ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯನಟಿ ಊರ್ವಶಿ ಅವರಿಗೆ ವಿಪರೀತ ಕುಡಿಯುವ ಅಭ್ಯಾಸವಿತ್ತು ಎಂದು ನಟ ಹಾಗೂ ಪತ್ರಕರ್ತ ಬಯಿಲ್ವಾನ್ ರಂಗನಾಥನ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

90ರ ದಶಕದಲ್ಲಿ ಊರ್ವಶಿ ಟಾಪ್ ನಟಿಯಾಗಿ ಮಿಂಚಿದ್ದರು. 'ಮುಂತಾನೈ ಮುಡಿಚು' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಹಲವು ಪ್ರಮುಖ ನಟರ ಚಿತ್ರಗಳಲ್ಲಿ ನಟಿಸಿದರು. ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಸೇರಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟಿಯಾಗಿ ಊರ್ವಶಿ ಶ್ರೇಷ್ಠ ಅನ್ನೋದ್ರಲ್ಲಿ ಅನುಮಾನವಿಲ್ಲ.

ಆದರೆ, ಅವರ ವೈಯಕ್ತಿಕ ಜೀವನದ ಕೆಲವು ಘಟನೆಗಳಿಂದಾಗಿ, ಪ್ರೇಕ್ಷಕರು ಊರ್ವಶಿ ಮೇಲೆ ಬೇಸರಗೊಂಡಿದ್ದೂ ಇದೆ. ಅವರ ಜೀವನದಲ್ಲಿ ನಡೆದ ಘಟನೆಗಳು ಮತ್ತು ಕುಡಿತದ ಚಟಕ್ಕೆ ಕಾರಣವೇನು ಎಂದು ಬಯಿಲ್ವಾನ್ ರಂಗನಾಥನ್ ವಿವರಿಸಿದ್ದಾರೆ. ಊರ್ವಶಿ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ 'ಮುಂತಾನೈ ಮುಡಿಚು' ಚಿತ್ರದಲ್ಲಿ ಬಯಿಲ್ವಾನ್ ಕೂಡ ನಟಿಸಿದ್ದರು.

ಬಯಿಲ್ವಾನ್ ರಂಗನಾಥನ್, ಜೆಮ್ ಸಿನಿಮಾಸ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, "'ಮುಂತಾನೈ ಮುಡಿಚು' ಚಿತ್ರದ ಸೆಟ್‌ನಲ್ಲಿ ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದೆ. ಅದು ಅವರ ಮೊದಲ ಸಿನಿಮಾ. ಊರ್ವಶಿ ನಿಧಾನವಾಗಿ ಜನಪ್ರಿಯ ನಟಿಯಾದರು. ಅವರಿಗೆ ಕುಡಿಯುವ ಅಭ್ಯಾಸವೂ ಇತ್ತು. ಅವರು ದಿನವಿಡೀ ಕುಡಿಯುತ್ತಿದ್ದರು. ಒಮ್ಮೆ ಕ್ಯಾರವಾನ್‌ಗೆ ಹೋಗಿ ಅವರ ಬಳಿ ಮಾತನಾಡಿದೆ. ಹೆಚ್ಚು ಕುಡಿಯಬಾರದು ಎಂದು ಸಲಹೆ ನೀಡಿದೆ. ಕುಡಿತದ ಅಭ್ಯಾಸ ಹೇಗೆ ಬಂತು ಎಂದು ಕೇಳಿದಾಗ, ತನ್ನ ಗಂಡನೇ ಇದಕ್ಕೆ ಕಾರಣ ಎಂದು ಅವರು ಹೇಳಿದರು. ಆ ಮನೆಯಲ್ಲಿ ಎಲ್ಲರೂ ಕುಡಿಯುತ್ತಿದ್ದರು. ಹಾಗಾಗಿ ನಾನು ಯಾಕೆ ಕುಡಿಯಬಾರದು?" ಎಂದು ಅವರಿಗೆ ಅನಿಸಿತ್ತಂತೆ.

"ಮಾಜಿ ಪತಿಯ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಮದ್ಯಪಾನ ಮಾಡುತ್ತಿದ್ದರು. ನನ್ನ ಜೀವನದಲ್ಲಿ ಮನಃಶಾಂತಿ ಇರಲಿಲ್ಲ, ಹಾಗಾಗಿ ನಾನು ಹೆಚ್ಚು ಕುಡಿಯಲು ಪ್ರಾರಂಭಿಸಿದೆ. ಆರೋಗ್ಯ ಸಮಸ್ಯೆಗಳಿದ್ದವು. ನನಗೆ ನಿದ್ದೆ ಬರುತ್ತಿರಲಿಲ್ಲ. ಊಟ ಮಾಡಲು ಆಗುತ್ತಿರಲಿಲ್ಲ. ನನ್ನ ವೈಯಕ್ತಿಕ ಸಿಬ್ಬಂದಿ ಮತ್ತು ಸ್ನೇಹಿತರು ಅದರಿಂದ ಹೊರಬರಲು ನನಗೆ ಸಹಾಯ ಮಾಡಿದರು" ಎಂದು ಅವರು ಹೇಳಿದ್ದಾಗಿ ಬಯಿಲ್ವಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಬಯಿಲ್ವಾನ್ ರಂಗನಾಥನ್ ಹೇಳಿದ ಈ ಮಾತುಗಳು ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.

ಒಬ್ಬಳು ಮಗಳಿದ್ದಾಳೆ

ನಟಿ ಊರ್ವಶಿ, 2000ನೇ ಇಸವಿಯಲ್ಲಿ ಮಲಯಾಳಂ ನಟ ಮನೋಜ್ ಅವರನ್ನು ಮೊದಲು ಮದುವೆಯಾದರು. ಇವರಿಗೆ ಒಬ್ಬಳು ಮಗಳಿದ್ದಾಳೆ. 8 ವರ್ಷಗಳ ಕಾಲ ಒಟ್ಟಿಗೆ ಬಾಳಿದ ನಂತರ, ಇಬ್ಬರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ವಿಚ್ಛೇದನ ಪಡೆದರು. ನಂತರ 2013ರಲ್ಲಿ ಊರ್ವಶಿ, ಚೆನ್ನೈ ಮೂಲದ ಶಿವ ಪ್ರಸಾದ್ ಎಂಬುವವರನ್ನು ಎರಡನೇ ಮದುವೆಯಾದರು. ಈ ದಂಪತಿಗೆ ಒಬ್ಬ ಮಗನಿದ್ದಾನೆ.