ಅಮೃತಧಾರೆ ಸೀರಿಯಲ್ ಅಂತಿಮ ಹಂತ ತಲುಪಿದ್ದು, ಶಕುಂತಲಾ ಮತ್ತು ಜೈದೇವ್ ಜೈಲು ಸೇರುವುದು ಖಚಿತವಾಗಿದೆ. ಆದರೆ ಅಂತಿಮ ಸಂಚಿಕೆಗಳಲ್ಲಿ ಗೌತಮ್ ಆಪ್ತಮಿತ್ರ ಆನಂದ್ ಹಾಗೂ ಆಕಾಶ್ ಪಾತ್ರಗಳು ಕಾಣೆಯಾಗಿರುವುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಅಮೃತಧಾರೆ ಸೀರಿಯಲ್​ (Amruthadhaare Serial) ಇನ್ನೇನು ಮುಗಿಯುವ ಹಂತದಲ್ಲಿದೆ. ಇನ್ನು ಕೆಲವೇ ಕೆಲವು ಎಪಿಸೋಡ್​ಗಳು ಇವೆಯಷ್ಟೇ. ಇದಾಗಲೇ ಶೂಟಿಂಗ್ ಕೂಡ ಮುಗಿದಿದ್ದು, ಸೀರಿಯಲ್​ ಕೂಡ ಫೈನಲ್​ ಹಂತ ತಲುಪಿದೆ. ಜೈದೇವನ ಎಲ್ಲಾ ಕ್ರಿಮಿನಲ್ಸ್​ಗೆ ಮಲ್ಲಿಗೆ ಸಾಕ್ಷ್ಯಾಧಾರ ಸಿಕ್ಕಾಗಿದೆ. ಶಕುಂತಲಾಳ ಅಸಲಿ ಬಣ್ಣ ಕೂಡ ಗೌತಮ್​ಗೆ ಗೊತ್ತಾಗಿದ್ದು, ಅಮ್ಮ-ಮಗನಿಗೆ ಜೈಲೂಟ ಫಿಕ್ಸ್​ ಆಗಿದೆ. ಅಂತಿಮ ಸಂಚಿಕೆಗಳು ಎಂದು ಇದಾಗಲೇ ಜೀ ವಾಹಿನಿ ಪ್ರೊಮೋ ಕೂಡ ಹಂಚಿಕೊಂಡಿದೆ. ಆದರೆ ಇದರಲ್ಲಿ ಇಬ್ಬರು ಲೀಡ್​ ರೋಲ್​ಗಳು ಅರ್ಥಾತ್​ ಮುಖ್ಯ ಪಾತ್ರಧಾರಿಗಳೇ ಮಾಯವಾಗಿದ್ದಾರೆ!

ಜಿಗರಿ ದೋಸ್ತ್​ ನಾಪತ್ತೆ

ಹೌದು. ಕಳೆದ ಕೆಲವು ಎಪಿಸೋಡ್​ಗಳಿಂದ ಗೌತಮ್​ನ ಜಿಗರಿ ದೋಸ್ತ್​, ಇದ್ದರೆ ಇರಬೇಕು ಇಂಥ ಗೆಳೆಯ ಎಂದುಕೊಂಡ ಆನಂದ್ (ಅವರ ಅಸಲಿ ಹೆಸರೂ ಆನಂದ್​) ನಾಪತ್ತೆಯಾಗಿದ್ದು, ಗೌತಮ್​ ಮಗ ಆಕಾಶ್​ ಪಾತ್ರದಲ್ಲಿ ರೋಲ್​ ಮಾಡ್ತಿದ್ದ ಆನಂದ್​ ಅವರ ಅಸಲಿ ಮಗ ದುಷ್ಯಂತ್​ ಚಕ್ರವರ್ತಿ​ ಮಾಯವಾಗಿದ್ದಾರೆ. ಮಗಳು ಮಿಂಚು ಮಾತ್ರ ಆಗೀಗ ಕಾಣಿಸಿಕೊಳ್ಳುತ್ತಿದ್ದಾಳೆ. ಅಂತಿಮ ಸಂಚಿಕೆಯಲ್ಲಿಯೂ ಇವರಿಬ್ಬರೂ ಕಾಣಿಸುತ್ತಿಲ್ಲ. ಅಂತಿಮ ಅಧ್ಯಾಯ ಎಂದು ವಾಹಿನಿ ಶೇರ್​ ಮಾಡಿಕೊಂಡಿರುವ ಪ್ರೊಮೋದಲ್ಲಿಯೂ ಇವರಿಬ್ಬರೂ ಇಲ್ಲ. ಹಾಗಿದ್ದರೆ ನಿಜಕ್ಕೂ ಏನಾಯ್ತು, ಈ ಲೀಡ್​ ರೋಲ್​ ಇಲ್ಲದೇ ಸೀರಿಯಲ್​ಮುಗಿಸಿದ್ದು ಏಕೆ ಎನ್ನುವ ಪ್ರಶ್ನೆ ನೆಟ್ಟಿಗರನ್ನು ಕಾಡುತ್ತಿದೆ.

ಅಷ್ಟಕ್ಕೂ ಗೌತಮ್​ ಮತ್ತು ಆನಂದ್​ ಗೆಳೆತನ ಸೀರಿಯಲ್​ನಲ್ಲಿ ಮೊದಲಿನಿಂದಲೂ ಹೈಲೈಟ್​ ಆಗಿತ್ತು. ಇವರಿಬ್ಬರ ಸ್ನೇಹದಂತೆ ಎಲ್ಲರ ಸ್ನೇಹ ಇರಲಿ, ಇಂಥ ಸ್ನೇಹಿತರು ಸಿಕ್ಕರೆ ಬದುಕೇ ಬಂಗಾರ ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೆ ಕಳೆದ ಹಲವು ಎಪಿಸೋಡ್​ಗಳಲ್ಲಿ ಆನಂದ್​ ಪತ್ನಿಯ ಕ್ಯಾರೆಕ್ಟರ್​ ಕಾಣಿಸುತ್ತಿದೆಯೇ ವಿನಾ ಆನಂದ್​ ನಾಪತ್ತೆಯಾಗಿದ್ದು, ಇತ್ತ ಆಕಾಶ್​ ಕೂಡ ಕಾಣಿಸುತ್ತಿಲ್ಲ.

ಸಮಸ್ಯೆ ಏನಾಗಿದೆ?

ಇವರಿಬ್ಬರಿಗೆ ಏನು ಸಮಸ್ಯೆ ಆಗಿದೆ,, ಸೀರಿಯಲ್​ ಬಿಟ್ಟದ್ದು ಏಕೆ? ವಾಹಿನಿ ಜೊತೆ ಸಮಸ್ಯೆ ಆಗಿದ್ಯಾ, ಸೀರಿಯಲ್​​ ಜೊತೆ ಸಮಸ್ಯೆ ಆಗಿದ್ಯಾ ಅಥವಾ ಇಬ್ಬರೂ ಲಾಂಗ್​ ಟೂರ್​ ಹೋಗಿದ್ದಾರಾ ಎಂಬಿತ್ಯಾದಿಯಾಗಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಈ ಸೀರಿಯಲ್​ನಲ್ಲಿ ಕೆಲವೇ ಕೆಲವು ಪಾತ್ರಗಳು ಚೇಂಜ್​ ಆಗಿದ್ದು ಬಿಟ್ಟರೆ, ಸಾಮಾನ್ಯವಾಗಿ ಇತರ ಸೀರಿಯಲ್​ಗಳಲ್ಲಿ ಆಗುವಂತೆ ಮುಖ್ಯ ರೋಲ್​ಗಳನ್ನು ಚೇಂಜ್​ ಮಾಡಿಲ್ಲ. ಇದು ಎಲ್ಲರಿಗೂ ಇಷ್ಟವಾಗಿದೆ. ಆದರೆ ಗೌತಮ್​ ಮತ್ತು ಭೂಮಿಕಾ ಬದುಕಲ್ಲಿ ಬಹುದೊಡ್ಡ ಪಾತ್ರವಹಿಸಿದ್ದ ಆನಂದ್​ ರೋಲ್​ ಕೊನೆಯಲ್ಲಿ ಕಾಣಿಸದೇ ಇರುವುದು ವೀಕ್ಷಕರಿಗೆ ನಿರಾಸೆ ಮೂಡಿಸುತ್ತಿದೆ.