Asianet Suvarna News Asianet Suvarna News

ಅಮೆರಿಕದ ಅಧ್ಯಕ್ಷೀಯ ಚುನಾವಣೆಗಿಂತ ನಮ್ಮ ಲೋಕಸಭೆ ಚುನಾವಣೆಗೆ ಹೆಚ್ಚು ವೆಚ್ಚ!

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ಭಾರತದಲ್ಲಿ 6 ವಾರಗಳ ಕಾಲ ಸುದೀರ್ಘ ಲೋಕಸಭೆ ಚುನಾವಣೆ ನಡೆಯುತ್ತಿದೆ. ಪ್ರತಿ ಚುನಾವಣೆಯಲ್ಲೂ ಹಣದ ಹೊಳೆ ಹರಿಯುತ್ತದೆ ಎಂಬುದು ಗೊತ್ತಿರುವ ವಿಚಾರವೇ. ಆದರೆ ಕುತೂಹಲದ ಸಂಗತಿ ಏನೆಂದರೆ, ಈ ಬಾರಿಯ ಲೋಕಸಭಾ ಚುನಾವಣೆ ವಿಶ್ವದಲ್ಲೇ ಅತಿ ದುಬಾರಿ ಚುನಾವಣೆ! ಹೀಗೆಂದು ಅಮೆರಿಕ ಮೂಲದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Reasons for why Loksabha Elections 2019 is among the world's most expensive
Author
Bengaluru, First Published May 1, 2019, 2:18 PM IST

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ಭಾರತದಲ್ಲಿ 6 ವಾರಗಳ ಕಾಲ ಸುದೀರ್ಘ ಲೋಕಸಭೆ ಚುನಾವಣೆ ನಡೆಯುತ್ತಿದೆ. ಪ್ರತಿ ಚುನಾವಣೆಯಲ್ಲೂ ಹಣದ ಹೊಳೆ ಹರಿಯುತ್ತದೆ ಎಂಬುದು ಗೊತ್ತಿರುವ ವಿಚಾರವೇ. ಆದರೆ ಕುತೂಹಲದ ಸಂಗತಿ ಏನೆಂದರೆ, ಈ ಬಾರಿಯ ಲೋಕಸಭಾ ಚುನಾವಣೆ ವಿಶ್ವದಲ್ಲೇ ಅತಿ ದುಬಾರಿ ಚುನಾವಣೆ! ಹೀಗೆಂದು ಅಮೆರಿಕ ಮೂಲದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವೈರಲ್ ಚೆಕ್: ಗೋವನ್ನು ಕಡೆಗಣಿಸಿ ಮೃತಪಟ್ಟ ಪರ್ರಿಕ್ಕರ್‌ ಎಂದ್ರಾ ಸಾಧ್ವಿ?

ಏಕೆ ನಮ್ಮ ದೇಶದಲ್ಲಿ ಚುನಾವಣೆಗೆ ಇಷ್ಟೊಂದು ಹಣ ಖರ್ಚಾಗುತ್ತದೆ? ಸರ್ಕಾರ ಅಧಿಕೃತವಾಗಿ ಎಷ್ಟುಖರ್ಚು ಮಾಡುತ್ತದೆ? ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಧಿಕೃತವಾಗಿ ಮತ್ತು ಅನಧಿಕೃತವಾಗಿ ಎಷ್ಟುಖರ್ಚು ಮಾಡುತ್ತಾರೆ? ಕುತೂಹಲಕಾರಿ ಮಾಹಿತಿ ಇಲ್ಲಿದೆ.

1 ವೋಟಿಗೆ ಸರಾಸರಿ 560 ರು. ಖರ್ಚು!

ಲೋಕಸಭಾ ಚುನಾವಣೆಯು ಏ.11 ರಿಂದ ಪ್ರಾರಂಭವಾಗಿದ್ದು, ಮೇ 19 ಕ್ಕೆ ಮುಕ್ತಾಯವಾಗಲಿದೆ. 6 ವಾರಗಳ ಚುನಾವಣೆಗೆ ಅಂದಾಜು 50 ಸಾವಿರ ಕೋಟಿ (7 ಬಿಲಿಯನ್‌ ಡಾಲರ್‌) ಹಣ ವ್ಯಯಿಸಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದು 2016ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮಾಡಿದ ವೆಚ್ಚವನ್ನೂ ಮೀರಿಸಲಿದೆ.

ಆ ವೇಳೆ ಅಮೆರಿಕದಲ್ಲಿ 6.5 ಬಿಲಿಯನ್‌ ಡಾಲರ್‌ (45 ಸಾವಿರ ಕೋಟಿ) ಡಾಲರ್‌ ಖರ್ಚಾಗಿತ್ತು. ಇನ್ನು, ಭಾರತದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಮಾಡಿದ ಖರ್ಚಿಗಿಂತ ಶೇ.40ರಷ್ಟುಅಂದರೆ 5000 ಕೋಟಿ ಹೆಚ್ಚು ಹಣ ಈ ಬಾರಿಯ ಚುನಾವಣೆಯಲ್ಲಿ ಖರ್ಚಾಗುತ್ತಿದೆ. ಅಂದಾಜೊಂದರ ಪ್ರಕಾರ ಒಂದು ವೋಟಿಗೆ ಕನಿಷ್ಠ 8 ಡಾಲರ್‌ (560 ರು.) ಖರ್ಚು ಮಾಡಲಾಗುತ್ತಿದೆಯಂತೆ. ಅಂದಹಾಗೆ ನಮ್ಮ ದೇಶದ ಶೇ.60ರಷ್ಟುಜನರು ದಿನಕ್ಕೆ 3 ಡಾಲರ್‌ (210 ರು.)ನಲ್ಲಿ ಜೀವನ ನಡೆಸುತ್ತಾರೆ.

ಜಪಾನ್‌ ರಾಜ ಅಕಿಹಿಟೋ ಪದತ್ಯಾಗ; 200 ವರ್ಷದಲ್ಲಿ ಇದೇ ಮೊದಲು

ಯಾವುದಕ್ಕೆ ಎಷ್ಟುವೆಚ್ಚ?

5 ಸಾವಿರ ಕೋಟಿ ಸೋಷಿಯಲ್‌ ಮೀಡಿಯಾಗೆ!

ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಹಣ ಏಕೆ ಖರ್ಚಾಗುತ್ತಿದೆ ಅಂದರೆ ಕಳೆದ ಬಾರಿಗಿಂತ ಈ ಬಾರಿ ಸೋಷಿಯಲ್‌ ಮೀಡಿಯಾ ಪ್ರಚಾರಕ್ಕೆ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಕೆಲ ವರದಿಗಳ ಪ್ರಕಾರ, 2014ರಲ್ಲಿ ಸಾಮಾಜಿಕ ಮಾಧ್ಯಮಗಳ ನಿರ್ವಹಣೆಗೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಸುಮಾರು 250 ಕೋಟಿ ರುಪಾಯಿ ಖರ್ಚು ಮಾಡಿದ್ದರು. ಈ ಬಾರಿ 5 ಸಾವಿರ ಕೋಟಿ ರು. ಕೇವಲ ಜಾಲತಾಣಗಳ ನಿರ್ವಹಣೆಗೇ ಬಳಕೆಯಾಗುತ್ತಿದೆಯಂತೆ.

ಹಂಚುವ ಹಣಕ್ಕೆ ಲೆಕ್ಕವಿಲ್ಲ

543 ಲೋಕಸಭಾ ಕ್ಷೇತ್ರಗಳಿಗೆ 8000ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತದಾರರಿಗೆ ಆಮಿಷವೊಡ್ಡಿ ವೋಟು ಖರೀದಿಸುವುದು ಸರ್ವೇಸಾಮಾನ್ಯ. ಹೀಗಾಗಿ ಉಡುಗೊರೆ ನೀಡಿ ಮತದಾರರ ಮನವೊಲಿಸುವ ತಂತ್ರ ಒಳಗೊಳಗೇ ಜೋರಾಗಿ ನಡೆಯುತ್ತದೆ. ಹಣ, ಹೆಂಡ ಮತ್ತಿತರ ಗಿಫ್ಟ್‌ ಕೊಟ್ಟು ರಾಜಕಾರಣಿಗಳು ಮತಗಳನ್ನು ಕೊಳ್ಳಲು ಯತ್ನಿಸುತ್ತಾರೆ.

ಕೇವಲ ಮತದಾರ ಪ್ರಭುಗಳಲ್ಲ, ಮೇಕೆಗಳಿಗೂ ಚುನಾವಣೆ ಗಿಫ್ಟ್‌ ಸಿಕ್ಕುತ್ತಿದೆಯಂತೆ! ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಚಿನ್ನ, ನಗದು, ಮದ್ಯ, ಡ್ರಗ್ಸ್‌ ಸೇರಿದಂತೆ 130 ಕೋಟಿ ಮೌಲ್ಯದ ಅಕ್ರಮ ಹಣವನ್ನು ವಶಪಡಿಸಿಕೊಂಡಿತ್ತು. ಈ ಎಲ್ಲಾ ಖರ್ಚುಗಳಿಗೆ ಲೆಕ್ಕವೇ ಇರುವುದಿಲ್ಲ.

ಹಿಂದುತ್ವ ಫಾರ್ಮುಲದಿಂದ ಮೋಡಿ ಮಾಡ್ತಾರಾ ಮೋದಿ?

ಡಮ್ಮಿ ಅಭ್ಯರ್ಥಿಗಳಿಗೂ ಖರ್ಚಿಗೆ ದುಡ್ಡು ಬೇಕು!

ಸ್ಪರ್ಧೆಯಲ್ಲಿ ತೀವ್ರ ಹಣಾಹಣಿ ಇದ್ದಾಗ ಒಂದೇ ಹೆಸರಿನ ಡಮ್ಮಿ ಅಭ್ಯರ್ಥಿಗಳನ್ನು ಕಣಿಕ್ಕಿಳಿಸುವುದು ರಾಜಕೀಯ ಪಕ್ಷಗಳ ತಂತ್ರ. ಉತ್ತರ ಪ್ರದೇಶದಂತಹ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಲ್ಲಿ ಅಭ್ಯರ್ಥಿಗಳನ್ನು ಜಾತಿ ಮೂಲಕವೇ ಗುರುತಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಅದೇ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತದಾರರನ್ನು ಗೊಂದಲಗೊಳಿಸಿ, ಮತ ಧ್ರುವೀಕರಣಕ್ಕೆ ಯತ್ನಿಸಲಾಗುತ್ತದೆ. ಕರ್ನಾಟಕದಲ್ಲೂ ಇದು ನಡೆಯುತ್ತದೆ. ಈ ಬಾರಿ ಮಂಡ್ಯದಲ್ಲಿ ಸುಮಲತಾ ಹೆಸರಿನ ಐದಾರು ಅಭ್ಯರ್ಥಿಗಳಿದ್ದರು.

2014ರ ಲೋಕಸಭೆ ಚುನಾವಣೆಯಲ್ಲಿ ನಟಿ ಹೇಮಾಮಾಲಿನಿ ವಿರುದ್ಧ ಅದೇ ಹೆಸರಿನ ಇಬ್ಬರು ಮಹಿಳೆಯರನ್ನು ಕಣಕ್ಕಿಳಿಸಲಾಗಿತ್ತು. ವಿಶೇಷ ಎಂದರೆ ಈ ಡಮ್ಮಿ ಅಭ್ಯರ್ಥಿಗಳೂ ಹಣ ವ್ಯಯಿಸುತ್ತಾರೆ. 2016ರ ಇಂಡಿಯಾ ಟು ಡೇ ಮ್ಯಾಗಜೀನ್‌ ತನಿಖೆ ಪ್ರಕಾರ ಡಮ್ಮಿ ಕ್ಯಾಂಡಿಡೇಟ್‌ಗಳಿಗೆ ಕನಿಷ್ಠ 12 ಕೋಟಿ ರು. ವ್ಯಯಿಸಲಾಗುತ್ತದೆ.

ಜಾಹೀರಾತಿಗೆ 2,600 ಕೋಟಿ

ಈ ಚುನಾವಣೆಯಲ್ಲಿ ಬರೀ ಜಾಹೀರಾತಿಗಾಗಿಯೇ 2600 ಕೋಟಿ ಖರ್ಚು ಮಾಡಲಾಗುತ್ತಿದೆ. ಟೀವಿ ಸ್ಲಾಟ್‌, ದಿನಪತ್ರಿಕೆಗಳಲ್ಲಿ ನೀಡುವ ಜಾಹೀರಾತಿಗೆ 2014ರಲ್ಲಿ 2 ಪ್ರಮುಖ ರಾಜಕೀಯ ಪಕ್ಷಗಳು ಖರ್ಚು ಮಾಡಿದ್ದಕ್ಕಿಂತ 1,200 ಕೋಟಿ ಹೆಚ್ಚು ಹಣ ಈ ಬಾರಿ ವ್ಯಯಿಸಲಾಗುತ್ತಿದೆ.

20-30% ಹಣ ರ್ಯಾಲಿಗೆ 

ಇನ್ನು ಅಭ್ಯರ್ಥಿಗಳು ಮತ್ತು ಅವರ ಪ್ರಚಾರಕರ ಬಂದು ಹೋಗುವಿಕೆಗೆ, ಅಲ್ಲಿ ಜನರನ್ನು ‘ಸೇರಿಸಲು’ ಕೋಟಿ ಕೋಟಿ ಹಣ ವ್ಯಯಿಸಲಾಗುತ್ತದೆ. ಕಳೆದ ವರ್ಷ ಬಿಜೆಪಿ 159 ಕೋಟಿ, ಕಾಂಗ್ರೆಸ್‌ 129.5 ಕೋಟಿ ರು.ಗಳನ್ನು ಕೇವಲ ಪ್ರಚಾರಕ್ಕೆ ಬರುವ ಪಾರ್ಟಿ ಲೀಡರ್‌ಗಳ ಹೆಲಿಕಾಪ್ಟರ್‌ ಮತ್ತು ವಾಹನಗಳಿಗೆಂದೇ ಖರ್ಚು ಮಾಡಿವೆ. ಇದು ಅಧಿಕೃತ ಲೆಕ್ಕ ಮಾತ್ರ! ಇತ್ತೀಚೆಗೆ ರಾಜಕೀಯ ರಾರ‍ಯಲಿಗಳಲ್ಲಿ ಎಷ್ಟುಜನ ಸೇರುತ್ತಾರೆ ಎಂಬುದು ಗೆಲುವಿನ ಮಾಪಕ ಎಂದುಕೊಳ್ಳುವ ಕಾರಣ, ರಾರ‍ಯಲಿಗೆ ಹೆಚ್ಚು ಹೆಚ್ಚು ಜನ ಸೇರಿಸಲು ರಾಜಕೀಯ ಪಕ್ಷಗಳು ಕೋಟಿ ಕೋಟಿ ಹಣ ವ್ಯಯಿಸುತ್ತಿವೆ. ಕುರ್ಚಿ, ಟೇಬಲ್‌, ಊಟ ಇತರೆ ಖರ್ಚಿಗಾಗಿ ಶೇ.20-30ರಷ್ಟುಹಣ ಮೀಸಲಿಡಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಮೋದಿ-ಶಾ ತಂತ್ರ ವರ್ಕೌಟ್ ಆಗುತ್ತಾ?

ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತೆ?

ಭಾರತದ ರಾಜಕೀಯ ಪಕ್ಷಗಳಿಗೆ ಎರಡು ಮೂಲಗಳಿಂದ ಹಣ ಬರುತ್ತದೆ. ಒಂದು ವೈಯಕ್ತಿಕ ದೇಣಿಗೆ, ಇನ್ನೊಂದು ಕಾರ್ಪೋರೇಟ್‌ ದೇಣಿಗೆ. ಎಡಿಆರ್‌ ವರದಿ ಪ್ರಕಾರ 2017 ಮತ್ತು 18ರ ಅವಧಿಯಲ್ಲಿ ಕಾರ್ಪೋರೇಟ್‌ ವಲಯದಿಂದ ರಾಷ್ಟ್ರೀಯ ಪಕ್ಷಗಳಿಗೆ 422 ಕೋಟಿ ದೇಣಿಗೆ ಬಂದಿದೆ. ಅದರಲ್ಲಿ ಬಿಜೆಪಿ 400 ಕೋಟಿ ಪಡೆದರೆ, ಕಾಂಗ್ರೆಸ್‌ 19 ಕೋಟಿ ಪಡೆದಿದೆ. ಪಕ್ಷಗಳು ಪಡೆಯುವ ದೇಣಿಗೆಯಲ್ಲಿ ಶೇ.10ರಷ್ಟುದೇಣಿಗೆ ವೈಯಕ್ತಿಕವಾಗಿ ನೀಡಿದ್ದಾಗಿರುತ್ತದೆ.

ಚುನಾವಣಾ ಬಾಂಡ್‌

ರಾಜಕೀಯ ಪಕ್ಷಗಳಿಗೆ ಯಾವ ಮೂಲದಿಂದ ಹಣ ಅಥವಾ ಆರ್ಥಿಕ ನೆರವು ಸಿಗುತ್ತದೆ ಎನ್ನುವುದನ್ನು ಸಾರ್ವಜನಿಕಗೊಳಿಸಲು ಕಳೆದ ವರ್ಷ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ ಜಾರಿಗೆ ತಂದಿದೆ. ಚುನಾವಣೆಗೆ ಅಗತ್ಯವಿರುವ ಹಣವನ್ನು ಈ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಸಾರ್ವಜನಿಕರಿಂದ ದೇಣಿಗೆಯ ರೂಪದಲ್ಲಿ ಸ್ವೀಕರಿಸಬಹುದು. ಬಾಂಡ್‌ ಖರೀದಿಸುವ ಜನರು ಅಥವಾ ಕಾರ್ಪೊರೇಟ್‌ ಕಂಪನಿಗಳು ಹಾಗೂ ರಾಜಕೀಯ ಪಕ್ಷಗಳ ನಡುವೆ ಆರ್‌ಬಿಐ ಮಧ್ಯವರ್ತಿಯಂತೆ ವರ್ತಿಸುತ್ತದೆ.

2017-18ನೇ ಸಾಲಿನಲ್ಲಿ ಪಕ್ಷಗಳಿಗೆ ಸಿಕ್ಕಿದ ದೇಣಿಗೆ ವಿವರ

ಮೊತ್ತ (ಕೋಟಿ ರು.ಗಳಲ್ಲಿ) ಪಕ್ಷ

990    ಬಿಜೆಪಿ

26.65    ಕಾಂಗ್ರೆಸ್‌

2    ಎನ್‌ಸಿಪಿ

2.75    ಸಿಪಿಎಂ

1.14    ಸಿಪಿಐ

ಯಾವ ಪಾರ್ಟಿ ಬಳಿ ಎಷ್ಟುಹಣ ಇದೆ?

ಎಡಿಆರ್‌ (ಅಸೋಸಿಯೇಶನ್‌ ಫಾರ್‌ ಡೆಮಾಕ್ರೆಟಿಕ್‌ ರೀಫಾಮ್‌ರ್‍) ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ಪ್ರಕಾರ ಬಿಜೆಪಿ ದೇಶದ ಶ್ರೀಮಂತ ಪಕ್ಷ. 2016-17ರಲ್ಲಿ ಅದು ತನ್ನ ಬಳಿ 1,034 ಕೋಟಿ ಹಣ ಇರುವುದಾಗಿ ಘೋಷಿಸಿಕೊಂಡಿತ್ತು. ಅದು ಈ ಹಿಂದೆ ನೀಡಿದ್ದ ಲೆಕ್ಕಕ್ಕಿಂತ 463 ಕೋಟಿ ಅಥವಾ 81% ಹೆಚ್ಚು. ಅದೇ ವರ್ಷ 710 ಕೋಟಿ ರು. ಖರ್ಚು ಮಾಡಿರುವುದಾಗಿಯೂ ಅದು ತಿಳಿಸಿದೆ.

ಇನ್ನು ಕಾಂಗ್ರೆಸ್‌ನ ಆದಾಯ ಶೇ.14 ರಷ್ಟುಇಳಿಕೆಯಾಗಿದ್ದು, 2015-16ರಲ್ಲಿ 225 ಕೋಟಿ ಇದ್ದ ಆಸ್ತಿ, 2016-17ರಲ್ಲಿ 225 ಕೋಟಿಗೆ ಇಳಿಕೆಯಾಗಿದೆ. ಇದೇ ವೇಳೆ 2016-17ರಲ್ಲಿ 321 ಕೋಟಿ ಖರ್ಚು ಮಾಡಿದ್ದಾಗಿ ಕಾಂಗ್ರೆಸ್‌ ಹೇಳಿಕೊಂಡಿದೆ. ಇನ್ನು ಬಿಎಸ್‌ಪಿ 173.58 ಕೋಟಿ, ಎನ್‌ಸಿಪಿ 17.23 ಕೋಟಿ ಆದಾಯ ಇರುವುದಾಗಿ ಘೋಷಿಸಿಕೊಂಡಿವೆ. ಸಿಪಿಐ ತನ್ನ ಬಳಿ ಕೇವಲ 2.8 ಕೋಟಿ ಇರುವುದಾಗಿ ಘೋಷಿಸಿಕೊಂಡಿದೆ.

ಒಬ್ಬ ಅಭ್ಯರ್ಥಿ ಎಷ್ಟುಖರ್ಚು ಮಾಡಬಹುದು?

ಒಬ್ಬ ಲೋಕಸಭಾ ಅಭ್ಯರ್ಥಿಯು ಚುನಾವಣೆ ಎದುರಿಸಲು ತನಗಿಷ್ಟಬಂದಷ್ಟುಖರ್ಚು ಮಾಡುವಂತಿಲ್ಲ. ಕಂಡಕ್ಟ್ ಆಫ್‌ ಎಲೆಕ್ಷನ್‌ ರೂಲ್ಸ್‌-1961 ಪ್ರಕಾರ ಕ್ಷೇತ್ರವೊಂದಕ್ಕೆ 50-70 ಲಕ್ಷ ಮಾತ್ರ ಖರ್ಚು ಮಾಡಬಹುದು. ದೊಡ್ಡ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕದಂತಹ ದೊಡ್ಡ ರಾಜ್ಯಗಳಲ್ಲಿ 70 ಲಕ್ಷ ಖರ್ಚು ಮಾಡಬಹುದು. ಚಿಕ್ಕ ರಾಜ್ಯಗಳಲ್ಲಿ 54 ಲಕ್ಷದೊಳಗೆ ವೆಚ್ಚ ಮಾಡಬೇಕು. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಯು 28 ಲಕ್ಷ ಖರ್ಚು ಮಾಡಬಹುದು.

ಹಿಂದಿನ ಚುನಾವಣೆಗಳ ವೆಚ್ಚ

ಸ್ವತಂತ್ರ ಭಾರತದ ಮೊದಲ 3 ಲೋಕಸಭಾ ಚುನಾವಣೆಗಳಿಗೆ ತಲಾ 10 ಕೋಟಿ ಖರ್ಚು

1984-100 ಕೋಟಿ

1996-500 ಕೋಟಿ

2004-1000 ಕೋಟಿ

2009-1,483 ಕೋಟಿ

2014-3,870 ಕೋಟಿ

* ರಾಜಕೀಯ ಪಕ್ಷಗಳು ಮಾಡಿದ ವೆಚ್ಚ ಇದರಲ್ಲಿ ಸೇರಿಲ್ಲ
 

Follow Us:
Download App:
  • android
  • ios