ಕಟ್ಟಿ ಭೇಷ್ ಭೇಷ್ ಎನ್ನಿಸಿಕೊಂಡಿದ್ದರು.
ಇದೀಗ ಡ್ರೋನ್ ಪ್ರತಾಪ್, ತಮ್ಮ ಕನಸಿನ ಕನ್ಯೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕನಸಿನ ಕನ್ಯೆ ಹೇಗಿರಬೇಕು ಎಂದು ಹೇಳುತ್ತಲೇ ಮಂಡ್ಯದ ಹುಡುಗಿಯಾಗಿರಬೇಕು ಎಂದು ಗಗನಾರನ್ನು ಮಂಡ್ಯದ ಹೆಣ್ಣು ಮಾಡಿದ್ದಾರೆ. ತಮಗೆ ಜಡೆ ಹೆಣೆಯಲು ಬರುತ್ತದೆ ಎಂದು ಆಕೆಯ ಜಡೆ ಹೆಣೆದು ಹೂವು ಮುಡಿಸಿದ್ದಾರೆ. ಬಳಿಕ ಪುಟ್ಟ ಮಲ್ಲಿ ಪುಟ್ಟ ಮಲ್ಲಿ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಇವರನ್ನು ನೋಡಿ ರಚಿತಾ ರಾಮ್ ಖುಷಿಯಿಂದ ಕುಣಿದು ಕುಪ್ಪಳಿಸಿದರೆ, ರವಿಚಂದ್ರನ್ ಕೂಡ ಶಹಬ್ಬಾಸ್ಗಿರಿ ಕೊಟ್ಟಿದ್ದಾರೆ.
ಈ ಹಿಂದಿನ ಎಪಿಸೋಡ್ಗಳಲ್ಲಿ ಗಗನಾ ಅವರಿಗಾಗಿ ಡ್ರೋನ್ ಪ್ರತಾಪ್ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದರು. ಗಗನಾ ಅವರಿಗೆ ಸಿನಿಮಾದಲ್ಲಿ ಛಾನ್ಸ್ ಸಿಕ್ಕು ಆಕೆಯ ಆಸೆ ನೆರವೇರಲಿ ಎನ್ನುವ ಸಲುವಾಗಿ, ಹರಕೆ ಹೊತ್ತುಕೊಂಡು ಅದನ್ನು ತೀರಿಸಿದ್ದಾರೆ ಡ್ರೋನ್ ಪ್ರತಾಪ್. ತಣ್ಣೀರು ಸುರಿದುಕೊಂಡು, ಉರುಳುಸೇವೆ ಮಾಡಿ, ನೆಲದಲ್ಲಿ ಊಟ ಮಾಡುವ ಮೂಲಕ ಹರಕೆ ತೀರಿಸಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ಪಾರ್ಟಿಯಲ್ಲಿ ಇದನ್ನು ನೋಡಿ ಗಗನಾ ಗಳಗಳನೇ ಅತ್ತುಬಿಟ್ಟರು. ಗಗನಾ ಅವರಿಗೆ ಯಾರೋ, ಆದರೂ ಬೆಸ್ಟ್ ಫ್ರೆಂಡ್ ಆಗಿ ಹೀಗೆ ಮಾಡಿದ್ದಾರೆ ಎಂದರೆ ಅದು ಅವರಲ್ಲಿ ಇರುವ ಒಳ್ಳೆಯತನವನ್ನು ತೋರಿಸುತ್ತದೆ ಎಂದಿದ್ದರು.
ಅದಕ್ಕೂ ಮುನ್ನ, ಡ್ರೋನ್ ಪ್ರತಾಪ್ ಗಗನಾಗೋಸ್ಕರ ಬೀದಿಗೆ ಬಂದು ವ್ಯಾಪಾರ ಮಾಡಿದ್ದರು. ಬೀದಿಗೆ ಬಂದು ಭರ್ಜರಿ ಬ್ಯಾಚುಲರ್ಸ್ನ ಬ್ಯಾಗ್ ಅನ್ನು ಮಾರಾಟ ಮಾಡಿದ್ದರು. ಜೊತೆಗೆ ಬಟ್ಟೆ ಅಂಗಡಿಯಲ್ಲಿಯೂ ಕೆಲಸ ಮಾಡಿದ್ದರು. ಬಳೆ, ಕಿವಿಯೋಲೆಯನ್ನೂ ಮಾರಿದ್ದಾರೆ ಡ್ರೋನ್ ಪ್ರತಾಪ್ರನ್ನು ನೋಡಿ ಹಲವರಿಗೆ ಅಚ್ಚರಿಯಾಗಿದೆ. ಬಿಗ್ಬಾಸ್ನ ರನ್ನರ್ ಅಪ್ಗೆ ಇದೇನಾಗೋಯ್ತು ಎಂದು ಬಹುತೇಕ ಮಂದಿ ಅಚ್ಚರಿಯಿಂದ ನೋಡಿದ್ದರು. ಇನ್ನೇನಾದರೂ ಎಡವಟ್ಟು ಮಾಡಿಕೊಂಡು ಬಿಟ್ರಾ ಎಂದು ಕೆಲವರು ಭಯಪಟ್ಟಿದ್ದರು. ಕೊನೆಗೆ ಪ್ರತಾಪ್ ಅವರೇ ಎಲ್ಲರನ್ನೂ ಕೂಲ್ ಮಾಡಿ, ನನಗೆ ಒಂದು ದಿನದ ಟಾಸ್ಕ್ ಇದೆ. ಭರ್ಜರಿ ಬ್ಯಾಚಲರ್ಸ್ ಪಾರ್ಟಿ ಷೋಗೋಸ್ಕರ ಒಂದು ದಿನದ ಮಟ್ಟಿಗೆ ಈ ಕೆಲಸ ಮಾಡುತ್ತಿದ್ದೇನೆ ಎಂದಿದ್ದರು. ಕೊನೆಗೆ ಕೆಲವರು ಅವುಗಳನ್ನು ಖರೀದಿ ಮಾಡಿದ್ದರು. ಇದನ್ನು ನೋಡಿ ಗಗನಾ ಫುಲ್ ಫಿದಾ ಆಗಿಬಿಟ್ಟಿದ್ದರು. ಇವರನ್ನು ಮದ್ವೆಯಾಗೋಳು ತುಂಬಾ ಲಕ್ಕಿ ಎಂದಿದ್ದರು.
