ಜನಪ್ರಿಯ 'ಅಮೃತಧಾರೆ' ಸೀರಿಯಲ್ ಶೀಘ್ರದಲ್ಲೇ ಅಂತ್ಯಗೊಳ್ಳುತ್ತಿದೆ ಎಂದು ನಟ ರಾಜೇಶ್ ನಟರಂಗ ಸ್ಪಷ್ಟಪಡಿಸಿದ್ದಾರೆ. ಸೀರಿಯಲ್ ಕೊನೆಯ ಹಂತದ ಚಿತ್ರೀಕರಣ ಮುಗಿದಿದ್ದು, ಪ್ರೇಕ್ಷಕರ ಬೆಂಬಲಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಅಮೃತಧಾರೆ ಸೀರಿಯಲ್​ (Amruthadhaare Serial) ಅಂತ್ಯ ಕಾಣುತ್ತಿದೆ. ಇದಾಗಲೇ ಸಾಕಷ್ಟು ಬಾರಿ ಈ ಸೀರಿಯಲ್​ ಅಂತ್ಯವಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ಹಲವಾರು ಬಾರಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ತಂದು ಸೀರಿಯಲ್​ ಮುಂದೂಡಲಾಗಿತ್ತು. ಇದಕ್ಕೆ ಕಾರಣ, ಈ ಸೀರಿಯಲ್​ ಟಿಆರ್​ಪಿ ಹೆಚ್ಚಿಗೆ ಇದ್ದುದು.ಕೊನೆಯವರೆಗೂ ಜನರನ್ನು ಹಿಡಿದಿಟ್ಟುಕೊಂಡ ಕೆಲವೇ ಕೆಲವು ಸೀರಿಯಲ್​ಗಳಲ್ಲಿ ಅಮೃತಧಾರೆಯೂ ಒಂದು. ಇದೀಗ ಇದರ ಅಂತ್ಯವಾಗುತ್ತಿದೆ ಎನ್ನುವುದು ತಿಳಿದರೂ, ನಿರ್ದೇಶಕರು ಇದನ್ನು ಮತ್ತಷ್ಟು ಮುಂದೂಡಬಹುದು ಎನ್ನುವ ಗುಮಾನಿ ಕೂಡ ಜನರಲ್ಲಿ ಇತ್ತು.

ಆದರೆ ಇದೀಗ ಖುದ್ದು ಡುಮ್ಮಾ ಸರ್​, ಗೌತಮ್​ ದಿವಾನ್​ ಎಂದೇ ಫೇಮಸ್​ ಆಗಿರುವ ನಟ ರಾಜೇಶ್​ ನಟರಂಗ (Rajesh Nataranga) ಅವರು ಲೈವ್​ನಲ್ಲಿ ಬಂದು ಸೀರಿಯಲ್​ ಮುಗಿಯುತ್ತಿರುವ ಬಗ್ಗೆ ತಿಳಿಸಿದ್ದಾರೆ. ನಿನ್ನೆ ಅಮೃತಧಾರೆ ಸೀರಿಯಲ್​ ಚಿತ್ರೀಕರಣ ಮುಗಿದಿದೆ. ಎಲ್ಲವೂ ಎಕ್ಸ್​ಪೈರಿ ಡೇಟ್​ ಒಂದಿಗೆ ಇರುತ್ತದೆ. ಹಾಗಾಗಿ ಅಮೃತಧಾರೆ ಸೀರಿಯಲ್​ ಎಕ್ಸ್​ಪೈರಿ ಡೇಟ್​ ಕೂಡ ಫಿಕ್ಸ್​ ಆಗಿದೆ. ಇನ್ನು ಕೆಲವೇ ಕಂತುಗಳು ಇವೆ ಎಂದು ನಟ ರಾಜೇಶ್​ ನಟರಂಗ ತಿಳಿಸಿದ್ದಾರೆ.

ಯಾರೂ ಕೂಡ ಬೇಜಾರು ಮಾಡಿಕೊಳ್ಳಬೇಡಿ

ಯಾರು ಕೂಡ ಬೇಜಾರು ಮಾಡಿಕೊಳ್ಳಬೇಡಿ. ನೀವು ಸೀರಿಯಲ್​ ಬದುಕಿಸಿದ್ದ ರೀತಿಗೆ ನಾನು ಋಣಿ. ರಾಜೇಶ ನಟರಂಗ ಆಗಿ ನಾನು ಮೊದಲೂ ಆ್ಯಕ್ಟ್​ ಮಾಡಿದ್ದೆ ನಿಜ. ಆದರೆ ಕಳೆದ ಮೂರೂವರೆ ವರ್ಷಗಳಿಂದ ಗೌತಮ್​ ದಿವಾನ್​ ಆಗಿ ನನ್ನನ್ನು ಬದುಕಿಸಿದ ಗೌತಮ್​ಗೆ ಧನ್ಯವಾದ. ಈ ಸೀರಿಯಲ್​ನ ಎಲ್ಲಾ ಹಿರಿ-ಕಿರಿಯ ಕಲಾವಿದರಿಗೆ ಧನ್ಯವಾದ. ಮುಖ್ಯವಾಗಿ ಭೂಮಿಕಾ ಪಾತ್ರ ಮಾಡಿದ ಛಾಯಾ ಸಿಂಗ್​ ಅವರಿಗೂ ಧನ್ಯವಾದ ಎಂದಿದ್ದಾರೆ ನಟ ರಾಜೇಶ್​ ನಟರಂಗ. 20 ವರ್ಷಗಳ ಮೇಲೆ ಇಷ್ಟು ಸುದೀರ್ಘ ಕಿರುತೆರೆಯ ಪ್ರಯಾಣ ಮಾಡುತ್ತೇನೆ ಎಂದು ನನಗೂ ಅನ್ನಿಸಿರಲಿಲ್ಲ. ಜನ ನನ್ನನ್ನು ಹೇಗೆ ಸ್ವೀಕರಿಸುತ್ತಾರೆಯೋ ಎನ್ನುವ ಭಯವಿತ್ತು. ಆದರೆ ತುಂಬಾ ಪ್ರೀತಿ ಕೊಟ್ಟಿರುವುದಕ್ಕೆ ಮಾತುಗಳೇ ಇಲ್ಲ ಎಂದಿದ್ದಾರೆ.

20 ಲಕ್ಷಕ್ಕೂ ಹೆಚ್ಚು ಸೆಕೆಂಡ್​

ಐದಾರು ಸೆಕೆಂಡ್​ಗಳ ರೀಲ್ಸ್​ನ ಈ ಕಾಲದಲ್ಲಿ, 20 ಲಕ್ಷಕ್ಕೂ ಹೆಚ್ಚು ಸೆಕೆಂಡ್​ ನಮ್ಮ ಜೊತೆ ಕಳೆದಿದ್ದೀರಿ. ನಿಮ್ಮ ಆಯಸ್ಸಿನ ಭಾಗವನ್ನು ನಮಗೆ ಕೊಟ್ಟಿದ್ದೀರಿ. ಚೆನ್ನಾಗಿದ್ದಾಗ ಹೊಗಳಿದ್ದೀರಿ, ಇಲ್ಲದಾಗ ಬೈದಿದ್ದೀರಿ, ಟೀಕೆ ಮಾಡಿದ್ದೀರಿ. ಎಲ್ಲರೂ ನಮಗೆ ಪಾಠ ಕಲಿಸಿದ್ದೀರಿ. ಹೊರ ರಾಜ್ಯಗಳಿಂದ ಮಾತ್ರವಲ್ಲದೆ ಹೊರ ದೇಶಗಳಿಂದಲೂ ಜನರು ಪ್ರೀತಿ ಕೊಟ್ಟಿದ್ದಾರೆ. ಮೆಸೇಜ್​ ಮಾಡಿದ್ದಾರೆ. ಇಷ್ಟು ದೊಡ್ಡ ಪ್ರೀತಿ ಕೊಟ್ಟಿದ್ದಕ್ಕೆ ಧನ್ಯವಾದ ಎಂದಿದ್ದಾರೆ ನಟ. ಅದೇ ರೀತಿ ಇನ್ನೊಂದು ಪ್ರಾಜೆಕ್ಟ್​ ಜೊತೆ ಮರಳಿ ಬರುವೆ ಎಂದಿದ್ದಾರೆ.