ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ 2ನೇ ಟ್ರೇಲರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಪತ್ರಿಕಾಗೋಷ್ಠಿಯಲ್ಲಿ ರಣ್ಬೀರ್ ಕಪೂರ್ ಕನ್ನಡದಲ್ಲಿ ಮಾತು ಆರಂಭಿಸಿ, ಮುಂದಿನ ಬಾರಿ ಯಶ್..
ಯಶ್ ‘ರಾಮಾಯಣ’ದ ಎರಡನೇ ಟ್ರೇಲರ್ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಗೆ ಘಟಾನುಘಟಿಗಳೆಲ್ಲಾ ಬಂದಿದ್ದರು. ಈ ಸಂದರ್ಭದಲ್ಲಿ ರಣ್ಬೀರ್ ಕಪೂರ್ ಅವರು ಕನ್ನಡದಲ್ಲಿ ಮಾತು ಆರಂಭಿಸಿ, ಮುಂದಿನ ಸಲ ಇನ್ನೂ ಹೆಚ್ಚು ಕನ್ನಡ ವಾಕ್ಯಗಳನ್ನು ಯಶ್ ಬಾಸ್ರಿಂದ ಕಲಿತು ಬಂರುತ್ತೇನೆ ಎಂದರು. ಯಶ್ ಬಾಸ್ ಎಂದು ಸಂಬೋಧಿಸಿದಾಗ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಮೂಲಕ ಸಂಭ್ರಮಿಸಿದರು.
‘ರಾಮಾಯಣ ಎಂಬುದು ನಮಗೆ ಕೇವಲ ಒಂದು ಕಥೆಯಲ್ಲ, ಇದು ನಮ್ಮ ಸಂಸ್ಕೃತಿ ಮತ್ತು ತಲೆತಲೆಮಾರುಗಳ ನಂಬಿಕೆಯ ಪ್ರತೀಕ. ಶ್ರೀರಾಮನ ಪಾತ್ರವನ್ನು ನಿರ್ವಹಿಸುವ ಆಫರ್ ಬಂದಾಗ ನನ್ನ ಮನಸ್ಸಿನಲ್ಲಿ ಒಂದು ಬಗೆಯ ಭಯವಿತ್ತು. ಏಕೆಂದರೆ ಕೋಟ್ಯಂತರ ಜನರ ಹೃದಯದಲ್ಲಿ ರಾಮನ ಬಗ್ಗೆ ಅಪಾರ ಭಕ್ತಿಯಿದೆ. ಆದರೆ, ನಮ್ಮನ್ನು ನಾವು ಬದಲಿಸಿಕೊಳ್ಳಲು, ಶ್ರೀರಾಮನನ್ನು ಹಾಗೂ ನಮ್ಮ ಪರಂಪರೆಯನ್ನು ಅರಿಯಲು ಇದು ನನ್ನ ಜೀವನದಲ್ಲೇ ಸಿಕ್ಕ ಅತಿ ದೊಡ್ಡ ಸುಯೋಗ ಎಂದು ನಂತರ ಮನವರಿಕೆಯಾಯಿತು. ಯಶ್ ಬಾಸ್, ಸಾಯಿ ಪಲ್ಲವಿ, ಎ.ಆರ್. ರೆಹಮಾನ್ ಸರ್ ಸೇರಿದಂತೆ ಇಡೀ ತಂಡ ಅತ್ಯಂತ ಪ್ರಾಮಾಣಿಕತೆಯಿಂದ ಶ್ರಮಿಸಿದೆ’ ಎಂದು ಅವರು ಹೇಳಿದರು.
ಸಾಯಿ ಪಲ್ಲವಿ ಮಾತನಾಡಿ, ‘ಘಟಾನುಘಟಿ ತಾರಾಗಣವಿರುವ ಈ ಮಹೋನ್ನತ ಚಿತ್ರದಲ್ಲಿ ನನಗೂ ಒಂದು ಪಾತ್ರ ಸಿಕ್ಕಿರುವುದು ನನ್ನ ಸೌಭಾಗ್ಯ. ಇದು ನಿಜಕ್ಕೂ ನನ್ನ ಪಾಲಿನ ಡ್ರೀಮ್ ಪ್ರಾಜೆಕ್ಟ್’ ಎಂದರು. ಯಶ್, ರಾಧಿಕಾ ಪಂಡಿತ್, ನಿರ್ಮಾಪಕ ನಮಿತ್ ಮಲ್ಹೋತ್ರಾ, ರವಿ ದುಬೆ, ರಕುಲ್ ಪ್ರೀತ್ ಸಿಂಗ್, ನಿರ್ದೇಶಕ ನಿತೇಶ್ ತಿವಾರಿ ಉಪಸ್ಥಿತರಿದ್ದರು.
₹78 ಲಕ್ಷ ವಾಚ್ ಧರಿಸಿದ್ದ ರಣಬೀರ್
‘ರಾಮಾಯಣ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಧರಿಸಿದ್ದ ಐಷಾರಾಮಿ ವಾಚ್ ಭಾರಿ ಗಮನ ಸೆಳೆದಿದೆ. ವಿಶ್ವವಿಖ್ಯಾತ ಜೇಕಬ್ & ಕೋ ಸಂಸ್ಥೆಯ ಎಪಿಕ್ ಎಕ್ಸ್ ರಾಮ್ ಜನ್ಮಭೂಮಿ ರೋಸ್ ಗೋಲ್ಡ್ ಸ್ಪೆಷಲ್ ಎಡಿಷನ್ ವಾಚ್ ಅದಾಗಿದ್ದು, ಅದಕ್ಕೆ ರೂ.78 ಲಕ್ಷ ಬೆಲೆ ಇದೆ. ಈ ವಾಚ್ನ ಡಯಲ್ನಲ್ಲಿ ರಾಮ ಮಂದಿರ, ಶ್ರೀರಾಮ ಮತ್ತು ಆಂಜನೇಯನ ಸೂಕ್ಷ್ಮ ಕೆತ್ತನೆಗಳ ಜತೆಗೆ 18 ಕ್ಯಾರೆಟ್ ರೋಸ್ ಗೋಲ್ಡ್ ಕೇಸ್ ವಿನ್ಯಾಸವಿದೆ.


