ರಾಮ್ ಚರಣ್ ನಟನೆಯ ಪೆದ್ದಿ ಚಿತ್ರದ ಆಚ್ಚಿಯಮ್ಮ ಪಾತ್ರದ ಬಗ್ಗೆ ಬಂದ ಟೀಕೆಗಳಿಗೆ ಬಾಲಿವುಡ್‌ನ ಯುವ ನಟಿ ಜಾನ್ವಿ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಮುಂದೆ ಇಂಥ ಪಾತ್ರ ಮಾಡದಿರುವ ಬಗ್ಗೆ ನಟಿ ಹೇಳಿದ್ದೇನು?

ಬಾಲಿವುಡ್‌ನ ಯುವ ನಟಿಯರಲ್ಲಿ ಗುರುತಿಸಿಕೊಂಡಿರುವ ಜಾನ್ವಿ ಕಪೂರ್, ಇದೀಗ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದಲ್ಲಿ ಅಭಿನಯಿಸಿರುವ ಅವರು, ತಮ್ಮ ಪಾತ್ರದ ವಿಚಾರವಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಅದರಲ್ಲೂ ಆಚ್ಚಿಯಮ್ಮ ಪಾತ್ರದ ಬಗ್ಗೆ ಮಹಿಳಾವಾದದ ನೆಲೆಯಲ್ಲಿ ಹಲವು ಚರ್ಚೆಗಳು ನಡೆದಿದ್ದವು. ಇದೀಗ ಈ ವಿವಾದದ ಕುರಿತು ಜಾನ್ವಿ ಕಪೂರ್ ಮೌನ ಮುರಿದಿದ್ದಾರೆ.

'ಪೆದ್ದಿ' ಪಾತ್ರದ ಬಗ್ಗೆ ಜಾನ್ವಿ ಕಪೂರ್ ಹೇಳಿದ್ದೇನು?

ನಟಿ ಜಾನ್ವಿ ಕಪೂರ್ ಅವರು ದಿವಂಗತ ನಟಿ ಶ್ರೀದೇವಿ ಅವರ ಹಿರಿಯ ಪುತ್ರಿ. ತಾಯಿಯ ಹಾದಿಯಲ್ಲೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಜಾನ್ವಿ, ಸದ್ಯ ತಮ್ಮ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

2018ರಲ್ಲಿ ಬಿಡುಗಡೆಯಾದ 'ಧಡಕ್' ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಾನ್ವಿ, ನಂತರ 'ಘೋಸ್ಟ್ ಸ್ಟೋರೀಸ್', 'ಗುಂಜನ್ ಸಕ್ಸೇನಾ', 'ರೂಹಿ' ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ದಕ್ಷಿಣ ಭಾರತದ ಸಿನಿಮಾಗಳತ್ತಲೂ ಆಸಕ್ತಿ ತೋರಿದ ಅವರು, 2024ರಲ್ಲಿ ಬಿಡುಗಡೆಯಾದ ಜೂನಿಯರ್ ಎನ್‌ಟಿಆರ್ ಅಭಿನಯದ 'ದೇವರ: ಪಾರ್ಟ್ 1' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

ಇದಾದ ಬಳಿಕ ಜಾನ್ವಿ ನಟಿಸಿದ ಮತ್ತೊಂದು ತೆಲುಗು ಸಿನಿಮಾ 'ಪೆದ್ದಿ'. ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್‌ಗೆ ನಾಯಕಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಜಾನ್ವಿ ನಿರ್ವಹಿಸಿರುವ ಆಚ್ಚಿಯಮ್ಮ ಪಾತ್ರದ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಕೆಲವು ದೃಶ್ಯಗಳು ಮತ್ತು ಪಾತ್ರದ ಚಿತ್ರಣ ಮಹಿಳಾವಾದದ ದೃಷ್ಟಿಕೋನದಿಂದ ಟೀಕೆಗೆ ಗುರಿಯಾಗಿದ್ದವು.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಇದೇ ವಿಚಾರದ ಬಗ್ಗೆ ಮಾತನಾಡಿರುವ ಜಾನ್ವಿ ಕಪೂರ್, "ಪೆದ್ದಿ ಸಿನಿಮಾಗಾಗಿ ಸಾಕಷ್ಟು ಜನ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಈ ಬಗ್ಗೆ ಏನು ಹೇಳಬೇಕೆಂದೇ ನನಗೆ ತಿಳಿಯುತ್ತಿಲ್ಲ. ನನ್ನ ಪಾತ್ರದ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳುವುದು ಮುಖ್ಯ. ಮುಂದೆ ಇಂತಹದ್ದೇ ಪಾತ್ರದಲ್ಲಿ ಮತ್ತೆ ನಟಿಸದಂತೆ ನೋಡಿಕೊಳ್ಳುವುದು ಮಾತ್ರ ನನ್ನ ಕೈಯಲ್ಲಿರುವ ಕೆಲಸ" ಎಂದು ಹೇಳಿದ್ದಾರೆ.

ಈ ಮೂಲಕ 'ಪೆದ್ದಿ' ಚಿತ್ರದ ತಮ್ಮ ಪಾತ್ರದ ಬಗ್ಗೆ ಬಂದ ಟೀಕೆಗಳನ್ನು ಜಾನ್ವಿ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಮುಂದಿನ ದಿನಗಳಲ್ಲಿ ಪಾತ್ರಗಳ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸುವ ಸುಳಿವನ್ನೂ ಅವರು ನೀಡಿದ್ದಾರೆ.