ಕಾಲಿವುಡ್‌ನ ಬಹುಜನಪ್ರಿಯ ನಟ ಅಜಿತ್ ಕುಮಾರ್ ಅವರು 8 ತಿಂಗಳ ಅವಧಿಯಲ್ಲಿ ಬರೋಬ್ಬರಿ 42 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಕಾರ್ ರೇಸಿಂಗ್‌ನಲ್ಲಿ ಭಾಗವಹಿಸಲು ಉತ್ತಮ ಫಿಟ್‌ನೆಸ್ ಅಗತ್ಯವಿತ್ತು.
ಕಾಲಿವುಡ್‌ನ ಬಹುಜನಪ್ರಿಯ ನಟರಲ್ಲಿ ಅಜಿತ್ ಕುಮಾರ್ ಅವರಿಗೂ ವಿಶೇಷ ಸ್ಥಾನವಿದೆ. ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟು, ತಮ್ಮದೇ ಆದ ಶೈಲಿ ಹಾಗೂ ಅಭಿನಯದ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ಅಜಿತ್, ಸಿನಿಮಾ ಮಾತ್ರವಲ್ಲದೆ ಕಾರ್ ರೇಸಿಂಗ್‌ನಲ್ಲೂ ತಮ್ಮ ಆಸಕ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇದೀಗ ಅವರ ಫಿಟ್‌ನೆಸ್ ಕುರಿತ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತಿದೆ.
ಕೇವಲ 8 ತಿಂಗಳಲ್ಲಿ 42 ಕೆಜಿ ತೂಕ ಇಳಿಕೆ!
ಅಜಿತ್ ಕುಮಾರ್ ಅವರು 8 ತಿಂಗಳ ಅವಧಿಯಲ್ಲಿ ಬರೋಬ್ಬರಿ 42 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ. ಕಾರ್ ರೇಸಿಂಗ್‌ನಲ್ಲಿ ಭಾಗವಹಿಸಲು ಉತ್ತಮ ಫಿಟ್‌ನೆಸ್ ಅಗತ್ಯವಿದ್ದ ಕಾರಣ, ತಮ್ಮ ದೇಹದ ತೂಕದ ಮೇಲೆ ವಿಶೇಷ ಗಮನ ಹರಿಸಲು ಆರಂಭಿಸಿದ್ದಾಗಿ ಅವರು ತಿಳಿಸಿದ್ದಾರೆ. ವ್ಯಾಯಾಮದ ಜೊತೆಗೆ ಆಹಾರ ಪದ್ಧತಿಯಲ್ಲೂ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾಗಿ ಅಜಿತ್ ಹೇಳಿದ್ದಾರೆ. ಆಹಾರದ ಪ್ರಮಾಣ ನಿಯಂತ್ರಣ, ಈಜು ಮತ್ತು ಸೈಕ್ಲಿಂಗ್‌ನಂತಹ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.
ದಿನಕ್ಕೆ ಒಂದೇ ಬಾರಿ ಊಟ ಮಾಡುತ್ತಿದ್ದರಂತೆ!
ಅಜಿತ್ ಅವರ ತೂಕ ಇಳಿಕೆಯ ಹಿಂದಿನ ಡಯೆಟ್ ಬಗ್ಗೆ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದ ನಿರ್ದೇಶಕ ಅಧಿಕ್ ರವಿಚಂದ್ರನ್ ಕೂಡ ಈ ಹಿಂದೆ ಮಾತನಾಡಿದ್ದರು. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಅಜಿತ್ ಆಹಾರದ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಿನ ನಿಯಮ ಪಾಲಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಅಜಿತ್ ದಿನಕ್ಕೆ ಒಂದೇ ಬಾರಿ ಊಟ ಮಾಡುವ ಡಯೆಟ್ ಅನುಸರಿಸುತ್ತಿದ್ದರು. ಆಹಾರದ ವಿಷಯದಲ್ಲಿ ಅವರು ಯಾವುದೇ ರೀತಿಯ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರೀಕರಣ ಮುಗಿಯುವ ವೇಳೆಗೆ ಅಜಿತ್ ತಾವು ಬಯಸಿದ್ದ ತೂಕವನ್ನು ತಲುಪಿದ್ದರು ಎಂದು ನಿರ್ದೇಶಕ ತಿಳಿಸಿದ್ದಾರೆ.
ಮದ್ಯಪಾನಕ್ಕೆ ಗುಡ್‌ಬೈ, ಸಸ್ಯಾಹಾರಕ್ಕೆ ಶಿಫ್ಟ್!
ತಮ್ಮ ಫಿಟ್‌ನೆಸ್ ಜರ್ನಿಯ ಬಗ್ಗೆ ಮಾತನಾಡಿರುವ ಅಜಿತ್, ಆಹಾರ ಪದ್ಧತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಮಿಶ್ರ ಆಹಾರದಿಂದ ದೂರವಾಗಿ ಸಸ್ಯಾಹಾರಕ್ಕೆ ಬದಲಾಗಿದ್ದು, ಮದ್ಯಪಾನವನ್ನೂ ಸಂಪೂರ್ಣವಾಗಿ ತ್ಯಜಿಸಿದ್ದಾಗಿ ಅವರು ತಿಳಿಸಿದ್ದಾರೆ. ಇದರ ಜೊತೆಗೆ ಈಜು, ಸೈಕ್ಲಿಂಗ್ ಸೇರಿದಂತೆ ವಿವಿಧ ವ್ಯಾಯಾಮಗಳನ್ನು ತಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಂಡಿದ್ದರು. ಕಾರ್ ರೇಸಿಂಗ್‌ನಲ್ಲಿ ಭಾಗವಹಿಸಲು ಅಗತ್ಯವಿರುವ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದೇ ತಮ್ಮ ಪ್ರಮುಖ ಉದ್ದೇಶವಾಗಿತ್ತು ಎಂದು ಅಜಿತ್ ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಗಳ ಬಳಿಕ ಹೆಚ್ಚಿದ್ದ ತೂಕ
2005ರಿಂದ 2010ರ ಅವಧಿಯಲ್ಲಿ ಅಜಿತ್ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಅದರ ಪರಿಣಾಮವಾಗಿ ಅವರು ಸಾಕಷ್ಟು ತೂಕ ಕಳೆದುಕೊಂಡಿದ್ದರು. ಬಳಿಕ ಮತ್ತೆ ತೂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ 2024ರ ವೇಳೆಗೆ ತಮ್ಮ ಫಿಟ್‌ನೆಸ್ ಬಗ್ಗೆ ಹೆಚ್ಚು ಗಮನ ಹರಿಸಲು ಆರಂಭಿಸಿದರು. ನಂತರದ ತಿಂಗಳುಗಳಲ್ಲಿ ವ್ಯಾಯಾಮ ಮತ್ತು ಆಹಾರ ನಿಯಂತ್ರಣದ ಮೂಲಕ ತೂಕ ಇಳಿಸುವ ಪ್ರಯತ್ನ ಮುಂದುವರಿಸಿದರು. ಸುಮಾರು 8 ತಿಂಗಳ ಅವಧಿಯಲ್ಲಿ 42 ಕೆಜಿ ತೂಕ ಇಳಿಸಿಕೊಂಡಿರುವುದಾಗಿ ಅಜಿತ್ ಹೇಳಿಕೊಂಡಿದ್ದಾರೆ.
ಸಿನಿಮಾ ಜೊತೆಗೆ ರೇಸಿಂಗ್‌ನಲ್ಲೂ ಫುಲ್ ಆ್ಯಕ್ಟಿವ್!
‘ಗುಡ್ ಬ್ಯಾಡ್ ಅಗ್ಲಿ’ ಬಳಿಕ ಅಜಿತ್ ಕುಮಾರ್ ತಮ್ಮ ಗಮನವನ್ನು ಕಾರ್ ರೇಸಿಂಗ್‌ನತ್ತವೂ ಹರಿಸಿದ್ದಾರೆ. ತಮ್ಮದೇ ಹೆಸರಿನ ಕಾರ್ ರೇಸಿಂಗ್ ತಂಡವನ್ನು ಆರಂಭಿಸಿ ವಿವಿಧ ದೇಶಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದೀಗ ಅಧಿಕ್ ರವಿಚಂದ್ರನ್ ನಿರ್ದೇಶನದ ಮುಂದಿನ ಸಿನಿಮಾದಲ್ಲೂ ಅಜಿತ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಡೇರ್ ಲೆವೆಲ್’ ಎಂಬ ಶೀರ್ಷಿಕೆ ಎನ್ನಲಾಗಿದ್ದು, ಅಜಿತ್ ಅವರ ಪತ್ನಿ, ನಟಿ ಶಾಲಿನಿ ನಿರ್ಮಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದರ ನಂತರ ‘ಮಂಕಥಾ 2’ ಸೇರಿದಂತೆ ಹಲವು ಸಿನಿಮಾಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈ ಯೋಜನೆಗಳ ಕುರಿತು ಅಧಿಕೃತ ಘೋಷಣೆ ಇನ್ನೂ ಹೊರಬಂದಿಲ್ಲ. ಇನ್ನು, ಸಿನಿಮಾ, ಕಾರ್ ರೇಸಿಂಗ್ ಮತ್ತು ಫಿಟ್‌ನೆಸ್-ಮೂರು ಕ್ಷೇತ್ರಗಳಲ್ಲೂ ಸಕ್ರಿಯರಾಗಿರುವ ಅಜಿತ್ ಕುಮಾರ್ ಅವರ 42 ಕೆಜಿ ತೂಕ ಇಳಿಕೆಯ ಜರ್ನಿ ಇದೀಗ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.


