ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಸ್ಟೈಲ್ನಲ್ಲಿ ಸನ್ ಗ್ಲಾಸ್ ಧರಿಸಿ ದೀಪಾವಳಿ ಶುಭಾಶಯ ತಿಳಿಸಿದ್ದಾರೆ. ಅವರು ರಜನಿಕಾಂತ್ ಮತ್ತು ಹಿಂದಿ ಸಿನಿಮಾಗಳ ದೊಡ್ಡ ಅಭಿಮಾನಿಯಾಗಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.
ದೆಹಲಿ: ಸೂಪರ್ಸ್ಟಾರ್ ರಜನಿಕಾಂತ್ ಅವರನ್ನು ಅನುಸರಿಸುವವರು ತುಂಬಾ ಅಭಿಮಾನಿಗಳು ಇದ್ದಾರೆ. ಏಕೆಂದರೆ, ಅವರ ಕೆಲವೊಂದು ಸ್ಟೈಲ್ಗಳಿಗೆ ಅವರೇ ಸಾಟಿ ಎನ್ನುವಂತಿದೆ. ಪ್ರತಿಯೊಂದು ಸಿನಿಮಾದಲ್ಲಿಯೂ ಅವರ ವಿಭಿನ್ನ ಸ್ಟೈಲ್ಗಳು ಜನಪ್ರಿಯವಾಗಿದ್ದು, ಕೆಲವೊಂದನ್ನು ಯಾರೇ ಮಾಡಿದರೂ ಅದು ರಜನೀಕಾಂತ್ ಅವರ ಸ್ಟೈಲೇ ಎನ್ನುವಷ್ಟರ ಮಟ್ಟಿಗೆ ಫೇಮಸ್ ಆಗಿದೆ. ಅಷ್ಟಕ್ಕೂ ರಜನೀಕಾಂತ್ ಅವರಿಗೆ ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಅವರಲ್ಲಿ ಒಬ್ಬರು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ. ಇದಾಗಲೇ ಹೊಸ ವರ್ಷ ಸೇರಿದಂತೆ ಕೆಲವು ಸಂದರ್ಭದಲ್ಲಿ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು, ರಜನೀಕಾಂತ್ ಅವರ ಸ್ಟೈಲ್ನಲ್ಲಿಯೇ ವಿಷ್ ಮಾಡಿರುವುದು ಇದೆ.
ಇದೀಗ ಅವರು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ರಜನೀಕಾಂತ್ ಅವರ ಐಕಾನಿಕ್ ಸ್ಟೈಲ್ನಲ್ಲಿ ಒಂದಾಗಿರುವುದು ಸನ್ ಗ್ಲಾಸ್ಗಳನ್ನು ತಿರುಗಿಸುತ್ತಾ ಕಣ್ಣಿಗೆ ಧರಿಸುವುದು. ಅದೇ ಸ್ಟೈಲ್ನಲ್ಲಿ ಈಗ ಪ್ರಧಾನಿ ಅನ್ವರ್ ಇಬ್ರಾಹಿಂ ಭಾರತದ ಜನರು ಹಾಗೂ ವಿದೇಶಗಳಲ್ಲಿ ವಾಸಿಸುವ ಹಿಂದೂಗಳಿಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ರಾಹಿಂ ಅವರು ಕಂಟೆಂಟ್ ಕ್ರಿಯೇಟರ್ ದೇವರಾಜ್ ಡೇವಿಡ್ ಅವರೊಂದಿಗೆ ಕಾಣಿಸಿಕೊಂಡಿದ್ದು, ರಜನಿಕಾಂತ್ ಅವರ ಸಿನಿಮಾದ ಸಂಭಾಷಣೆ ಸಹ ಕೇಳಿಸುತ್ತದೆ. ಹಿಂದಿ ಚಲನಚಿತ್ರಗಳು ಮತ್ತು ಸಂಗೀತದ ದೊಡ್ಡ ಅಭಿಮಾನಿಯಾಗಿರುವ ಇಬ್ರಾಹಿಂ, ನಾಗರಿಕರು ದೀಪಾವಳಿಯನ್ನು ತಮ್ಮ ಕುಟುಂಬದೊಂದಿಗೆ ಆಚರಿಸುವಂತೆ ಕರೆ ನೀಡಿದ್ದಾರೆ.
'ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ವೈವಿಧ್ಯತೆಯನ್ನು ಶಾಶ್ವತಗೊಳಿಸುವ ಬಹುತ್ವ ಸಮಾಜದಲ್ಲಿ, ಪರಸ್ಪರ ಗೌರವ, ತಿಳಿವಳಿಕೆ ಮತ್ತು ವ್ಯತ್ಯಾಸಗಳನ್ನು ಸ್ವೀಕರಿಸುವ ಮೌಲ್ಯವನ್ನು ನಿರಂತರವಾಗಿ ಬಲಪಡಿಸಬೇಕು. ಈ ಆಚರಣೆಯು ಏಕತೆಯನ್ನು ಬಲಪಡಿಸಲು, ಜನಾಂಗಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಮತ್ತು ಅಗತ್ಯವಿರುವವರಿಗೆ ದಾನ ಮತ್ತು ಕಾಳಜಿಯ ಮೌಲ್ಯಗಳನ್ನು ತುಂಬಲು ಒಂದು ಮಾಧ್ಯಮವಾಗಲಿ' ಎಂದು ಪ್ರಧಾನಿ ಇಬ್ರಾಹಿಂ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದೇ ಮೊದಲಲ್ಲ
ಇಬ್ರಾಹಿಂ 2023 ರಲ್ಲಿ ರಜನೀಕಾಂತ್ ಅವರನ್ನು ಭೇಟಿಯಾಗಿದ್ದರು. ಕೆಲ ತಿಂಗಳ ಹಿಂದೆ ದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು, ಹಿಂದಿ ಚಿತ್ರರಂಗದ ದಿಗ್ಗದ ಗಾಯಕರಾದ ಮುಕೇಶ್ ಮತ್ತು ಕಿಶೋರ್ ಕುಮಾರ್ ಅವರ ಹಾಡುಗಳನ್ನು ಹಾಡಿ ಗಮನ ಸೆಳೆದಿದ್ದರು. ಬ್ರಿಕ್ಸ್ ಗಾಲೆ ಡಿನ್ನರ್ ಪಾರ್ಟಿಯಲ್ಲಿ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಮುಕೇಶ್ ಅವರ "ದೋಸ್ತ್ ದೋಸ್ತ್ ನಾ ರಹಾ.." ಮತ್ತು ಕಿಶೋರ್ ಕುಮಾರ್ ಅವರ "ಖ್ವಾಬ್ ಹೋ ತುಮ್ ಯಾ ಕೋಯಿ ಹಕೀಕತ್.." ಹಾಡುಗಳನ್ನು ಹಾಡಿದರು. ಅನ್ವರ್ ಇಬ್ರಾಹಿಂ ಅವರು ಹಿಂದಿ ಚಿತ್ರ ಗೀತೆಗಳನ್ನು ಹಾಡಿದ್ದರು.
ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಭಾರತೀಯ ಹಾಡುಗಳ ಮೇಲಿನ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಇದೇ ಮೊದಲ ಬಾರಿಯಲ್ಲ. ಭಾರತೀಯ ಚಲನಚಿತ್ರ ಮತ್ತು ಸಂಗೀತದ ಬಗ್ಗೆ ತಮಗಿರುವ ಅಚಲ ಪ್ರೀತಿಯ ಬಗ್ಗೆ, ಅನ್ವರ್ ಇಬ್ರಾಹಿಂ ದೀರ್ಘಕಾಲದಿಂದಲೂ ಮಾತನಾಡುತ್ತಾ ಬಂದಿದ್ದಾರೆ. ಅವರು ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದಾಗ ಮಾಧ್ಯಮಗಳೊಂದಿಗಿನ ಸಂವಾದವೊಂದರಲ್ಲಿ, ಕಿಶೋರ್ ಕುಮಾರ್ ಅವರ ಹಾಡನ್ನು ಹಾಡಿದ್ದರು ಮತ್ತು 2024ರಲ್ಲಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಕೇಶ್ ಅವರ ಜನಪ್ರಿಯ ಗೀತೆಯನ್ನು ಪ್ರಸ್ತುತಪಡಿಸಿದ್ದರು.














