ನಟಿ ಸೋನಲ್ ಮೊಂಥೆರೋ ಅವರ ಮದುವೆಯ ಬಳಿಕ ಮೊದಲು ಚಿತ್ರ ಮಾದೇವ ಬಿಡುಗಡೆಗೆ ಸಿದ್ಧವಾಗಿದ್ದು, ಈ ಸಂದರ್ಭದಲ್ಲಿ ತಮ್ಮ ಮದುವೆ ಜೀವನದ ಕುರಿತು ಮಾತನಾಡಿದ್ದಾರೆ. ಏನದು?
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್ 11ರಂದು ನಡೆದಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ. ಇದೀಗ ಅವರು ಮದುವೆಯ ಬಳಿಕ ಮಾದೇವ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿ ಅದು ಬಿಡುಗಡೆಯಾಗಲಿದೆ. ನವೀನ್ ರೆಡ್ಡಿ ಬಿ ನಿರ್ದೇಶನದ ಮತ್ತು ವಿನೋದ್ ಪ್ರಭಾಕರ್ ನಟಿಸಿರುವ ಮಾದೇವ ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ಮೇ 30 ರಂದು ತೆರೆಕಾಣಲಿದೆ. ಆ್ಯಕ್ಷನ್ ಪ್ರಧಾನ ಪಾತ್ರಗಳಿಂದ ಹೃದಯ ಗೆದ್ದಿರುವ ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೆ ಮಾಡಿರದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.
ರಾಧಾಕೃಷ್ಣ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಆರ್ ಕೇಶವ (ದೇವಸಂದ್ರ) ನಿರ್ಮಿಸಿರುವ ಈ ಚಿತ್ರಕ್ಕೆ ಖಾಕಿ ಚಿತ್ರದ ನಂತರ ನವೀನ್ ರೆಡ್ಡಿ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕಾಗಿ ತಾವೇ ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದಾರೆ. ಈ ಚಿತ್ರಕ್ಕೆ ಪ್ರದ್ಯೋತನ್ ಅವರ ಸಂಗೀತ ಸಂಯೋಜನೆ, ಬಾಲಕೃಷ್ಣ ತೋಟ ಅವರ ಛಾಯಾಗ್ರಹಣ, ವಿಜಯ್ ಎಂ ಕುಮಾರ್ ಅವರ ಸಂಕಲನ, ಗುಣ ಅವರ ಕಲಾ ನಿರ್ದೇಶನ, ಜೊತೆಗೆ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ರಿಯಲ್ ಸತೀಶ್ ಮತ್ತು ವಿಕ್ರಮ್ ಮೋರ್ ಅವರ ಸಾಹಸ ಸಂಯೋಜನೆ ಇದೆ. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಸೋನಲ್ ಮೊಂತೆರೋ ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಹಿರಿಯ ನಟರಾದ ಮಾಲಾಶ್ರೀ, ಶ್ರುತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಮೈಕೋ ನಾಗರಾಜ್, ಬಾಲ ರಾಜವಾಡಿ, ಮುನಿರಾಜು ಮತ್ತು ಚೈತ್ರ ಕೂಡ ತಾರಾಗಣದಲ್ಲಿದ್ದಾರೆ.
ತಮ್ಮ ಈ ಚಿತ್ರದ ಕುರಿತು ನಟಿ, ಹಲವು ಕಡೆಗಳಲ್ಲಿ ಚಿತ್ರದ ಕುರಿತು ಸಂದರ್ಶನ ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ಅವರು ತಮ್ಮ ವೈಯಕ್ತಿಯ ಲೈಫ್ ಬಗ್ಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮದುವೆಯಾದ ಮೇಲೆ ಹೇಗಿರುತ್ತೋ ಎನ್ನುವ ಭಯವಿತ್ತು. ಆದರೆ ಅದೆಲ್ಲಾ ನಮ್ಮ ಮೈಂಡ್ಸೆಟ್ನಲ್ಲಿ ಇರುತ್ತೆ ಅಷ್ಟೇ. ನನ್ನ ವಿಚಾರದಲ್ಲಂತೂ ತುಂಬಾ ಲಕ್ಕಿ. ನನಗೆ ಮದುವೆ ಆಗಿದೆ ಎಂದೇ ಅನ್ನಿಸ್ತಿಲ್ಲ. ಮೊದಲು ಲೈಫ್ ಹೇಗಿತ್ತೋ ಈಗಲೂ ಹಾಗೆಯೇ ಇದೆ ಎಂದಿದ್ದಾರೆ. ನಾವು ಚೆನ್ನಾಗಿ ಕೆಲಸ ಮಾಡಿಕೊಂಡು ಹೋಗಬೇಕು ಅಷ್ಟೇ. ಹಾಗಿದ್ರೆ ಜನ ನಮ್ಮ ಕೈಹಿಡಿಯುತ್ತಾರೆ. ಪತಿ ತರುಣ್ ಅವರೂ ಸಿನಿಮಾದವರೇ ಆಗಿರುವುದರಿಂದ ತುಂಬಾ ಸಪೋರ್ಟಿವ್ ಆಗಿದ್ದಾರೆ. ಈ ಚಿತ್ರಕ್ಕೆ ನನಗಿಂತ ಹೆಚ್ಚಿಗೆ ಅವರೇ ಪ್ರೊಮೋಷನ್ ಮಾಡುತ್ತಿದ್ದಾರೆ. ನಿಜ ಹೇಳಬೇಕು ಎಂದ್ರೆ ಅವರು ನಿಜ ಜೀವನದಲ್ಲಿ ಡೈರೆಕ್ಟರ್ ಆಗಿದ್ರೂ, ಫ್ಯಾಮಿಲಿ ವಿಷ್ಯಕ್ಕೆ ಬಂದ್ರೆ ನಾನೇ ಅವರಿಗೆ ಡೈರೆಕ್ಟರ್ ಎಂದು ತಮಾಷೆ ಮಾಡಿದ್ದಾರೆ.
ಮಾದೇವ ಸಿನಿಮಾದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ಸೋನಲ್ ಅವರು, ತರುಣ್ ಅವರನ್ನು ಮದುವೆಯಾದ ಬಳಿಕ ಮೊದಲ ಚಿತ್ರ ಇದು. ಮೊದಲ ಸಿನಿಮಾ ಆದ ಕಾರಣ ಅಷ್ಟೇ ಖುಷಿ, ಭಯ ಎರಡೂ ಇದೆ. ತುಂಬಾ ಒಳ್ಳೆಯ ಸಿನಿಮಾ ಇದು. ವಿನೋದ್ ಪ್ರಭಾಕರ್ ಅವರು ಇಲ್ಲಿವರೆಗೆ ಆಕ್ಷನ್ ಪಾತ್ರಗಳಿಗೆ ಹೆಸರಾಗಿದ್ದರು. ಈ ಸಿನಿಮಾದಲ್ಲಿ ಅವರ ಪಾತ್ರ ತುಂಬಾ ವಿಭಿನ್ನ. ಇಲ್ಲಿವರೆಗೆ ನನ್ನನ್ನು ಗ್ಲಾಮರ್ ಲುಕ್‌ನಲ್ಲಿ ನೋಡಿದ್ರಿ, ಈ ಸಿನಿಮಾದಲ್ಲಿ ಕಂಪ್ಲೀಟ್ ಆಗಿ ಲಂಗ ದಾವಣಿಯಲ್ಲೇ ನೋಡ್ತೀರಿ ಎಂದು ಸೋನಲ್ ಹೇಳಿದ್ದಾರೆ.
