ಇಂಡಸ್ಟ್ರಿಗೆ ಬಂದ ಆರಂಭದ ದಿನಗಳಲ್ಲಿ ಥೂ ಇವಳನ್ಯಾಕೆ ಕರ್ಕೊಂಡು ಬಂದ್ರಿ ಎಂದು ಆ ವ್ಯಕ್ತಿ ಹೇಳಿದ್ದ ಮಾತನ್ನು ನೆನಪಿಸಿಕೊಂಡಿದ್ದಾರೆ ನಟಿ ಸೋನಲ್ ಮೊಂಥೆರೋ. ಅವರು ಹೇಳಿದ್ದೇನು ಕೇಳಿ...
ನಟಿ ಸೋನಲ್ ಮೊಂಥೆರೋ ಸದ್ಯ ಸಿನಿಮಾ ಮಾದೇವದ ಜೊತೆ ದಾಂಪತ್ಯ ಜೀವನದ ಖುಷಿಯಲ್ಲಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್ 11ರಂದು ನಡೆದಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ. ಇದೀಗ ಅವರು ಮದುವೆಯ ಬಳಿಕ ಮಾದೇವ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. ನವೀನ್ ರೆಡ್ಡಿ ಬಿ ನಿರ್ದೇಶನದ ಮತ್ತು ವಿನೋದ್ ಪ್ರಭಾಕರ್ ನಟಿಸಿರುವ ಮಾದೇವ ಚಿತ್ರವು ಮೇ 30 ರಂದು ತೆರೆಕಂಡಿದೆ. ಆ್ಯಕ್ಷನ್ ಪ್ರಧಾನ ಪಾತ್ರಗಳಿಂದ ಹೃದಯ ಗೆದ್ದಿರುವ ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೆ ಮಾಡಿರದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.
ಇದೀಗ ನಟಿ, ತಾವು ಆರಂಭದ ದಿನಗಳಲ್ಲಿ ಅನುಭವಿಸಿದ ನೋವನ್ನು ತೆರೆದಿಟ್ಟಿದ್ದಾರೆ. ಸಿನಿಮಾ ರಂಗವೇ ಬೇಡ ಎಂದು ಅಳುತ್ತಾ ಮನೆಗೆ ಹೋಗಿದ್ದ ಆ ದಿನಗಳ ಬಗ್ಗೆ ಖಡಕ್ಸಿನಿಮಾ ಇನ್ಸ್ಟಾಗ್ರಾಮ್ ಚಾನೆಲ್ಗೆ ನೀಡಿರೋ ಸಂದರ್ಶನದಲ್ಲಿ ತಿಳಿಸಿದ್ದಾರೆ. 'ನನಗೆ ಆರಂಭದ ದಿನಗಳಲ್ಲಿ ತುಳು ಬರುತ್ತಾ ಇರಲಿಲ್ಲ. ಕನ್ನಡ ಬರುತ್ತಿತ್ತು. ಮನೆಯಲ್ಲಿ ಕೊಂಕಣಿಯಾಗಿತ್ತು. ಆದರೆ ತುಳು ಅರ್ಥವಾಗುತ್ತಿತ್ತು, ಮಾತನಾಡಲು ಬರುತ್ತಿರಲಿಲ್ಲ. ಮೊದಲ ಸಿನಿಮಾ ಮಾಡಿದ ಬಳಿಕ ಸಂದರ್ಶನದ ಸಮಯದಲ್ಲಿ ತುಳು ಬರದೇ ಪೇಚಿಗೆ ಸಿಲುಕಿದ್ದೆ. ಕನ್ನಡ, ಇಂಗ್ಲಿಷ್ ಎಲ್ಲಾ ಮಿಕ್ಸ್ ಮಾಡಿ ಮಾತನಾಡಿದ್ದೆ. ಇದನ್ನು ಕಂಡ ಆ ಖ್ಯಾತ...' ಎನ್ನುತ್ತಲೇ ಅವರ ಹೆಸರು ಏನೂ ಹೇಳದ ಸೋನಲ್ ಅವರ ಹೆಸರನ್ನು ನಾನು ಹೇಳುವುದಿಲ್ಲ ಎಂದಿದ್ದಾರೆ.
ಅವರು ತುಂಬಾಕೆಟ್ಟದ್ದಾಗಿ ನಡೆದುಕೊಂಡರು. ಥೂ ಇವಳನ್ನು ಯಾಕೆ ಕರೆದುಕೊಂಡು ಬಂದಿದ್ದೀರಿ. ಬೇರೆ ಯಾರೂ ನಮ್ಮವರು ಸಿಗಲಿಲ್ವಾ? ಇವಳೇನು ಕೆಲ್ಸ ಮಾಡ್ತಾಳೆ, ಒಂದು ವೇಳೆ ಇವಳು ಮುಂದಿನ ಸಿನಿಮಾ ಮಾಡಿದ್ರೆ ನಾನು ತಲೆಬೋಳಿಸಿಕೊಳ್ತೇನೆ ಎಂದರು. ನನಗೆ ತುಂಬಾ ಹರ್ಟ್ ಆಯ್ತು. ಅಳುತ್ತಾ ಹೋದೆ. ಇಂಡಸ್ಟ್ರಿನೇ ಬೇಡ ಎಂದು ಅಮ್ಮನ ಬಳಿ ಅಳುತ್ತಾ ಹೇಳಿದೆ. ಆಗ ಅಮ್ಮ ಇದೇ ನಿನಗೆ ಸರಿಯಾದ ಟೈಮ್. ಇದನ್ನೇ ಚಾಲೆಂಜ್ ಆಗಿ ತೆಗೆದುಕೋ, ಮುಂದಕ್ಕೆ ಹೋಗು ಎಂದರು. ನಂತರ ನನ್ನ ಎರಡನೆಯ ತುಳು ಸಿನಿಮಾಕ್ಕೆ ನಾನೇ ಡಬ್ ಮಾಡಿದೆ. ಇದಾದ ಬಳಿಕ ಹಲವು ಸಿನಿಮಾಮಾಡಿದೆ. ತಲೆ ಬೋಳಿಸ್ತೇನೆ ಎಂದ ವ್ಯಕ್ತಿಯೇ ಹಲವು ಬಾರಿ ಕಾಲ್ ಮಾಡಿ ಅಚೀವ್ಮೆಂಟ್ ಅವಾರ್ಡ್ ಕೊಡುವುದಾಗಿ ಹೇಳಿದ್ರು. ಆದರೆ ನಾನು ಹೋಗಲಿಲ್ಲ. ಅವರ ಆ ಮಾತು ನನ್ನನ್ನು ಚುಚ್ಚುತ್ತಿತ್ತು ಎಂದಿದ್ದಾರೆ.
ಬಳಿಕ, ಅದೇ ವ್ಯಕ್ತಿಗೆ ಥ್ಯಾಂಕ್ಸ್ ಹೇಳಿರೋ ಸೋನಲ್, ಬಹುಶಃ ನಾನು ಇಷ್ಟು ಸಾಧನೆ ಮಾಡಲು ಆ ವ್ಯಕ್ತಿಯೇ ಕಾರಣ ಎನ್ನುತ್ತೇನೆ. ಅವರು ಅಂದು ಹಾಗೆ ಹೇಳದೇ ಹೋಗಿದ್ದರೆ ನಾನು ತುಳು ಕಲಿಯುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ. ಅವರು ಹೇಳಿದ ಮಾತನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ ಎಂದಿದ್ದಾರೆ. ಇದೇ ರೀತಿ ಯಾರದ್ದೇಜೀವನದಲ್ಲಿ ಹೀಗೆ ಆದರೆ ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿ ಅವರಿಗೆ ಉತ್ತರ ಕೊಡಬೇಕು ಎಂದು ನಟಿ ಸಲಹೆಯನ್ನು ಕೊಟ್ಟಿದ್ದಾರೆ.
