ಮೋದಿ ಹಿಂದುತ್ವ ಫಾರ್ಮುಲಾ

ಚುನಾವಣೆ ಹತ್ತಿರ ಬರುವವರೆಗೂ ಉಜ್ವಲ, ಮುದ್ರಾ ಎಂದೆಲ್ಲ ಪ್ರಚಾರ ಮಾಡುತ್ತಿದ್ದ ಬಿಜೆಪಿ, ಈಗ ಚುನಾವಣೆ ಸಮಯದಲ್ಲಿ ಮಾತ್ರ ಯುಪಿ ಮತದಾರರಿಗೆ ಎರಡೇ ವಿಷಯ ಹೇಳುತ್ತಿದೆ. ಒಂದು ಬಾಲಾಕೋಟ್‌ ವಾಯುದಾಳಿ, ಎರಡನೆಯದು ಹಿಂದುತ್ವ . ಈ ಎರಡು ವಿಷಯಗಳು 2014 ಮತ್ತು 2017ರಲ್ಲಿ ಬಿಜೆಪಿಗೆ ವೋಟ್‌ ಹಾಕಿದ್ದ ಮತದಾರನನ್ನು ಮೋದಿ ಜೊತೆಗೆ ಗಟ್ಟಿಯಾಗಿ ನಿಲ್ಲಿಸಿವೆ.

ಉತ್ತರ ಪ್ರದೇಶದಲ್ಲಿ ಮೋದಿ-ಶಾ ತಂತ್ರ ವರ್ಕೌಟ್ ಆಗುತ್ತಾ?

ಯುಪಿಯಲ್ಲಿ ಕಳೆದ 5 ವರ್ಷಗಳಿಂದ ಬಿಜೆಪಿ ವೋಟ್‌ ಬ್ಯಾಂಕ್‌ ಇರುವುದು ಬ್ರಾಹ್ಮಣರು, ಠಾಕೂರ, ಬನಿಯಾ ಕಾಯಸ್ಥ ಜೊತೆಗೆ ಯಾದವೇತರ ಹಿಂದುಳಿದ ಸಮುದಾಯಗಳಾದ ಮೌರ್ಯ, ಕುರ್ಮಿ, ಲೋಧ್‌, ರಾಜರ್ಭ, ಮಲ್ಹಾ ಮಾಲಿ, ತೇಲಿ, ಕೊಯಿರಿ ಸೇರಿದಂತೆ 76 ಸಣ್ಣ ಸಣ್ಣ ಸಮುದಾಯಗಳಲ್ಲಿ. ಜೊತೆಗೆ ಮಾಯಾವತಿ ಜೊತೆಗೆ ಇರದ ಮಹಾ ದಲಿತರು.

ಸದ್ಯಕ್ಕೆ ಇವರು ಮೋದಿಯ ಪಕ್ಕಾ ಮತದಾರರು. ಆದರೆ ಜೊತೆಗೆ ಪಿಚಡಾ ಎಂಬ ಕಾರಣಕ್ಕಾಗಿ 20 ಪ್ರತಿಶತ ಯಾದವರು ಜೊತೆಗೆ ಬರಬಹುದು ಎಂಬ ಲೆಕ್ಕಾಚಾರದ ಮೇಲೆ ಮೋದಿ ಯುಪಿ ರಣರಂಗದಲ್ಲಿ ಧುಮುಕಿದ್ದಾರೆ. ಎರಡು ಬಾರಿ ಯಶಸ್ವಿ ಆದವರು ಮೂರನೇ ಬಾರಿಗೆ ಆಗುತ್ತಾರಾ ಎಂಬ ಪ್ರಶ್ನೆಯ ಉತ್ತರಕ್ಕೆ ಮಿಲಿಯನ್‌ ಡಾಲರ್‌ ಬೆಟ್ಟಿಂಗ್‌ ಕಟ್ಟಬೇಕಷ್ಟೆ. 

ಬೇಕಾದ್ರೆ ಬಂದ್ನೋಡಿ: ಬಾಲಾಕೋಟ್ ಗೆ ಬರುವಂತೆ ಭಾರತೀಯ ಪತ್ರಕರ್ತರಿಗೆ ಪಾಕ್ ಆಹ್ವಾನ!

ರಾಜ್‌ಠಾಕ್ರೆ ಈಗ ಮೋದಿ ವಿರೋಧಿ ಸ್ಟ್ರೈಕ್ 

ಮಹಾರಾಷ್ಟ್ರದಲ್ಲಿ ಈಗ ಮೋದಿ ಬಿಟ್ಟರೆ ಭಾಷಣಕ್ಕೆ ಅತಿ ಹೆಚ್ಚು ಜನ ಸೇರುವುದು ಬಾಳಾಠಾಕ್ರೆ ಅಣ್ಣನ ಮಗ ರಾಜ್‌ಠಾಕ್ರೆಯ ಸಭೆಗಳಿಗೆ. 5 ವರ್ಷದ ಹಿಂದೆ ಮೋದಿ ಇಂದ್ರ ಚಂದ್ರ ಎಂದೆಲ್ಲ ಹೊಗಳುತ್ತಿದ್ದ ರಾಜ್‌, ಈಗ ನನಗೆ ಭ್ರಮನಿರಸನವಾಗಿದೆ. ಮೋದಿ ಕೇವಲ ಭ್ರಮೆ ಸೃಷ್ಟಿಸಿದ್ದಾರೆ ಎಂದು ಹೇಳುತ್ತಾ ಪೂರ್ತಿ ಮಹಾರಾಷ್ಟ್ರ ತಿರುಗುತ್ತಿದ್ದಾರೆ. ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ರಾಜ್‌ಠಾಕ್ರೆ ತನ್ನ ಪಕ್ಷದಿಂದ ಒಬ್ಬ ಅಭ್ಯರ್ಥಿಯನ್ನೂ ಕಣಕ್ಕೆ ಇಳಿಸಿಲ್ಲ. ಆದರೆ ರಾಜ್‌ ಭಾಷಣಕ್ಕೆ ಗ್ರಾಮೀಣ ಮರಾಠಿ ಮಾಣುಸ ಕೊಡುತ್ತಿರುವ ಸ್ಪಂದನೆ ಬಿಜೆಪಿಗೆ ಸ್ವಲ್ಪ ಇರಿಸುಮುರುಸು ತರುತ್ತಿರುವುದು ನಿಜ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ