ಟಾಲಿವುಡ್‌ನಲ್ಲಿ ದೇವರ, ಪೆದ್ದಿ ಸಿನಿಮಾಗಳ ಬಳಿಕ ಟೀಕೆ ಎದುರಿಸಿದ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಈಗ ತಮಿಳು ಸಿನಿಮಾಗಳನ್ನು ಹೊಗಳಿದ್ದಾರೆ. ಕಾಲಿವುಡ್ ಎಂಟ್ರಿಗೆ ಸಿದ್ಧತೆ ನಡೆಸುತ್ತಿದ್ದಾರಾ?

ದಕ್ಷಿಣ ಭಾರತದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಬಾಲಿವುಡ್ ನಟಿ ಜಾನ್ವಿ ಕಪೂರ್ ಇದೀಗ ಕಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ತಮಿಳು ಸಿನಿಮಾಗಳು, ನಿರ್ದೇಶಕರು ಮತ್ತು ನಟರ ಬಗ್ಗೆ ಅವರು ವ್ಯಕ್ತಪಡಿಸಿರುವ ಮೆಚ್ಚುಗೆ ಸಿನಿವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹಾಗಾದರೆ, ಜಾನ್ವಿ ಅವರಿಗೆ ನಿಜಕ್ಕೂ ತಮಿಳು ಚಿತ್ರರಂಗದ ಮೇಲೆ ವಿಶೇಷ ಆಸಕ್ತಿ ಇದೆಯಾ? ಅಥವಾ ಟಾಲಿವುಡ್‌ನಲ್ಲಿ ಎದುರಾದ ಟೀಕೆಗಳ ಬೆನ್ನಲ್ಲೇ ಕಾಲಿವುಡ್‌ನಲ್ಲಿ ಹೊಸ ಅವಕಾಶಗಳನ್ನು ಹುಡುಕುವ ತಂತ್ರವೇ ಇದು?

‘ದೇವರ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಜಾನ್ವಿ ಕಪೂರ್‌ಗೆ ಆರಂಭದಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಮೊದಲ ಸಿನಿಮಾದಲ್ಲೇ ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಗಲಿಲ್ಲ ಎಂಬ ಟೀಕೆ ಕೇಳಿಬಂದಿತ್ತು. ಇನ್ನು ರಾಮ್ ಚರಣ್ ಅಭಿನಯದ ‘ಪೆದ್ದಿ’ ಚಿತ್ರದಲ್ಲಿನ ಅಚ್ಚಿಯಮ್ಮ ಪಾತ್ರದ ಬಗ್ಗೆಯೂ ಭಾರೀ ಚರ್ಚೆ ನಡೆದಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಇದೀಗ ಜಾನ್ವಿ ತಮಿಳು ಚಿತ್ರರಂಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಟಾಲಿವುಡ್‌ನಲ್ಲಿ ಪಾತ್ರಗಳ ಸುತ್ತ ವಿವಾದ

ಜೂ. ಎನ್‌ಟಿಆರ್‌ಗೆ ನಾಯಕಿಯಾಗಿ ‘ದೇವರ’ ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ ಜಾನ್ವಿ ಕಪೂರ್‌ಗೆ ಮೊದಲ ಸಿನಿಮಾದಲ್ಲೇ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ. ಚಿತ್ರದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಅವಕಾಶ ನೀಡಿಲ್ಲ, ಹಾಡುಗಳು ಮತ್ತು ಗ್ಲಾಮರ್‌ಗಷ್ಟೇ ಸೀಮಿತಗೊಳಿಸಲಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಇದಾದ ಬಳಿಕ ಬುಚ್ಚಿಬಾಬು ಸನಾ ನಿರ್ದೇಶನದ, ರಾಮ್ ಚರಣ್ ನಾಯಕನಾಗಿ ನಟಿಸಿರುವ ‘ಪೆದ್ದಿ’ ಚಿತ್ರದಲ್ಲಿನ ಅಚ್ಚಿಯಮ್ಮ ಪಾತ್ರವೂ ವಿವಾದಕ್ಕೆ ಕಾರಣವಾಯಿತು. ನಾಯಕನ ಪಾತ್ರಕ್ಕೆ ಹೆಚ್ಚಿನ ಆಳ ಮತ್ತು ಪ್ರಾಮುಖ್ಯತೆ ನೀಡಲಾಗಿದ್ದರೆ, ನಾಯಕಿಯ ಪಾತ್ರವನ್ನು ಗ್ಲಾಮರ್‌ಗೆ ಸೀಮಿತಗೊಳಿಸಲಾಗಿದೆ ಎಂಬ ಟೀಕೆಗಳು ಕೇಳಿಬಂದವು. ಅದರಲ್ಲೂ ನಾಯಕಿಯ ಅನುಮತಿಯಿಲ್ಲದೆ ಸ್ಪರ್ಶಿಸುವುದು, ಬಲವಂತವಾಗಿ ಮುತ್ತಿಡುವಂತಹ ದೃಶ್ಯಗಳ ಚಿತ್ರಣದ ಬಗ್ಗೆ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ದೃಶ್ಯಗಳು ಮತ್ತು ಕ್ಯಾಮೆರಾ ಆ್ಯಂಗಲ್‌ಗಳ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿತ್ತು.

ಈ ವಿಚಾರವಾಗಿ ಮಹಿಳಾ ಸಂಘಟನೆಗಳು ಸೇರಿದಂತೆ ಹಲವರು ಆಕ್ಷೇಪ ಎತ್ತಿದ್ದರು. ಬಳಿಕ ಜಾನ್ವಿ ಕೂಡ ಆ ದೃಶ್ಯಗಳ ಕುರಿತು ಅಸಮಾಧಾನ ಮತ್ತು ಪಶ್ಚಾತ್ತಾಪದ ಮಾತುಗಳನ್ನಾಡಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ, ತೆಲುಗು ಸಿನಿಮಾಗಳಲ್ಲಿ ನಾಯಕಿಯರನ್ನು ಕೇವಲ ಗ್ಲಾಮರ್‌ಗೆ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಚರ್ಚೆಗೂ ಈ ವಿವಾದ ಮತ್ತಷ್ಟು ಕಾವು ನೀಡಿತ್ತು. ಈ ಬೆಳವಣಿಗೆಗಳ ಪರಿಣಾಮ ಜಾನ್ವಿ ಅವರ ಟಾಲಿವುಡ್ ಇಮೇಜ್ ಮೇಲೆ ಪ್ರಭಾವ ಬೀರಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದ್ದಕ್ಕಿದ್ದಂತೆ ತಮಿಳು ಸಿನಿಮಾಗಳ ಮೇಲೆ ಜಾನ್ವಿಗೆ ಪ್ರೀತಿ!

ಟಾಲಿವುಡ್‌ನಲ್ಲಿ ಇಂತಹ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಜಾನ್ವಿ ಕಪೂರ್ ಇದೀಗ ತಮಿಳು ಚಿತ್ರರಂಗದ ಬಗ್ಗೆ ವಿಶೇಷ ಒಲವು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ತಮ್ಮ ಚಿಕ್ಕಮ್ಮನ ಸಂಬಂಧಿಯಾದ ಹಿರಿಯ ನಟಿ ಮಹೇಶ್ವರಿ ಅವರೊಂದಿಗೆ ನಡೆಸಿದ ಚಿಟ್‌ಚಾಟ್ ಸಂದರ್ಶನದಲ್ಲಿ ಜಾನ್ವಿ ತಮಿಳು ಸಿನಿಮಾಗಳ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ತಾವು ಇತ್ತೀಚೆಗೆ ‘ಬ್ಲಾಸ್ಟ್’ ಎಂಬ ತಮಿಳು ಸಿನಿಮಾ ವೀಕ್ಷಿಸಿರುವುದಾಗಿ ಹೇಳಿದ ಅವರು, ಅದರಲ್ಲಿ ನಟಿಸಿರುವ ಪ್ರೀತಿ ಮುಕುಂದನ್ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.

ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಅವರ ಮ್ಯೂಸಿಕ್ ವಿಡಿಯೋಗಳಿಗೂ ತಾವು ಅಭಿಮಾನಿ ಎಂದು ತಿಳಿಸಿದ್ದಾರೆ. ಇಷ್ಟೇ ಅಲ್ಲ, ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ಸಿನಿಮಾಗಳೆಂದರೆ ತಮಗೆ ಬಹಳ ಇಷ್ಟ ಎಂದು ಹೇಳಿದ್ದಾರೆ. ದಳಪತಿ ವಿಜಯ್ ಅಭಿನಯದ ‘ಪೊಕಿರಿ’ಯಂತಹ ಕಮರ್ಷಿಯಲ್ ಸಿನಿಮಾಗಳನ್ನೂ ತಾವು ಇಷ್ಟಪಟ್ಟು ನೋಡುತ್ತೇನೆ ಎಂದಿದ್ದಾರೆ. ತಮ್ಮ ತಂದೆ ಬೋನಿ ಕಪೂರ್ ರಿಮೇಕ್ ಮಾಡಿರುವ ತಮಿಳು ಸಿನಿಮಾಗಳನ್ನೂ ನಿಯಮಿತವಾಗಿ ವೀಕ್ಷಿಸುವುದಾಗಿ ತಿಳಿಸಿದ್ದಾರೆ.

ಕಾಲಿವುಡ್‌ಗೆ ಎಂಟ್ರಿ ಕೊಡಲು ಶುರುವಾಯ್ತಾ ಗ್ರೌಂಡ್‌ವರ್ಕ್?

ಜಾನ್ವಿ ಕಪೂರ್ ಅವರ ಈ ಹೇಳಿಕೆಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಟಾಲಿವುಡ್‌ನಲ್ಲಿ ಪಾತ್ರಗಳ ಆಯ್ಕೆ ಮತ್ತು ಸಿನಿಮಾಗಳ ಸುತ್ತ ವಿವಾದಗಳು ಎದುರಾಗಿರುವ ಹಿನ್ನೆಲೆಯಲ್ಲಿ, ಅವರು ಕಾಲಿವುಡ್‌ನಲ್ಲಿ ಹೊಸ ಅವಕಾಶಗಳನ್ನು ಹುಡುಕುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ತಮಿಳು ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಜೊತೆಗೆ ವಿಭಿನ್ನ ಕಥೆಗಳು, ಪ್ರಯೋಗಾತ್ಮಕ ಚಿತ್ರಗಳು ಮತ್ತು ಅಭಿನಯಕ್ಕೆ ಹೆಚ್ಚು ಅವಕಾಶವಿರುವ ಮಹಿಳಾ ಪ್ರಧಾನ ಪಾತ್ರಗಳಿಗೂ ಆದ್ಯತೆ ಸಿಗುತ್ತದೆ ಎಂಬ ಅಭಿಪ್ರಾಯವಿದೆ.

ಹೀಗಾಗಿ, ತಮಿಳು ಚಿತ್ರರಂಗದ ಪ್ರಮುಖ ನಿರ್ದೇಶಕರು ಮತ್ತು ನಟರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಅಲ್ಲಿನ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನವನ್ನು ಜಾನ್ವಿ ಮಾಡುತ್ತಿದ್ದಾರೆಯೇ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ಜಾನ್ವಿ ಕಪೂರ್ ಅವರ ತಮಿಳು ಸಿನಿಮಾಗಳ ಮೇಲಿನ ಪ್ರೀತಿ ನಿಜವಾದ ಆಸಕ್ತಿಯೇ ಅಥವಾ ಕಾಲಿವುಡ್‌ನಲ್ಲಿ ಅವಕಾಶಗಳನ್ನು ಪಡೆಯುವ ತಂತ್ರವೇ ಎಂಬುದಕ್ಕೆ ಸದ್ಯಕ್ಕೆ ಸ್ಪಷ್ಟ ಉತ್ತರ ಇಲ್ಲ. ಟಾಲಿವುಡ್‌ನಲ್ಲಿ ಎದುರಾದ ಟೀಕೆಗಳ ನಡುವೆ ಕಾಲಿವುಡ್‌ನತ್ತ ಅವರು ಇಟ್ಟಿರುವ ಈ ಹೆಜ್ಜೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ.