Ramayana Trailer: ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ: ಪಾರ್ಟ್ 1' ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಖ್ಯಾತ ನಿರ್ದೇಶಕ ಅಟ್ಲೀ ಕೂಡ ಟ್ರೇಲರ್‌ಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ: ಪಾರ್ಟ್ 1' ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಖ್ಯಾತ ನಿರ್ದೇಶಕ ಅಟ್ಲೀ ಕೂಡ ಟ್ರೇಲರ್‌ಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದು, "ಪ್ರತಿ ಫ್ರೇಮ್ ಭವ್ಯವಾಗಿ ಮೂಡಿಬಂದಿದೆ. ಇದು ನಿಜಕ್ಕೂ ಎಪಿಕ್ ಸಿನಿಮಾ" ಎಂದು ತಂಡಕ್ಕೆ ಶುಭ ಹಾರೈಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ವೀಕ್ಷಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಹಂಚಿಕೊಂಡ ಅಟ್ಲೀ, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ನಿರ್ದೇಶಕ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಕನಸನ್ನು ಶ್ಲಾಘಿಸಿದ್ದಾರೆ.

"ರಾಮಾಯಣ ಟ್ರೇಲರ್ ನೋಡಿ ನಾನು ಸಂಪೂರ್ಣ ಬೆರಗಾಗಿದ್ದೇನೆ. ನಿತೇಶ್ ತಿವಾರಿ ಅವರ ನಿರ್ದೇಶನ ಮತ್ತು ನಮಿತ್ ಮಲ್ಹೋತ್ರಾ ಅವರ ದೂರದೃಷ್ಟಿ ಅದ್ಭುತ ಅನುಭವ ನೀಡಿದೆ," ಎಂದು ಅವರು ಬರೆದುಕೊಂಡಿದ್ದಾರೆ. ಟ್ರೇಲರ್‌ನಲ್ಲಿನ ಪ್ರಮುಖ ಕಲಾವಿದರ ಅಭಿನಯಕ್ಕೂ ಅಟ್ಲೀ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಅತ್ಯಂತ ಭಯಾನಕ ಮತ್ತು ಪ್ರಭಾವಶಾಲಿಯಾಗಿ ಕಾಣಿಸಿಕೊಂಡಿದ್ದಾರೆ. ರಣಬೀರ್ ಕಪೂರ್ ಅದ್ಭುತವಾಗಿ ಮಿಂಚಿದ್ದು, ಸಾಯಿ ಪಲ್ಲವಿ ದೈವಿಕ ಸೌಂದರ್ಯದೊಂದಿಗೆ ಗಮನ ಸೆಳೆದಿದ್ದಾರೆ ಎಂದು ಅವರು ಪ್ರಶಂಸಿಸಿದ್ದಾರೆ.

ಅಷ್ಟೇ ಅಲ್ಲದೆ, "ಟ್ರೇಲರ್‌ನ ಪ್ರತಿಯೊಂದು ಫ್ರೇಮ್ ಭವ್ಯತೆ, ಹೊಸತನ ಮತ್ತು ಮಾಂತ್ರಿಕ ಅನುಭವವನ್ನು ನೀಡುತ್ತದೆ. ಇದು ನಿಜಕ್ಕೂ ಎಪಿಕ್ ಸಿನಿಮಾ ಎನ್ನುವ ಭರವಸೆ ಮೂಡಿಸಿದೆ. ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು," ಎಂದು ಅಟ್ಲೀ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ 'ರಾಮಾಯಣ' ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮ, ಸಾಯಿ ಪಲ್ಲವಿ ಸೀತೆ ಹಾಗೂ ಯಶ್ ರಾವಣ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಸನ್ನಿ ಡಿಯೋಲ್ ಹನುಮಂತ ಹಾಗೂ ರವಿ ದುಬೆ ಲಕ್ಷ್ಮಣ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಈ ಮಹತ್ವಾಕಾಂಕ್ಷಿ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರು ಪ್ರೈಮ್ ಫೋಕಸ್ ಸ್ಟುಡಿಯೋಸ್, DNEG ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ನಿರ್ಮಿಸುತ್ತಿದ್ದಾರೆ. ಚಿತ್ರದ ಮೊದಲ ಭಾಗವು ದೀಪಾವಳಿ 2026ಕ್ಕೆ ವಿಶ್ವದಾದ್ಯಂತ IMAX ಮಾದರಿಯಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಹಾಗೂ ಅಂತಿಮ ಭಾಗವು ದೀಪಾವಳಿ 2027ರಲ್ಲಿ ತೆರೆಗೆ ಬರಲಿದೆ. ಇನ್ನೊಂದೆಡೆ, ನಿರ್ದೇಶಕ ಅಟ್ಲೀ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ರಾಕಾ' (Raaka) ಕೆಲಸಗಳಲ್ಲಿ ನಿರತರಾಗಿದ್ದಾರೆ.

ಅರ್ಧ ಮಾನವ-ಅರ್ಧ ಪ್ರಾಣಿಯ ಪಾತ್ರ

ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿತ್ತು. ಜೊತೆಗೆ ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಕಣ್ಣಿಗೆ ಕಾಜಲ್ ಧರಿಸಿರುವ ಹಾಗೂ ಪ್ರಾಣಿಯಂತಿರುವ ಉಗುರುಗಳಿರುವ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಅವರು ಅರ್ಧ ಮಾನವ-ಅರ್ಧ ಪ್ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಫೆಮಿನಾ ಜಾರ್ಜ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.